ಮಂಗಳವಾರ, ಆಗಸ್ಟ್ 5, 2014

ಮುಮ್ಮಡಿ ಕೃಷ್ಣರಾಜ ಒಡೆಯರ್

ಮುಮ್ಮಡಿ ಕೃಷ್ಣರಾಜ ಒಡೆಯರ್

ಮೈಸೂರು ಅರಸರ ಸಾಲಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರದ್ದು ಎದ್ದು ಕಾಣುವ ಹೆಸರು. ಜೀವನವಿಡೀ ತಲ್ಲಣಗಳಲ್ಲೇ ಕಳೆದರೂ, ಕರ್ನಾಟಕದ ಸಾಂಸ್ಕೃತಿಕ ಲೋಕಕ್ಕೆ ಅವರು ನೀಡಿದ ಕೊಡುಗೆ ಅಪೂರ್ವವಾದುದು. ಆ ಕಾರಣದಿಂದಲೇ ಅವರು ಕನ್ನಡದ ಭೋಜರಾಜ.

ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರದ್ದು ಏಳುಬೀಳುಗಳಿಂದ ಕೂಡಿದ ಬದುಕು. ಇತಿಹಾಸಕಾರರು ಆಜನ್ಮ ದುಃಖಿಎಂದು ಕರೆಸಿಕೊಂಡ ದೊರೆ ಅವರು. ಸಾಹಿತ್ಯ, ಕಲೆ, ಸಂಗೀತ, ವಾಸ್ತುಶಿಲ್ಪಕ್ಕೆ ಇವರು ನೀಡಿದ ಕೊಡುಗೆ ಅಪಾರ.ಹೊಸಗನ್ನಡ ಸಾಹಿತ್ಯ ಪ್ರಪಂಚಕ್ಕೆ ಬುನಾದಿ ಹಾಕಿದ ಶ್ರೇಯಸ್ಸು ಅವರದ್ದು. ಹುಟ್ಟಿನಿಂದ ಕೊನೆಯವರೆಗೂ ಅಸ್ತಿತ್ವದ ಹುಡುಕಾಟದಲ್ಲಿ, ಸ್ವಾತಂತ್ರ್ಯದ ತಿಣುಕಾಟದಲ್ಲಿ ಜೀವ ನವೆಸಿದ ಒಡೆಯರ್ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ತಮ್ಮೆಲ್ಲ ತಲ್ಲಣಗಳನ್ನು ಮರೆಯುತ್ತಿದ್ದರು. ಇದರಿಂದಾಗಿ ರಾಜ್ಯದಲ್ಲಿ ಸಾಹಿತ್ಯ-ಕಲೆ ಉತ್ತುಂಗಕ್ಕೇರಲು ಸಾಧ್ಯವಾಯಿತು.

ಮುಮ್ಮಡಿ ಕೃಷ್ಣರಾಜ ಒಡೆಯರ್ ಹುಟ್ಟಿದಾಗ (ಕ್ರಿ.ಶ. 1794) ತಂದೆ ಚಾಮರಾಜ ಒಡೆಯರ್ ರಾಜ್ಯಾಧಿಕಾರ ಕಳೆದುಕೊಂಡು ಸಂಕಷ್ಟದಲ್ಲಿದ್ದರು. ಕೆಲ ತಿಂಗಳಲ್ಲೇ ಬಾಣಂತಿ ತಾಯಿ ಕೆಂಪನಂಜಮ್ಮಣ್ಣಿ ಮೃತರಾದರು. ಎರಡು ವರ್ಷ ಕಳೆಯುವಷ್ಟರಲ್ಲಿ ತಂದೆ ಕೂಡ ಸಿಡುಬು ರೋಗದಿಂದ ಮೃತರಾದರು. ಅವರನ್ನು ಸಾಕಿ ಸಲಹಿದ್ದು ಅಜ್ಜಿ ಲಕ್ಷ್ಮಮ್ಮಣ್ಣಿ.  ಕ್ರಿ.ಶ. 1799ರಲ್ಲಿ ಟಿಪ್ಪು ಮರಣಾನಂತರ ಬ್ರಿಟಿಷ್‌ರೊಂದಿಗೆ ರಾಜಮಾತೆ ಲಕ್ಷ್ಮಮ್ಮಣ್ಣಿ ಒಪ್ಪಂದ ಮಾಡಿಕೊಂಡಿದ್ದರಿಂದ ಮತ್ತೆ ರಾಜ್ಯಾಧಿಕಾರ ದೊರೆಯಿತು. ಸಿಂಹಾಸನದೆಡೆ ಹೆಜ್ಜೆ ಹಾಕಿದಾಗ ಕೃಷ್ಣರಾಜ ಒಡೆಯರ್ ಅವರಿಗೆ ಕೇವಲ ಐದು ವರ್ಷ. ಸಭಾಸದರ ಮಾತು-ವರ್ತನೆ ಯಾವುದೂ ಅರ್ಥವಾಗದ ಅಯೋಮಯ ಮನಸ್ಥಿತಿಯಲ್ಲಿ ಅಂದು ಪಟ್ಟಾಭಿಷೇಕ ಮಾಡಿಸಿಕೊಂಡರು.

ಅಜ್ಜಿಯ ಪ್ರೀತಿ ಸವಿಯುತ್ತಾ, ರಾಜಾಧಿಕಾರದ ನೀತಿ ಕಲಿಯುತ್ತಿದ್ದ ಒಡೆಯರ್ 16ನೇ ವಯಸ್ಸಿಗೆ ಕಾಲಿಡುವ ಮುನ್ನವೇ ರಾಜಮಾತೆಯನ್ನು ಕಳೆದುಕೊಂಡು ತಬ್ಬಲಿಯಂತಾದರು. ದಿವಾನರಾಗಿದ್ದ ಪೂರ್ಣಯ್ಯ ತಮ್ಮನ್ನು ಕಿರಿಯನೆಂದು ನಿರ್ಲಕ್ಷಿಸುತ್ತಿದ್ದಾರೆಂದು ನೊಂದುಕೊಂಡರು. ಯಾರನ್ನು ನಂಬಬೇಕು, ಯಾರನ್ನು ಬಿಡಬೇಕೆಂಬ ಗೊಂದಲದಲ್ಲೆ ರಾಜ್ಯಾಡಳಿತ ನಡೆಸುವಂತಾಯಿತು.

1810ರ ಡಿಸೆಂಬರ್ ತಿಂಗಳಿನಲ್ಲಿ ಬೊಕ್ಕಸದಿಂದ ದಿವಾನ್ ಪೂರ್ಣಯ್ಯ ಖರ್ಚು ಮಾಡಿದ 9,031,380 ಕಂಠೀರಾಯ ವರಹಗಳಿಗೆ ಲೆಕ್ಕ ಸಿಗದಿದ್ದಾಗ, ರೆಸಿಡೆಂಟ್ ಕೋಲ್ ಮಹಾರಾಜರ ಸಲಹೆ ಮೇರೆಗೆ ಪೂರ್ಣಯ್ಯರನ್ನು ಬಲವಂತ ನಿವೃತ್ತಿಗೊಳಿಸಿದರು. ಇಂಥ ಸಂದರ್ಭದಲ್ಲೂ ಮಾನವತೆಯ ಔದಾರ್ಯ ತೋರಿದ ಒಡೆಯರ್ ಜೋಡು ಶಾಲುಗಳನ್ನು ಹೊದಿಸಿ ಪೂರ್ಣಯ್ಯರನ್ನು ಸನ್ಮಾನ ಮಾಡಿ ಬೀಳ್ಕೊಡುಗೆ ನೀಡಿದರಲ್ಲದೆ, ನಿವೃತ್ತಿ ವೇತನವಾಗಿ ಮಾಸಿಕ 500 ವರಹಗಳನ್ನು ಪ್ರಕಟಿಸಿದರು.

ಪೂರ್ಣಯ್ಯನವರ ನಂತರ ಅನೇಕರು ದಿವಾನರಾಗಿ ಬಂದುಹೋದರು. ಈ ಅವಧಿಯಲ್ಲಿ ಆರ್ಥಿಕ ಸ್ಥಿತಿ ಬಿಗಡಾಯಿಸಿತು. ಈಸ್ಟ್ ಇಂಡಿಯಾ ಕಂಪೆನಿಗೆ ವಾರ್ಷಿಕ 70 ಲಕ್ಷ ಕಂಠೀರಾಯ ವರಹಗಳನ್ನು 12 ಕಂತುಗಳಲ್ಲಿ ಮಹಾರಾಜರು ಕಪ್ಪವಾಗಿ ನೀಡಬೇಕಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಬೊಕ್ಕಸಕ್ಕೆ ಬರುವ ಆದಾಯ ಕಡಿಮೆಯಾಗಿ ಬ್ರಿಟಿಷ್ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.

ಬರಗಾಲ, ವ್ಯವಸಾಯ ಯೋಗ್ಯ ಭೂಮಿ ಕೊರತೆಯಿಂದಾಗಿ ಹೆಚ್ಚಿನ ಕರ ನೀಡಲು ನಿರಾಕರಿಸಿದ ರೈತರು ಮಹಾರಾಜರ ವಿರುದ್ಧ ದಂಗೆ ಏಳುವ ಪರಿಸ್ಥಿತಿಯೂ ಉದ್ಭವಿಸಿತು. 1830ರ ನವೆಂಬರ್ 16ರಂದು ದಂಗೆ ಎದ್ದ ರೈತರೊಂದಿಗೆ ತರೀಕೆರೆ ಪಾಳೆಯಗಾರ ರಂಗಪ್ಪನಾಯಕ ಮತ್ತವನ ಮಗ ಹನುಮಪ್ಪನಾಯಕ ಕೈಜೋಡಿಸಿದರು.  ಈ ದಂಗೆ ಅಜ್ಜಂಪುರ, ಹೊನ್ನಾಳಿ, ಶಿಕಾರಿಪುರ, ಅನವಟ್ಟಿ, ಚೆನ್ನಗಿರಿ, ಬಸವಾಪಟ್ಟಣ, ಹರಿಹರ, ಚಿಕ್ಕಮಗಳೂರು ಮತ್ತು ಕಡೂರುಗಳಲ್ಲಿ ಕಾಣಿಸಿಕೊಂಡು ರಾಜಕೀಯ ಕ್ಷೋಭೆ ತಲೆದೋರಿತು. ದಂಗೆ ನಿಗ್ರಹಿಸಲು ವಿಫಲರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಬ್ರಿಟಿಷ್ ರೆಸಿಡೆಂಟರ ನೆರವು ಕೋರಿದರು. ಕ್ಯಾಪ್ಟನ್ ರಾಕ್‌ಫೋರ್ಟ್ ನೇತೃತ್ವದ ಬ್ರಿಟಿಷ್ ಸೇನೆ ರೈತದಂಗೆಯನ್ನು ನಿಗ್ರಹಿಸಿತು. ಹಾಗೆಯೇ ಮಹಾರಾಜರ ಆಡಳಿತವನ್ನು ಕಬಳಿಸಿತು.

ಗರ್ವನರ್ ಜನರಲ್ ವಿಲಿಯಂ ಬೆಂಟಿಕ್ ಮುಮ್ಮಡಿ ಕೃಷ್ಣರಾಜ ಒಡೆಯರ್ ಆಡಳಿತ ನಡೆಸಲು ಯೋಗ್ಯರಲ್ಲವೆಂದು 1831ರ ಅಕ್ಟೋಬರ್ 19ರಿಂದ ಜಾರಿಗೆ ಬರುವಂತೆ ಕಮಿಷನರ್ ಆಳ್ವಿಕೆ ಜಾರಿಗೊಳಿಸಿದರು.  ಮಹಾರಾಜರ ಜೀವನ ನಿರ್ವಹಣೆಗೆಂದು ಮಾಸಿಕ ಪಿಂಚಣಿ ನಿಗದಿಪಡಿಸಿದರು. ನವರಾತ್ರಿ ಹಬ್ಬದ ನಾಲ್ಕನೇ ದಿನವೆ ಅಧಿಕಾರ ಕಳೆದುಕೊಂಡು ವಿಜೃಂಭಣೆಯಿಂದ ವಿಜಯದಶಮಿ ಆಚರಿಸಲಾಗದ ದುರದೃಷ್ಟ ಅವರದ್ದಾಗಿತ್ತು. ನಂತರ ಸುಮಾರು 37 ವರ್ಷ ಕಾಲ, ತಮ್ಮ ಜೀವಿತಾವಧಿವರೆಗೂ ಸ್ವಾತಂತ್ರ್ಯಕ್ಕಾಗಿ ನ್ಯಾಯಯುತ ಹೋರಾಟ ನಡೆಸಿದ ರೀತಿ ಮನನೀಯ. ಇದಕ್ಕಾಗಿ ಚಾಣಾಕ್ಷ ರಾಜ ತಾಂತ್ರಿಕತೆ ಹೆಣೆಯಲು ಭಾರತದಲ್ಲಿರುವ ಬ್ರಿಟಿಷ್ ಅಧಿಕಾರಿ ಸಮೂಹದಿಂದ ಹಿಡಿದು ಲಂಡನ್‌ನ ರಾಣಿ ವಿಕ್ಟೋರಿಯಾ ಆಪ್ತ ವಲಯದವರೆಗೂ ಸ್ನೇಹ ಸಂಪಾದಿಸಿದ್ದರು.  ಬ್ರಿಟಿಷ್ ಮಿತ್ರವಲಯದಿಂದಲೆ ಅಧಿಕಾರ ಮರಳಿ ತರಲು ಭಾರತದ ಗರ್ವನರ್ ಜನರಲ್‌ರಿಂದ ಲಂಡನ್ನಿನ ಹೌಸ್ ಆಫ್ ಕಾಮನ್ಸ್ ವರೆಗೆ ಲಾಬಿ ನಡೆಸಿದ್ದರು.

ಸಿಪಾಯಿದಂಗೆ ಸಂದರ್ಭದಲ್ಲಿ ಮೈಸೂರು ಮಹಾರಾಜರು ಬ್ರಿಟೀಷರನ್ನು ಬೆಂಬಲಿಸಿದರೂ ಅಂದು ಭಾರತದ ವೈಸ್‌ರಾಯ್ ಆಗಿದ್ದ ಸರ್‌ಜಾನ್ ಲಾರೆನ್ಸ್ ಮೈಸೂರು ಮಹಾರಾಜರಿಗೆ ಮರಳಿ ಅಧಿಕಾರ ಕೊಡುವ ಬಗ್ಗೆ ನಿರ್ಲಕ್ಷ್ಯ ತಾಳಿದರು. ಗಂಡು ಮಕ್ಕಳಿಲ್ಲದ ಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ಹತ್ತಿರದ ಸಂಬಂಧಿ ಗೋಪಾಲರಾಜೇ ಅರಸರ ಮೊಮ್ಮಗ (ಚಿಕ್ಕಕೃಷ್ಣ ಅರಸರ ಮಗ) ಚಾಮರಾಜೇಂದ್ರ ಒಡೆಯರ್ ಅವರನ್ನು ದತ್ತು ಸ್ವೀಕರಿಸಲು ಸಹ ಬ್ರಿಟೀಷರು ಅನುಮತಿ ನೀಡಲಿಲ್ಲ. ಬ್ರಿಟಿಷ್ ಅಧಿಕಾರಿಗಳ ವಿರೋಧದ ನಡುವೆಯೂ1865 ಜೂನ್ 18ರಂದು ಎರಡು ವರ್ಷ ಆರು ತಿಂಗಳ ವಯಸ್ಸಿನ ಚಾಮರಾಜೇಂದ್ರ ಒಡೆಯರನ್ನು ದತ್ತುಪುತ್ರನಾಗಿ ಸ್ವೀಕರಿಸಿದರು.

ಸುಮಾರು 37 ವರ್ಷ ಕಾಲ ಸ್ವಾತಂತ್ರ್ಯಕ್ಕೆ ಹಂಬಲಿಸಿ ಸಾತ್ವಿಕ ಹೋರಾಟ ನಡೆಸಿದ ಮುಮ್ಮಡಿ ಕೃಷ್ಣರಾಜ ಒಡೆಯರ್ ಕೊನೆಗೂ ಅಧಿಕಾರದ ಸವಿ ಕಾಣದೆ ಕಣ್ಮುಚ್ಚಿದರು. ಆದರೆ ಅವರು ಹಚ್ಚಿದ ಸ್ವಾತಂತ್ರ್ಯದ ದೀಪ ಕೆಲವರ್ಷಗಳಲ್ಲೆ ಪ್ರಜ್ವಲವಾಗಿ ಬೆಳಗಿ ದತ್ತುಪುತ್ರ 10ನೇ ಚಾಮರಾಜೇಂದ್ರ ಒಡೆಯರ್‌ ಅವರಿಗೆ ಬ್ರಿಟಿಷರಿಂದ ಮತ್ತೆ ಅಧಿಕಾರ ದೊರೆಯಿತು.  ಕೃಷ್ಣರಾಜ ಒಡೆಯರ್ ಅವರು ಹೋರಾಟ ನಡೆಸಿರದಿದ್ದರೆ ಮೈಸೂರು ಅರಮನೆ, ದಸರೆ ಸಂಭ್ರಮ ಯಾವುದೂ ಕಾಣಲಾಗುತ್ತಿರಲಿಲ್ಲ.

ಚಿತ್ರಸಹಿತ ಕನ್ನಡದ ಅನುವಾದ ವಿವರಣೆಯುಳ್ಳ ಶ್ರೀತತ್ವನಿಧಿಯ 9 ಸಂಪುಟಗಳು, ‘ಅಖಂಡ ಕಾವೇರಿ ಮಹಾತ್ಮೆ’, ‘ಅಧ್ಯಾತ್ಮ ರಾಮಾಯಣ’, ‘ಉತ್ತರರಾಮ ಚರಿತ್ರೆ’, ‘ಉಷಾಪರಿಣಯ’, ‘ಕಾಶಿಕಾಂಡ’, ‘ಕೃಷ್ಣಕಥಾ ಸಾರ ಸಂಗ್ರಹ’, ‘ಜೈಮಿನಿ ಭಾರತದ ಅಶ್ವಮೇಧಿಕ ಪರ್ವದ ಟೀಕೆ’, ‘ಬತ್ತೀಸ ಪುತ್ಥಳಿ ಕಥೆ’, ‘ಬೇತಾಳ ಪಂಚವಿಂಶತಿ’, ‘ಸೌಗಂಧಿಕ ಪರಿಣಯ’, ‘ರತ್ನಾವಳಿ ಅಥವಾ ವತ್ಸರಾಜನ ಕಥೆಸೇರಿದಂತೆ 58 ಕೃತಿಗಳನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ರಚಿಸಿದ್ದಾರೆ.

ಲೇಖಕರು: ಪ್ರಕಾಶ್ ಬಾಬು

(ಕೆಲವು ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಪ್ರಕಟಗೊಂಡಿದ್ದು)

Tag: Mummadi Krishnaraja Odeyar

ಕಾಮೆಂಟ್‌ಗಳಿಲ್ಲ: