ಸೋಮವಾರ, ಡಿಸೆಂಬರ್ 2, 2013

ವಿಶ್ವೇಶ್ವರಯ್ಯ ಭಾರತದ ರತ್ನ


ವಿಶ್ವೇಶ್ವರಯ್ಯ ಭಾರತದ ರತ್ನ
-ಡಾ. ಎಸ್. ಎಲ್. ಭೈರಪ್ಪ

ಒಮ್ಮೆ ಪುಣೆಯಲ್ಲಿ ಪು. ಲ. ದೇಶಪಾಂಡೆಯವರು ನನ್ನನ್ನು ಉಪಾಹಾರಕ್ಕೆ ಕರೆದಿದ್ದರು.  ಜೊತೆಗೆ ಇತರ ನಾಲ್ವರು ಗಣ್ಯರು ಇದ್ದರು.  ಪು. ಲ. ಅವರು ಪ್ರಸಿದ್ಧ ನಾಟಕಕಾರರು.  ಚತುರ ವಾಕ್ಪಟು.  19ನೇ ಶತಮಾನದ ಉತ್ತರಾರ್ಧದಿಂದ ಆರಂಭಿಸಿ 20ನೇ ಶತಮಾನದ ಉತ್ತರಾರ್ಧದವರೆಗೆ ಮಹಾರಾಷ್ಟ್ರದ ಗಣ್ಯವ್ಯಕ್ತಿಗಳನ್ನು ಅವಲೋಕಿಸುವ ಮಾತು ನಡೆದಿತ್ತು.  ಬಾಲಗಂಗಾಧರ ತಿಲಕ್, ಮಹಾದೇವ ಗೋವಿಂದ ರಾನಡೆ, ಗೋಪಾಲಕೃಷ್ಣ ಗೋಖಲೆ, ಬಾಬಾಸಾಹೇಬ್ ಅಂಬೇಡ್ಕರ್, ವಿನಾಯಕ ದಾಮೋದರ ಸಾವರಕರ್, ಪಾಂಡುರಂಗ ವಾಮನ ಕಾಣೆ, ವಿಷ್ಣುನಾರಾಯಣ ಬಾತಖಂಡೇ, ವಿಷ್ಣು ದಿಗಂಬರ ಪಲುಸ್ಕರ್, ನಾರಾಯಣ ಚಂದಾವರ್ಕರ್ ಮೊದಲಾದ ಹೆಸರುಗಳನ್ನು ನೆನಪಿಸಿಕೊಳ್ಳುತ್ತಿದ್ದೆವು.  ಈ ನಡುವೆ ಪು. ಲ. ಅವರು ಈ ಮಟ್ಟದ ವ್ಯಕ್ತಿಗಳು ಕರ್ನಾಟಕದಲ್ಲಿ ಯಾರು ಯಾರು ಆಗಿಹೋಗಿದ್ದಾರೆ? ಎಂದು ಕೇಳಿದರು.

ಪ್ರೊ. ಎಂ. ಹಿರಿಯಣ್ಣ, ಆರ್. ಶಾಮಾಶಾಸ್ತ್ರಿ ಮೊದಲಾದ ವಿದ್ವತ್ ಪ್ರಪಂಚದ ಹೆಸರುಗಳನ್ನು ಹೇಳಿದ ನಾನು ಬೇರೊಂದು ವಿಧದಲ್ಲಿ ಅಖಿಲಭಾರತ ಮಟ್ಟದಲ್ಲಿ ರಾಷ್ಟ್ರನಿರ್ಮಾಪಕರೆಂದು ಕರೆಯಬಹುದಾದವರು ಮೋಕ್ಷಗುಂಡಂ ವಿಶ್ವೇಶ್ವರಯ್ಯ... ಎಂದು ವಾಕ್ಯವನ್ನು ಪೂರೈಸುವುದಕ್ಕೆ ಮುನ್ನವೇ ‘ನೋಡಿ, ನೀವು ಲಪಟಾಯಿಸುವ ಮಾತನಾಡುತ್ತಿದ್ದೀರಿ.  ಸರ್. ಎಂ. ವಿಶ್ವೇಶ್ವರಯ್ಯನವರು ಮಹಾರಾಷ್ಟ್ರೀಯರು ಅನ್ನುವುದನ್ನು ಮರೆಯಬೇಡಿ’ ಎಂದರು ಅವರು.

‘ನಿಮ್ಮ ಹಕ್ಕುಸಾಧನೆ ನನಗೆ ಆಶ್ಚರ್ಯ ಉಂಟುಮಾಡುತ್ತದೆ’ ಎಂದು ನಾನು ಅವರನ್ನು ತಡೆದೆ.

ಅವರು ಮುಂದುವರೆಸಿದರು.  ‘ನಿಮ್ಮಲ್ಲಿ ಒಂದು ಎಂಜಿನಿಯರಿಂಗ್ ಕಾಲೇಜೂ ಇರಲಿಲ್ಲ.  ಓದುವುದಕ್ಕೆಂದು ವಿಶ್ವೇಶ್ವರಯ್ಯನವರು ಪುಣೆಗೆ ಬಂದರು.  ಅವರು ಓದಿದ್ದು, ವೃತ್ತಿಯ ತರಬೇತಿ ಪಡೆದದ್ದು, ಹಲವು ಕಡೆಗಳಲ್ಲಿ ಹಲವು ಬಗೆಯ ಎಂಜಿನಿಯರಿಂಗ್ ಸಾಧನೆಗಳನ್ನು ಮಾಡಿ ದೇಶವ್ಯಾಪಿ ಹೆಸರನ್ನು ಗಳಿಸಿದ್ದು – ಎಲ್ಲವೂ ಇಲ್ಲಿಯೇ.  ಅವರ ವ್ಯಕ್ತಿತ್ವವನ್ನು ರೂಪಿಸಿದವರು ನಾವು.  ಆಮೇಲೆ ಜನ್ಮಕೊಟ್ಟ ನಾಡು ಎಂದು ಅವರನ್ನು ಕರೆಯಿಸಿಕೊಂಡು ಅವರಿಂದ ಎಲ್ಲ ಪ್ರಯೋಜನಗಳನ್ನು ಪಡೆದು ನೀವು ‘ಅವರನ್ನು ಸೃಷ್ಟಿಸಿದವರು ನಾವು’ ಎಂದು ಹಕ್ಕನ್ನು ಸಾಧಿಸುತ್ತಿದ್ದೀರಿ.  ಅವರೊಬ್ಬ ದೊಡ್ಡ ಜೀನಿಯಸ್. Man of great integrity.  ಮಹಾನ್ ಸಾಧಕ.  ಆದರೆ ಅದನ್ನೆಲ್ಲ ಬೆಳೆಸಿದ್ದು ಎಲ್ಲಿ?’

ಪ. ಲ ದೇಶಪಾಂಡೆ ಅವರ ಸ್ವಭಾವದಲ್ಲಿ ಕಿಂಚಿತ್ತೂ ಕಹಿ ಇಲ್ಲ.  ಹಾಸ್ಯವು ಅವರ ಸಹಜ ಪ್ರವೃತ್ತಿ ಎಂಬುದು ನನಗೆ ಗೊತ್ತಿತ್ತು.  ನಾನು ಹೇಳಿದೆ:

‘ನಿಮ್ಮದು ಅಮೆರಿಕನ್ ವಿಧಾನ.  ದೊಡ್ಡದೊಡ್ಡ ವಿದ್ಯಾಕೇಂದ್ರಗಳನ್ನು ಸ್ಥಾಪಿಸಿ ಪ್ರಪಂಚದೆಲ್ಲೆಡೆಯಿಂದ ಪ್ರತಿಭಾವಂತರನ್ನು ಆಕರ್ಷಿಸಿ ಅವರಿಗೆ ನೌಕರಿ, ಪೌರತ್ವಗಳನ್ನು ಕೊಟ್ಟು ತಮ್ಮವರನ್ನಾಗಿ ಮಾಡಿಕೊಂಡು ತಮ್ಮ ಕಿರೀಟಕ್ಕೆ ಗರಿಗಳನ್ನು ಸಿಕ್ಕಿಸಿಕೊಳ್ಳುವ ವಿಧಾನ.  ವಿಶ್ವೇಶ್ವರಯ್ಯನವರು ಓದುವಾಗ ಮೈಸೂರು ಸಂಸ್ಥಾನದಲ್ಲಿ ಒಂದೂ ಎಂಜಿನಿಯರಿಂಗ್ ಕಾಲೇಜು ಇರಲಿಲ್ಲ.  ಆದ್ದರಿಂದ ಮಹಾರಾಷ್ಟ್ರಕ್ಕೆ ಬಂದರು.  ಅನಂತರ ದಿವಾನರಾದಾಗ ಹುಟ್ಟುನಾಡಿನಲ್ಲಿ ವಿಶ್ವವಿದ್ಯಾಲಯವನ್ನಲ್ಲದೆ ಎಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆಗೂ ಕಾರಣರಾದರು.  ಈಗ ನಿಮ್ಮ ಮಹಾರಾಷ್ಟ್ರದ ಎಷ್ಟು ಹುಡುಗರು ಕರ್ನಾಟಕಕ್ಕೆ ಎಂಜಿನಿಯರಿಂಗ್ ಓದುವುದಕ್ಕೆ ಹೋಗುತ್ತಾರೆ ಗೊತ್ತೇನು?’

‘ವಾಹ್ ವಾಹ್ ಅಪ್ಪಾಸಾಹೇಬ್!’ ಎಂದು ಪು. ಲ. ದೇಶಪಾಂಡೆ ಕೈಯೆತ್ತಿ ನನ್ನ ಬಲ ಅಂಗೈಯ ಮೇಲೆ ಫಟ್ ಎನ್ನುವಂತೆ ತಟ್ಟಿದರು.  (ಮಹಾರಾಷ್ಟ್ರದಲ್ಲಿ ಸಾಹಿತ್ಯಾಭಿಮಾನಿಗಳು ನನ್ನನ್ನು ಸಾಧಾರಣವಾಗಿ ಕರೆಯುವುದು ಅಪ್ಪಾಸಾಹೇಬ್ ಎಂದು.)

ಮೂಸೀ ನದಿಯ ಪ್ರವಾಹ ಉಕ್ಕಿ ಹೈದರಾಬಾದ್ ಮತ್ತು ಸಿಕಂದರಾಬಾದ್ ನಗರಗಳು ನೀರಿನಿಂದ ಆವೃತವಾದಾಗ ನಿಜಾಮರು ಮದರಾಸು ಪ್ರಾಂತದ ಯುರೋಪಿಯನ್ ಎಂಜಿನಿಯರುಗಳ ಸಹಾಯವನ್ನು ಕೇಳಿದರು.  ಅವರೆಲ್ಲ ಏಕಕಂಠದಿಂದ ‘ಈ ಕೆಲಸಕ್ಕೆ ಮುಂಬಯಿ ಪ್ರಾಂತದ ವಿಶ್ವೇಶ್ವರಯ್ಯನವರೊಬ್ಬರೇ ಸಮರ್ಥರು.  ನಾವು ಯಾರೂ ಅಲ್ಲ’ ಎಂದರು.  ಅನಂತರ  ನಿಜಾಮರು ವಿಶ್ವೇಶ್ವರಯ್ಯನವರನ್ನು ವಿನಂತಿಸಿಕೊಂಡರು.  ಭವಿಷ್ಯದಲ್ಲಿ ಪ್ರವಾಹವನ್ನು ತಡೆಯುವುದು ಮಾತ್ರವಲ್ಲದೆ ವ್ಯವಸಾಯಕ್ಕೂ ಅನುಕೂಲವಾಗುವಂತೆ ನದಿಗೆ ಆಣೆಕಟ್ಟು ಹಾಕಿಸಿದ್ದಲ್ಲದೆ ಹೈದರಾಬಾದ್ ನಗರದ ಒಳಚರಂಡಿ ವ್ಯವಸ್ಥೆಗೂ ಯೋಜನೆ ಹಾಕಿ ನವ ಹೈದರಾಬಾದಿಗೆ ಕಾರಣರಾದರು. 

ಹೀಗೆ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ ಯೂರೋಪಿನಲ್ಲೂ ಹೆಸರು ಹರಡಿದ್ದ ವಿಶ್ವೇಶ್ವರಯ್ಯನವರನ್ನು ‘ಸಂಬಳಕ್ಕಾಗಿ ಧಣಿಯ ಕೆಳಗಿದ್ದ ಭೃತ್ಯ’ ಎಂಬಂತೆ ಮಾತನಾಡುವ ವ್ಯಕ್ತಿಗಳ ವಿಷಯದಲ್ಲಿ ಕನಿಕರವಲ್ಲದೆ ಬೇರಾವ ಭಾವವೂ ಉಚಿತವಲ್ಲ. 

ಬ್ರಿಟಿಷರ ಕಾಲದ ಭಾರತದ ರಾಜಮಹಾರಾಜರುಗಳಲ್ಲೆಲ್ಲ ಮೈಸೂರು ನಾಲ್ವಡಿಯವರು, ಬರೋಡದ ಸಯ್ಯಾಜಿರಾವ್ ಗಾಯಕವಾಡ್ ಅವರು, ಕೊಲ್ಹಾಪುರದ ಶಾಹೂ ಮಹಾರಾಜರು – ಹೀಗೆ ಬೆರಳೆಣಿಕೆಯಷ್ಟು ಅರಸರು ಮಾತ್ರ ಪ್ರಜಾಹಿತದಲ್ಲಿ ಆಸಕ್ತರಾಗಿದ್ದರು.  ಈ ಬೆರಳೆಣಿಕೆಯವರಲ್ಲಿ ಕೂಡಾ ವಿಶ್ವೇಶ್ವರಯ್ಯನಂಥ ಯಂತ್ರಶಿಲ್ಪಿ, ಸಿವಿಲ್ ಎಂಜಿನಿಯರಿಂಗ್, ಆರ್ಥಿಕಾಭಿವೃದ್ಧಿ, ಶೈಕ್ಷಣಿಕ ಪ್ರಗತಿ ಮೊದಲಾದ ಸಮಗ್ರ ಮುನ್ನೋಟದ ಜೊತೆಗೆ ಬ್ರಿಟಿಶರೊಡನೆ ಸಮಾನಮಟ್ಟದಲ್ಲಿ ನಿಂತು ವ್ಯವಹರಿಸುವ ಧೈರ್ಯ ಹಾಗೂ ಆತ್ಮವಿಶ್ವಾಸ ಇದ್ದ ವ್ಯಕ್ತಿಯು ಒಪ್ಪಿ ಬಂದದ್ದು ಮೈಸೂರಿನ ನಾಲ್ವಡಿಯವರ ಅದೃಷ್ಟ.  ಅದು ಸಂಸ್ಥಾನದ ಅದೃಷ್ಟವೂ ಹೌದು.  ತನ್ನ ಹುಟ್ಟುನಾಡಿಗೆ ಸೇವೆ ಸಲ್ಲಿಸುವ ಅವಕಾಶವನ್ನು ನಾಲ್ವಡಿಯವರು ಕಲ್ಪಿಸಿಕೊಟ್ಟದ್ದು ವಿಶ್ವೇಶ್ವರಯ್ಯನವರ ಅದೃಷ್ಟವೂ ಹೌದು.  ಆದರೆ ರಾಜಕೀಯ ಒತ್ತಡ, ತಮಿಳರ ಕುತಂತ್ರಸರಣಿ, ಅರಮನೆಯ ಒಳಸಂಚುಗಳು ಸೇರಿ ಈ ಪರಸ್ಪರ ಅದೃಷ್ಟಗಳು ಮುಖ್ಯ ಎಂಜಿನಿಯರಾಗಿ ಮೂರು ವರ್ಷ, ದಿವಾನರಾಗಿ ಆರು ವರ್ಷ – ಒಟ್ಟು 9 ವರ್ಷದಲ್ಲಿ ಒಡೆದುಹೋದವು.  ಆದರೂ ದಿವಾನಗಿರಿಯನ್ನು ಬಿಟ್ಟ ನಂತರವೂ ವಿಶ್ವೇಶ್ವರಯ್ಯನವರು ತಮ್ಮ ಸ್ವಪ್ರತಿಷ್ಠೆಗೆ ಇಂಬುಗೊಡದೆ ಅವಶ್ಯಬಿದ್ದಾಗಲೆಲ್ಲ ಸಂಸ್ಥಾನದ ಅಭಿವೃದ್ಧಿ ಕೆಲಸಗಳ ಕರೆಗೆ ಓಗೊಟ್ಟು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು.  ದಿವಾನಗಿರಿಯನ್ನು ಬಿಟ್ಟನಂತರ ಅವರ ಕಾರ್ಯದ ವ್ಯಾಪ್ತಿಯು ಅಖಿಲಭಾರತ ಮಟ್ಟದಲ್ಲಿ ಮುಂದುವರೆಯಿತು.  ಅವರು ಮುಂಬಯಿ ಪ್ರಾಂತದಲ್ಲಿದ್ದಾಗಲೇ ತಮ್ಮ ಸಂಬಳದಲ್ಲಿ ಉಳಿಸಿದ ಹಣವನ್ನು ಖರ್ಚು ಮಾಡಿ ಏಷ್ಯಕ್ಕೆ ಸೇರಿದ ಜಪಾನ್ ದೇಶವು ಯೂರೋಪಿನ ದೇಶಗಳಿಗೆ ಸರಿಸಮನಾಗಿ ಅಭಿವೃದ್ಧಿ ಹೊಂದಿರುವುದಕ್ಕೆ ಕಾರಣಗಳನ್ನು ಸ್ವತಃ ನೋಡಿ ತಿಳಿದುಕೊಳ್ಳುವ ಉದ್ದೇಶದಿಂದ 1908ರಲ್ಲಿಯೇ ಆ ದೇಶಕ್ಕೆ ಪ್ರವಾಸ ಹೋಗಿ ಅವರು ಸಾಧಿಸಿದ್ದ ತಂತ್ರಜ್ಞಾನದ ಹಾಗೂ ಆರ್ಥಿಕ ಬೆಳವಣಿಗೆಗಳ ವಿಧಾನಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿಬಂದರು.  ಮೈಸೂರು ಸಂಸ್ಥಾನದ ದಿವಾನಗಿರಿಯನ್ನು ಬಿಟ್ಟವರೇ  ಆ ದಿನಗಳಲ್ಲಿ ಆರ್ಥಿಕ ಮತ್ತು ತಾಂತ್ರಿಕ ದೈತ್ಯನಾಗಿ ಹೊಮ್ಮುತ್ತಿದ್ದ ಅಮೆರಿಕವನ್ನು ಅಧ್ಯಯನ ಮಾಡಲು ಸ್ವಂತ ಹಣ ಖರ್ಚುಮಾಡಿಕೊಂಡು ಹೋಗಿ ಅಲ್ಲಿಯ ಉದ್ಯಮಗಳನ್ನು ಸ್ವತಃ ಕಂಡು ಚರ್ಚಿಸಿ ಮನನ ಮಾಡಿದರು.  ವಿಶ್ವೇಶ್ವರಯ್ಯನವರ ಜ್ಞಾನದ ಬೆಳವಣಿಗೆ ಮತ್ತು ಪರಿಶ್ರಮಗಳಿಗೆ ಯಾರ ಪ್ರಾಯೋಜಕತ್ವವೂ ಬೇಕಿರಲಿಲ್ಲ.  ತಮ್ಮ ಮೂಲ ವಿಷಯವಾದ ಸಿವಿಲ್ ಎಂಜಿನಿಯರಿಂಗಿನ ಮಿತಿಯೂ ಅವರಿಗಿರಲಿಲ್ಲ.  ಮೋಟಾರಿನಿಂದ ಹಿಡಿದು ವಿಮಾನ ತಯಾರಿಕೆಯವರೆಗೆ, ಕೃಷಿಯಿಂದ ಹಿಡಿದು ಹೈನುಗಾರಿಕೆಯವರೆಗೆ, ನಗರಯೋಜನೆಯಿಂದ ಹಿಡಿದು ಭಾರೀ ಆಣೆಕಟ್ಟುಗಳ ನಿರ್ಮಾಣದವರೆಗೆ ಎಲ್ಲ ವಿಷಯಗಳನ್ನೂ ಸ್ವತಃ ಕಂಡು ಅಧ್ಯಯನ ಮಾಡಿ ಆ ವಿಷಯಗಳಲ್ಲಿ ಪರಿಣತಿಯನ್ನು ಪಡೆದಿರುತ್ತಿದ್ದರು.  ಈ ಕಾರಣದಿಂದ ಅವರ ಸಲಹೆ-ಸೂಚನೆಗಳಿಗಾಗಿ ಭಾರತದ ಎಲ್ಲ ವರಿಷ್ಠರೂ, ಉದ್ಯಮಪತಿಗಳೂ ಹಾತೊರೆಯುತ್ತಿದ್ದರು.  ಹೀಗೆ ವಿಶ್ವದಾದ್ಯಂತ ಅವರಿಗಿದ್ದ ಬೇಡಿಕೆಯ ಮುಂದೆ ಮೈಸೂರು ಸಂಸ್ಥಾನದ ದಿವಾನಗಿರಿ ಅಷ್ಟೇನೂ ದೊಡ್ಡದಾಗಿರಲಿಲ್ಲ.  ಅವರಿಂದ ದಿವಾನಗಿರಿಗೆ ಗೌರವವಿತ್ತೇ ಹೊರತು ದಿವಾನಗಿರಿಯಿಂದ ಅವರು ದೊಡ್ಡವರಾಗಬೇಕಿರಲಿಲ್ಲ.  ‘ನಾನು ಸದಾ ನನ್ನ ಜೇಬಿನಲ್ಲಿ ರಾಜೀನಾಮೆ ಪತ್ರವನ್ನು ಇಟ್ಟುಕೊಂಡಿರುತ್ತೇನೆ, ಅದೇ ನನ್ನ ಆತ್ಮವಿಶ್ವಾಸದ ಗುಟ್ಟು’ ಎಂದು ಅವರು ತಮ್ಮ ತೀರಾ ಆತ್ಮೀಯರ ಸಂಗಡ ಹೇಳುತ್ತಿದ್ದರು.

ವಿಶ್ವೇಶ್ವರಯ್ಯನವರು ಹೊಟ್ಟೆಯ ಪಾಡಿಗಾಗಿ ನೌಕರಿ ಹುಡುಕಿಕೊಂಡು ಮೈಸೂರಿಗೆ ಬಂದವರಲ್ಲ.  ಬ್ರಿಟಿಷರ ಅಧೀನದ ವಿಶಾಲವಾದ ಮುಂಬಯಿ ಪ್ರಾಂತದಲ್ಲಿ ಬ್ರಿಟಿಷ್ ಎಂಜಿನಿಯರುಗಳೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂಥ ಸಾಧನೆ ಮಾಡಿ ಬಹುಬೇಗ ಉಪಮುಖ್ಯ ಎಂಜಿನಿಯರ್ ಆದರು.  ಮಖ್ಯ ಎಂಜಿನಿಯರ್ ಹುದ್ಧೆಗೆ ಬ್ರಿಟಿಷರನ್ನು ಮಾತ್ರ ನೇಮಿಸಬೇಕೆಂಬ ನಿಯಮವಿದ್ದುದರಿಂದ ಅವರು ಮುಖ್ಯ ಎಂಜಿನಿಯರಾಗುವಂತಿರಲಿಲ್ಲ.  ಆದುದರಿಂದ ನಿವೃತ್ತಿಯನ್ನು ಕೇಳಿ ಗವರ್ನರನಿಗೆ ಕಾಗದ ಬರೆದರು.  ಇವರ ಕೋರಿಕೆಯ ನ್ಯಾಯ ಗವರ್ನರನಿಗೆ ಅರ್ಥವಾಯಿತು.  ಆದರೆ ನಿಯಮ ಮೀರುವಂತಿರಲಿಲ್ಲ.  ಆದ್ದರಿಂದ ವಿಶ್ವೇಶ್ವರಯ್ಯನವರ ಅಸಾಧಾರಣ ಸೇವೆಯನ್ನು ಪರಿಗಣಿಸಿ, ಪೂರ್ಣ ಸೇವಾವಧಿಯನ್ನು ಪೂರೈಸದಿದ್ದರೂ ಪೂರ್ಣ ನಿವೃತ್ತಿವೇತನ ಕೊಟ್ಟು ಬಿಡುಗಡೆ ಮಾಡಿದರು.  ಇವರ ಪ್ರತಿಭೆ ಕಾರ್ಯ ನಿಷ್ಠೆಗಳನ್ನು ತಿಳಿದಿದ್ದ ಮೈಸೂರು ಮಹಾರಾಜರು ತಮ್ಮ ಸಂಸ್ಥಾನದ ಮುಖ್ಯ ಎಂಜಿನಿಯರ್ ಹುದ್ದೆಗೆ ಆಹ್ವಾನಿಸಿದರು.  ಬರಿಯ ಮಾಮೂಲು ಕೆಲಸಗಳಲ್ಲಿ ತಮಗೆ ಆಸಕ್ತಿ ಇಲ್ಲವೆಂದೂ ಅಭಿವೃದ್ಧಿ ಕೆಲಸಗಳಲ್ಲಿ ಮಹಾರಾಜರಿಗೆ ಆಸಕ್ತಿ ಇದ್ದರೆ ಮಾತ್ರ ತಾನು ಪರಿಗಣಿಸುವೆ ಎಂದು ಷರತ್ತು ಹಾಕಿ, ಅದಕ್ಕೆ ಮಹಾರಾಜರು ಒಪ್ಪಿಕೊಂಡ ನಂತರ ವಿಶ್ವೇಶ್ವರಯ್ಯನವರು ತಮ್ಮ ಹುಟ್ಟಿದ ನಾಡಿಗೆ ಬಂದರು.  ಹಿಂದಿನ ಯಾವ ದಿವಾನರೂ ಮುಂದಿನ ಯಾವ ದಿವಾನರೂ ಒಟ್ಟು ಸೇರಿ ಮಾಡಿರದಷ್ಟು ಅಭಿವೃದ್ಧಿಯನ್ನು ತಾವು ದಿವಾನರಾಗಿದ್ದ ಕೇವಲ 6 ವರ್ಷಗಳಲ್ಲಿ ಮಾಡಿ ತಮ್ಮ ಜೀವಮಾನದಲ್ಲೇ ದಂತಕಥೆಯಾಗಿಬಿಟ್ಟರು.  ದಿವಾನಗಿರಿಯನ್ನು ಬಿಟ್ಟ ನಂತರವೂ ತಾವು ಆರಂಭಿಸಿದ್ದ ಕನ್ನಂಬಾಡಿ ಅಣೆಕಟ್ಟೆಯ ಜವಾಬ್ದಾರಿಯನ್ನು ಬಿಡದೆ ಪೂರ್ಣಗೊಳಿಸಿದ್ದಲ್ಲದೆ, ಅನಂತರ ಕೂಡ ತಾವು ಸಂಸ್ಥಾನಕ್ಕೆ ಮಾಡಿದ ಯಾವ ಸೇವೆಗೂ ಒಂದು ಬಿಡಿಗಾಸು ಗೌರವಧನವನ್ನೂ ಮುಟ್ಟಲಿಲ್ಲ. 

ದೊಡ್ಡದೊಡ್ಡ ಉದ್ಯಮಪತಿಗಳು ಇವರ ಸಲಹೆ ಬೇಡಿ ಪಡೆಯುತ್ತಿದ್ದರೂ ಇವರು ಎಂದೂ ಅವರ ಮುಲಾಜಿಗೆ ಒಳಪಡಲಿಲ್ಲ.  ಭಾರತದ ಕೈಗಾರಿಕೆಯು ಭಾರತೀಯರ ಕೈಯಲ್ಲಿರಬೇಕು, ಅದರ ಗಳಿಕೆ ಭಾರತದಲ್ಲಿ ಉಳಿಯಬೇಕು – ಎಂಬ ದೃಷ್ಟಿಯಿಂದ ವಿಶ್ವೇಶ್ವರಯ್ಯನವರು ಸಲಹೆ ಕೊಡುತ್ತಿದ್ದರೇ ಹೊರತು ಒಂದು ಕಾಸೂ ದಲ್ಲಾಳಿ ಪಡೆಯಲಿಲ್ಲ. 

‘ಭಾರತರತ್ನ’ ಪ್ರಶಸ್ತಿಯನ್ನು ಸ್ವೀಕರಿಸಬೇಕೆಂಬ ಕೋರಿಕೆಯೊಡನೆ ಜವಹರಲಾಲ್ ನೆಹರೂ ಪತ್ರ ಬರೆದಾಗ ಈ ಪ್ರಶಸ್ತಿಯು ನನ್ನ ಅಭಿಪ್ರಾಯ ಸ್ವಾತಂತ್ರ್ಯವನ್ನು ಮೊಟಕು ಮಾಡುವುದಿಲ್ಲವೆಂದು ನೀವು ಆಶ್ವಾಸನೆ ಇತ್ತರೆ ಮಾತ್ರ ನಾನು ಸ್ವೀಕರಿಸುತ್ತೇನೆ ಎಂದು ಖಡಕ್ ಉತ್ತರ ಬರೆದರು.

ಭಾರತದ ಎಲ್ಲೆಲ್ಲಿಯೂ ಅವರು ಸ್ಮರಣೀಯರಾದರು.  ವಿಶ್ವೇಶ್ವರಯ್ಯನವರ ನೆರ ಸೇವೆ ತಮ್ಮ ಭಾಗ್ಯಕ್ಕೆ ಲಭ್ಯವಾಗದವರು ಕೂಡಾ ಅವರ ಹೆಸರನ್ನು ಗೌರವಿಸುತ್ತಾರೆ.  ಬೇಂದ್ರೆ ಮತ್ತು ಚೆನ್ನವೀರ ಕಣವಿಯವರು ಅವರ ಮೇಲೆ ಕವನ ಬರೆದಿದ್ದಾರೆ.  ನಾಲ್ವಡಿಯವರ ಕಾಲದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದೂ ಅರಮನೆಯ ಬಿರುದುಗಳಿಗೆ ಗೌರವ ಕೊಡದಿದ್ದ ಕುವೆಂಪು ಅವರು ‘ಯಂತ್ರರ್ಷಿ’ ಎಂದು ವಿಶ್ವೇಶ್ವರಯ್ಯನವರನ್ನು ಹೊಗಳಿ ಕವನ ಬರೆದರು.

ಡಾ. ಡಿ. ಎಸ್. ಜಯಪ್ಪಗೌಡರು ತಮ್ಮ ಉತ್ಕೃಷ್ಟ ಸಂಶೋಧಿತ ಗ್ರಂಥ ‘ಭಾರತರತ್ನ ಸರ್ ಎಂ. ವಿ.’ಯ ಕೊನೆಯ ಭಾಗದಲ್ಲಿ ಈ ಸಂಗತಿಯನ್ನು ಹೇಳಿದ್ದಾರೆ:  2006ರ ವರ್ಷದಲ್ಲಿ ಸಿ ಎನ್  ಎನ್ – ಐ ಬಿ ಎನ್, ‘ಡೆಕ್ಕನ್ ಹೆರಾಲ್ಡ್’ ಮತ್ತು ರೇಡಿಯೋ ಸಿಟಿ – ಈ ಮಾಧ್ಯಮಗಳು ದಕ್ಷಿಣ ಭಾರತದ 20ನೆಯ ಶತಮಾನದ ಅತ್ಯಂತ ಜನಪ್ರಿಯ ವ್ಯಕ್ತಿಗಳು ಯಾರೆಂಬ ಬಗ್ಗೆ ಸಮೀಕ್ಷೆ ನಡೆಸಿದವು (‘ಡೆಕ್ಕನ್ ಹೆರಾಲ್ಡ್’, 27-11-2006).  ಅವು ಪ್ರತ್ಯೇಕ ರಾಜ್ಯಗಳ ವ್ಯಾಪ್ತಿಯಲ್ಲಿ ಈ ಸಮೀಕ್ಷೆ ಕೈಗೊಂಡಿದ್ದು, ಕರ್ನಾಟಕ ರಾಜ್ಯದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ, ನಟ ರಾಜ್ ಕುಮಾರ್, ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿ, ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ, ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ, ಸಂಗೀತ ವಿದುಷಿ ಗಂಗೂಬಾಯಿ ಹಾನಗಲ್ – ಇವರನ್ನು ಆಯ್ಕೆಯಾಗಿ ಆಯ್ದುಕೊಂಡಿದ್ದವು.  ಒಂದು ಲಕ್ಷದ ಆರು ಸಾವಿರ ಜನರು ಈ ಆಯ್ಕೆಯಲ್ಲಿ ಪಾಲ್ಗೊಂಡು ಅಭಿಮತ ತಿಳಿಸಿದ್ದರು.  ಇಂಟರ್ನೆಟ್ ಮತ್ತು ಎಸ್ ಎಮ್ ಎಸ್ ಮೂಲಕ ಈ ಮತಗಣನೆಯನ್ನು ನಡೆಸಲಾಯಿತು.  ಅದರಲ್ಲಿ ವಿಶ್ವೇಶ್ವರಯ್ಯನವರಿಗೆ ಶೇಕಡಾ 46 ಮತಗಳು ಬಂದವು.

ಈ ಸಮೀಕ್ಷೆ ನಡೆದಾಗ ವಿಶ್ವೇಶ್ವರಯ್ಯನವರು ನಿಧನರಾಗಿ ಅರವತ್ತು ವರ್ಷಗಳೇ ಕಳೆದಿದ್ದವು.  ಉತ್ತರ ಕರ್ನಾಟಕವೂ ದಕ್ಷಿಣಕನ್ನಡ ಜಿಲ್ಲೆಯೂ ಹಳೆಮೈಸೂರಿಗೆ ಸೇರಿರಲಿಲ್ಲವಾಗಿ ಆ ಭಾಗಗಳ ಜನರಿಗೆ ವಿಶ್ವೇಶ್ವರಯ್ಯನವರ ದಿವಾನಿಕೆಯ ನೇರಫಲ ಸಿಕ್ಕಿರಲಿಲ್ಲ.  ಮೇಲಣ ಸಮೀಕ್ಷೆಯಲ್ಲಿ ಅಭಿಮತ ಕೊಟ್ಟ ಇತ್ತೀಚಿನ ತಲೆಮಾರಿನ ಯಾರೂ ವಿಶ್ವೇಶ್ವರಯ್ಯನವರನ್ನು ಕಂಡೂ ಇರಲಿಲ್ಲ ಆದರೂ ಅವರಿಗೆ ಇಷ್ಟೊಂದು ಪ್ರಮಾಣದ ಮತಗಳು ಬಿದ್ದವು.  ಈ ಸಮೀಕ್ಷೆಯ ಫಲಿತಾಂಶ ಏನನ್ನು ತೋರಿಸುತ್ತದೆ?  ನಮ್ಮ ಜನತೆಗೆ ನಿಜವಾದ ಗ್ರಹಿಕೆ ಇದೆ.  ದೇಶಕ್ಕೆ ಎಂತಹ ಮಹಾಪುರುಷರು ಬೇಕೆಂಬುದರ ಸ್ಪಷ್ಟ ಕಲ್ಪನೆ ಇದೆ.


(ಈ ಲೇಖನ ಇಂದು ಬಿಡುಗಡೆಯಾಗುತ್ತಿರುವ ಡಾ. ಗಜಾನನ ಶರ್ಮ ಅವರು ಬರೆದಿರುವ ‘ಮೈಸೂರು ವಿಶ್ವವಿದ್ಯಾನಿಲಯದ ರೂವಾರಿ ಸರ್ ಎಂ. ವಿಶ್ವೇಶ್ವರಯ್ಯ’ ಕೃತಿಯಲ್ಲಿ ಡಾ. ಎಸ್. ಎಲ್. ಭೈರಪ್ಪನವರು ಬರೆದಿರುವ ದೀರ್ಘ ಮುನ್ನುಡಿಯ ಆಯ್ದ ಭಾಗವಾಗಿದೆ.  ಕೃಪೆ: ವಿಜಯವಾಣಿ ಪತ್ರಿಕೆ)

ಕಾಮೆಂಟ್‌ಗಳಿಲ್ಲ: