ಶುಕ್ರವಾರ, ಆಗಸ್ಟ್ 8, 2014

ಹಬ್ಬಗಳ ಸರಣಿಗೆ ಸುಸ್ವಾಗತ


ಹಬ್ಬಗಳ ಸರಣಿಗೆ ಸುಸ್ವಾಗತ

ವರಮಹಾಲಕ್ಷ್ಮಿ ಹಬ್ಬ ಬಂತೆಂದರೆ, ಹಬ್ಬ, ಸಡಗರ, ಸಂತೋಷ, ನಲಿವುಗಳ ಸರಣಿಗಳು ಉದಯಿಸಿದ ಸಂಭ್ರಮ ಮೂಡುತ್ತದೆ.  ಈ ಹಬ್ಬಗಳ ಸರಣಿಗೆ ಎಲ್ಲರಿಗೂ ಶುಭ ಸುಸ್ವಾಗತ. 

ಜಗಜ್ಜನನಿ ಮಂಗಳಧಾತೆ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷ ನಮ್ಮೆಲ್ಲರ ಮೇಲಿರಲಿ.  ಈ ವಿಶ್ವದಲ್ಲಿ ಶಾಂತಿ, ಸಂತಸ, ಸೌಹಾರ್ದ, ಸಂಪದಗಳು ನೆಲೆಗೊಂಡು ಎಲ್ಲೆಲ್ಲೂ ಸುಭಿಕ್ಷತೆ ನೆಲೆಗೊಳ್ಳಲಿ.

ತಾಯಿ ಮಹಾಲಕ್ಷ್ಮಿಯ ಬಗ್ಗೆ ಯೋಚಿಸುವಾಗ ನಾವೆಲ್ಲೋ ವಸ್ತು ವೈಭವೀಕರಣ, ನಮ್ಮ ಅಹಂಕಾರಗಳ ಪೋಷಣೆಯ ಅರ್ಥೈಕೆಗೆ ಪೂರಕವಾದ ಚಿಂತನೆಗಳಿಗೆ ಇಳಿದುಬಿಡುತ್ತಿದ್ದೇವೇನೋ ಎಂಬ ಭಾವ ಹುಟ್ಟತೊಡಗಿದೆ.

ಮನುಷ್ಯ ತನ್ನ ಜೀವನವನ್ನು ಹಸನುಗೊಳಿಸಿಕೊಳ್ಳಲು ಅಗತ್ಯವಾದ ಅರ್ಥವನ್ನು ಶ್ರದ್ಧೆ, ನಿಷ್ಠೆ, ಸತ್ಯ ಮಾರ್ಗಗಳಿಂದ ಸಂಪಾದಿಸಿ ತಾನೂ, ತನ್ನ ಕುಟುಂಬತನ್ನ ಸುತ್ತಲಿನ ಪರಿಸರದಲ್ಲಿ ನಲ್ಮೆಯಿಂದ, ತೃಪ್ತಿಯಿಂದ, ಅಭದ್ರತೆಯ ಭಯವಿಲ್ಲದೆ ಬದುಕುವುದು ಅತ್ಯಂತ ಸಮಂಜಸವಾದದ್ದು ಎಂಬುದರಲ್ಲಿ ಎರಡು ಮಾತಿಲ್ಲ.  ಆದರೆ, ಹೇಗಾದರೂ ಮಾಡಿ ಮತ್ತೊಬ್ಬನಿಗಿಂತ ಹೆಚ್ಚು ಶ್ರೀಮಂತಿಕೆ ಗಳಿಸುವ, ಅಧಿಕಾರಗಳಿಸುವ  ಅಹಂಕಾರಗಳಿಗಿಳಿದುಕಾಮ, ಕ್ರೋಧ, ಮದ, ಮಾತ್ಸರ್ಯ, ಲೋಭ, ಪರಿಸರ ನಾಶ, ಸುತ್ತಲಿನ ಜೀವಿಗಳು - ಪ್ರಪಂಚ - ಸತ್ಯದ ಬದುಕು - ಸುನೀತಿ - ಲೋಕದ ಹಿತಚಿಂತನೆಗಳಿಗೆ ವ್ಯತಿರಿಕ್ತವಾಗಿ ಬದುಕುತ್ತಾ; ತನ್ನ ಸುತ್ತಲಿನ ಲೋಕ ಕೊಳೆತು ನಾರುತ್ತಿದ್ದರೂ, ತನ್ನ ಕೈಯಾರೆಯೇ ತಲೆ ತಲಾಂತರಗಳಿಗೆ ಅಗತ್ಯವಾಗಿ ಬೇಕಿರುವ ಪ್ರಕೃತಿಯನ್ನು ನಾಶ ಮಾಡುತ್ತಾ; ಅಧಿಕಾರ ಮತ್ತು ಶ್ರೀಮಂತಿಕೆಯನ್ನು ಗಳಿಸಿ ಮನುಷ್ಯ ಅಪಾಯಕಾರನಾಗಿ ಬದುಕುತ್ತಿರುವುದು ಇಂದು ಎಲ್ಲೆಲ್ಲೂ ಕಾಣಬರುತ್ತಿದೆ.

ತನ್ನ ಯೋಗ್ಯತೆಗೆ ಮೀರಿದ ಗಳಿಕೆ, ಅಂತಸ್ತು, ಶ್ರೀಮಂತಿಕೆ ಮುಂತಾದವು ಅತ್ಯಂತ ಶೀಘ್ರದಲ್ಲಿ ದೊರಕಿಬಿಡಬೇಕು ಎಂಬುವ ವ್ಯಾಮೋಹ; ಆ ವ್ಯಾಮೋಹದಲ್ಲಿ ಇರುವುದೆಲ್ಲವನ್ನೂ ಬಿಟ್ಟು, ಕಡೆಗೆ ತನ್ನ ಕರ್ತವ್ಯವನ್ನೂ ಬಿಟ್ಟು ಭ್ರಷ್ಟತನಕ್ಕಿಳಿಯುವ ತನ; ತಾನು ಕೆಲಸ ಮಾಡುತ್ತಿರುವ ಸಂಸ್ಥೆಗೆ ಮೋಸ, ತಾನು ಸೇವೆ ಮಾಡುವ ಸಮಾಜದ ಬಗೆಗೆ ತಾತ್ಸಾರ ಇವೆಲ್ಲ ದಿನೇ ದಿನೇ ಹೆಚ್ಚಾಗುತ್ತಿದೆ.

ಇನ್ನು ರೈತಾಪಿ ಜನಗಳಂತಹ  ಸಮಾಜಕ್ಕೆ ಆಹಾರ ಒದಗಿಸುವ ಜನಾಂಗದಲ್ಲಿ, ಹಲವು ಉದ್ಯಮಿಗಳು, ರಾಜಕಾರಣಿಗಳ ನಗರೀಕರಣ ಯೋಜನೆಗಳಿಗೆ ತಮ್ಮನ್ನೂ ತಮ್ಮ ತಲೆ ತಲಾಂತರಗಳಿಂದ ಬಂದ ಭೂಮಿ ಮನೆಯಂತಹ ಕೊಡುಗೆಗಳನ್ನೂ ಕ್ಷಣಿಕವಾದ ಕೆಲವೊಂದು ಲಕ್ಷಗಳಿಗೆ ಮಾರಿಕೊಂಡು ಅದನ್ನು ಹೇಗೆ ಪುನರ್ ಬಳಸುವುದು ಎಂಬ ಅರಿವು ಕೂಡಾ ಇಲ್ಲದೆ ಜೂಜು ಪ್ರವೃತ್ತಿಯ ಬದುಕಿಗೆ ತೊಡಗಿ; ಒಂದೆಡೆ ಪ್ರಕೃತಿ ನಾಶ, ಸ್ವಬದುಕು ನಾಶ, ನೈತಿಕತೆಯ ವಿನಾಶ ಎಂಬ ಹಂತಗಳಲ್ಲಿ ಮಾನವನ ಬದುಕು ಮೂರಾಬಟ್ಟೆಯಾಗಿ ನಿಂತಿದೆ.

ತಮ್ಮ ಇಡೀ ಬದುಕಲ್ಲಿ ಬರೀ ಡೊಂಕನ್ನೇ ತುಂಬಿಕೊಂಡು, ತಮ್ಮನ್ನು ಆಚಾರ್ಯರು, ಸ್ವಾಮಿಗಳು ಎಂದು ಕರೆದುಕೊಂಡು, ಶ್ರೀಮಂತ ಅರಮನೆಗಳಲ್ಲಿ ಹೊಲಸು ಜೀವನ ನಡೆಸಿಕೊಂಡು, ಕಾವಿ ಬಟ್ಟೆ ತೊಟ್ಟು ಮಂತ್ರ ಪಠಣದ ಸೋಗಿನಲ್ಲಿ,  ಅಮಾಯಕ ಜನರಿಂದ,  ಅವರನ್ನು ಬೆಂಬಲಿಸುವ ರಾಜಕಾರಣಿಗಳಿಂದ ಹಣ ಮಾಡಿಕೊಂಡು ಬದುಕುತ್ತಿರುವ ಜನ; ಈ ಲೋಕಕ್ಕೆ ಮಾರ್ಗದರ್ಶನದ ಹೆಸರಿನಲ್ಲಿ ಅವನಿಗೆ ಓಟುಮಾಡಿ, ನಮ್ಮ ಕಾಲೇಜಿನಲ್ಲಿ ಮಕ್ಕಳಿಗೆ ಡೊನೇಷನ್ ಕೊಟ್ಟು ಓದಿಸಿ, ಇವನ ಮೇಲೆ ಕಲ್ಲು ಹೊಡೆಯಿರಿ, ಅವ ನಂಬುವ ದೇವರ ಬಳಿ ಹೋಗಬೇಡಿ ಇತ್ಯಾದಿ ಹೀನತೆಗೆ ತಲುಪಿರುವಾಗ ಜನರಿಗೆ ಆ ಮಹಾತಾಯಿ ಜಗನ್ಮಾತೆಯೇ ಉಳಿದಿರುವ ದಿಕ್ಕು.

ಇಂಥಹ ದುಸ್ಥಿತಿಯಲ್ಲಿ ನೆಲ, ಜಲ, ಅರಣ್ಯ, ಸಂತೋಷ, ನಲ್ಮೆ, ಶಾಂತಿ, ಶುಭ್ರತೆ, ಪರಿಸರ ಸ್ವಚ್ಛತೆ, ಲೋಕ ಹಿತ, ಮುಂದಿನ ಜನಾಂಗ, ಪ್ರಾಕೃತಿಕ ಸಮತೋಲನ  ಇವುಗಳೆಲ್ಲವನ್ನೂ ಕೆಲವೊಂದು ಐಷಾರಾಮವಾದ ಕ್ಷಣಗಳಿಗಾಗಿ ನಗದೀಕರಣಗೊಳಿಸುತ್ತಿರುವ ಮಾನವನ ನೀತಿಯೇ ಲಕ್ಷ್ಮೀ ಪೂಜೆ ಆಗದೆ, ಬದುಕಿನಲ್ಲಿ ನಿಜವಾದ ಆರ್ಥಿಕ, ನೈತಿಕ, ಅಧ್ಯಾತ್ಮಿಕ ಸುಖ ಸಂಪದಗಳನ್ನು ನಾವು ಇಂದು ಬಯಸುವ ಅಗತ್ಯವಿದೆ. ನಮಗೆ ಸುಂದರತೆ, ಸ್ವಚ್ಛತೆ, ಚಿಂತನಾರಹಿತ, ಅಭದ್ರತಾರಹಿತ, ಮೋಸರಹಿತವಾದ ನಂಬುಗೆಯ, ಪ್ರೀತಿಯ  ಬದುಕಿನ ಶ್ರೀಮಂತಿಕ ಹಿಂದೆಂದಿಗಿಂತಲೂ ಈಗ ಅತ್ಯವಶ್ಯಕವಾಗಿದೆ. 

ನಮ್ಮೆಲ್ಲರ ಉತ್ತಮವಾದ, ಶುಭಕರವಾದ, ಲೋಕ ಹಿತಕರವಾದ ಪ್ರಾರ್ಥನೆಗಳನ್ನು ಮಹಾತಾಯಿ ಲಕ್ಷ್ಮಿ ಪೂರೈಸಲಿ.  ಅಂತಹ ಉತ್ತಮವಾದ ಬೇಡಿಕೆಗಳನ್ನು ಆಕೆಯ ಅಡಿದಾವರೆಗಳಲ್ಲಿ ಸಲ್ಲಿಸುವ ಜಾಗೃತಿಯನ್ನು ಆಕೆ ನಮಗೆ ಪಾಲಿಸಲಿ ಎಂದು ಪ್ರಾರ್ಥಿಸೋಣ.  

ಲಕ್ಷ್ಮೀಂ ಕ್ಷೀರಸಮುದ್ರರಾಜತನಯಾಂ ಶ್ರೀರಂಗಧಾಮೇಶ್ವರೀಂ
ದಾಸೀಭೂತ ಸಮಸ್ತದೇವವನಿತಾಂ ಲೋಕೈಕದೀಪಾಂಕುರಾ೦.
ಶ್ರೀಮನ್ಮಂದಕಟಾಕ್ಷಲಬ್ಧವಿಭವಬ್ರಹ್ಮೇಂದ್ರಗಂಗಾಧರಾ೦
ತ್ವಾಂ ತ್ರೈಲೋಕ್ಯ ಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಂ.

ಸರ್ವಜ್ಞೆ ಸರ್ವವರದೇ ಸರ್ವದುಷ್ಟಭಯಂಕರೀ
ಸರ್ವದುಃಖಹರೇ ದೇವಿ ಮಹಾಲಕ್ಷ್ಮೀ ನಮೋsಸ್ತುತೇ.

ಸಿದ್ಧಿಬುದ್ಧಿಪ್ರದೇ ದೇವಿ ಭಕ್ತಿಮುಕ್ತಿಪ್ರದಾಯಿನಿ

ಮಂತ್ರಮೂರ್ತೆ ಸದಾದೇವಿ ಮಹಾಲಕ್ಷ್ಮಿ ನಮೋsಸ್ತುತೇ.

Tag: Varamahalakshmi Festival,

ಕಾಮೆಂಟ್‌ಗಳಿಲ್ಲ: