ಭಾನುವಾರ, ಮಾರ್ಚ್ 16, 2014

ಬಣ್ಣದ ಹಬ್ಬ

ಬಣ್ಣದ ಹಬ್ಬ

ಬಣ್ಣದ ಹಬ್ಬ ಹೋಳಿ ಹಬ್ಬ ವರ್ಣರಂಜಿತ ಭಾರತೀಯ ಸಂಸ್ಕೃತಿಯ ವಿಶಿಷ್ಟ ಹಬ್ಬ.  ಇದಕ್ಕೆ ಕಾಮನ ಹಬ್ಬ ಎಂದೂ ಹೆಸರು.  ಕೆಟ್ಟದ್ದರ ಸಂಹಾರವಾಗಲು ಭಕ್ತಿಯ ಆಸ್ವಾದನೆ ಇರಬೇಕು, ಸೌಂದರ್ಯದ ಅಪೇಕ್ಷೆ ಬೇಕು, ಸ್ನೇಹ - ಸೌಹಾರ್ದತೆ - ಪ್ರೀತಿ - ಪ್ರೇಮಗಳ ಸಂಮಿಲನ ಇರಬೇಕು, ತ್ಯಾಗ ಮನೋಭಾವವಿರಬೇಕು, ಧೈರ್ಯವೂ ಬೇಕು, ಪರಮಾತ್ಮನ ಅನುಗ್ರಹವೂ ಬೇಕು.  ಹೀಗೆ ಕೆಟ್ಟದ್ದರ ಅಂತ್ಯದಲ್ಲಿ ಪರಮಾತ್ಮನ ಕೃಪೆ ಹೊರಹೊಮ್ಮಿದಾಗ ಬದುಕು ವರ್ಣರಂಜಿತ ಸೊಬಗು ಕಾಣುತ್ತದೆ. 

ಹೋಳಿ ಹಬ್ಬದ ತಾರಕಾಸುರನ ಕತೆ, ದೇವತೆಗಳ ಪರಮಾತ್ಮನ ಸಹಾಯದ ಯಾಚನೆ, ರತಿ-ಮನ್ಮಥರ ಪ್ರೀತಿ-ಪ್ರೇಮ-ಧೈರ್ಯ ಭಕ್ತಿಗಳ ಫಲ, ಕಾಮನು ದಹಿತಗೊಂಡು ಪ್ರೇಮ ಮಾತ್ರ ಶಾಶ್ವತವಾಗಿ ಉಳಿದುಕೊಂಡ ರೀತಿ, ತಾರಕಾಸುರನ ಸಂಹಾರವನ್ನು ಲೋಕ ವರ್ಣರಂಜಿತವಾಗಿ ಸಡಗರಿಸಿದ ರೀತಿ ಇವೆಲ್ಲವೂಈ ಆಚರಣೆಯ ಅಂತಃಸತ್ವದಲ್ಲಿ ಅಡಗಿರುವುದನ್ನು ಕಾಣಬಹುದು.

ನಮ್ಮೆಲ್ಲರ ಬದುಕಿನಲ್ಲಿ ಕೂಡಾ ಕೆಡುಕಗಳ ನಿರ್ನಾಮಕ್ಕೆ ನಮ್ಮಲ್ಲಿ ಆಶಯ, ಬದುಕಿನಲ್ಲಿ ಸೌಂದರ್ಯದ ಅಪೇಕ್ಷೆ, ಸ್ನೇಹ-ಸೌಹಾರ್ದತೆ-ಪ್ರೀತಿ-ಪ್ರೇಮಗಳ ಸಹಜೀವನ,   ಭಕ್ತಿಯ ಭಾವಕೆಟ್ಟದ್ದನ್ನು ವಿರೋಧಿಸುವ ಧೈರ್ಯ ಮತ್ತು ಇವೆಲ್ಲವುಗಳ ಸಂಗಮದಲ್ಲಿ ಮೂಡುವ ಆತ್ಮಶಕ್ತಿ ಇಲ್ಲವೇ ಪರಮಾತ್ಮ ಶಕ್ತಿಯಲ್ಲಿ ಲೋಕ ಪುನೀತವಾಗಲಿ ಎಂದು ಆಶಿಸುತ್ತಾ ನಮ್ಮೆಲ್ಲರ ಬದುಕು ಸಂತಸಕರವಾಗಿ ಸೊಗಸು - ಸೌಂದರ್ಯಗಳ ವರ್ಣ ಸೊಬಗಿನಲ್ಲಿ ರಂಜಿಸಲಿ ಎಂದು ಹಾರೈಸೋಣ. 

ಬಣ್ಣ ಉಪಯೋಗಿಸುವುದಿದ್ದರೆ, ಅದು ಆರೋಗ್ಯಕರವಾಗಿದೆಯೇ ಎಂದು ಖಚಿತ ಪಡಿಸಿಕೊಳ್ಳಿ.  ಇದು ಅಪನಂಬಿಕೆಯ ಮಾತಲ್ಲ ಜಾಗೃತಿಯ ಮಾತು, ಒಳ್ಳೆಯದು ಹೇಗಿದೆಯೋ ಕೆಟ್ಟದ್ದೂ ಈ ಪ್ರಪಂಚದಲ್ಲಿದೆ.  ಅದರ ಬಗ್ಗೆ ಜಾಗರೂಕವಾಗಿರೋಣ.  ಅಪರಿಚಿತರು ಕೆಟ್ಟ ರೀತಿಯ ವರ್ಣಗಳನ್ನು ನಮ್ಮ ಮೇಲೆ ಪ್ರಯೋಗಿಸದಂತೆ ಜಾಗರೂಕವಾಗಿರೋಣ. ಅಂತಹ ಕೆಟ್ಟತನ ಮತ್ತೊಬ್ಬರಲ್ಲಿ ಮೂಡದಿರಲಿ ಎಂದು ಕೂಡ ದೇವರಲ್ಲಿ ಪ್ರಾರ್ಥಿಸೋಣ.  ಹಾಗೆಯೂ ಕೆಡುಕು ಮಾಡುವ ಉದ್ದೇಶ ಯಾರಾದರೂ  ಹೊಂದಿದ್ದಾರೆ ಎಂದು ಖಚಿತವಾದರೆ  ಮುಲಾಜಿಲ್ಲದೆ, ಆದರೆ ಅನಗತ್ಯವಾದ ದುಡುಕಿಲ್ಲದೆ, ಯೋಗ್ಯ ಸಂಘಟನೆಯ ಮೂಲಕ  ಯೋಗ್ಯ ಕ್ರಮ ಕೈಗೊಳ್ಳೋಣ. 

ಎಲ್ಲರಿಗೂ ಬಣ್ಣಗಳ ಹಬ್ಬ ಶುಭತರಲಿ. ಬದುಕು - ಪ್ರಪಂಚ ಸೌಂದರ್ಯದಿಂದ ನಲಿಯಲಿ.  ಬದುಕಿನಲ್ಲಿ ನಲಿವಿಲ್ಲದೆ ಬಳಲುತ್ತಿರುವವರಿಗೆ ಸಹಾ  ಸಂತಸ ಬರಲಿ ಎಂಬ ಭಾವ ಕೂಡಾ ನಮ್ಮ ಪ್ರಾರ್ಥನೆಯಲ್ಲಿ ಜೊತೆಗೂಡಲಿ.


(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

Tag: Bannada Habba, Holi 

ಕಾಮೆಂಟ್‌ಗಳಿಲ್ಲ: