ಗುರುವಾರ, ಡಿಸೆಂಬರ್ 5, 2013

ವಾಲ್ಟ್ ಡಿಸ್ನಿ

ವಾಲ್ಟ್ ಡಿಸ್ನಿ

ಡಿಸ್ನಿ ಎಂದರೆ ಇಂದು ವಿಶ್ವದಲ್ಲಿ ಅರಿಯದವರಿಲ್ಲ.  ಡಿಸ್ನಿ ಆನಿಮೇಶನ್ ಚಿತ್ರಗಳನ್ನು, ಸುಂದರ ಉದ್ಯಾನಗಳನ್ನು ಕಾಣುವುದೆಂದರೆ ಮಕ್ಕಳು ಕುಣಿದಾಡುತ್ತಾರೆ; ಹಿರಿಯರೂ ಮಕ್ಕಳಾಗುತ್ತಾರೆ.

ಅನಿಮೇಶನ್ ಚಿತ್ರಲೋಕದಲ್ಲಿ ಅವಿಸ್ಮರಣೀಯರಾದ ವಾಲ್ಟ್ ಡಿಸ್ನಿ ಅವರು ಡಿಸೆಂಬರ್ 5, 1901ರಂದು ಚಿಕಾಗೋ ಇಲ್ಲಿನಾಯ್ಸ್ ಪ್ರದೇಶದಲ್ಲಿ ಜನಿಸಿದರು.  ತಂದೆ ಎಲಿಯಾಸ್ ಡಿಸ್ನಿ ಮತ್ತು ತಾಯಿ ಫ್ಲೋರಾ ಕಾಲ್ ಡಿಸ್ನಿ.   ವಾಲ್ಟ್ ಅವರು ಈ ದಂಪತಿಗಳಿಗಿದ್ದ ಐದು ಮಕ್ಕಳಲ್ಲೊಬ್ಬರು – ನಾಲ್ಕು ಗಂಡು ಮತ್ತು ಒಂದು ಹೆಣ್ಣು.  ವಾಲ್ಟ್ ಹುಟ್ಟಿದ ನಂತರದಲ್ಲಿ ಈ ಕುಟುಂಬ ಮರ್ಸೇಲೈನ್ ಮಿಸ್ಸೌರಿ ಎಂಬ ಊರಿಗೆ ಬಂತು.  ವಾಲ್ಟ್ ಡಿಸ್ನಿಯ ಬಾಲ್ಯದ ದಿನಗಳೆಲ್ಲಾ ಇಲ್ಲಿಯೇ ಕಳೆದವು. 

ವಾಲ್ಟನಿಗೆ ಚಿಕ್ಕಂದಿನಿಂದಲ್ಲೂ ಕಲೆಯಲ್ಲೇ ಆಸಕ್ತಿ.  ಆಗಾಗ ಚಿತ್ರಬರೆದು ಅಕ್ಕ ಪಕ್ಕದವರಿಗೆ ಮಾರಿ ಕಾಸು ಗಳಿಸುತ್ತಿದ್ದ.  ಚಿಕಾಗೋದ ಮೆಕಿನ್ಲೀ ಹೈಸ್ಕೂಲಿನಲ್ಲಿ ಸಹಾ ಆತ ಕಲೆ ಮತ್ತು ಛಾಯಾಗ್ರಹಣವನ್ನೇ ತನ್ನ ಅಭ್ಯಾಸದ ವಿಷಯವನ್ನಾಗಿ ಆಯ್ದುಕೊಂಡ.  ಪ್ರಕೃತಿ, ವನ್ಯಜೀವಿಗಳು, ಕಟುಂಬ ಮತ್ತು ಸಮಾಜ ಇವೆಲ್ಲವೂ ಆತನಿಗೆ ತುಂಬಾ ಪ್ರಿಯವಾಗಿದ್ದವು.  ಅಪ್ಪ ಹಣಕಾಸಿನ ವಿಚಾರದಲ್ಲಿ ಕಟ್ಟುನಿಟ್ಟಿನ ವ್ಯಕ್ತಿಯಾಗಿದ್ದರೂ ಆತನ ತಾಯಿ ಮತ್ತು ಹಿರಿಯಣ್ಣ ರಾಯ್ ಅವರುಗಳು  ವಾಲ್ಟನ ಆಸಕ್ತಿಗಳಿಗೆ ಪೋಷಣೆ ನೀಡುತ್ತಿದ್ದರು. 

1918ರ ಭೀಕರ ಆರ್ಥಿಕ ಕುಸಿತದ ವರ್ಷಗಳಲ್ಲಿ ವಾಲ್ಟ್ ಸೇನೆಗೆ ಸೇರಲು ಅರ್ಜಿ ಹಾಕಿದರಾದರೂ, ಇನ್ನೂ ಹದಿನಾರರ ಹರೆಯದ  ಕಿರಿಯ ವಯಸ್ಸೆಂದು ತಿರಸ್ಕರಿಸಲ್ಪಟ್ಟರು.  ಹೀಗಾಗಿ ರೆಡ್ ಕ್ರಾಸ್ ಸೇರಿದ ವಾಲ್ಟರನ್ನು ಫ್ರಾನ್ಸ್ ದೇಶದಲ್ಲಿ ಸೇವೆಗೆ ಕಳುಹಿಸಿದಾಗ ಅಲ್ಲಿ ಅವರು  ಅಂಬುಲೆನ್ಸ್ ವಾಹನ ಮತ್ತು ಸಿಬ್ಬಂಧಿ ವರ್ಗದವರನ್ನು ಕೊಂಡೊಯ್ಯುವ ವಾಹನಗಳ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆ ವಾಹನಗಳ ಮೇಲ್ಮೆಯಲ್ಲೆಲ್ಲಾ ಅವರು ಕಾರ್ಟೂನುಗಳನ್ನು ಬಿಡಿಸಿದ್ದರು.    

ಫ್ರಾನ್ಸಿನಿಂದ ಹಿಂದಿರುಗಿದ ನಂತರದಲ್ಲಿ ವಾಲ್ಟ್ ಡಿಸ್ನಿ  ವ್ಯಾವಹಾರಿಕ ಕಲಾ ಪ್ರಪಂಚದಲ್ಲಿ ತಮ್ಮನ್ನು ತೊಡಗಿಸಿಕೊಂಡರು.  ಅವರು ಈ ನಿಟ್ಟಿನಲ್ಲಿ ಮೊದಲು ಪ್ರಾರಂಭಿಸಿದ ಸಂಸ್ಥೆ ಲಾಫ್-ಓ-ಗ್ರಾಮ್ಸ್ ಕೆಲವೇ  ದಿನಗಳಲ್ಲಿ ದಿವಾಳಿಯಾಗಿಹೋಯ್ತು.  ತಮ್ಮ ಸೂಟ್ಕೇಸ್ ಮತ್ತು ಜೇಬಿನಲ್ಲಿ ಕೇವಲ  ಇಪ್ಪತ್ತು ಡಾಲರ್ ಇಟ್ಟುಕೊಂಡಿದ್ದ ವಾಲ್ಟ್  ಹಾಲಿವುಡ್ ಕಡೆಗೆ ತಮ್ಮ ಪಯಣ ಬೆಳೆಸಿದರು. 

‘ಅಲೈಸ್ ಕಾಮಿಡೀಸ್’ ಯಶಸ್ಸಿನ ಮುಖೇನ ವಾಲ್ಟ್ ಡಿಸ್ನಿ ಗಣನೀಯ ವ್ಯಕ್ತಿಯಾದರು.  ಜುಲೈ 13, 1925ರಂದು ವಾಲ್ಟರು ತಮ್ಮ ಮೊದಲ ಉದ್ಯೋಗಿಗಳಲ್ಲಿ  ಒಬ್ಬರಾಗಿದ್ದ ಲಿಲ್ಲಿಯನ್ ಬೌಂಡ್ಸ್ ಅವರನ್ನು ವಿವಾಹವಾದರು.   ಈ ದಂಪತಿಗಳಿಗೆ ಡಿಯೇನ್ ಮತ್ತು ಶರೋನ್ ಎಂಬ ಇಬ್ಬರು ಮಕ್ಕಳಾದರು. 

1932ರಲ್ಲಿ ವಾಲ್ಟರ ಸಂಸ್ಥೆ ನಿರ್ಮಿಸಿದ ‘ಫ್ಲವರ್ಸ್ ಅಂಡ್ ಟ್ರೀಸ್’ ಚಿತ್ರ ಪ್ರಪ್ರಥಮ ವರ್ಣ ಕಾರ್ಟೂನ್ ಎಂಬ ಖ್ಯಾತಿಗೆ ಪಾತ್ರವಾದದ್ದೇ ಅಲ್ಲದೆ ಅಕಾಡೆಮಿ ಅವಾರ್ಡ್ ಗಳಿಸಿತು.   1937ರಲ್ಲಿ ಅವರು ಮಲ್ಟಿಪ್ಲೇನ್ ಕ್ಯಾಮರಾ ತಂತ್ರಜ್ಞಾನವನ್ನು ಪ್ರಪ್ರಥಮ ಬಾರಿಗೆ ಬಳಸಿ ‘ದಿ ಓಲ್ಡ್ ಮಿಲ್’ ಚಿತ್ರವನ್ನು ಬಿಡುಗಡೆ ಮಾಡಿದರು.

ಡಿಸೆಂಬರ್ 21, 1937ರಂದು ವಾಲ್ಟ್ ಡಿಸ್ನಿ ನೇತೃತ್ವದ ಸಂಸ್ಥೆ ತಯಾರಿಸಿದ ‘ಸ್ನೋ ವೈಟ್ ಅಂಡ್ ದಿ ಸೆವೆನ್ ಡ್ವಾರ್ಫ್ಸ್’ ಎಂಬ ಪ್ರಪ್ರಥಮ ಪೂರ್ಣ ಪ್ರಮಾಣದ ಸಂಗೀತಯುಕ್ತ ಅನಿಮೇಶನ್ ಚಿತ್ರವು  ಲಾಸ್ ಏಂಜೆಲಿಸಿನ ಕಾರ್ಥೇ ಥಿಯೇಟರಿನಲ್ಲಿ ತನ್ನ ಪ್ರಾರಂಭಿಕ ಪ್ರದರ್ಶನವನ್ನು ನೀಡಿತು.  ಇಡೀ ವಿಶ್ವವು ಆರ್ಥಿಕ ಕುಸಿತದಿಂದ ಕಂಗೆಟ್ಟಿದ್ದ ಅಂದಿನ ಕಾಲದಲ್ಲೇ ಈ ಚಿತ್ರಕ್ಕಾಗಿದ್ದ ಖರ್ಚು 1,499,000 ಡಾಲರುಗಳು.  ಈ ಚಿತ್ರವು ಇಂದಿಗೂ ಚಲನಚಿತ್ರಯುಗದ ಮಹತ್ವದ ಮೈಲುಗಲ್ಲಾದ ಸುಂದರ ನಿರ್ಮಾಣವೆಂದು  ಪ್ರಖ್ಯಾತಿಪಡೆದಿದೆ.   ಅಲ್ಲಿಂದ ಮುಂದಿನ  ಐದು ವರ್ಷಗಳಲ್ಲಿ ವಾಲ್ಟ್ ಡಿಸ್ನಿ ಸ್ಟುಡಿಯೋ ಸಂಸ್ಥೆಯು ಪಿನೋಚಿಯೋ, ಫನಾಟೇಶಿಯ, ಡಂಬೊ ಮತ್ತು ಬಾಂಬಿ ಮುತಾದ ಪೂರ್ಣ ಪ್ರಮಾಣದ ಅನಿಮೇಶನ್ ಕ್ಲಾಸಿಕ್ಸ್ ಎಂದು ಖ್ಯಾತಿಗಳಿಸಿರುವ ಚಿತ್ರಗಳನ್ನು ನಿರ್ಮಿಸಿತು.
1950ರ ದಶಕದಲ್ಲಿ ಮಿಕಿ ಮೌಸ್ ಕ್ಲಬ್ ಅತ್ಯಂತ ಜನಪ್ರಿಯಗೊಂಡಿತು.  ಮುಂದೆ ಹಲವಾರು ದಶಕಗಳವರೆಗೆ ಹಲವಾರು ರೂಪಗಳನ್ನು ಪಡೆದುಕೊಂಡ ಅದು ಇಂದಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.

ವಾಲ್ಟ್ ಡಿಸ್ನಿ ಅವರ ಕನಸಾಗಿದ್ದ ಒಂದು ಸ್ವಚ್ಛ ಹಾಗೂ ರಮಣೀಯವಾದ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣವು 1955ರಲ್ಲಿ ಭವ್ಯಾಕಾರದ ನನಸಾಗಿ ಜನ್ಮತಾಳಿತು.  ಟೆಲಿವಿಷನ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ವಾಲ್ಟ್ ಡಿಸ್ನಿ ಅವರು 1954ರ ವರ್ಷದಲ್ಲಿಯೇ ಕಿರುತೆರೆಯ  ನಿರ್ಮಾಣಗಳನ್ನು ಪ್ರಾರಂಭಿಸಿ 1961ರ ವರ್ಷದ ವೇಳೆಗೆ ತಮ್ಮ ‘ವಂಡರ್ ಫುಲ್ ವರ್ಲ್ಡ್ ಆಫ್ ಕಲರ್’ ಮೂಲಕ  ಪೂರ್ಣಪ್ರಮಾಣದ ವರ್ಣ ಪ್ರಸರಣವನ್ನು ನಿರೂಪಿಸಿತು.

1965ರ ವೇಳೆಗೆ ವಾಲ್ಟ್ ಡಿಸ್ನಿಯವರು ಅಮೆರಿಕದಲ್ಲಿನ ನಗರಗಳ ಜೀವನವನ್ನು ಉತ್ತಮಗೊಳಿಸುವ ಬಗ್ಗೆ ಚಿಂತನೆ ಹರಿಸಿದರು.  ಇ ಕುರಿತು ಸ್ವಯಂ ಕಾರ್ಯಪ್ರವೃತ್ತರಾದ ಅವರು ‘Experimental Prototype Community of Tomorrow (EPCOT) ಎಂಬ ಯೋಜನೆಯನ್ನು ಪ್ರಸ್ತುತಪಡಿಸಿದರು. 

ಡಿಸೆಂಬರ್ 15, 1966ರಲ್ಲಿ ವಾಲ್ಟ್ ಡಿಸ್ನಿ ಅವರು ನಿಧನರಾಗುವ ಮುಂಚಿನ ಕೆಲದಿನಗಳಲ್ಲಿ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ದಿ ಆರ್ಟ್ಸ್ ಸಂಸ್ಥೆಯ ನಿರ್ಮಾಣದ ಕುರಿತು ತೀವ್ರ ಆಸಕ್ತಿವಹಿಸಿದ್ದರು. ಆ ಮೂಲಕ ಅವರಿಗೆ ಮುಂದೆಯೂ ಕೂಡಾ ಪ್ರತಿಭೆ ಎಂಬುದು ನಿರಂತರವಾಗಿ ಭೋರ್ಗರೆಯುತ್ತಿರಬೇಕೆಂಬ ಸದಾಶಯವಿತ್ತು.

ವಾಲ್ಟ್ ಡಿಸ್ನಿ ಅವರು ಒಬ್ಬ ಮಹಾನ್ ಸಾಧಕರಾದ ಲೆಜೆಂಡ್.  ದಂತಕಥೆ ಎನ್ನಬಹುದಾದಂತಹ ಇಪ್ಪತ್ತನೆಯ ಶತಮಾನದ ಮಹಾನ್ ಸೃಜನಶಾಲಿ.   ವಿಶ್ವದಾದ್ಯಂತ ಜನಪ್ರಿಯರಾಗಿರುವ ವಾಲ್ಟ್ ಡಿಸ್ನಿ  ಪ್ರಚಂಡ  ಕಲ್ಪನಾ ಶಕ್ತಿ, ಆಶಾವಾದ, ಸೃಜನೆ ಮತ್ತು ಸ್ವಯಂನಿರ್ಮಿತ ಯಶಸ್ಸುಗಳಿಗೆ ಅನ್ವರ್ಥವಾಗಿದ್ದಾರೆ.  ಹಳೆಯದರ ಬಗ್ಗೆ ಹೇಳುತ್ತಲೇ ಹೊಸದಿಕ್ಕಿನೆಡೆಗೆ ತಮ್ಮ ಕಾಲದ ಜನಾಂಗವನ್ನು ಕೊಂಡೊಯ್ದ ಮಹಾನ್ ವ್ಯಕ್ತಿಯಾದ ವಾಲ್ಟ್ ಡಿಸ್ನಿ ಈ ವಿಶ್ವ ಕಂಡ ಅಪರೂಪದ ಶ್ರೇಷ್ಠ ಸಾಧಕರಲೊಬ್ಬರು  ಎಂಬುದು ನಿರ್ವಿವಾದ ಸಂಗತಿಯಾಗಿದೆ.  ಅವರು ಕೈಗೊಂಡ ಯೋಜನೆ ಕನಸುಗಳು ಇಂದು ವಿಶ್ವವ್ಯಾಪಿಯಾಗಿ ತನ್ನ ಬಾಹುಗಳನ್ನು ಚಾಚಿ ಬೆಳೆಯುತ್ತಲೇ ಇದೆ.

 Tag: Walt Disney

ಕಾಮೆಂಟ್‌ಗಳಿಲ್ಲ: