ಗುರುವಾರ, ಜನವರಿ 30, 2014

ಮಡಿವಾಳಪ್ಪ ವೀರಪ್ಪ ಮಿಣಜಿಗಿ

ಮಡಿವಾಳಪ್ಪ ವೀರಪ್ಪ ಮಿಣಜಿಗಿ

ತೈಲವರ್ಣ ಹಾಗೂ ಜಲವರ್ಣ ಚಿತ್ರ ರಚನೆಯಲ್ಲಿ ಸಿದ್ಧಹಸ್ತರೆನಿಸಿದ್ದ ಮಿಣಜಿಗಿಯವರು ಜನವರಿ 30, 1901ರಲ್ಲಿ ವಿಜಾಪುರದಲ್ಲಿ ಜನಿಸಿದರು. ಅವರ ತಂದೆ ವೀರಪ್ಪನವರು ಶ್ರೀಮಂತ ವ್ಯಾಪಾರಿಯಾಗಿದ್ದರು. ತಾಯಿ ಶರಣವ್ವ. ಕಲೆ-ಸಂಗೀತದ ವಾತಾವರಣದಲ್ಲಿ ಬೆಳೆದ ಮಿಣಜಿಗಿಯವರು ಕಲಾ ಬದುಕಿನತ್ತ ಆಕರ್ಷಿತರಾದರು. ಅವರು ಪ್ರಾರಂಭಿಕ ಸಾಮಾನ್ಯ ಶಿಕ್ಷಣ ವನ್ನು ತಮ್ಮ ಹುಟ್ಟಿದೂರಿನಲ್ಲೇ ಪಡೆದರು. ಮುಂದೆ ಓದಲಿಚ್ಚಿಸದೆ ಮುಂಬಯಿಯ ಜೆ.ಜೆ. ಕಲಾಮಂದಿರ ಸೇರಿದ ಮಿಣಜಿಗಿಯವರು ಆರ್ಟ್ ಮಾಸ್ಟರ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ಗಳಿಸಿ, ಡಿಪ್ಲೊಮ ಇನ್ ಪೆಯಿಂಟಿಂಗ್ಸ್ ಪದವಿಯಲ್ಲೂ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರಥಮ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್ನಿನ ಕಾಲೇಜ್ ಆಫ್ ಆರ್ಟ್ಸ್ ಸೇರಿದ ಮಿಣಜಿಗಿಯವರಿಗೆ ವಿಲಿಯಮ್ ರೂಥನ್ ಸ್ಟೈನ್ ಅವರ ಮಾರ್ಗದರ್ಶನ ದೊರಕಿತು.  ಈ ಗುರುಗಳು, ಮಿಣಜಿಗಿಯವರು ನ್ಯಾಷನಲ್ ಗ್ಯಾಲರಿಯಲ್ಲಿದ್ದ ಎರಡು ಪ್ರಸಿದ್ಧ ಚಿತ್ರಗಳನ್ನು ನಕಲುಮಾಡಿದಾಗ ಸ್ವತಂತ್ರ ಕೃತಿ ರಚಿಸಲು ಮಾರ್ಗದರ್ಶನ ನೀಡಿದರು. ಇದು ಮಿಣಜಿಗಿ ಅವರ ಕಲೆಗೆ ಹೊಸದಾರಿ ತೋರಿ ಹಲವಾರು ಶ್ರೇಷ್ಠ ಚಿತ್ರಗಳನ್ನು ರಚಿಸಲು ಪ್ರೇರಕವಾಯಿತು

ಕರ್ನಾಟಕಕ್ಕೆ ಬಂದು ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಆರಂಭಿಸಿದ್ದ ಕರ್ನಾಟಕ ಆರ್ಟ್ಸ್ ಎಜುಕೇಷನ್ ಸಂಸ್ಥೆಯ ಕಲಾಮಂದಿರಕ್ಕೆ ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ, ಮಿಣಜಿಗಿಯವರು ಆಯ್ಕೆಗೊಂಡರು. ಇದೇ ಮುಂದೆ ಮಹಂತೇಶ ಕಲಾವಿದ್ಯಾಲಯವಾಗಿ ರೂಪಗೊಳ್ಳಲು ಅವರು ಪಟ್ಟ  ಶ್ರಮ ಅಪಾರವಾದುದು. ಬೆಂಗಳೂರಿನಲ್ಲಿ ಡ್ರಾಯಿಂಗ್ ಟೀಚರ್ಸ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಮತ್ತು ದಾವಣಗೆರೆಯಲ್ಲಿ ಚಿತ್ರಕಲಾ ಹಾಗೂ ಕೈಗಾರಿಕಾ ಕಲಾ ಶಾಲೆ ತೆರೆಯಲು ಸಹಾ ಮಿಣಜಿಗಿಯವರು  ಪ್ರಧಾನ ಪಾತ್ರ ನಿರ್ವಹಿಸಿದ್ದರು.

ರಾಗಮಾಲಾ, ನಿಸರ್ಗ ಸಂಯೋಜನೆ, ಭಾವಚಿತ್ರ, ಶರಣ ಸಾಹಿತ್ಯ, ಬಾದಾಮಿ ಭಿತ್ತಿ ಚಿತ್ರಗಳ ಹಲವು ಬಗೆ, ಜೋಗ್‌ಫಾಲ್ಸ್, ಕಲಗೇರಿಯ ಸುಂದರ ದೃಶ್ಯ ಇವೇ ಮುಂತಾದವು ಮಿಣಜಿಗಿ ಅವರಿಗೆ ಪ್ರಸಿದ್ಧಿ ತಂದವು.

ರಾಜ್ಯ ಲಲಿತಕಲಾ ಅಕಾಡಮಿ ಉಪಾಧ್ಯಕ್ಷ, ಕೇಂದ್ರ ಲಲಿತಕಲಾ ಅಕಾಡಮಿ ಸದಸ್ಯ, ರಾಜ್ಯ ಸಂಗೀತ ನಾಟಕ ಅಕಾಡಮಿ ಉಪಾಧ್ಯಕ್ಷ ಹೀಗೆ ಮಿಣಜಿಗಿ ಅವರು ನಿರ್ವಹಿಸಿದ ಹುದ್ದೆಗಳು ಹಲವಾರು.  ಅವರು  ಜಪಾನಿನಲ್ಲಿ ನಡೆದ ಕಲಾ ಸಮ್ಮೇಳನದಲ್ಲಿ ಭಾಗಿಯಾಗಿದ್ದರು.

ಮೈಸೂರು ದಸರ ಮಹೋತ್ಸವದಲ್ಲಿ ಕುಂಚಬ್ರಹ್ಮ, ಮೈಸೂರು ಲಲಿತಕಲಾ ಅಕಾಡಮಿ ಪ್ರಶಸ್ತಿ, ಕರ್ನಾಟಕ ಕಲಾ ಸಾರ್ವಭೌಮ, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಮುಂತಾದ ಗೌರವಗಳು ಮಿಣಜಿಗೆ ಅವರನ್ನು ಅರಸಿ ಬಂದಿದ್ದವು. 

ಮಡಿವಾಳಪ್ಪ ವೀರಪ್ಪ ಮಿಣಜಿಗಿಯವರು 1987ರ ವರ್ಷದಲ್ಲಿ ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.


ಮಾಹಿತಿ ಕೃಪೆ: ಕಣಜ.

ಕಾಮೆಂಟ್‌ಗಳಿಲ್ಲ: