ಶನಿವಾರ, ನವೆಂಬರ್ 9, 2013

ಮಂಜುಳ

ಮಂಜುಳ

ಕನ್ನಡ ಚಲನಚಿತ್ರಗಳಲ್ಲಿ ವಿಶಿಷ್ಟ ರೀತಿಯಲ್ಲಿ ಕಂಗೊಳಿಸಿದ ನಾಯಕಿಯರಲ್ಲಿ ಮಂಜುಳಾ ಪ್ರಮುಖರ ಸಾಲಿನಲ್ಲಿ ನಿಲ್ಲುತ್ತಾರೆ.   ಅವರು ಹುಟ್ಟಿದ ದಿನ ಏಪ್ರಿಲ್ 5, 1951.   ಕೇವಲ ತಮ್ಮ 32 ವರ್ಷದ ಅಲ್ಪಾಯುಷ್ಯದಲ್ಲೇ ಅವರು ತಮ್ಮ ಅಚ್ಚಳಿಯದ ಛಾಪನ್ನು ಬಿಟ್ಟು ಹೋದರು.

ಮಂಜುಳ ತಮ್ಮ ಓದಿನ ದಿನದಲ್ಲೇ ನೃತ್ಯ ಪ್ರವೀಣೆಯಾಗಿ ಹಲವಾರು ನೃತ್ಯ ರೂಪಕಗಳಲ್ಲಿ ಕಂಗೊಳಿಸಿದ್ದರು.  ಕಾಲೇಜಿನ ದಿನಗಳಲ್ಲಿ ಹಲವು ಸಿನಿಮಾ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ  ಅವರು, ಮುಂದೆ ಶೀಘ್ರಗತಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶ ಪಡೆದರು.  ಸಿನಿಮಾ ರಂಗದಲ್ಲಿ ಸಾಮಾನ್ಯವಾಗಿ ನಟಿಯರಲ್ಲಿ ಎರಡು ರೀತಿಯ ವಿಂಗಡನೆ ಕಾಣುವುದಿದೆ.  ಒಂದು ರೀತಿಯ ನಟಿಯರು, ನಾಯಕಿಯರಿಗಾಗಿ ಹೆಣೆದ ಪಾತ್ರಗಳಲ್ಲಿ ಹೆಸರು ಮಾಡಿದ್ದರೆ.  ಮತ್ತೊಂದು ರೀತಿಯ ನಟಿಯರು ನಾಯಕರೊಂದಿಗೆ ಮರಸುತ್ತುವ ಪಾತ್ರಗಳಲ್ಲಿ ಒಂದಷ್ಟು ಬಣ್ಣದ ಮೆರುಗಿನಲ್ಲಿ ಪ್ರಾಧಾನ್ಯತೆ ಪಡೆದವರು. 

ನಾಯಕ ನಟರಿಗೆ ಪ್ರಾಧಾನ್ಯತೆಗಳಿದ್ದ ಚಿತ್ರಗಳಲ್ಲೂ ಅದಕ್ಕೆ ಸರಿ ಸಮಾನವಾಗಿ ಜೊತೆ ಜೊತೆಯಾದ ಪಾತ್ರಗಳನ್ನು ಅಷ್ಟೇ ಸಮ ಮಹತ್ವದಲ್ಲಿ ನಟಿಸಿದ ಅಪರೂಪದ ನಟಿ ಎಂದರೆ ಮಂಜುಳ ಒಬ್ಬರೇ.  ಈ ನಿಟ್ಟಿನಲ್ಲಿ ಅವರು ರಾಜ್ ಕುಮಾರ್ ಅವರೊಂದಿಗೆ ನಟಿಸಿದ ಸಂಪತ್ತಿಗೆ ಸವಾಲ್’; ವಿಷ್ಣುವರ್ಧನ್ ಜೊತೆ ನಟಿಸಿದ ಗಲಾಟೆ ಸಂಸಾರ’, ‘ಸೊಸೆ ತಂದ ಸೌಭಾಗ್ಯ’, ‘ವಸಂತ ಲಕ್ಷ್ಮಿ’;  ಶ್ರೀನಾಥ್ ಜೊತೆ ನಟಿಸಿದ ಬದುಕು ಬಂಗಾರವಾಯ್ತು’, ‘ಹುಡುಗಾಟದ ಹುಡುಗಿ’, ‘ಬೆಸುಗೆ’; ಶಂಕರ್ ನಾಗ್ ಜೊತೆ ನಟಿಸಿದ ಸೀತಾ ರಾಮುಇವು ಪ್ರಮುಖವಾಗಿ ನೆನಪಿನಲ್ಲಿ ಉಳಿಯುವ ಚಿತ್ರಗಳು.

ಮಂಜುಳ ಅವರು ಬಜಾರಿ ಪಾತ್ರಗಳಲ್ಲಿ ಮಾಡಿದ್ದರೂ ಆ ಪಾತ್ರಗಳಲ್ಲಿ ಅವರು ಬೆರೆಸುತ್ತಿದ್ದ ಹಿತ ಮಿತವಾದ ಗಡಸುತನ, ಹಾಸ್ಯ ಪ್ರವೃತ್ತಿ, ಸೂಕ್ಷ್ಮ ಸ್ತ್ರೀ ಸಂವೇದನೆ, ಮುಗ್ಧತೆ, ಮುಖಭಾವದ ಅಭಿವ್ಯಕ್ತಿ  ಇವೆಲ್ಲಾ ಒಂದಕ್ಕೊಂದು ಪೂರಕವಾಗಿ ಬೆರೆತ ಬಗೆ ವಿಶಿಷ್ಟವಾದದ್ದು.  ಕನ್ನಡವನ್ನೂ ಸೇರಿ ಹಲವು ಭಾಷೆಗಳಲ್ಲಿ ಮಂಜುಳಾ ಅವರು ನಿರ್ವಹಿಸಿದ ಇಂತಹ ಪಾತ್ರಗಳ ಪುನರಾವರ್ತನೆಯ ಪ್ರಯತ್ನಗಳು ಅಲ್ಲಲ್ಲಿ ನಡೆದವಾದರೂ ಅದು ಇನ್ಯಾರಲ್ಲೂ ಇಷ್ಟು ಹದವಾದ ಸಂಮಿಶ್ರತೆಯಲ್ಲಿ ಕಂಗೊಳಿಸಲಿಲ್ಲ.

ಮಂಜುಳ ಅವರು ಕಾದಂಬರಿ ಆಧಾರಿತ ಮತ್ತು ಭಾವ ಪೂರ್ಣ ಪಾತ್ರಗಳಲ್ಲಿ ಸಹಾ ಮನೋಜ್ಞ ಅಭಿನಯ ನೀಡಿ  ಪ್ರಸಿದ್ಧರಾಗಿದ್ದರು ಎಂಬುದು ಮಹತ್ವದ ಅಂಶವಾಗಿದೆ.  ಅವರ ಬೆಸುಗೆ’, ‘ಎರಡು ಕನಸು’,  ‘ಸವತಿಯ ನೆರಳು’, ‘ದೀಪಾ’, ‘ದೇವರ ಗುಡಿ’, ‘ಕುಂಕುಮ ರಕ್ಷೆ’, ‘ನಿನಗಾಗಿ ನಾನು’, ‘ಮಯೂರಮುಂತಾದ ಚಿತ್ರಗಳು  ಪ್ರೇಕ್ಷಕರು ಮತ್ತು ವಿಮರ್ಶಾ ವಲಯಗಳೆರಡರಲ್ಲೂ ಅಪಾರ ಮೆಚ್ಚುಗೆ ಪಡೆದಿದ್ದವು ಎಂಬುದು ಗಮನಾರ್ಹವಾಗಿದೆ. 

ಸೊಬಗಿನ ಕಂಗಳ ಸುಂದರಿಯಾಗಿ, ವಿವಿಧ ಪಾತ್ರಗಳ ಅಭಿನಯವನ್ನು ಸುಲಲಿತವಾಗಿ ನಿರ್ವಹಿಸುವ ಚಾತುರ್ಯತೆಯಿಂದ ಕಂಗೊಳಿಸಿದ ಅವರ ಇನ್ನಿತರ ಚಿತ್ರಗಳಲ್ಲಿ ಪ್ರಮುಖವಾದ ದಾರಿ ತಪ್ಪಿದ ಮಗ’, ‘ಭಕ್ತ ಕುಂಬಾರ’, ‘ಪ್ರೊಫೆಸರ್ ಹುಚ್ಚೂರಾಯ’, ‘ಮಿಥುನ’, ‘ತಾಯಿಗಿಂತ ದೇವರಿಲ್ಲ’ , ‘ಕಿಟ್ಟು ಪುಟ್ಟು’, ‘ಸಿಂಗಾಪೂರಿನಲ್ಲಿ ರಾಜಾ ಕುಳ್ಳ’, ‘ಗುರು ಶಿಷ್ಯರು’, ‘ಬಯಸದೆ ಬಂದ ಭಾಗ್ಯಮುಂತಾದವು ಕೂಡಾ ಅಂದಿನ ದಿನದ ಯಶಸ್ವೀ ಚಿತ್ರಗಳೇ. ಎಂ. ಎಸ್. ಸತ್ಯು ಅವರ ಚಿತೆಗೂ ಚಿಂತೆಯಂತಹ  ಚಿಂತನಾ ಪ್ರಧಾನ ಕಲಾತ್ಮಕ ಚಿತ್ರದಲ್ಲೂ ಅವರು ನಟಿಸಿದ್ದರು.

'ಜಗದೀಶ ಸರ್ವೇಶ, ಗೌರೀಶ ಮಲ್ಲೇಶ ನೂರಾರು ಹೆಸರೂ ಶಿವನೀಗೆ', ‘ಎಂದೆಂದೂ ನಿನ್ನನು ಮರೆತು’, ‘ಬೆಳ್ಳಿಯ ತೆರೆಯ ಮೋಡದ ಮರೆಯ’, ‘ವಸಂತ ಬರೆದನು ಒಲವಿನ ಓಲೆ’,  ‘ಬೆಸುಗೆ ಬೆಸುಗೆ’, ‘ಮುತ್ತಿನ ಹನಿಗಳು ಸುತ್ತಲೂ ಮುತ್ತಲೂ’,  ‘ಅಂತಿಂಥ ಹೆಣ್ಣು ನಾನಲ್ಲ’, ‘ನಿಲ್ಲಯ್ಯ ನಿಲ್ಲೋ’, ‘ಏಕೆ ಅವಸರವು ಹೇಳು’, ‘ದಾರಿ ಕಾಣದಾಗಿದೆ ರಾಘವೇಂದ್ರನೆ’, ‘ಈ ಮೌನವ ತಾಳೆನು’, ‘ಜೋಡಿ ಬೇಡೋ ಕಾಲವಮ್ಮ’ , 'ಶ್ರೀಕೃಷ್ಣ ಜನಿಸಿದ ಧರೆಯಲ್ಲಿಹೀಗೆ ಅವರು ಮೋಡಿ ಮಾಡಿದ ಬಹಳಷ್ಟು ಹಾಡುಗಳು ಕಣ್ಮುಂದೆ ಸಾಲುಗಟ್ಟಿ ನಿಲ್ಲುತ್ತವೆ. 

ಇಷ್ಟೆಲ್ಲಾ ಪ್ರತಿಭೆ, ಯಶಸ್ಸುಗಳು ಜೊತೆ ಇದ್ದರೂ  ನಿಜ ಜೀವನದಲ್ಲಿ ಒಬ್ಬ ತಮಿಳು ನಿರ್ಮಾಪಕ-ನಿರ್ದೇಶಕನ ಎರಡನೇ ವೈವಾಹಿಕ ಬದುಕಿಗೆ ತಮ್ಮನ್ನು ಒಪ್ಪಿಸಿಕೊಂಡ ಈ ವಿಶಿಷ್ಟ ನಟಿ ಹಲವು ದುರಂತಗಳ ದುಃಖದ ಪಾತ್ರವೂ ಆದದ್ದು ಬದುಕಿನ ವೈಪರೀತ್ಯದ ಮತ್ತೊಂದು ಆಯಾಮ.  ಮಂಜುಳ ಕೇವಲ ತನ್ನ 32ರ ಹರೆಯದಲ್ಲಿ ಸೆಪ್ಟೆಂಬರ್ 16, 1986ರಂದು  ಬೆಂಕಿ ಆಕಸ್ಮಿಕ ಎಂದು ಸುದ್ಧಿಯಾದ ಘಟನೆಯೊಂದರಲ್ಲಿ ನಿಧನರಾದರು. 


ಅವರು ಕನ್ನಡ ಚಿತ್ರರಂಗದಲ್ಲಿ ರಾಜ್ ಕುಮಾರ್,  ಶ್ರೀನಾಥ್, ವಿಷ್ಣುವರ್ಧನ್, ಶಂಕರ್ ನಾಗ್  ಅಂತಹ ಪ್ರತಿಭೆ  ಸೊಗಸುಗಳ  ಹಿರಿಮೆಯ ಜೊತೆಗೆ ತಾನೂ ಸರಿಸಮಾನವಾಗಿ ಕಂಗೊಳಿಸಿದ ರೀತಿ ಮಾತ್ರ ಅನನ್ಯವಾದದ್ದು.  ಹೀಗಾಗಿ ಅವರು ಬಹಳ ಕಾಲದ ವರೆಗೆ ನೆನಪಿನಲ್ಲಿ ಉಳಿಯುವ ನಟಿ.

Tag: Manjula

ಕಾಮೆಂಟ್‌ಗಳಿಲ್ಲ: