ಸೋಮವಾರ, ನವೆಂಬರ್ 4, 2013

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ


ಇತ್ತೀಚಿನ ವರ್ಷದಲ್ಲಿ ಕ್ರಿಕೆಟ್ ಲೋಕ ಕಂಡ ಮಹಾನ್ ಪ್ರತಿಭೆ ಎನಿಸಿರುವ ವಿರಾಟ್ ಕೊಹ್ಲಿ ಅವರು ನವೆಂಬರ್ 5, 1988ರ ವರ್ಷದಲ್ಲಿ ದೆಹಲಿಯಲ್ಲಿ ಜನಿಸಿದರು.  ಅವರು ಪ್ರಸಕ್ತದಲ್ಲಿ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ವಿಶ್ವದ ನಂಬರ್ ಒನ್ ಸ್ಥಾನಾಲಂಕೃತರು.  ಅವರು ಆಡಿರುವ 118 ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 4919 ರನ್ನುಗಳನ್ನು ಕೂಡಿ ಹಾಕಿದ್ದು ಅವುಗಳಲ್ಲಿ 17 ಶತಕಗಳು 25 ಅರ್ಧ ಶತಕಗಳಿವೆ.  ಈ ಹದಿನೇಳು ಶತಕಗಳಲ್ಲಿ 11ನ್ನು  ಅವರು ವಿರೋಧಿ ತಂಡದ ರನ್ನುಗಳನ್ನು ಬೆನ್ನಟ್ಟುವಾಗ ಮಾಡಿದ್ದಾರೆ, ಭಾರತ ಮತ್ತು ಹೊರದೇಶಗಳಲ್ಲಿ ಸಹಾ ಅವರು ಉತ್ತಮ ಆಟವಾಡಿದ್ದಾರೆ ಎಂಬುದು ಅವರೆಷ್ಟು ಪ್ರತಿಭಾವಂತರು ಎಂಬುದನ್ನು ಸೂಚಿಸುತ್ತದೆ.  ಇವೆಲ್ಲಕ್ಕೂ ಮಿಗಿಲಾಗಿ ಅವರು ಈ ಹೆಚ್ಚು ರನ್ ಗಳಿಕೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ.  ಕಳೆದ ಮೂರು ವರ್ಷಗಳಲ್ಲಿ ನಿರಂತರವಾಗಿ ಅತ್ಯಧಿಕ ರನ್ ಗಳಿಸಿದ ಭಾರತೀಯ ಆಟಗಾರ ಅವರೇ ಆಗಿದ್ದಾರೆ. 

18 ಟೆಸ್ಟ್ ಪಂದ್ಯಗಳಲ್ಲಿ ಭಾಗಿಯಾಗಿರುವ  ಕೊಹ್ಲಿ ಒಟ್ಟು 1175 ರನ್ನುಗಳನ್ನು ಕಲೆಹಾಕಿದ್ದು ಅವುಗಳಲ್ಲಿ 4 ಶತಕಗಳು ಮತ್ತು 6 ಅರ್ಧ ಶತಕಗಳಿವೆ.  ಕಳೆದ ಬಾರಿ ಆಸ್ಟ್ರೇಲಿಯಾದ ನೆಲದಲ್ಲಿ ಭಾರತದ ಎಲ್ಲಾ ಆಟಗಾರರು ವಿಫಲರಾದ ಸಂದರ್ಭದಲ್ಲಿಯೂ ವಿರಾಟ್ ಕೊಹ್ಲಿ ಅಡಿಲೇಡ್ ಪಂದ್ಯದಲ್ಲಿ ಶತಕ ಗಳಿಸಿದರು.  ಭಾರತ ತಂಡದ ಉಪನಾಯಕನಾಗಿ, ಧೋನಿ ಇಲ್ಲದಿದ್ದ ಜಿಂಬಾವೆ ವಿರುದ್ಧದ ಸರಣಿಯಲ್ಲಿ ನಾಯಕನಾಗಿ, ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ಐ.ಪಿ.ಎಲ್ ತಂಡದ ನಾಯಕನಾಗಿ ಹೀಗೆ ಹಲವಾರು ಜವಾಬ್ದಾರಿಗಳನ್ನೂ ಅವರು ನಿರ್ವಹಿಸುತ್ತಿದ್ದಾರೆ. 


ಈ ವಿರಾಟ ಸ್ವರೂಪಿ ಕ್ರಿಕೆಟ್ ಪ್ರತಿಭೆಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳು.  ಈ ಮಹಾನ್ ಪ್ರತಿಭೆ ನಿರಂತರವಾಗಿ ಶ್ರೇಷ್ಠ ಸಾಧನೆಗಳನ್ನು ಮಾಡಿ ದೇಶಕ್ಕೆ ಕೀರ್ತಿ ತರುತ್ತಿರಲಿ ಎಂದು ಆಶಿಸುತ್ತಾ ಅವರ ಬದುಕು ಉತ್ತಮವಾಗಿರಲಿ ಎಂದು ಹಾರೈಸೋಣ.

ಕಾಮೆಂಟ್‌ಗಳಿಲ್ಲ: