ಬುಧವಾರ, ಮಾರ್ಚ್ 26, 2014

ವಿಶ್ವ ರಂಗಭೂಮಿ ದಿನ

ವಿಶ್ವ ರಂಗಭೂಮಿ ದಿನ

ರಂಗಭೂಮಿ ಚಟುವಟಿಕೆ ನಿರತರಿಗೂ ಒಂದು ಸ್ಮರಣೀಯ ದಿನ ಬೇಕು ಎನ್ನುವ ಕಾರಣಕ್ಕೆ 1962ರಿಂದ ವಿಶ್ವರಂಗಭೂಮಿ ದಿನವನ್ನು ಮಾರ್ಚ್ 27ರಂದು ಆಚರಿಸಿಕೊಂಡು ಬರಲಾಗುತ್ತಿದೆ.

ಪ್ಯಾರಿಸ್‌ನಲ್ಲಿ ಮುಖ್ಯ ಕಚೇರಿ ಹೊಂದಿರುವ ಅಂತರರಾಷ್ಟ್ರೀಯ ರಂಗಸಂಸ್ಥೆಯು ಪ್ರತಿವರ್ಷ ವಿಶ್ವದ ಯಾವುದಾದರೊಂದು ಭಾಷೆಯ ಹೆಸರಾಂತ ನಟ, ನಾಟಕಕಾರ, ನಿರ್ದೇಶಕ ಅಥವಾ ಸಂಘಟಕನಿಗೆ ಒಂದು ಸಂದೇಶ ಕೊಡುವಂತೆ ಕೇಳಿಕೊಂಡು ಅದನ್ನು ವಿಶ್ವದೆಲ್ಲೆಡೆ ಪಸರಿಸುತ್ತದೆ. ಕನ್ನಡಕ್ಕೂ ಒಮ್ಮೆ ಈ ಗೌರವ ಸಂದಿತ್ತು. ನಾಟಕಕಾರ ಗಿರೀಶ್ ಕಾರ್ನಾಡ್ ಅವರನ್ನು ವಿಶ್ವರಂಗಭೂಮಿ ದಿನದ ಸಂದೇಶ ನೀಡುವಂತೆ 2002ರಲ್ಲಿ ಕೇಳಿಕೊಳ್ಳಲಾಗಿತ್ತು. ಕಾರ್ನಾಡರು ಈಗ ಭಾರತೀಯ ಅಂತರರಾಷ್ಟ್ರೀಯ ಸಂಸ್ಥೆಯ ರಾಯಭಾರಿಯೂ ಆಗಿದ್ದಾರೆ.  ವಿಶ್ವದ ನಾನಾ ಭಾಷೆಯ ರಂಗಕರ್ಮಿಗಳು ಅಂದು ಈ ಸಂದೇಶ ಓದಿ ನಾಟಕ ಪ್ರಯೋಗ ಇತ್ಯಾದಿ ಉತ್ಸವ ಆಚರಿಸುತ್ತಾರೆ.  ನಮ್ಮ ನಾಡಿನಲ್ಲೂ ವಿವಿಧ ರಂಗ ಸಂಸ್ಥೆಗಳು ವಿಶೇಷ ರಂಗಪ್ರಯೋಗಗಳೊಂದಿಗೆ ಈ ವಿಶೇಷ ದಿನವನ್ನು ಸಂಭ್ರಮದಿಂದ ಆಚರಿಸುತ್ತಿವೆ.

ವಿಶ್ವ ರಂಗಭೂಮಿ ದಿನಾಚರಣೆಗೆ ಈ ಬಾರಿ ಸಂದೇಶ ನೀಡಿರುವ ದಕ್ಷಿಣ ಆಫ್ರಿಕಾದ ನಾಟಕಕಾರ ಬ್ರೆಟ್‌ ಬೈಲೆ ಅವರು ಸಮುದಾಯ ಇರುವ ಎಲ್ಲೆಡೆ ನಾಟಕದ ಅದಮ್ಯ ಚೇತನ ಪ್ರಕಟಗೊಳ್ಳುತ್ತದೆ. ನಾಟಕ ವಿಭಿನ್ನ ಸಂಪ್ರದಾಯಗಳ ಮುಖವಾಡಗಳನ್ನು ವೇಷಭೂಷಣಗಳನ್ನು ಧರಿಸಿ ಆ ಭಾಷೆ, ಲಯ ಮತ್ತು ಸಂಜ್ಞೆಗಳನ್ನು ಮೈಗೂಡಿಸಿಕೊಂಡು ನೆಲೆಯೂರಿದೆಎಂದು ಹೇಳಿದ್ದಾರೆ.

2013ರ ವರ್ಷದ ರಂಗಭೂಮಿ ದಿನಕ್ಕೆ ಪ್ರಸಿದ್ಧ ನಾಟಕ ರಚನಕಾರ ನೊಬೆಲ್ ಪ್ರಶಸ್ತಿ ವಿಜೇತ ದರಿಯ ಫೋ ಅವರು ಸಂದೇಶ ನೀಡುವ ಗೌರವಕ್ಕೆ ಪಾತ್ರರಾಗಿದ್ದಾರೆ. ದರಿಯ ಫೋ ಅವರು ತಮ್ಮ ಈ ಸಂದೇಶದಲ್ಲಿ ಹೆಚ್ಚು ಹೆಚ್ಚು ಯುವಜನತೆ ರಂಗ  ಚಟುವಟಿಕೆಗಳಲ್ಲಿ ಪಾಲ್ಗೊಂಡು  ಹೊಸ ಚಿಂತನೆಗಳ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸುವುದಕ್ಕೆ ಪೂರಕರಾಗಬೇಕಾಗಿದೆಎಂದಿದ್ದಾರೆ.

ಪ್ರತಿವರ್ಷ ಈ ಸಂದೇಶ ಅಂತರ್ಜಾಲದಲ್ಲಿ ಪ್ರಕಟವಾದ ಕೂಡಲೇ ಅದನ್ನು ಕನ್ನಡಕ್ಕೆ ಅನುವಾದಿಸಿ ರಾಜ್ಯದ ಹಲವು ರಂಗತಂಡಗಳಿಗೆ, ಮಾಧ್ಯಮದವರಿಗೆ ರಂಗಾಸಕ್ತರಿಗೆ ಕಳಿಸಿಕೊಡುವ ಪರಿಪಾಠವನ್ನು ಕಳೆದ 2 ದಶಕಗಳಿಂದ ಮೈಸೂರಿನ ರಂಗಕರ್ಮಿ ಶ್ರೀಕಂಠ ಗುಂಡಪ್ಪ ಅವರು ನಿಷ್ಠೆಯಿಂದ ಪಾಲಿಸಿಕೊಂಡು ಬಂದಿದ್ದಾರೆ.

ಇದುವರೆಗಿನ ಸಂದೇಶಗಳನ್ನು ಸಂಗ್ರಹಿಸಿ ರಂಗ ಸಂದೇಶಎಂಬ ಪುಸ್ತಕವೊಂದನ್ನು ಅವರು ಹೊರತಂದಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಅದನ್ನು ಪ್ರಕಟಿಸಿದೆ. ವಿಶ್ವ ರಂಗಭೂಮಿಯ ದಿನ ರಾಜ್ಯದ ಬಹುತೇಕ ನಾಟಕ ತಂಡಗಳು ನಾಟಕ ಪ್ರದರ್ಶನ, ಉತ್ಸವ, ಸಂಕಿರಣ ಮುಂತಾದ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿರುತ್ತವೆ. ಅಂದು ವಿಶ್ವರಂಗಭೂಮಿಯ ಸಂದೇಶವನ್ನು ಓದಲಾಗುತ್ತದೆ.

2012 ವರ್ಷದ ವಿಶ್ವರಂಗಭೂಮಿ ದಿನಕ್ಕೆ ಪ್ರಖ್ಯಾತ ರಂಗತಜ್ಞ ಜಾನ್ ಮಾಲ್ಕೋವಿಕ್ ಅವರು ತಾವು ಭಾಷಣ ನನ್ನನ್ನು ಒಂದಷ್ಟು ಚಿಂತನೆಗೆ ಹಚ್ಚಿತು. ಅದು ಹೀಗಿದೆ:

“And may the best of you - for it will only be the best of you, and even then only in the rarest and briefest moments - succeed in framing that most basic of questions, "how do we live?"

ಅದರ ಅರ್ಥ ನನಗೆ ಹೀಗೆ ಗೋಚರಿಸಿತು: ನಾವು ನಮಗೆ ಸಾಧ್ಯವಿರುವ ಉತ್ಕೃಷ್ಟತೆ ಎಂಬುದನ್ನು ಕೆಲವೊಂದೇ ಕ್ಷಣಗಳಲ್ಲಿ, ತುಂಬಾ ತುಂಬಾ ಅಪರೂಪವಾಗಿಯೋ ಎಂಬಂತೆ ಹೊರತಂದಿದ್ದೇ ಆದರೂ ಸಹಾ, ಆ ಕ್ರಿಯೆ ನಾವು ಹೇಗೆ ಬದುಕುತ್ತಿದ್ದೇವೆಎಂಬ ಮಹತ್ವಪೂರ್ಣ ಪ್ರಶ್ನೆಯನ್ನು ಸೃಜಿಸುವಲ್ಲಿ ಪರಿಣಾಮಕಾರಿಯಾದ  ಪಾತ್ರವನ್ನು ನಿರ್ವಹಿಸುತ್ತದೆಯೇನೊ!”  

ಇದರ ಸಾರಾಂಶ ನಮಗೆ ಉತ್ಕೃಷ್ಟ ಎಂಬುದನ್ನು ಸಾಧಿಸಲಾಗುತ್ತದೋ ಇಲ್ಲವೋ ಬೇರೆಯ ಮಾತು. ಆದರೆ ಆ ಹಸಿವನ್ನು ಮಾತ್ರ ನಿರಂತರ ಪೋಷಿಸುತ್ತಿರಬೇಕುಎಂದಿರಬಹುದು ಎನಿಸಿತು.  ನಿಮಗೆ ಬೇರೆ ರೀತಿಯಲ್ಲಿ ಅನಿಸಿದರೆ ತಿಳಿಸಿ. 

ನಮ್ಮ ರಂಗಭೂಮಿಯಲ್ಲಿ, ಜಾನಪದದಲ್ಲಿ, ಯಕ್ಷಗಾನ, ನಾಟ್ಯದಂತಹ ಅಪೂರ್ವ ಕಲೆಗಳಲ್ಲಿ ನಮ್ಮ ಸಂಸ್ಕೃತಿಯ ಆಳ ನಿರಂತರ ಪ್ರವಹಿನಿಯಾಗಿ ಸಹಸ್ರಾರು ವರ್ಷಗಳಿಂದ ಹರಿದು ಸಾಗುತ್ತಿದೆ.  ಮುಂದೂ ಹಲವು ವಿಭಿನ್ನ ನೆಲೆಗಳಲ್ಲಿ, ವಿಧ ವಿಧರೂಪುಗಳಲ್ಲಿ ಇದು ಮುಂದುವರೆಯುತ್ತಲೇ ಇರುತ್ತದೆ.  ಒಂದು ರೀತಿಯಲ್ಲಿ  "ಈ ಜಗವೆಲ್ಲಾ ಒಂದು ನಾಟಕದಂತೆಎಂಬ ವಿಚಾರವೂ ಮನನೀಯವೆ!  ಈ ಕಲೆಯನ್ನು ಉಳಿಸಿ, ಬೆಳೆಸಿ, ಪೋಷಿಸಿ ಮುಂದೆ ಕೊಂಡೊಯ್ದ ಹಿಂದಿನ ತಲೆಮಾರುಗಳು, ಈಗಿನ ಕಲಾವಿದರು ಮತ್ತು ಮುಂದೆಯೂ ಇದನ್ನು ಮುಂದುವರೆಸುವ ಆದರ್ಶ ಹೊಂದಿರುವ ರಂಗಕರ್ಮಿಗಳಿಗೆ ನಮಿಸುತ್ತಾ ಈ ವಿಶ್ವರಂಗಭೂಮಿ ದಿನದಂದುರಂಗಭೂಮಿಗಾಗಿ  ಶ್ರಮಿಸುತ್ತಿರುವ ಎಲ್ಲರಿಗೂ ಶುಭ ಹಾರೈಕೆಗಳನ್ನು ಹೇಳೋಣ.

Tag: Vishva Rangabhoomi dina, World Theatre Day


ಕಾಮೆಂಟ್‌ಗಳಿಲ್ಲ: