ಬುಧವಾರ, ಜನವರಿ 1, 2014

ಕೆ ಕಲ್ಯಾಣ್

ಕೆ. ಕಲ್ಯಾಣ್

'ಅಮೃತ ವರ್ಷಿಣಿ' ಚಿತ್ರದ "ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ನನ್ನ ನಿನ್ನ ನಡುವಿನಲಿ.." ಎಂಬ ಸಾಹಿತ್ಯದ ಮೂಲಕ ಅಮೃತ ಹನಿಸಿದವರು ಕೆ ಕಲ್ಯಾಣ್. ನೆನಪುಗಳ ಮಾತು ಮಧುರಾ (ಚಂದ್ರಮುಖಿ ಪ್ರಾಣಸಖಿ), ಸವಿ ಸವಿ ನೆನಪು ಸಾವಿರ ನೆನಪು (ಮೈ ಆಟೋಗ್ರಾಫ್), ಆಹಾ ಎಂಥಾ ಆ ಕ್ಷಣ ನೆನೆದರೆ ತಲ್ಲಣ (ಆಕಾಶ್), ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ (ಆ ದಿನಗಳು)...ಹೀಗೆ ಅನೇಕ ಸುಂದರ ಗೀತೆಗಳನ್ನು ಕೊಟ್ಟಂತಹ ಸಾಹಿತಿ ಕಲ್ಯಾಣ್.

ಪ್ರೇಮಕವಿ ಎಂದು ಚಿತ್ರಲೋಕದಲ್ಲಿ ಪ್ರಖ್ಯಾತರಾಗಿರುವ ಕೆ. ಕಲ್ಯಾಣ್ ಅವರು ಜನವರಿ 1, 1975ರ ವರ್ಷದಲ್ಲಿ ಜನಿಸಿದರು.  ತಂದೆ ಕೃಷ್ಣಸ್ವಾಮಿ ಅಯ್ಯಂಗಾರ್ ಮತ್ತು ತಾಯಿ ವಿಜಯಲಕ್ಷ್ಮಿ. ಐದು ಮಕ್ಕಳ ಕುಟುಂಬದಲ್ಲಿ ಒಬ್ಬರಾದ ಕಲ್ಯಾಣ್ ಅತ್ಯಂತ ಕಡು ಬಡತನದಲ್ಲಿ ಜೀವನ ಸವೆಸಿದವರು.   ತಂದೆ ಅರ್ಚಕ ವೃತ್ತಿಯಲ್ಲಿದ್ದು ಅವರು ಮನೆಗೆ ತರುವ ಪ್ರಸಾದವೇ ಇವರ ಚಿಕ್ಕಂದಿನಲ್ಲಿ ಜೀವನಾಧಾರವಾಗಿತ್ತು.  ಒಮ್ಮೆ ಒಂದು ನಾಲ್ಕು ದಿನ ತಂದೆಯವರು ಊರಲ್ಲಿಲ್ಲದಾಗ ಪ್ರಸಾದವೂ ಸಿಗದೆ,   ಉಂಡ ಅಂಬಲಿಯ ರುಚಿ ಕಲಿಸಿಕೊಟ್ಟ ಆಧ್ಯಾತ್ಮ ಮತ್ತು ಬಡತನದ ನಡುವೆ ಕಂಡ ಪ್ರೀತಿ ಕಟ್ಟಿಕೊಟ್ಟ ಕನಸಿನ ಶಕ್ತಿ ಅತ್ಯಂತ ದೊಡ್ಡದು ಎಂದು ಭಾವಿಸಿದವರು ಕೆ. ಕಲ್ಯಾಣ್.  ಹಾಗೂ ಹೀಗೂ ಬಡತನದಲ್ಲೇ ಎಸ್ ಎಸ್ ಎಲ್ ಸಿ ಓದಿ, ಕಂಪ್ಯೂಟರ್ ಡಿಪ್ಲೋಮಾ ಓದುವುದರಲ್ಲಿ ಮಗ್ನರಾಗಿದ್ದರು.  ಇವೆಲ್ಲವುಗಳ ನಡುವೆ ತಾಯಿ ಶಾಸ್ತ್ರೀಯ ಸಂಗೀತ ಹಾಡುತ್ತಿದ್ದು ಅದರಲ್ಲಿ ಬಾಲಕ ಕಲ್ಯಾಣರ ಮನಸ್ಸಿನ ಅಂತರಾಳದ ಯಾವುದೋ ಕಿಡಿ ಅಲೆದಾಡುತ್ತಿತ್ತು.   ಈ ಸಂದರ್ಭದಲ್ಲಿ ತಮ್ಮ ಸಂವೇದನೆಗಳನ್ನು ಲೇಖನಿಯಿಂದ ಹಾಳೆಯ ಮೇಲೆ ಇಳಿಸುತ್ತಿದ್ದ ಕಲ್ಯಾಣರ ಮನಸ್ಸು ಕವಿರೂಪಕ್ಕೆ ಕಾಲಿಡತೊಡಗಿತ್ತು.  ಮನೆಗೆ ಬಂದ ಒಬ್ಬ ಹಿರಿಯರು ಇವರ ಜಾತಕ ನೋಡಿ ಚಿತ್ರರಂಗದಲ್ಲಿ ನಿನಗೆ ಭವಿಷ್ಯ ಇದೆ ಆ ಹಾದಿಯಲ್ಲಿ ಸಾಗು ಎಂದು ನುಡಿದರು. ಇದನ್ನೇ ತಂದೆ ತಾಯಿಗಳೂ ನಂಬಿ ಪ್ರೋತ್ಸಾಹಿಸಿದರು.  ಭವಿಷ್ಯ ನಿಜವಾಯಿತೋ ಎಂಬಂತೆ ಚಿತ್ರರಂಗದಲ್ಲಿರಲಿ, ಬದುಕಿನಲ್ಲೇ ಯಾವುದೇ ಆಧಾರವೂ ಇಲ್ಲದೆ ಇದ್ದ ಬಾಲಕನೊಬ್ಬನಿಗೆ ಕನ್ನಡದ ಧೀಮಂತ ಸಂಗೀತ ನಿರ್ದೇಶಕ ಕವಿ ಹೃದಯಿ ಹಂಸಲೇಖ ಅವರೊಂದಿಗೆ ಶಿಷ್ಯವೃತ್ತಿ ಮಾಡುವ ಅವಕಾಶ ಒದಗಿಬಂತು.   ಮುಂದಿನದು ಇತಿಹಾಸ.

ಕಲ್ಯಾಣ್ ಅವರ ವಯಸ್ಸು ಈಗಿನ್ನೂ  39.  ಹದಿನಾರರ ವಯಸ್ಸಿನಲ್ಲೇ ಚಲನಚಿತ್ರ ಸಂಗೀತ ಕ್ಷೇತ್ರಕ್ಕೆ  ಬಂದ  ಅವರ ಇದುವರೆಗಿನ ಚಿತ್ರರಂಗದಲ್ಲಿನ ಅನುಭವವೇ ಎರಡು ದಶಕಗಳಿಗೂ ಹೆಚ್ಚಿನದು.  ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದ್ವಾನ್ ಚನ್ನಕೃಷ್ಣಪ್ಪನವರಲ್ಲಿ ಕಲಿತಿದ್ದ ಕಲ್ಯಾಣರು ಮೇಲೆ ಹೇಳಿದಂತೆ  ಹಂಸಲೇಖ ಅವರಲ್ಲಿ ಸಹಾಯಕರಾಗಿ ಅನುಭವಗಳಿಸಿದವರು.  ಇದಲ್ಲದೆ ಅವರು  ಎ. ಆರ್. ರೆಹಮಾನ್, ವಿಜಯಭಾಸ್ಕರ್, ರಾಜನ್ ನಾಗೇಂದ್ರ, ಉಪೇಂದ್ರ, ಅನು ಮಲ್ಲಿಕ್ ಮುಂತಾದ  ಸುಮಾರು ಎಂಭತ್ತು ಸಂಗೀತ ಪ್ರಧಾನರ ಜೊತೆ ಕೆಲಸ ಮಾಡಿದ್ದಾರೆ.  ಕಳೆದ ದಶಕಗಳಲ್ಲಿ ಗೀತ ರಚನಕಾರರಾಗಿ, ಚಿತ್ರಸಾಹಿತಿಯಾಗಿ  ಮತ್ತು ಸಂಗೀತ ನಿರ್ದೇಶಕರಾಗಿ ಅಪಾರ ಸಾಧನೆ ಮಾಡಿರುವ ಕಲ್ಯಾಣ್ ಇದೀಗ ಚಿತ್ರನಿರ್ದೇಶನಕ್ಕೂ ಬಂದಿದ್ದಾರೆ.  ಕಲ್ಯಾಣರು ಬರೆದಿರುವ ಗೀತೆಗಳ ಸಂಖ್ಯೆಯೇ  ಸುಮಾರು ಎರಡೂವರೆ ಸಾವಿರದಷ್ಟು.  ಇವುಗಳಲ್ಲಿ ಸುಮಾರು ನಾಲ್ಕು ನೂರು ಚಲನಚಿತ್ರಗಳು, ನೂರರಷ್ಟು ಕಿರುತೆರೆ ಧಾರಾವಾಹಿಗಳು, ಮ್ಯೂಸಿಕ್ ಆಲ್ಬಂಗಳು, ಜಾನಪದ, ಶಾಸ್ತ್ರೀಯ, ಪಾಶ್ಚಾತ್ಯ, ಫ್ಯೂಶನ್ ಇತ್ಯಾದಿ ಎಲ್ಲವೂ ಅಡಕವಿವೆ.

ಅನೇಕ ಯುವ ಪ್ರತಿಭೆಗಳನ್ನು ಬೆಳಕಿಗೆ ತಂದ ಖ್ಯಾತಿ ಪಡೆದಿರುವ ಕಲ್ಯಾಣರು ತಮ್ಮನ್ನು ಹೆಚ್ಚು ಸದ್ದುಗದ್ದಲವಿಲ್ಲದೆ ಅಪಾರವಾದ ಸಮಾಜಸೇವಾ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡವರಾಗಿದ್ದಾರೆ. ಹೀಗಾಗಿ ಅವರು ‘ಸಮಾಜ ಕಲ್ಯಾಣ’ರೂ ಹೌದು.

‘ಚಂದ್ರಮುಖಿ ಪ್ರಾಣಸಖಿ’ ಚಿತ್ರದ ಸಂಗೀತಕ್ಕೆ;  ‘ಪ್ರೀತಿ ಪ್ರೇಮ ಪ್ರಣಯ’, ‘ಗಂಗಾ ಕಾವೇರಿ’ ಚಿತ್ರಗಳ ಗೀತ ಸಾಹಿತ್ಯಕ್ಕೆ ರಾಜ್ಯ ಪ್ರಶಸ್ತಿ, ಹಲವಾರು ಫಿಲಂ ಫೇರ್ ಪ್ರಶಸ್ತಿ, ಹಾಗೂ ಅನೇಕ ಸಂಘ ಸಂಸ್ಥೆಗಳ ನೂರಾರು ಪ್ರಶಸ್ತಿಗಳನ್ನು ಪಡೆದಿರುವ ಕಲ್ಯಾಣರು ಇವೆಲ್ಲವನ್ನೂ ತಮ್ಮಲ್ಲಿ ಪ್ರತಿಷ್ಠಿಸಿಕೊಳ್ಳದ ಸರಳ  ಸಹೃದಯ ವ್ಯಕ್ತಿತ್ವವುಳ್ಳವರೆಂದು ಪ್ರೀತಿಪಾತ್ರರಾಗಿದ್ದಾರೆ.  ನಾನು ವಾದಗಳನ್ನು ನಂಬಿದವನಲ್ಲ.  ಆಶೀರ್ವಾದಗಳನ್ನು ನಂಬಿದವನು.  ಹಿರಿಯರ ಆಶೀರ್ವಾದಗಳೇ ನನ್ನನ್ನು ಕಾಪಾಡುತ್ತಿವೆ ಎಂದು ವಿಧೇಯರಾಗಿರುವ, ಇನ್ನೂ ಯುವವಯಸ್ಸಿನಲ್ಲೇ ಅಪಾರ ಸಾಧನೆ ಮಾಡಿರುವ ಕೆ. ಕಲ್ಯಾಣರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಹೇಳೋಣ.

Tag: K. Kalyan

ಕಾಮೆಂಟ್‌ಗಳಿಲ್ಲ: