ಶುಕ್ರವಾರ, ನವೆಂಬರ್ 8, 2013

ಕನ್ನಡಾಂಬೆಯ ಹಿರಿಮೆ


ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ
ಕನ್ನಡವೆ ಎನ್ನುಸಿರು ಪೆತ್ತೆನ್ನ ತಾಯಿ
ಕನ್ನಡವೆ ಧನಧಾನ್ಯ ಕನ್ನಡವೆ ಮನೆಮಾನ್ಯ
ಕನ್ನಡವೆ ಯೆನಗಾಯ್ತು ಕಣ್ಣು ಕಿವಿ ಬಾಯಿ

ಕನ್ನಡದ ಸವಿಮಾತು ಮನ್ನಣೆಯ ಪಳಮಾತು
ಕನ್ನಡ ಸರಸ್ವತಿಯು ನವ ಕಲ್ಪಲತೆಯು
ಕನ್ನಡದ ವರಚರಿತೆ ವಿಮಲ ಗಂಗಾ ಸರಿತೆ
ಕನ್ನಡವು ಸಿರಿಪೆಂಪು ಎನಗೆ ನರುಗಂಪು

ಕನ್ನಡ ಸನ್ಮಾನ ವೆನಗದುವೆ ವರಮಾನ
ಕನ್ನಡಿಗರ ಸ್ವತಂತ್ರವದೆ ಪರಮ ಮಂತ್ರ
ಕನ್ನಡದ ಕೀರ್ತಿ ಎನ್ನ ಚಿತ್ತದ ಸ್ಫೂರ್ತಿ
ಕನ್ನಡದ ಒಗ್ಗೂಟವೆನಗದೆ ಕಿರೀಟ

ಕನ್ನಡದ ಹೊಲಮಣ್ಣು ಎನಗೆ ನವನಿಧಿಹೊನ್ನು
ಕನ್ನಡದ ತಿಳಿಜಲವು ಸುಧೆಯ ಪಲ್ವಲವು
ಕನ್ನಡದ ಹೂಗಿಡವು ಎನ್ನೊಡಲಿಗದೆ ತೊಡವು
ಕನ್ನಡದ ಪಶುಪಕ್ಷಿ ಚೆಲುವಿಗದೆ ಸಾಕ್ಷಿ

ಕನ್ನಡಿಗರತಿಶಯವು ಭುವನೇಶ್ವರಿಯ ದಯವು
ಕನ್ನಡಿಗರ ಜಯವು ಕೃಷ್ಣನಾಶ್ರಯವು
ಕನ್ನಡದ ಜನಕುಲವು ಎನ್ನ ತೋಳಿಗೆ ಬಲವು
ಕನ್ನಡಾಂಬೆಯ ಮುಕ್ತಿ ರಾಮನುತೆ ಶಕ್ತಿ

 ಸಾಹಿತ್ಯ: ಬೆನಗಲ್ ರಾಮರಾವ್ಕಾಮೆಂಟ್‌ಗಳಿಲ್ಲ: