ಶನಿವಾರ, ಡಿಸೆಂಬರ್ 7, 2013

ನೆಲ್ಸನ್ ಮಂಡೇಲ ಇನ್ನಿಲ್ಲ

ನೆಲ್ಸನ್ ಮಂಡೇಲ  

ಇಂದು ನಮ್ಮ ವಿವೇಕಾನಂದ ಸೇವಾಶ್ರಮದ ನೇತ್ರ ಶುಶ್ರೂಷಾ ಶಿಬಿರಗಳಿಗಾಗಿ ಹಲವಾರು ಹಳ್ಳಿಗಳ ನಡುವೆ ಓಡಿಯಾಡುತ್ತಿದ್ದಾಗ  ಗೆಳೆಯರು ನುಡಿದರು ‘ನೆಲ್ಸನ್ ಮಂಡೇಲ ಹೋಗಿಬಿಟ್ಟರಂತೆ!’.  ವಯಸ್ಸಾದ ಜೀವ ಹೋಗುವುದು ಅನಿವಾರ್ಯ.  ಅದು ಇದ್ದಷ್ಟೂ ಕಷ್ಟವನ್ನೇ ಅನುಭವಿಸುತ್ತಿತ್ತು ಎಂಬುದು ನಿಜವಾದರೂ, ಅದು ಯಾವುದೋ ವಿದೇಶದ ಒಂದು ಮೂಲೆಯಲ್ಲಿ ನನಗೆ ಯಾವುದೇ ರೀತಿಯಲ್ಲಿ ರಕ್ತಸಂಬಂಧಿ ಆಗಿಲ್ಲದೆ ಇದ್ದುದಾದರೂ ಏನೋ ಕಳೆದು ಹೋಯಿತಲ್ಲ ಎಂಬ ಭಾವ ಕಾಡಿತು.  ಕೆಲವು ದಿನಗಳ ಹಿಂದೆ ಕನ್ನಡ ಪ್ರಭ ಪತ್ರಿಕೆಯಲ್ಲಿ ಓದಿ ಅತ್ಯಂತ ಆಪ್ತವಾಗಿ ತಟ್ಟಿದ ಭಾವ ಎಂದು ನನ್ನೊಡನೆ ಉಳಿಸಿಕೊಂಡಿದ್ದ ಈ ಲೇಖನ ತುಂಬಾ ನೆನೆಪಾಯಿತು. 

ಶ್ರದ್ಧಾಂಜಲಿ ಎಂಬುದು ಒಂದು ನೆನಪು ಒಂದು ಹೃದಯವನ್ನು ತಟ್ಟುವ ಭಾವ.  ಈ ಮಹಾನುಭಾವನಿಗೆ ಹೀಗೆ ಹೃದಯದಾಳದಿಂದ ಒಂದು ಮಿಡಿತ

ಇನ್ನೂ ಇದೆ ನಮ್ಮ ಪಯಣ

ಮೂಲ: ನೆಲ್ಸನ್ ಮಂಡೇಲ,  ಅನು: ಹರೀಶ್ ಕೇರ.   

ನಾನು ಹುಟ್ಟಿದ ಕುನು ಗ್ರಾಮ ಒಂದು ಕಣಿವೆಯಲ್ಲಿತ್ತು. ಎರಡು ತೊರೆಗಳು ಅಡ್ಡ ಹಾಯ್ದ, ಹುಲ್ಲು ಬೆಳೆದ, ಮೇಲಿನಿಂದ ಬೆಟ್ಟಗಳು ಕಣ್ಣಿಟ್ಟಿರುವಂತೆ ಕಾಣುವ ಕಣಿವೆ. ಚಿಕ್ಕಂದಿನಿಂದಲೂ ನಾನು ಇಲ್ಲಿನ ಇತರ ಬಾಲಕರೊಡನೆ ಆಡುತ್ತ, ಗುದ್ದಾಡುತ್ತ ಕಳೆದೆ. ರಾತ್ರಿ ಇದೇ ಮಕ್ಕಳೊಡನೆ ನನ್ನ ಊಟ, ಹೊದಿಕೆ ಹಂಚಿಕೊಳ್ಳುತ್ತಿದ್ದೆ. ಬಯಲಲ್ಲಿ ಕುರಿಗಳನ್ನೂ ಕರುಗಳನ್ನೂ ಮೇಯಿಸುತ್ತಿದ್ದಾಗ ನನ್ನ ವಯಸ್ಸು ಐದಕ್ಕಿಂತ ತುಂಬಾ ಹೆಚ್ಚಿಗೆಯೇನೂ ಇದ್ದಿರಲಿಕ್ಕಿಲ್ಲ. ಕ್ಸೋಸಾ ಸಮುದಾಯಕ್ಕೆ ಗೋವುಗಳೊಡನೆ ಅತಿಮಾನುಷ ಎನಿಸುವ ಸಂರ್ಬಧವಿತ್ತು. ಅದು ಬರಿಯ ಹಾಲು, ಕಾಸಿನದ್ದಲ್ಲ. ದೇವರ ಕೃಪೆ, ನೆಮ್ಮದಿಗೆ ಸಂಬಂಧಿಸಿದ್ದು. ಇಲ್ಲೇ ನಾನು ಆಕಾಶದಿಂದ ಹಕ್ಕಿಗಳನ್ನು ಕವಣೆಕಲ್ಲಿನಲ್ಲಿ ಹೊಡೆದುರುಳಿಸುವುದು, ಜೇನು – ಕಾಡುಹಣ್ಣು - ಬೇರುಬೊಗಟೆ ಸಂಗ್ರಹಿಸುವುದು, ಮೇಯುತ್ತಿರುವ ಆಕಳ ಕೆಚ್ಚಲಿನಿಂದಲೇ ಹಾಲು ಹೀರುವುದು, ಸ್ವಚ್ಛ ತೊರೆಗಳಲ್ಲಿ ಈಜಾಡುವುದು, ಗಾಳದ ಮೂಲಕ ಮಿನು ಹಿಡಿಯುವದನ್ನೆಲ್ಲ ಕಲಿತೆ.

...........

ರೊಬೆನ್ ದ್ವೀಪದ ಜೈಲಿನಲ್ಲಿ ನನಗೆ ಕಾರಿಡಾರ್‌ನ ತುದಿಯ ಸೆಲ್ ನೀಡಲಾಗಿತ್ತು. ಕಣ್ಣಿನ ಮಟ್ಟದಲ್ಲಿ ಸಣ್ಣ ಕಿಟಕಿಯೊಂದಿತ್ತು. ಸೆಲ್ ಅನ್ನು ಅಳೆಯಲು ಮೂರು ಹೆಜ್ಜೆಗಳು ಸಾಕಾಗಿದ್ದವು. ಮಲಗಿದರೆ ಕಾಲು ಮತ್ತು ತಲೆಗೆ ಗೋಡೆ ತಾಗುತ್ತಿತ್ತು. ಹೊರಗೆ ಅಂಟಿಸಲಾಗಿದ್ದ ಕಾರ್ಡಿನಲ್ಲಿ ನನ್ನ ಸಂಖ್ಯೆ ಬರೆದಿತ್ತು - ಎನ್.ಮಂಡೇಲಾ 466/64. ನನಗಾಗ ನಲ್ವತ್ತಾರು ವರ್ಷ. ಜೀವಾವಧಿ ಶಿಕ್ಷೆಯಾಗಿತ್ತು. ಆ ಕೋಣೆಯಲ್ಲಿ ಎಷ್ಟು ವರ್ಷ ಕಳೆಯಬೇಕು ಎಂಬುದು ಗೊತ್ತಿರಲಿಲ್ಲ.

ರೊಬೆನ್ ದ್ವೀಪದ ಜೈಲು ಅಂದರೆ ಇತರ ಜೈಲುಗಳಂತಲ್ಲ. ಅದು ನಮ್ಮ ದೇಶಕ್ಕಿಂತ ಎಷ್ಟೋ ದೂರದಲ್ಲಿತ್ತು. ಅಸಹ್ಯವಾದ ಪರಮ ಒಂಟಿತನ ನಮ್ಮನ್ನು ಕಾಡುತ್ತಿತ್ತು. ಅದರಿಂದ ಬದುಕಿ ಬರುವುದೇ ದುಸ್ಸಾಧ್ಯ ಎನಿಸಿತ್ತು. ಅದೂ ಒಂದು ಬಗೆಯ ಹೋರಾಟವಾಗಿತ್ತು. ನಮಗೆಲ್ಲ ಸಣ್ಣ ಚಡ್ಡಿಗಳನ್ನು ಕೊಟ್ಟಿದ್ದರು. ನಾನು ಅದನ್ನು ಧರಿಸಲು ನಿರಾಕರಿಸಿದೆ. ಪ್ಯಾಂಟ್‌ಗಳನ್ನು ಒದಗಿಸುವಂತೆ ವಾರ್ಡನ್ ಮುಂದೆ ವಾದಿಸಿದೆ. ಕೆಲ ದಿನ ಬಳಿಕ ನನಗೆ ಮುಕ್ಕಾಲು ಪ್ಯಾಂಟ್ ನೀಡಲಾಯಿತು. ಇತರರಿಗೆ ಅದನ್ನೂ ಕೊಟ್ಟಿರಲಿಲ್ಲ. ಸಹಕೈದಿಗಳಿಗೆ ನೀಡದಿದ್ದರೆ ನನಗೂ ಬೇಡ ಎಂದು ನಾನು ಹಠ ಹಿಡಿದೆ. ಕೊನೆಗೆ ಚಡ್ಡಿಯೇ ಗತಿಯಾಯಿತು.

...........

ಬಂದೀಖಾನೆಯಲ್ಲಿರುವವರಿಗೆ ಸಮಯ ನಿಶ್ಚಲವಾಗಿರುವಂತೆ ಭಾಸವಾಗುತ್ತದೆ. ಹೊರಗಿನವರಿಗೆ ಹಾಗಲ್ಲ. ಇದು ನನಗೆ ಅನಿಸಿದ್ದು 1968ರಲ್ಲಿ ಒಮ್ಮೆ ನನ್ನ ಅಮ್ಮ ನನ್ನನ್ನು ಭೇಟಿಯಾದಾಗ. ರಿವೋನಿಯಾ ದಂಗೆಯ ನಂತರ ಆಕೆಯನ್ನು ನಾನು ಸಂಧಿಸಿರಲಿಲ್ಲ. ಕುಟುಂಬದ ಒಳಗಿದ್ದಾಗ ಕಾಲದ ಬದಲಾವಣೆಗಳು ಅಷ್ಟೊಂದು ಸ್ಪಷ್ಟವಾಗಿರುವುದಿಲ್ಲ. ಬೇರೆಯಾಗಿದ್ದು, ಅಪರೂಪಕ್ಕೆ ಸಂಧಿಸಿದರೆ ಬದಲಾವಣೆ ಎದ್ದು ಕಾಣುತ್ತದೆ. ನನ್ನಮ್ಮ ತುಂಬಾ ಮುದುಕಿಯಾಗಿದ್ದಾಳೆ ಎನಿಸಿತು. ಆಕೆ ತೂಕ ಕಳೆದುಕೊಂಡಿದ್ದಳು. ಮುಖ ಇಳಿಬಿದ್ದಿತ್ತು. ನಾನಾಕೆಯನ್ನು ನೋಡುವುದು ಇದೇ ಕೊನೆಯಿರಬಹುದೇನೋ ಎಂಬ ಯೋಚನೆ ಬಂತು.

ಅದಾಗಿ ಕೆಲವು ವಾರಗಳ ನಂತರ ನನಗೆ ಸೋದರ ಕಳಿಸಿದ ಟೆಲಿಗ್ರಾಂ ಬಂತು. ಅಮ್ಮ ಹೃದಯಾಘಾತದಿಂದ ತೀರಿಕೊಂಡಿದ್ದಳು. ತ್ರಾನ್ಸ್‌ಕೆಯಿಯಲ್ಲಿ ನಡೆಯಲಿದ್ದ ಶವಸಂಸ್ಕಾರಕ್ಕೆ ಹೊಗಲು ಅನುಮತಿ ನೀಡುವಂತೆ ಜೈಲಿನ ಅಧಿಕಾರಿಗಳಿಗೆ ವಿನಂತಿಸಿದೆ. ನಿರಾಕರಿಸಿದರು. ಅವರು ಹೇಳಿದರು: 'ಮಂಡೇಲಾ, ನೀವು ಮಾತು ಉಳಿಸಿಕೊಳ್ಳುವಿರೆಂಬ ನಂಬಿಕೆ ನಮಗಿದೆ. ಆದರೆ ನಿಮ್ಮ ಜನ ಸುಮ್ಮನಿರಬೇಕಲ್ಲ? ಅವರು ನಿಮ್ಮನ್ನು ಖಂಡಿತಾ ಅಪಹರಿಸುವರು'. ನನ್ನ ಶೋಕ ಇನ್ನಷ್ಟು ಹೆಚ್ಚಿತು. ಆಕೆಯ ಹಿರಿಮಗ ನಾನು; ಆಕೆಯ ಉತ್ತರಕ್ರಿಯೆಯ ವೇಳೆ ಅಲ್ಲಿರಬೇಕಾದ್ದು ನನ್ನ ಕರ್ತವ್ಯವಾಗಿತ್ತು.

ಮುಂದೆ ಎಷ್ಟೋ ತಿಂಗಳ ಕಾಲ ಆಕೆಯ ಬಗ್ಗೆಯೇ ನಾನು ಯೋಚಿಸುತ್ತಿದ್ದೆ. ಜೈಲು ಸೇರಿದ ಬಳಿಕ, ಆಕೆಗೆ ಯಾವುದೇ ಸಹಾಯ ಮಾಡಲು ನನ್ನಿಂದಾಗಿರಲಿಲ್ಲ. ತಾಯಿಯ ಸಾವು, ಎಲ್ಲ ಮನುಷ್ಯರನ್ನೂ ತಮ್ಮ ಬದುಕನ್ನು ಹಿಂದಿರುಗಿ ನೋಡುವಂತೆ ಮಾಡುತ್ತದೆ.

...........

1969ರ ಮೇ ತಿಂಗಳಿನಲ್ಲಿ ಪೊಲೀಸರು ನನ್ನ ಪತ್ನಿ ವಿನ್ನಿಯನ್ನೂ ಬಂಧಿಸಿ ಎಳೆದೊಯ್ದರು. ಆಕೆಗೆ ಜಾಮೀನು ಸಿಗಲಿಲ್ಲ. ಭೇಟಿಯಾಗಲು ಯಾರನ್ನೂ ಬಿಡಲಿಲ್ಲ. ಮುಂದಿನ ಆರು ತಿಂಗಳು ಅಕೆಯನ್ನು ಗುಪ್ತವಾಗಿ, ಕ್ರೂರವಾಗಿ ವಿಚಾರಣೆಗೊಡ್ಡಿದರು. ಭಯೋತ್ಪಾದನೆ ಕಾನೂನಿನಡಿಯಲ್ಲಿ ಸಿಲುಕಿಸಿದರು. ಆಕೆಗೆ ಆರು ತಿಂಗಳ ಜೈಲುಶಿಕ್ಷೆಯಾಯಿತು.

ನನ್ನ ಪತ್ನಿಯೂ ಜೈಲಿನಲ್ಲಿದ್ದಾಳೆಂಬ ಯೋಚನೆಯಿಂದ ನಾನು ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆಯುತ್ತಿದ್ದೆ. ಒಳಗೆ ಅಧೀರನಾಗಿದ್ದರೂ ಹೊರಗೆ ತೋರಿಸಿಕೊಳ್ಳುತ್ತಿರಲಿಲ್ಲ. ಆಕೆಯ ಗತಿಯೇನು? ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ಪ್ರಶ್ನೆಗಳು ಉತ್ತರವಿಲ್ಲದೆ ತಲೆಯಲ್ಲಿ ಸುತ್ತುತ್ತಿರುತ್ತಿದ್ದವು. ನಮ್ಮ ಪತ್ರಗಳು ಅಧಿಕಾರಿಗಳ ತಪಾಸಣೆಗೊಳಪಟ್ಟು ವಿನಿಮಯವಾಗುತ್ತಿದ್ದವು.

ಇದೇ ಸಂದರ್ಭದಲ್ಲಿ ಇನ್ನೊಂದು ಭಾರಿ ಶೋಕ ನನಗೆ ಎರಗಿತು. ಜುಲೈಯಲ್ಲಿ ನನ್ನ ಕಿರಿಯ ಮಗ ಮಕಗತೊನಿಂದ ಟೆಲಿಗ್ರಾಂ ಬಂತು. ಅದು ನನ್ನ ಹಿರಿ ಮಗ ಮಡಿಬಾ ತೆಂಬೆಕಿಲೆಯ ಸಾವಿನ ಸುದ್ದಿ. ಮೋಟಾರ್‌ಕಾರಿನ ಅಪಘಾತದಲ್ಲಿ ಆತ ಸತ್ತಿದ್ದ. ಆಗ ಅವನ ವಯಸ್ಸು ಇಪ್ಪತ್ತೈದು, ಜತೆಗೆ ಇಬ್ಬರು ಮಕ್ಕಳು.

ಮಡದಿ ಜೈಲಿನಲ್ಲಿ. ಮಗನ ಮರಣ. ನಾನು ಏನು ಮಾಡಲು ಸಾಧ್ಯವಿತ್ತು? ನನ್ನ ಶೋಕವನ್ನು ವ್ಯಕ್ತಪಡಿಸಲು ಪದಗಳಿರಲಿಲ್ಲ. ಹೃದಯ ತೂತಾಗಿತ್ತು. ಜೈಲಿನ ಕೋಣೆಗೆ ಮರಳಿ ಸುಮ್ಮನೆ ಕೂತೆ.   ಮಗನ ಆತ್ಮ ಶಾಂತಿಯನ್ನಪ್ಪಲು, ನಾನು ಉತ್ತರಕ್ರಿಯೆಯಲ್ಲಿ ಭಾಗವಹಿಸುವುದು ಅಗತ್ಯವಾಗಿತ್ತು. ಅಧಿಕಾರಿಗಳ ಅನುಮತಿ ಕೇಳಿದೆ. ನನ್ನ ಮೇಲೆ ಕಣ್ಣಿರಿಸಲು ಪೊಲೀಸರನ್ನು ಕಳಿಸುವಂತೆಯೂ ಹೇಳಿದೆ. ಉತ್ತರ: ನಿರಾಕರಣೆ.  

ತೆಂಬಿ ಸಣ್ಣವನಿದ್ದಾಗಿನ ಒಂದು ಘಟನೆ ನೆನಪಾಯಿತು. ಒಮ್ಮೆ ಆತ ನನ್ನ ಜಾಕೆಟ್, ಅದು ಆತನ ಮೊಳಕಾಲವರೆಗೆ ಬರುತ್ತಿತ್ತು, ಧರಿಸಿದ್ದ. ಅದರಲ್ಲಿ ಆತನಿಗೇನೋ ಹೆಮ್ಮೆ ಇದ್ದಂತಿತ್ತು. ನನ್ನನ್ನು ಬೀಳ್ಕೊಳ್ಳುವಾಗ ಆತ ಹೇಳಿದ್ದು - 'ನೀವು ಹೋದ ಬಳಿಕ ಮನೆಯನ್ನು ನಾನು ನೋಡಿಕೊಳ್ಳುತ್ತೇನೆ'.

----

ಆ ಸುದೀರ್ಘ ಮತ್ತು ಏಕಾಂತದ ದಿನಗಳಲ್ಲೇ ನನ್ನ ಜನರಿಗಾಗಿ ನಾನು ಹೊಂದಿದ್ದ ಸ್ವಾತಂತ್ರ್ಯದ ಹಸಿವು ಎಲ್ಲರ (ಕರಿಯರ ಮತ್ತ ಬಿಳಿಯರೆಲ್ಲರ) ಪಾಲಿನ ಸ್ವಾತಂತ್ರ್ಯದ ಹಸಿವಾಗಿ ಬೆಳೆದದ್ದು.  ತುಳಿತಕ್ಕೊಳಗಾದವನಂತೆಯೇ ತುಳಿಯುವವನೂ ಮುಕ್ತನಾಗಬೇಕು ಎಂಬುದು ನನ್ನ ಅಭಿಪ್ರಾಯ. ಇನ್ನೊಬ್ಬರ ಸ್ವಾತಂತ್ರ್ಯವನ್ನು ಅಪಹರಿಸುವವನು ಸ್ವತಃ ತಾನೇ ದ್ವೇಷದ ಬಂಧಿ. ಆತ ಪೂರ್ವಾಗ್ರಹ ಮತ್ತು ಸಣ್ಣಮನಸ್ಸಿನ ಪಂಜರದ ಸರಳುಗಳ ಹಿಂದಿದ್ದಾನೆ. ನನ್ನ ಸ್ವಾತಂತ್ರ್ಯವನ್ನು ಇನ್ನೊಬ್ಬರು ಒಯ್ದಾಗ ನಾನು ಹೇಗೆ ಮುಕ್ತನಲ್ಲವೋ, ಹಾಗೆಯೇ ಇನ್ನೊಬ್ಬರ ಸ್ವಾತಂತ್ರ್ಯವನ್ನು ನಾನು ಕದ್ದಾಗ ಕೂಡ. ಶೋಷಕ ಮತ್ತು ಶೋಷಿತರಿಬ್ಬರೂ ಮಾನವೀಯತೆಯಿಂದ ವಂಚಿತರು. ಜೈಲಿನಿಂದ ಹೊರಬಿದ್ದಾಗ, ಇಬ್ಬರ ಬಿಡುಗಡೆಯನ್ನೂ ಸಾಧಿಸುವುದು ನನ್ನ ಗುರಿಯಾಗಿತ್ತು. ಅದು ಈಡೇರಿದೆ ಎಂದು ಕೆಲವರು ಹೇಳಬಹುದು. ಆದರೆ ಅದು ಸತ್ಯವಲ್ಲ. ನಾವಿನ್ನೂ ಮುಕ್ತರಾಗಿಲ್ಲ; ಮುಕ್ತರಾಗುವ ಹಕ್ಕನ್ನಷ್ಟೇ ಪಡೆದುಕೊಂಡಿದ್ದೇವೆ. ಅಂತಿಮ ಹೆಜ್ಜೆಯನ್ನು ನಾವು ಇಟ್ಟಿಲ್ಲ; ಆ ಸುದೀರ್ಘ ಹಾಗೂ ಕಷ್ಟಕರ ಪಯಣದ ಮೊದಲ ಹೆಜ್ಜೆಯನ್ನಷ್ಟೇ ಇಟ್ಟಿದ್ದೇವೆ. ಮುಕ್ತರಾಗುವುದೆಂದರೆ ಸರಪಳಿಗಳನ್ನು ಕತ್ತರಿಸುವುದಷ್ಟೇ ಅಲ್ಲ, ಇನ್ನೊಬ್ಬನ ಸ್ವಾತಂತ್ರ್ಯವನ್ನು ಗೌರವಿಸುವುದು ಕೂಡ. ಆ ನಿಟ್ಟಿನಲ್ಲಿ ನಮ್ಮ ಶ್ರದ್ಧೆಯ ಪರೀಕ್ಷೆ ಆರಂಭವಾಗಿದೆ.

ನಾನು ಆ ಬಿಡುಗಡೆಯ ಸುದೀರ್ಘ ಯಾನವನ್ನು ಕೈಗೊಂಡಿದ್ದೇನೆ. ತಪ್ಪು ಮಾಡದಂತೆ ಪ್ರಯತ್ನಿಸಿದ್ದೇನೆ; ತಪ್ಪು ಮಾಡಿದ್ದೇನೆ. ಬೆಟ್ಟ ಏರಿದವನಿಗೆ ಗೊತ್ತಾಗುತ್ತದೆ - ಇದಕ್ಕಿಂತ ದೊಡ್ಡ, ಕ್ಲಿಷ್ಟ ಪರ್ವತಗಳಿವೆ. ನಾನಿಲ್ಲಿ ಒಂದು ಘಳಿಗೆ ವಿಶ್ರಾಂತಿ ಪಡೆಯುತ್ತೇನೆ. ಅದು ನನ್ನೆದುರಿರುವ ದಿವ್ಯ ಸೌಂದರ್ಯವನ್ನು ವೀಕ್ಷಿಸಲು; ಸಾಗಿ ಬಂದ ದಾರಿಯನ್ನೊಮ್ಮೆ ಅವಲೋಕಿಸಲು. ಆದರೆ ಅದು ಕ್ಷಣಕಾಲವಷ್ಟೇ; ಯಾಕೆಂದರೆ ಸ್ವಾತಂತ್ರ್ಯದ ಜತೆಗೆ ಹೊಣೆಗಾರಿಕೆಗಳೂ ಬರುತ್ತವೆ. ನನ್ನ ಪಯಣ ಇನ್ನೂ ಮುಗಿದಿಲ್ಲ.

ಕೃಪೆ: ಕನ್ನಡ ಪ್ರಭ

ಕಾಮೆಂಟ್‌ಗಳಿಲ್ಲ: