ಸೋಮವಾರ, ಡಿಸೆಂಬರ್ 30, 2013

ರಮಣ ಮಹರ್ಷಿ

ರಮಣ ಮಹರ್ಷಿ

ಭಗವಾನ್ ರಮಣ ಮಹರ್ಷಿಗಳು ಡಿಸೆಂಬರ್ 30, 1879ರ ವರ್ಷದಂದು ತಮಿಳುನಾಡಿನ ಮಧುರೆಯ ಸಮೀಪದ ತಿರುಚುಳಿ ಎಂಬ ಗ್ರಾಮದಲ್ಲಿ ಜನಿಸಿದರು.  ಅವರ  ತಾಯಿ ಅಳಗಮ್ಮಾಳ್ ಅವರು. ತಂದೆ ಸುಂದರಂ ಅಯ್ಯರ್ ಅವರು.  ರಮಣ ಮಹರ್ಷಿಗಳ  ಹುಟ್ಟು ಹೆಸರು ವೆಂಕಟರಮಣ ಎಂದು.  ವೆಂಕಟರಮಣನಿಗೆ 12 ವರ್ಷ ವಯಸ್ಸಾಗಿದ್ದಾಗ ತಂದೆ ಸುಂದರಂ ಅಯ್ಯರ್ ನಿಧನರಾದರು.  ಕುಟುಂಬದ ಹೊಣೆಗಾರಿಕೆಯನ್ನು ಆತನ  ಚಿಕ್ಕಪ್ಪಂದಿರಾದ ನೆಲ್ಲಿಯಪ್ಪ ಅಯ್ಯರ್ ಮತ್ತು ಸುಬ್ಬು ಅಯ್ಯರ್ ವಹಿಸಿಕೊಂಡರು.

ಚಿಕ್ಕಂದಿನಿಂದ ವೆಂಕಟರಮಣನಿಗೆ ತನ್ನನ್ನು ಎಲ್ಲಿಂದಲೋ ಕರೆಯೊಂದು  ಕರೆಯುತ್ತಿದೆ ಎಂದು ಭಾಸವಾಗುತ್ತಿತ್ತು.  ಒಮ್ಮೆ ಅವರ ಮನೆಗೆ ಹಿರಿಯರೊಬ್ಬರು ಬಂದಾಗ ತಾವು ಎಲ್ಲಿಂದ ಬಂದಿರಿ?’ ಎಂದು ಪ್ರಶ್ನಿಸಿದ.  ಆ ಹಿರಿಯರು ನಾನು ಆರುಣಾಚಲಂನಿಂದ ಬಂದಿದ್ದೇನೆ ಎಂದಾಗ, ಅದೇ ಅದೇ ನನ್ನನ್ನು ಕರೆಯುತ್ತಿರುವುದು ಎಂಬ ಹೊಳಹು ಆತನಲ್ಲಿ ಉಂಟಾಯಿತು.  ಆದಾದ ಕೆಲವು ತಿಂಗಳುಗಳಲ್ಲಿ 1896ರ ವರ್ಷದ  ಒಂದು ದಿನ ವೆಂಕಟರಮಣ ತನ್ನ ಚಿಕ್ಕಪ್ಪನ ಮನೆಯ ಮಹಡಿಯ ಕೊಟಡಿಯಲ್ಲಿ  ಒಬ್ಬನೇ ಮಲಗಿದ್ದಾಗ, ಇದ್ದಕಿದ್ದಂತೆ ಸಾವಿನ ಭೀತಿ ಕಾಣಿಸಿಕೊಂಡಿತು. ಕೆಲವೇ ನಿಮಿಷಗಳಲ್ಲಿ ದೇಹ ನಿಶ್ಚಲವಾದಂತೆ ಭಾಸವಾಗತೊಡಗಿತು. ಸಾವು ಬಂದಂತೆ ಅನುಭವವಾಯಿತು.  ಹಾಗಾದಾಗ ಆತನೇನೂ ರಾದ್ಧಾಂತ ಮಾಡಿ ಅವರಿವರನ್ನು ಕರೆದು ಹೌಹಾರಲಿಲ್ಲ.  ಅವನ ಅಸಾಧಾರಣ ಧೈರ್ಯವೂ  ಭಯಕ್ಕೆ ಸಮಾನವಾಗಿ ಆತನೊಂದಿಗಿತ್ತು.  ಈ   ಸಾವಿನ ಅನುಭವದ ಎಲ್ಲ ಪ್ರಕ್ರಿಯೆಗಳೂ  ಆತನಿಗೆ ತಿಳಿಯುತ್ತಿತು. ತನ್ನ ಸಾವನ್ನು ತಾನೇ  ನೋಡುತ್ತಿರುವಂತೆ ಆತನಿಗೆ ಭಾಸವಾಯಿತು.  ತನ್ನ ತಂದೆಯ ಸಾವನ್ನು ಕಂಡಿದ್ದ ಆತ ಈ ಸಂದರ್ಭದಲ್ಲಿ ಅದನ್ನು ನೆನೆದುಕೊಂಡು ತಾನೂ ಸತ್ತಂತೆಯೇ ನಟಿಸಿದ.  ಈ ಅನುಭವವನ್ನು ರಮಣರು ಹೀಗೆ ಬಣ್ಣಿಸುತ್ತಾರೆ:

ಸಾವಿನ ಭಯದ ಆಘಾತವು ನನ್ನ ಮನಸ್ಸನ್ನು ಅಂತರಾಳಕ್ಕೆ ದೂಡಿತು.  ಸಹಜವೋ ಎಂಬಂತೆ ನನ್ನ ಉಸಿರಾಟವನ್ನು ತಡೆದು ನನ್ನ ಸ್ವರೂಪದ ಬಗ್ಗೆ ವಿಚಾರ ಮಾಡತೊಡಗಿದೆ.  ಶವದಂತೆ ದೇಹವನ್ನು ಚಾಚಿದೆ.  ನಿಜವಾಗಿಯೂ ನನ್ನ ದೇಹವು ಗಡುಸಾಗಿರುವುದು ಕಂಡಿತು.  ಆದರೆ ದೇಹ ಸತ್ತು ಗಡುಸಾಗಿದ್ದರೂ ನಾನುಸತ್ತಿರಲಿಲ್ಲ.  ಅದಕ್ಕೆ ಬದಲು 'ನಾನು' ಅಸ್ತಿತ್ವದ ಚೈತನ್ಯ ಸ್ವರೂಪವಾಗಿದ್ದೆ.  ಆದ್ದರಿಂದ ನನ್ನಲ್ಲಿ ಒಂದು ಪ್ರಶ್ನೆ ಎದ್ದಿತು.  ಈ ನಾನುಎಂಬುದು ಏನುಇದು ಒಂದು ಶಕ್ತಿ ಅಥವಾ ಪ್ರವಾಹವಾಗಿ ದೇಹದೊಡನೆ ಸಂಪರ್ಕ ಹೊಂದಿದ್ದರೂ ದೇಹವು ಗಡುಸಾಗಿರಲಿ ಅಥವಾ ಚಟುವಟಿಕೆಯಿಂದಿರಲಿ, ಇದು ಕೆಲಸ ಮಾಡುತ್ತಿರುತ್ತದೆ ಎಂದು ತಿಳಿದೆ.  ಈ ಪ್ರವಾಹವು ಅಥವಾ ಕೇಂದ್ರವು ನನ್ನ ಪ್ರವೃತ್ತಿ, ಚಲನ ಇತ್ಯಾದಿ ಕಾರ್ಯಗಳನ್ನು ಮಾಡಿಸುತ್ತಿದೆ ಎಂಬ ಅರಿವು ಮೂಡಿಸಾವಿನ ಭಯ ಬಿಟ್ಟುಹೋಯಿತು.  ನಾನುಸೂಕ್ಷ್ಮ ಚೈತನ್ಯನಾಗಿದ್ದು ಆ ಚೈತನ್ಯಕ್ಕೆ   ಸಾವಿಲ್ಲದಿರುವುದರಿಂದ ಹೆದರಬೇಕಾಗಿಲ್ಲ ಎಂಬ ಜಾಗೃತಿ ಮೂಡಿತು.  ಈ ಜಾಗೃತಿಯು ನನಗೆ ನನ್ನ ವ್ಯಕ್ತಿತ್ವದ ಬಗ್ಗೆ ಒಂದು ನಿರಂತರವಾದ ವಿಚಾರ ಅಥವಾ ಅನುಭವವನ್ನು ನೀಡಿತು.  ನಾನು ಏನೇ ಮಾಡುತ್ತಿರಲಿ, ಓದುತ್ತಿರುವಾಗ, ನಡೆಯುತ್ತಿರುವಾಗ, ಮಾತನಾಡುವಾಗ, ವಿಶ್ರಮಿಸಿಕೊಳ್ಳುವಾಗ ನನ್ನ ವ್ಯಕ್ತಿತ್ವವು ಒಂದು ಚೈತನ್ಯ, ಶಕ್ತಿ ಅಥವಾ ಆವೇಶವಾಗಿದ್ದು ಅದರಲ್ಲಿ ನಾನು ಸ್ಥಿರವಾಗಿ ತಲ್ಲೀನನಾದೆನು’.  ಹೀಗೆ  ವೆಂಕಟರಮಣನಿಗೆ ಮಹತ್ವದ ಜ್ಞಾನೋದಯ ಉಂಟಾಯಿತು.  ನಾಶರಹಿತ ಜ್ಞಾನದ ಮಹರ್ಷಿಯು ಜನಿಸಿದನು.

ಹೀಗೆ ವೆಂಕಟರಮಣನಿಗೆ ಜ್ಞಾನೋದಯವಾದ ಕೆಲವೇ ವಾರಗಳಲ್ಲಿ  ಆತ ಶಾಲೆಯ ಕಟ್ಟುಪಾಡುಗಳಿಗೆ ಸಿಲುಕದವನಾದ.  ಶಾಲೆಯಲ್ಲಿವ್ಯಾಕರಣ ಮೂರು ಬಾರಿ ಬರೇಎಂದು ಶಿಕ್ಷಕರು ಹೇಳಿದರೆ  ಪುಸ್ತಕಗಳನ್ನು ಎತ್ತಿಟ್ಟು ಕಣ್ಣುಮುಚ್ಚಿ ಧ್ಯಾನಾಸಕ್ತನಾಗಿ ಕುಳಿತು ಶಿಕ್ಷಕರಿಂದ ನಿನಗೇಕೆ ಓದು?’ ಎಂದು ಗದರಿಸಿಕೊಂಡ.  ಚಿಕ್ಕಪ್ಪ ಮತ್ತು ಅಣ್ಣನಿಂದ ಟೀಕೆಗಳು ಬಂದಾಗ ಹೌದು, ನಾನೇನು ಇಲ್ಲಿ ಮಾಡುವುದು?’ ಎಂದು ಪ್ರಶ್ನಿಸಿಕೊಂಡಾಗಇದು ತನ್ನ ಮನಸ್ಸಿನೊಳಗೆ ಸುಪ್ತವಾಗಿ ಹೊರಹೊಮ್ಮುತ್ತಿರುವ ಅರುಣಾಚಲದಿಂದ ಬಂದ ಕರೆ ಎಂದುಕೊಂಡ.  ಹೀಗೆ ದೈವಾನುಗ್ರಹ ವೆಂಕಟರಮಣನನ್ನು  ತಿರುವಣ್ಣಾಮಲೈ ಕಡೆಗೆ ಆಕರ್ಷಿಸಿತು. ಸರ್ವಸಂಗ ಪರಿತ್ಯಾಗಿಯಾಗಿ ಸ್ವಸ್ವರೂಪವನ್ನು ಅರಿಯಲು ಅರುಣಾಚಲದ ಗುಹೆಯೊಂದರಲ್ಲಿ ಧ್ಯಾನಾಸಕ್ತನಾದ. ದೇಹಭಾವ ತೊರೆದು ಆತ್ಮಭಾವದಲ್ಲಿ ನೆಲನಿಂತ ಈತನ ಉಗ್ರ ತಪ್ಪಸಿಗೆ ಯಾವುದೂ ಅಡ್ಡಿಯಾಗಲಿಲ್ಲ. ಕ್ರಿಮಿಕೀಟಗಳು ಈತನ ಕಾಲಿನ ಮತ್ತು ತೊಡೆಯ ಕೆಲವು ಭಾಗಗಳನ್ನು ತಿಂದುಹಾಕಿದರೂ, ಯಾವುದರ ಪರಿವೆಯೂ  ಇಲ್ಲದಂತೆ ನಿಶ್ಚಲನಾಗಿ ಕುಳಿತುಬಿಟ್ಟನಂತೆ.  ತಲೆ ಕೂದಲು, ಉಗುರುಗಳು ಊಹೆಮಾಡಲೂ ಸಾಧ್ಯವಾಗದಷ್ಟು  ಬೆಳದು ಬಿಟ್ಟಿದ್ದವಂತೆ. ನಿತ್ರಾಣನಾಗಿದ್ದ ವೆಂಕಟರಮಣನನ್ನು  ಸ್ಥಳೀಯ  ವಾಸಿಗಳು ಕಂಡು ಸಂತೈಸಿದರು. ನಿಧಾನವಾಗಿ  ಸಹಜಸ್ತಿತಿಗೆ ಬಂದರೂ  ಹೆಚ್ಚು ಕಾಲ ಮೌನದಲ್ಲೇ ಇರುತ್ತಿದ್ದ ಈ ಸಾಧಕನನ್ನು  ಅರ್ಥಮಾಡಿಕೊಳ್ಳಲು ಸ್ಥಳೀಯರಿಗೆ ಸಾಕಷ್ಟು ಸಮಯವೇ ಬೇಕಾಯಿತು.

ದಿನಗಳು ಉರುಳಿದಂತೆ ಈ ಸಾಧಕ ಯುವಕನ ಪ್ರಭಾವಲಯಕ್ಕೆ ಸ್ವಲ್ಪ ಸ್ವಲ್ಪವಾಗಿ ಜನರು ಬರಲು ಪ್ರಾರಂಭ ಮಾಡಿದರು. ಎಷ್ಟೇ ಜನಸಮೂಹ ಇದ್ದರೂ ಎಲ್ಲರಿಗು ಈತನಿಂದ  ಮೌನವೇ ಉತ್ತರ. ಎಲ್ಲಾ ಸಮಸ್ಯೆಗೂ ಮೌನದಲ್ಲೇ ಉತ್ತರನೀಡುತ್ತಿದ್ದ.  ಇವರು ಭಕ್ತರ ಪಾಲಿಗೆ ರಮಣ ಮಹರ್ಷಿಯೇ ಆದರು.  ಮೌನ ತಪಸ್ಸಿನಿಂದ ಪ್ರತಿ ಕ್ಷಣವೂ ಆತ್ಮಚಿಂತನೆ ಮಾಡುತ್ತಾ ತಮ್ಮನ್ನು ಅರಸಿ ಬಂದವರಿಗೆ ದಿವ್ಯಾನುಗ್ರಹ ಮಾಡುತ್ತಿದ್ದರು.  ಮೌನ ಬ್ರಾಹ್ಮಣಮುನಿ ಎಂದು ಪ್ರಸಿದ್ದಿ ಹೊಂದಿದ ಇವರ ದರ್ಶನಕ್ಕಾಗಿ ಬರುವ ಭಕ್ತರ ಸಂಖ್ಯೆ  ದಿನದಿಂದ ದಿನಕ್ಕೆ ಹೆಚ್ಹಾಗ ತೊಡಗಿತು. ದರ್ಶನ ಮಾತ್ರಕ್ಕೆ ಬರುವ ಸಂಖ್ಯೆಗಿಂತ ತಮ್ಮ ಕಷ್ಟ ಪರಿಹಾರಕ್ಕಾಗಿ ಬರುವವರ ಸಂಖ್ಯೆಯೇ  ಹೆಚ್ಚಿತ್ತು.  ಆದರೆ ಮಹರ್ಷಿಗಳು ಯಾವುದೇ ಪವಾಡವನ್ನೂ ಮಾಡುತ್ತಿರಲಿಲ್ಲ,   ಭವಿಷ್ಯವನ್ನೇನೂ  ಹೇಳುತ್ತಿರಲಿಲ್ಲ, ಬದಲಿಗೆ ದಿವ್ಯ ತೇಜಸ್ಸಿನ ತಮ್ಮ ಕಣ್ಣುಗಳ ಮೂಲಕ ಸಾಂತ್ವನ ಹೇಳುತ್ತಿದ್ದರು.  ಇದು ಬೇಡಿ ಬಂದವರಿಗೆ ಸಾಕಾಗುತ್ತಿತ್ತು. ದರ್ಶನ ಮಾತ್ರದಿಂದಲೇ ಅವರ ಮಾನಸಿಕ ಕ್ಲೇಶಗಳು ದೂರವಾಗುತ್ತಿದ್ದವು.  ಮುಂದೆ ಬಂದ ದಿನಗಳಲ್ಲಿ ಅವರು ತಮ್ಮನ್ನು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರಾದರೂ, ಮೌನವೇ ಅತ್ಯಂತ ಶ್ರೇಷ್ಠವೆಂದು ಸಾರಿದರು. 

ರಮಣರ ಮೌನ ಎಂತಹ ಶಕ್ತಿಶಾಲಿಯಾದದ್ದು ಮತ್ತು ಸಂವೇದನಾ ಶಾಲಿಯಾದದ್ದು ಎಂಬುದಕ್ಕೆ ಬೆಳಗೆರೆ ಕೃಷ್ಣಶಾಸ್ತ್ರಿಗಳು ಒಂದು ವಿಷಯ ಹೇಳುತ್ತಾರೆ.  ಕಾವ್ಯಕಂಠ ಗಣಪತಿ ಎಂಬುವರು ಹಲವಾರು ವರ್ಷಗಳ ಮಹಾನ್ ತಪ್ಪಸ್ಸನ್ನು ಆಚರಿಸಿ ಅನೇಕ ಸಿದ್ಧಿಗಳನ್ನು ಪಡೆದುಕೊಂಡರು.  ಲೋಕಸಂಚಾರ ಮಾಡುತ್ತಿರುವಾಗ ಅವರು ತಿರುವಣ್ಣಾಮಲೆಗೂ ಬಂದರು.  ಈ ಗಣಪತಿ ಮುನಿಗಳಿಗೆ ಯಾರನ್ನಾದರೂ ದೃಷ್ಟಿಸಿ ನೋಡಿದರೆ ಸಾಕು ಆತ ಏನನ್ನು ಯೋಚಿಸುತ್ತಿದ್ದಾನೆಂದು ಹೇಳಿಬಿಡುವ ಮಹಾನ್ ಸಿದ್ಧಿ ಇತ್ತು.  ಈ ತಿರುವಣ್ಣಾಮಲೆಯಲ್ಲಿ ರಮಣರು ಗುಹೆಯಲ್ಲಿ ಕುಳಿತು ತಪಸ್ಸು ಮಾಡುವುದನ್ನು ನೋಡುವುದಕ್ಕೆ ದೇಶವಿದೇಶಗಳಿಂದ ಜನ ಬರುತ್ತಾರಲ್ಲ.  ಆ ರಮಣರ ಮನಸ್ಸಿನಲ್ಲೇನಿದೆಯೋ ತಿಳಿಯೋಣ ಎನಿಸಿತು ಅವರಿಗೆ.     ಅದೇ ಕುತೂಹಲದಿಂದ ರಮಣರ ಧ್ಯಾನಮಂದಿರಕ್ಕೆ  ಕಾವ್ಯಕಂಠ ಗಣಪತಿಗಳು ಆಗಮಿಸಿದರು.

ಬಂದವರೇ ರಮಣರ ಮುಂದೆ ಪದ್ಮಾಸನ ಹಾಕಿ ಕುಳಿತುರಮಣರನ್ನೇ ದಿಟ್ಟಿಸಿ ನೋಡಿದರು.  ಒಂದು ನಿಮಿಷ, ಎರಡು ಹತ್ತು ಹದಿನೈದು ಇಪ್ಪತ್ತು ನಿಮಿಷವಾದರೂ ರಮಣರು ಏನು ಯೋಚಿಸುತ್ತಿದ್ದಾರೆಂದು ಆ ಮನೋಧರ್ಮ ಏನೆಂದೂ ಕಾವ್ಯ ಕಂಠಗಣಪತಿಗಳಿಗೆ  ಗೊತ್ತಾಗಲಿಲ್ಲ.  ಅವರಿಗೆ ನನಗಿಂತಲೂ ಹೆಚ್ಚು ಸಿದ್ಧಿ ಇದೆ.  ನನ್ನ ಮನಸ್ಸಿನ ಯೋಚನೆಯನ್ನು ಈತ ಅಳೆಯಲಿಕ್ಕೆ ಬರುತ್ತಿದ್ದಾನೆಂದು ನನಗಿಂತ ಮೊದಲೇ ಅರಿತುಕೊಂಡು ನನ್ನ ಸಿದ್ಧಿಯನ್ನು ಈತ ಕಳೆದುಹೋಗುವಂತೆ ಮಾಡಿಬಿಟ್ಟಿದ್ದಾರೆ ಎಂದು ಭಾವಿಸಿ ಕಾವ್ಯಕಂಠ ಮುನಿ ರಮಣರ ಕಾಲಿಗೆ ನಮಸ್ಕಾರ ಮಾಡಿ ನನ್ನದು ತಪ್ಪಾಯ್ತು, ನನ್ನನ್ನು ದಯವಿಟ್ಟು ಕ್ಷಮಿಸಿಎಂದು ಕೇಳಿಕೊಂಡರು.  ರಮಣರಾದರೋ ನಿರ್ಲಿಪ್ತವಾಗಿ ಮಲಗಿದ್ದರು.  ನಾನು ನಿಮ್ಮನ್ನು ಪರೀಕ್ಷೆ ಮಾಡಲಿಕ್ಕೆ ಬರಬಾರದಾಗಿತ್ತು.  ಹಾಗೆ ಬಂದು ನನ್ನ ಸಿದ್ಧಿಯನ್ನು ಕಳೆದುಕೊಂಡೆ.  ನನ್ನ ಸಿದ್ಧಿಯನ್ನು ನನಗೆ ಹಿಂದಿರುಗಿಸುವ ಕೃಪೆ ಮಾಡಿದರೆ ಹೊರಟು  ಹೋಗುತ್ತೇನೆ.  ಇನ್ನೆಂದೂ ಇಲ್ಲಿಗೆ ಬರುವುದಿಲ್ಲ ಎಂದು ಕಾವ್ಯಕಂಠ ಗಣಪತಿಗಳು ದೈನ್ಯರಾಗಿ  ಬೇಡಿಕೊಂಡರು.

ರಮಣರು ಹಾಗೇ ಒಂದು ಕ್ಷಣ ದಿಟ್ಟಿಸಿ ನೋಡಿ.  ಒಂದು ಮಾತು ನುಡಿದರಂತೆ:  ‘You could read really thought, if there is a thought’. 

ಗಣಪತಿ ಮುನಿಗೆ ಆಶ್ಚರ್ಯವಾಗುತ್ತದೆ.  ಮನಸ್ಸು ಇಲ್ಲದ ಒಂದು ಸ್ಥಿತಿಯೂ ಉಂಟೇ?’  ನನ್ನ ಇಷ್ಟು ದಿನದ ಸಾಧನೆ, ಸಿದ್ಧಿ, ತಪಸ್ಸು ಎಲ್ಲವೂ ಮನಸ್ಸೊಂದಿದೆ, ಯೋಚನೆಯೊಂದಿದೆ ಎನ್ನುವುದರ ಮೇಲೆ ನಿಂತಿದೆ ಅಲ್ಲವೇಎಂದು ತಮಗೆ ತಾವೇ ಪ್ರಶ್ನಿಸಿಕೊಂಡು ಎಲ್ಲ ಕಡೆ ತಮ್ಮ ವಿದ್ವತ್ತು, ಸಿದ್ಧಿಗಳಿಂದ ಜಯಭೇರಿ ಹೊಡೆದುಕೊಂಡು ಬಂದಿದ್ದ ಕಾವ್ಯಕಂಠ ಮುನಿಗಳು ರಮಣರ ಅನುಯಾಯಿಯಾಗಿ ರಮಣಾಶ್ರಮದಲ್ಲಿಯೇ ಇದ್ದುಬಿಟ್ಟರು.  ರಮಣರನ್ನು ಭಗವಾನ್ ರಮಣ ಮಹರ್ಷಿಎಂದೇ ಭಾವಿಸಿದರು. 

ಮಹರ್ಷಿಗಳು ದಿನದ 24 ಘಂಟೆಗಳೂ ಭಕ್ತರಿಗೆ ಲಭ್ಯವಾಗಿರುತ್ತಿದ್ದರು. 1896 ರಿಂದ 1950ರ ತನಕ ಅವರು ಆಶ್ರಮ ಬಿಟ್ಟು ಎಲ್ಲೂ ಹೋಗಲೇ ಇಲ್ಲ. ಹೆಚ್ಚೆಂದರೆ ಎರಡು ಕಿಲೋ ಮೀಟರ್ ದೂರ ಹೋಗಿರಬಹುದು.  ಆದರೆ ಪ್ರಪಂಚದ ಎಲ್ಲಾ ಭಾಗಗಳಿಂದ ಭಕ್ತರನ್ನು ಸೆಳದುಕೊಂಡರು.  ದೇಶ ವಿದೇಶಗಳಿಂದ ಬರುವ ಆಗರ್ಭ ಶ್ರೀಮಂತ ಭಕ್ತನಿಂದ, ಕಡು ಬಡವನವರಗೆ   ಒಂದೇ ತೆರನಾದ ಅವಕಾಶ ಮತ್ತು ಆತಿಥ್ಯ ಆಶ್ರಮದಲ್ಲಿ ದೊರೆಯುತ್ತಿತ್ತು.  ಎಲ್ಲ ವಿಧದ ಪ್ರಾಣಿಗಳಲ್ಲದೆ, ಎಲ್ಲ ಜಾತಿ ಮತಗಳ ಜನರು, ವಿದ್ವಾಂಸರು, ಅನಕ್ಷರಸ್ತರು, ಹಿರಿಯರು, ಮಕ್ಕಳು ರಮಣರಲ್ಲಿ ಆತ್ಮೀಯತೆಯನ್ನು ಕಂಡರು. 

ರಮಣರನ್ನು ಮೊದಲು ಭೇಟಿ ಮಾಡಿದ ಪಾಶ್ಚಾತ್ಯ ವ್ಯಕ್ತಿ ಹಂಘ್ರೀಸ್ ಎಂಬುವರು.  ಚಿಕ್ಕಮಕ್ಕಳು ಬೆಟ್ಟದ ಮೇಲೆ ಹತ್ತಿ ಬರುತ್ತಿದ್ದುದುದು ನೋಡಲು ಎಷ್ಟು ಹೃದಯಸ್ಪರ್ಶಿಯಾಗಿತ್ತೆಂದು  ಬರೆದರು. ಆ ಮಕ್ಕಳಿಗೆ ಏಕೆ ಅಷ್ಟು ಖುಷಿ.  ಏತಕ್ಕೆಂದು ಊಹಿಸಬಲ್ಲಿರಾರಮಣರು ಮೌನವಾಗಿದ್ದರೂ, ಅವರ ಹತ್ತಿರ ಗಂಟೆಗಟ್ಟಲೆ ಸುಮ್ಮನೆ ಕುಳಿತುಕೊಳ್ಳಲು ಮಕ್ಕಳಿಗೆ ಆನಂದವೆನಿಸಿತ್ತು.  ಅವರು ಹುಡುಗರ ಜೊತೆ ಗೋಲಿ ಆಡುತ್ತಿದ್ದರು.  ಹೆಣ್ಣು ಮಕ್ಕಳು ತಮ್ಮ ಬೊಂಬೆಗಳ ಮದುವೆಯನ್ನು ವೈಭವ ಮತ್ತು ಸಡಗರದಿಂದ ಮಾಡಲು ಅವರು ಸಹಕರಿಸುತ್ತಿದ್ದರು.  ದೀಪಾವಳಿ ಹಬ್ಬದಲ್ಲಿ ಮಕ್ಕಳು ತಮ್ಮ ಬಳಿ ಇಟ್ಟುಕೊಂಡಿದ್ದ ಪಟಾಕಿಗಳಲ್ಲಿ ಒಂದು ಪಾಲನ್ನು ಬೆಟ್ಟದ ಮೇಲಕ್ಕೆ ತಂದು ತಮ್ಮ ಮೆಚ್ಚಿನ ರಮಣರ ಮುಂದೆ ಸಿಡಿಸುತ್ತಿದ್ದರು. 

ಮಹರ್ಷಿಗಳು ಎಲ್ಲರೊಟ್ಟಿಗೆ ಕೂತು ಊಟಮಾಡುತ್ತಿದ್ದರು.  ಯಾವ ರೀತಿಯ ವಿಶೇಷ ಸವಲತ್ತನ್ನೂ ಬಯಸದೆ ಸರಳವಾದ ನಡೆ ನುಡಿಗಳನ್ನು ಸ್ವಯಂ ಪಾಲಿಸಿ ಇತರರಿಗೆ ಮಾದರಿಯಾಗಿದ್ದರು. ಮುಂಜಾನೆ 3 ಘಂಟೆಗೇ ಎದ್ದು ಆಶ್ರಮವಾಸಿಗಳಿಗೆ ಊಟ ತಿಂಡಿ ವ್ಯವಸ್ತೆ ಏನಾಗಿದೆ ವಿಚಾರಿಸುತ್ತಿದ್ದರು, ಸ್ವತಃ ಕೂತು ತರಕಾರಿ ಹೆಚ್ಚುತ್ತಿದ್ದರು, ರುಬ್ಬಲು ಸಹಾಯ ಮಾಡುತ್ತಿದ್ದರು, ಕಸ ಗುಡಿಸುವುದರಿಂದ ಎಲ್ಲಾ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದರು. ನಂತರದಲ್ಲಿ ಬರುವ ಭಕ್ತರ ಜೊತೆ ಸಂವಾದ ನಡೆಸುತ್ತಿದ್ದರು. ಬಂದ ಜನ ತಮ್ಮನ್ನು ವಿಶೇಷವಾಗಿ ಕಾಣುವುದು, ಕಾಣಿಕೆಗಳನ್ನು ನೀಡುವುದು ಮುಂತಾದವುಗಳನ್ನೆಲ್ಲಾ ನಿರಾಕರಿಸುತ್ತಿದ್ದರು.  ಪ್ರಾಣಿ, ಪಕ್ಷಿ ಮತ್ತು ಗಿಡ ಮರಗಳನ್ನು ವಿಶೇಷವಾಗಿ ಪ್ರೀತಿಸುತ್ತಿದ್ದರು. ಗಿಡದ ಎಲೆಗಳನ್ನು ಮತ್ತು ಹೂವುಗಳನ್ನು ಕೀಳಬೇಡಿ ಎಂದು ಸದಾಕಾಲ ಹೇಳುತ್ತಿದ್ದರು. ಅವರ ಆಶ್ರಮದಲ್ಲಿ ಈಗಲೂ ಕಾಗೆಗೊಂದು, ಹಸುವಿಗೊಂದು, ಮಂಗನಿಗೊಂದು ಸಮಾಧಿ ಇದೆ. ಇದು ಇವರ ಪ್ರಾಣಿ ಪ್ರೇಮವನ್ನು ಹೇಳುತ್ತದೆ.

ಇವರ ವಸ್ತುವಾಗಿ ಕೇವಲ ಒಂದು ಹುಲಿ ಚರ್ಮ, ನೀರಿಗಾಗಿ ಒಂದು ಚೆಂಬು ಮತ್ತು ಆಸರೆಗಾಗಿ ಒಂದು ಊರುಗೋಲು ಬಿಟ್ಟರೆ ಬೇರೇನೂ ಇರಲಿಲ್ಲ. ಸರಳ, ಸಾತ್ವಿಕ, ಸಜ್ಜನರಾದ ಇವರು  ಶಾಂತ, ಸಹಜ ಸ್ತಿತಿಯಲ್ಲೇ ಯಾವಾಗಲು ಇರುತ್ತಿದ್ದರು.

1950ರಲ್ಲಿ ಇವರ ಮೊಣಕೈಯಲ್ಲಿ ಆದ ಗಂಟುಗಳು ಇವರನ್ನು ಭಾದಿಸತೊಡಗಿತು. ದೇಶದ ಪ್ರಸಿದ್ದ ವೈದ್ಯರು ಇವರ ಮೊಣಕೈಯನ್ನು ನಾಲ್ಕು ಬಾರಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿದರು.  ಆದರೂ ಯಾವುದೇ ಗುಣ ಕಾಣಲಿಲ್ಲ. ಉಲ್ಬಣಗೊಳ್ಳುತ್ತ ಹೋಯಿತು.  ಮಹರ್ಷಿಗಳು ದಿನದಿಂದ ದಿನಕ್ಕೆ ಕೃಶರಾಗುತ್ತ ಸಾಗಿದರು. ಯಾತನೆ ಜಾಸ್ತಿಯಾಯಿತು ಆದರೂ ಇವರ ಮುಖ ಮಾತ್ರ ಶಾಂತವಾಗಿಯೇ ಇರುತ್ತಿತ್ತು.  ಯಾವ ಯಾತನೆಯೂ ಇಲ್ಲವೇನೋ ಎಂಬಂತೆ ಶಾಂತವಾಗಿ ಮಲಗಿರುತ್ತಿದ್ದರು. ಭಕ್ತರು ಇವರ ದರ್ಶನಕ್ಕೆ ಮುಗಿಬೀಳಲು ಪ್ರಾರಂಭ ಮಾಡಿದರು.  ಅಲೋಪತಿ, ಆಯುರ್ವೇದ ಮತ್ತು ಹೋಮಿಯೋಪತಿ ಔಷಧಿಗಳು ಕೆಲಸ ಮಾಡಲಿಲ್ಲ.  14 ಏಪ್ರಿಲ್ 1950 ರಂದು ಭಗವಾನ್ ರಮಣರು ತಮ್ಮ ದೇಹವನ್ನು ತ್ಯಾಗ ಮಾಡಿದರು.

ವಿಶ್ವಕ್ಕೆ ರಮಣರ ಸಂದೇಶವೇನೆಂದರೆ ಸುಖವು ನಮ್ಮ ಸಹಜ ಸ್ವಭಾವ.  ಅದು ನಮ್ಮ ಆತ್ಮವೇ ಆಗಿದೆ.  ಅದನ್ನು ಪ್ರತಿಯೊಬ್ಬರೂ ಹುಡುಕುತ್ತಾರೆ, ಕಾರಣ ಅದು ಅವರ ಸ್ವಭಾವ.  ಅದು ಅವರ ಆಜನ್ಮಹಕ್ಕು.  ಅದನ್ನು ಅವರು ಕಾಣದೇ ಇರಲು ಕಾರಣ, ಅವರು ಯಾವಾಗಲೂ ತಮ್ಮಿಂದ ಹೊರಗೆ ಅದನ್ನು ಹುಡುಕುವುದೇ ಆಗಿದೆ.  ಯಾವುದೇ ಸಂದರ್ಭಗಳಲ್ಲೂ ಎಂದಿಗೂ ಇರುವ ಮತ್ತು ಸದಾ ಪೂರ್ಣವಾಗಿರುವ ಸುಖವನ್ನು ಕಂಡುಕೊಳ್ಳಬೇಕಾದರೆ ಒಬ್ಬ ಏನು ಮಾಡಬೇಕು?  ‘ನಮ್ಮ ಸ್ವರೂಪವೇನು?’ ಎಂದು ಹುಡುಕಿ ಅರಿಯಬೇಕು.  ಇದೇ ಆತ್ಮಜ್ಞಾನ ಎಂಬ ಜ್ಞಾನೋದಯ ಅಥವಾ ಮುಕ್ತಿ. 

ಈ ಮಹಾನ್ ಋಷಿವರ್ಯರಿಗೆ ನಮನ.
Tag: Ramana Maharshi

ಕಾಮೆಂಟ್‌ಗಳಿಲ್ಲ: