ಶನಿವಾರ, ಮಾರ್ಚ್ 29, 2014

'ಋತು ವೈಭವ'ದಲ್ಲಿ ವಸಂತ


ಪರಿಮಳದ ತಂಗಾಳಿ ಹರಿದಾಡಿತು;
ದುಂಬಿಗಳ ಸಂಗೀತ ಮೊದಲಾಯಿತು:
ಬಿರಿದರಳ ಬಣ್ಣಗಳ ಹೊಳೆ ಹರಿಯಿತು;
ಚೈತ್ರ, ವೈಶಾಖ-ವಸಂತ ಋತು.

ಮೃದು ವಸಂತದ ಮುದ್ದು ಬೆರಳು ಮೊಗ್ಗಿನ ಕಣ್ಣ
ತೆರೆದು ಅರಳಾಗಿಸುವ ವೇಳೆಯಲ್ಲಿ
ಎಳಬಿಸಿಲ ಹೊದಿಕೆಯಲಿ ನಗಲು ಚಿಗುರಿದ ತೋಟ
ಬಗೆಬಗೆಯ ಪರಿಮಳದ ಜ್ವಾಲೆಯಲ್ಲಿ

ತಿಂಗಳೊಂದರ ಹಿಂದೆ ಹಸಿರು ಪತ್ತಲವುಟ್ಟು 
ಕಂಗಳಿಗೆ ತಂಪಾಗಿ ಹೊಳೆದ ಮಾವು
ಇಂದೇಕೊ ಕೋಪದಲಿ ಕೆಂಪಿನುಡುಗೆಯನುಟ್ಟು 
ವಿರಹಾಗ್ನಿಯಂತೆ ಧಗಧಗಿಸುತಿರಲು

ಮರದ ತುದಿಯಲ್ಲಿ ಕೋಗಿಲೆ ತಂಗಿ ಹಾಡುತ್ತ
ನಲಿವಿನೊಂದಿಗೆ ನೋವ ಬೆರೆಸುತಿರಲು
ಹೂ ಮಗುವಿನುಸಿರಂತೆ ಮೆಲುನಡೆಯ ತಂಬೆಲರು
ಹಸಿದ ಬಡವನ ಕಣ್ಣನೊರಸುತಿರಲು

ಓ ಒಲವೆ, ನಿನ್ನ ವರ್ಷೋದಯದ ಗೀತವನು
ಕೇಳುವೆನು ಮೈಮರೆತು ನೆರಳಿನಲ್ಲಿ ;
ಹೂವ ಬಳಸುವ ದುಂಬಿದನಿಯನನುಕರಿಸುವೆನು
ಕಾಡ ಬಿದಿರಿನ ನನ್ನ ಕೊಳಲಿನಲ್ಲಿ :

ಮೃದು ವಸಂತವೆ, ನೆಲದ ಹೃದಯ ಚಿಮ್ಮಿದ ಒಲವೆ,
ಹೊಸ ವರುಷ ತೆರೆದ ತಳಿರಿನ ಬಾಗಿಲೆ, -
ಕೊರೆವ ಚಳಿಯೂ ಇರದ, ಉರಿವ ಬಿಸಿಲೂ ಇರದ
ಹರುಷವೇ, ನನ್ನೊಲವೆ, ಬಾಳ ಚೆಲುವೆ !

ಸಾಹಿತ್ಯ: ಕೆ. ಎಸ್. ನರಸಿಂಹಸ್ವಾಮಿ

('ಋತು ವೈಭವ'ದಲ್ಲಿ ವಸಂತ - 'ತೆರೆದ ಬಾಗಿಲು' ಕವನ ಸಂಕಲನ)  ಕಾಮೆಂಟ್‌ಗಳಿಲ್ಲ: