ಮಂಗಳವಾರ, ಫೆಬ್ರವರಿ 4, 2014

ಫೇಸ್ಬುಕ್ ಹುಟ್ಟುಹಬ್ಬ


ಫೆಸ್ಬುಕ್ಕಿಗೆ ಹತ್ತು ತುಂಬಿತು

ನಮ್ಮ 'ಸಂಸ್ಕೃತಿ ಸಲ್ಲಾಪ'ದ ಸಹಯೋಗಿ ತಾಣ ಫೇಸ್ಬುಕ್ಕಿನ್ನಲ್ಲಿರುವ 'ಕನ್ನಡ ಸಂಪದ' ಪುಟ ಎಂಬುದು ಆತ್ಮೀಯರಾದ ತಮಗೆ ತಿಳಿದಿರುವ ವಿಚಾರ.  ಇಂದು ನಾವು ಒಂದುಗೂಡಿರುವ ಈ ಕ್ಷೇತ್ರ - ಫೇಸ್ಬುಕ್ಕಿಗೆ ಹತ್ತು ವರ್ಷದ ಹುಟ್ಟಿದ ಹಬ್ಬ.  ಇಂದು ಗೂಗಲ್ ಹೊರತು ಪಡಿಸಿದರೆ ಅಂತರಜಾಲದಲ್ಲಿ ಅತ್ಯಂತ ಉಪಯೋಗಿಸಲ್ಪಡುತ್ತಿರುವ ತಾಣವಾದ ಫೇಸ್ಬುಕ್ ಮೂಡಿಸಿರುವ ಆಕರ್ಷಣೆ ಅಪಾರವಾದದ್ದು.  ಮತ್ತೊಂದು ರೀತಿಯಲ್ಲಿ ನೋಡಿದರೆ, ಗೂಗಲ್ ಜನರಿಗೆ ಬೇಕಾದ ವಿಷಯ ಅರಸುವ ತಾಣವಾದರೆ,   ಈ ಫೇಸ್ಬುಕ್ ಆದರೋ ಜನಸಾಮಾನ್ಯರ ವಿಹಾರ ಸ್ಥಳ. ಹೀಗಾಗಿ ಸಾಮಾಜಿಕ ಸಂಬಂಧಗಳ ಜಾಲದಲ್ಲಿ ಫೇಸ್ಬುಕ್ ತನ್ನದೇ ಆದ ರೀತಿಯಲ್ಲಿ ಮುಂಚೂಣಿಯಲ್ಲಿದೆ ಎಂದರೆ ತಪ್ಪಿಲ್ಲ.

ಈ ಫೇಸ್ಬುಕ್ಕಿನೊಂದಿಗೆ ಪ್ರಪಂಚದ ನೂರಾರು ಕೋಟಿ ಜನ 'ಎಂದೆಂದೂ ನಿನ್ನನು ಮರೆತು ಅಗಲಿರಲಾರೆ' ಎಂದು ಭಾವಪರವಶರಾಗಿ ಅದಕ್ಕೆ ಮಾರುಹೋಗಿದ್ದಾರೆ.  ಕೆಲವೊಂದು ವರ್ಷಗಳ ಹಿಂದೆ ಅದನ್ನು ತೆಗಳುತ್ತಿದ್ದ ಬುದ್ಧಿವಂತ ಜನಾಂಗ ಕೂಡಾ ಇಂದು ಅದನ್ನು ತಮ್ಮ  ಬಡಾಯಿಗಾಗಿನ ತುತ್ತೂರಿ ಮಾಡಿಕೊಂಡಿದ್ದಾರೆ.  ಫೇಸ್ಬುಕ್ ಗುಣಾವಗುಣಗಳು ಏನೇ ಇರಲಿ ಕಿರಿಯ ಉತ್ಸಾಹಿ ಮಾರ್ಕ್ ಜುಕರ್ ಬರ್ಗ್ ಸ್ಥಾಪಿಸಿದ ಈ ವ್ಯವಸ್ಥೆ ವಿಶ್ವದ ಒಂದು ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ.

ಯಾವುದೇ ಚಟವೂ ಆರೋಗ್ಯಕರವಾದದ್ದಲ್ಲ.  ಹಾಗಾಗಿ ಯಾರೇ ಯಾವುದೇ ಚಟವನ್ನಾಗಿಸಿಕೊಳ್ಳುವುದರ ಕುರಿತು ಎಚ್ಚರದಿಂದಿರಬೇಕು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.  ಹಾಗಿದ್ದರೂ ಶಿಶುನಾಳ ಶರೀಫರು ತಮ್ಮ ಪದವೊಂದರಲ್ಲಿ  ‘ಗುಡ್ಡ ಗವಿಯನ್ನು ನುಂಗಿ ಗವಿಯು ಇರವಿ(ಅರಿವೆ)ಯ ನುಂಗಿ’ ಎಂದು   ಗಮನಿಸುವಂತೆ ಚಟವೆಂಬುದು ಮನುಷ್ಯನ ಅರಿವನ್ನು ಪದೇ ಪದೇ ನುಂಗಿಹಾಕುತ್ತಿರುತ್ತದೆ.  ಹೀಗೆ   ತುಂಬಾ ಜನ ಫೇಸ್ಬುಕ್ಕನ್ನು ಒಂದು ಚಟವಾಗಿಸಿಕೊಂಡು ಅನಿಷ್ಟದ ಜೀವನ ಸಾಗಿಸುತ್ತಿದ್ದಾರೆ ಎಂದು ನಾವು ಪ್ರತಿನಿತ್ಯ ಓದುತ್ತಲೂ ಇರುತ್ತೇವೆ.  ಚಟಗಳೆಂಬುದು ಮನುಷ್ಯನಿಗೆ ಫೇಸ್ಬುಕ್ ಬರುವ ಮುಂಚೆಯೂ ಇತ್ತು.  ಮುಂದೆ ಅದಿಲ್ಲದಿದ್ದರೆ ಮತ್ತೊಂದರ ಜೊತೆ ಇದ್ದೇ ಇರುತ್ತದೆ.  ಯಾವುದೇ ವಿಚಾರದ ಕುರಿತು ಚಟವನ್ನಾಗಿಸಿಕೊಳ್ಳಬಾರದು ಎಂಬ ಪ್ರಜ್ಞೆ ಆಯಾ ವ್ಯಕ್ತಿ ಹಾಗೂ ಆತನ  ಜವಾಬ್ದಾರಿಯುತ ವಲಯವಾದ  ಪೋಷಕರು, ಶಿಕ್ಷಕರು ಮುಂತಾದವರಲ್ಲಿ ಇರಬೇಕು.  ನನಗೆ ಫೇಸ್ಬುಕ್ ತಲೆಕಂಡರೆ ಆಗುವುದಿಲ್ಲ ಎಂದುಕೊಳ್ಳುತ್ತಾ ಯಾವಾಗಲೂ ಟಿ. ವಿ, ಮೊಬೈಲು, ಹರಟೆ  ಮುಂತಾದ ಇನ್ನಿತರ ಸಮುದ್ರಗಳಲ್ಲಿ ಈಜುವವರನ್ನು ಏನೆನ್ನಬೇಕು ಎಂಬುದು ಅವರವರ ಕಲ್ಪನಾ ಶಕ್ತಿಗೆ ಸಂದ ವಿಚಾರ.

ಇಂದಿನ ಪ್ರಪಂಚದಲ್ಲಿ ನಾವು ಯಾವುದೇ ವ್ಯಕ್ತಿಯನ್ನಾಗಲಿ, ಉಪಕರಣವನ್ನಾಗಲಿ ಅವುಗಳ ನಕಾರಾತ್ಮಕ ಗುಣಗಳಿಂದ ಅಳೆಯುವುದೇ ಹೆಚ್ಚು.  ಹಾಗಾಗಿ ನಮ್ಮ ಜೊತೆಯಲ್ಲಿ  ಬದುಕುವ ವ್ಯಕ್ತಿಗಳ ಬಗೆಗೂ ನಮ್ಮಲ್ಲಿ  ಸಹ್ಯ ಭಾವನೆ ಇರುವುದಿಲ್ಲ.  ನಾವು ಉಪಯೋಗಿಸುವ ವಸ್ತುಗಳೊಂದಿಗೂ  ರೋಷ, ಅಸಡ್ಡೆ, ಅಸಹನೆಗಳಿಂದ ವರ್ತಿಸುತ್ತೇವೆ.  ಫೇಸ್ಬುಕ್ಕಿನಲ್ಲಿ ವರ್ತಿಸುವ ಹಲವು ಮಂದಿಯ ಪಾಡೂ ಇದರಂತೆಯೇ ಇದೆ ಎಂಬುದು ಸುಳ್ಳೇನಲ್ಲ.  ನಾವು ವ್ಯಕ್ತಿಗಳ ಹಾಗೂ ಉಪಕರಣಗಳ ಜೊತೆಗೆ ಅವರ / ಅವುಗಳಲ್ಲಿರುವ ಸಕಾರಾತ್ಮಕ ಗುಣಗಳೊಂದಿಗೆ ಸ್ಪಂದನೆ ಇರಿಸಿಕೊಂಡಾಗ ಹೀಗಾಗುವುದಿಲ್ಲ. 

ನಾನು ನಮ್ಮ ‘ಕನ್ನಡ ಸಂಪದ’ದಲ್ಲಿ ಮೂಡಿಸುತ್ತಿರುವ ಹಲವಾರು ವಿಷಗಳ ಬಗ್ಗೆ ಹಲವಾರು ಜನ “ನೀನು ಬ್ಲಾಗ್ ಬಳಸುವ ಬದಲು ಇವಕ್ಕೆಲ್ಲಾ  ಫೇಸ್ಬುಕ್ ಯಾಕೆ ಬಳಸುತ್ತೀಯ?” ಎಂದು ಕೇಳುವುದಿದೆ.    ನನ್ನ ಪ್ರಕಾರ ಫೇಸ್ಬುಕ್ ಎಂಬುದು ಒಂದು ಜನಸಂದಣಿ ಇರುವ  ರಸ್ತೆ ಇದ್ದಂತೆ.  ಇಲ್ಲಿ ಮಾರ್ಕೆಟ್ಟಿಗೆ ಹೋಗುವವರು, ವಿಹಾರಕ್ಕೆ ಹೋಗುವವರು, ದೇಗುಲಕ್ಕೆ ಹೋಗುವವರು, ಆಟವಾಡುವವರು, ಒಂದಷ್ಟು ಪುಂಡಾಟದವರು ಹೀಗೆ  ಎಲ್ಲರೂ ಇದ್ದಾರೆ.  ನಾವು ನಮಗೆ ತೋಚಿದ ಯಾರಿಗೂ ತೊಂದರೆ, ಇರಿಸು ಮುರಿಸು ಉಂಟು ಮಾಡದ ವಿಚಾರಗಳನ್ನು ಇಲ್ಲಿರಿಸುವುದರಿಂದ ಯಾರು ಬೇಕೋ ಅವರು ತಮಗೆಷ್ಟು ಬೇಕೋ ಅಷ್ಟನ್ನು  ಆಯ್ದುಕೊಳ್ಳುತ್ತಾರೆ.  ಅದು ಚಂದ ಕಂಡರೆ ಮತ್ತಷ್ಟು ಜನರಿಗೆ ಹೇಳುತ್ತಾರೆ.  ಚನ್ನವಿಲ್ಲ ಎಂದರೆ ಮುಲಾಜಿಲ್ಲದೆ ಹೇಳುತ್ತಾರೆ.  ಯಾವುದು ಚಂದ, ಯಾವುದು ಚಂದವಿಲ್ಲ ಎಂಬುದನ್ನು ನಮಗೆ ಮನದಟ್ಟು ಮಾಡಿಕೊಟ್ಟು ಕಲಿಯುವ ಅವಕಾಶವನ್ನೂ ಕೊಡುತ್ತಾರೆ. 

ನಮ್ಮನ್ನು ನಾವು ಒಂದು ಮಿತಿಯಲ್ಲಿ ತೆರೆದಿಟ್ಟುಕೊಂಡು. ಬದುಕಲ್ಲಿ ಸಾಕಷ್ಟು ಪ್ರೀತಿ ವಿಶ್ವಾಸಗಳನ್ನು ಗಳಿಸಿ, ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶ ನೀಡಿ, ಯಾವುದೇ ನ್ಯೂಸ್ ಚಾನೆಲ್ಲಿನಲ್ಲಿ ಸುದ್ಧಿ ದೊರಕುವ ಮುಂಚೆಯೇ ಅತ್ಯಂತ ಆಪ್ತವಾಗಿ ವಿಚಾರ ತಿಳಿಸುವ, ಕಣ್ಮನ ಸೆಳೆಯುವ ಚಿತ್ರಗಳನ್ನು ಕಾಣಸಿಗುವಂತೆ ಮಾಡುವ  ಈ ಫೇಸ್ಬುಕ್ ಒಂದು ಸುಂದರ ವ್ಯವ್ಯಸ್ಥೆ ಎನಲು ತಪ್ಪಾದರೂ ಏನು.   ಗೂಗಲ್, ಫೇಸ್ಬುಕ್, ಟ್ವಿಟ್ಟರ್ ಅಂತೆ  ಮುಂದೆ ಮತ್ತೊಂದು ಯಾವುದೋ ಬಂದರೂ ಬಂದೀತು.  ಅದನ್ನೂ ಅದರ ಉಪಯುಕ್ತ ಗುಣಗಳಿಗಾಗಿ ಸ್ವೀಕರಿಸೋಣ.    ಆದರೆ ಅವಕ್ಕೇ ದಾಸರಾಗುವ ಪ್ರವೃತ್ತಿಗೆ ಸಿಲುಕದಿರೋಣ.

ಫೇಸ್ಬುಕ್ ಅನ್ನು ಬದುಕಿನಲ್ಲಿ ಬಳಸುವ ಯಾವುದೇ ವ್ಯವಸ್ಥೆಯಂತೆ ಅದರ ಯೋಗ್ಯತೆಗಳಿಗನುಗುಣವಾಗಿ  ಅದರ ಇತಿಮಿತಿಗಳಲ್ಲಿ ಒಳ್ಳೆಯದಕ್ಕಾಗಿ ನಮ್ಮ ಒಳಿತಿಗಾಗಿ ಹಿತಮಿತವಾಗಿ ಬಳಸೋಣ.  ಈ ಫೆಸ್ಬುಕ್ಕಿಗೆ ಹತ್ತು ವರ್ಷ ತುಂಬಿದೆ, ಕೋಟ್ಯಾಂತರ ಜನರನ್ನು ಆವರಿಸಿದೆ, ಅದರಲ್ಲಿ ನಮ್ಮನ್ನೂ ಒಂದಾಗಿಸಿಕೊಂಡಿದೆ ಎಂಬುದು ಸಣ್ಣ ವಿಚಾರವಲ್ಲ.  ಅದು ನಮಗೆಷ್ಟು ಸುಂದರವಾಗಿರಬಲ್ಲದು ಎಂಬುದು ಅದನ್ನು ನಾವೆಷ್ಟು ಸುಂದರವಾಗಿ ಬಳಸಬಲ್ಲೆವು ಎಂಬ ನಮ್ಮಂತವರನ್ನೇ ಅವಲಂಬಿಸಿದೆ.  ಫೇಸ್ಬುಕ್ ನನಗೇನು ಸಂತೋಷ ನೀಡಿದೆಯೋ ಅದಕ್ಕಾಗಿ ನಾನು ಫೇಸ್ಬುಕ್ಕಿಗೆ ಕೃತಜ್ಞ.  ಈ ಫೇಸ್ಬುಕ್ ಕೊಡುಗೆಯಾಗಿ ನೀಡಿರುವ ತಮ್ಮಂತಹ ಅಸಂಖ್ಯಾತ ಆತ್ಮೀಯ ಬಳಗಕ್ಕೆ ನಾನು ಕೃತಜ್ಞ. 


ತಾವು ನನ್ನನ್ನು ಫೇಸ್ಬುಕ್ ಪಕ್ಷಪಾತಿಯೆಂದು ಪರಿಗಣಿಸಿದರೆ ನನಗೇನೂ ಬೇಸರವಿಲ್ಲ.  ಈ ಫೆಸ್ಬುಕ್ಕಿಗೆ ದಶಮಾನೋತ್ಸವದ ಶುಭಾಶಯ.

Tag: Facebook in 10th Year

1 ಕಾಮೆಂಟ್‌:

manjunath ಹೇಳಿದರು...

ನಿಮ್ಮ ಅನಿಸಿಕೆಗಳೆಲ್ಲವೂ ನನ್ನದೂ ಕೂಡ ಆಗಿದೆ ಎನ್ನುವುದಕ್ಕೆ ಸಂತಸವಾಗುತ್ತೆ. ಈ ಫೇಸ್ಬುಕ್ ನನ್ನ ಕೊಂಚ ಮಟ್ಟಿಗಿನ ಕಲಿಕೆಗೂ ದಿನ ನಿತ್ಯ ಸಹಾಯವಾಗಿದೆ ಮತ್ತು ನೀವು ಹೇಳಿರುವಂತೆ ಅನೇಕ ಗಣ್ಯರನ್ನು, ಮಹಾನ್ ಸಾಧಕರನ್ನು ನನ್ನ ಸ್ನೇಹವಲಯಕ್ಕೆ ತಂದೊದಗಿಸಿದೆ. ನಮ್ಮ ಶಕ್ತಿ, ಸಾಮರ್ಥ್ಯ, ದೌರ್ಬಲ್ಯ, ಜ್ಞಾನದ ಪರಿಮಿತಿಯನ್ನು ಬಹಿರಂಗ ಪಡಿಸುವ ಉತ್ತಮ ಸಾಧನವೆಂದು ನಾನು ಭಾವಿಸುತ್ತೇನೆ. ಸಣ್ಣವಯಸ್ಸಿನಲ್ಲೇ ಇಂತಹ ಮಾಂತ್ರಿಕ ತಾಣವನ್ನು ಸೃಷ್ಟಿಸಿ ನಡೆಸುತ್ತಲಿರುವ ಮಾರ್ಕ್ ಜೂಕರ್ ಬರ್ಗನಿಗೆ ನನ್ನ ಹೃದಯಪೂರ್ವಕ ವಂದನೆಗಳನ್ನು ಸಲ್ಲಿಸಲೇಬೇಕೆನಿಸಿದೆ. ಇಂತಹ ವಿಷಯಗಳನ್ನು ನಮಗೆ ನಿಮ್ಮ ಈ ವೆಬ್ ಸೈಟಿನ ಮೂಲಕ ತಲುಪಿಸಿದ ನಿಮ್ಮ ಶ್ರಮವೂ ಶ್ಲಾಘನೀಯವಾದದ್ದು. ಅದಕ್ಕೆ ನಿಮಗೂ ನನ್ನ ಅನಂತ ಪ್ರಣಾಮಗಳು.