ಶುಕ್ರವಾರ, ಸೆಪ್ಟೆಂಬರ್ 19, 2014

ಮ್ಯಾಂಡೊಲಿನ್ ಶ್ರೀನಿವಾಸ್

ಮ್ಯಾಂಡೊಲಿನ್ ಶ್ರೀನಿವಾಸ್

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಸರ್ವರಿಗೂ ಆಪ್ತವಾಗುವಂತೆ ಜನಪ್ರಿಯಗೊಳಿಸಿದವರಲ್ಲಿ ಮ್ಯಾಂಡೋಲಿನ್ ಶ್ರೀನಿವಾಸ್ ಪ್ರಮುಖ ಹೆಸರು.  ಕಛೇರಿಗಳಲ್ಲಿ ಹಾಗೂ ಕಿರುತೆರೆಯಲ್ಲಿ ನಾವು ಆಗಾಗ ಕಾಣುತ್ತಿದ್ದ  ಸಂಗೀತ ಕಾರ್ಯಕ್ರಮಗಳಲ್ಲಿ ತನ್ನ   ನಸುನಗೆಯ ಮಂದಹಾಸಕ್ಕೆ ಪೂರಕವಾಗಿ,   ಕೈಯಲ್ಲಿನ ಮ್ಯಾಂಡೋಲಿನ್ನಿನಿಂದ  ಅಂತಹದ್ದೇ ಮುದಭಾವ ನೀಡುವಂತಹ ಸುಶ್ರಾವ್ಯತೆಯನ್ನು, ಪುಟ್ಟ ವಯಸ್ಸಿನಿಂದಲೇ ಹಲವೊಮ್ಮೆ ಒಂಟಿಯಾಗಿ ಹಾಗೂ ಬಹಳಷ್ಟು ವೇಳೆ ತಮ್ಮ ಸಹೋದರ ರಾಜೇಶರೊಡಗೂಡಿ ಶ್ರೋತೃಗಳಿಗೆ ಹಂಚುತ್ತಿದ್ದ  ಶ್ರೀನಿವಾಸ್, ಇನ್ನೂ 45ರ ಕಿರುವಯಸ್ಸಿನಲ್ಲಿ ಅನಾರೋಗ್ಯಕ್ಕೊಳಗಾಗಿ ಇಂದು (19.09.2014) ವಿಧಿವಶರಾದರು ಎಂದರೆ ನಂಬುವುದಕ್ಕಾಗುತ್ತಿಲ್ಲ. 

ಉಪ್ಪಲವು ಶ್ರೀನಿವಾಸ್ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಪ್ರಾಂತ್ಯದ  ಪಲಕೊಲ್ ಎಂಬ ಗ್ರಾಮದಲ್ಲಿ ಫೆಬ್ರುವರಿ 28, 1969ರ ವರ್ಷದಲ್ಲಿ ಜನಿಸಿದರು.  ತಮ್ಮ ತಂದೆ ಸತ್ಯನಾರಾಯಣ ಅವರು ಬಳಸುತ್ತಿದ್ದ ಮ್ಯಾಂಡೋಲಿನ್ ವಾದ್ಯವನ್ನು ಶ್ರೀನಿವಾಸ್ ಕೇವಲ ಆರು ವರ್ಷ ಬಾಲಕನಾಗಿದ್ದಾಗಲೇ ಮೃದುವಾಗಿ ಮೀಟತೊಡಗಿದ್ದ.  ತಮ್ಮ ಮಗನಲ್ಲಿ ಸಂಗೀತ ಅಂತರ್ಗತವಾಗಿದ್ದನ್ನು ಮನಗಂಡ ಸಂಗೀತ ಪ್ರಿಯ ತಂದೆ ಮಗನಿಗಾಗಿ ಒಂದು ಮ್ಯಾಂಡೋಲಿನ್ ಖರೀದಿಸಿ ಆತನಿಗೆ ಸಂಗೀತ ಪಾಠಗಳನ್ನು ನೀಡಲು ಪ್ರಾರಂಭಿಸಿದರು.  ಗಿಟಾರ್ ವಾದಕರಾದ ವಾಸು ರಾವ್ ಅವರು ಏಳು ವರ್ಷದ ಬಾಲಕ ಶ್ರೀನಿವಾಸನಿಗೆ ಪಾಶ್ಚಿಮಾತ್ಯ ಸಂಗೀತವನ್ನು  ಪರಿಚಯಿಸಿದರು.  ಶ್ರೀನಿವಾಸನ ತಂದೆ ಸತ್ಯನಾರಾಯಣರ ಸಂಗೀತ ಗುರುಗಳಾಗಿದ್ದ ರುದ್ರರಾಜು ಸುಬ್ಬರಾಯರಿಗೆ ಮ್ಯಾಂಡೋಲಿನ್ ತಿಳಿದಿರಲಿಲ್ಲ.  ಅವರು ಸಂಗೀತವನ್ನು ಹಾಡಿ ತೋರಿದರೆ ಅದನ್ನು ಬಾಲಕ ಶ್ರೀನಿವಾಸ ಮ್ಯಾಂಡೊಲಿನ್ನಿನಲ್ಲಿ ಪ್ರತಿಧ್ವನಿಸುತ್ತಿದ್ದ.

ಒಂಬತ್ತು ವಯಸ್ಸಿನ ಶ್ರೀನಿವಾಸ್ 1978ರ ವರ್ಷದಲ್ಲಿ ಗುಡಿವಾಡದಲ್ಲಿ ಜರುಗಿದ  ತ್ಯಾಗರಾಜ ಆರಾಧನೆಯ ಸಂದರ್ಭದಲ್ಲಿ ತನ್ನ ಪ್ರಥಮ ಸಂಗೀತ ಸೇವೆಯನ್ನು ಸಲ್ಲಿಸಿದ್ದ.   1981ರ ವರ್ಷದಲ್ಲಿ ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ಚೆನ್ನೈ ನಗರದ ಇಂಡಿಯನ್ ಫೈನ ಆರ್ಟ್ಸ್ ಸೊಸೈಟಿಯಲ್ಲಿ ಸಾರ್ವಜನಿಕವಾಗಿ  ತನ್ನ ಪ್ರಪ್ರಥಮ ಸಂಗೀತ ಕಛೇರಿಯನ್ನು ನಡೆಸಿಕೊಟ್ಟ.  ಅಲ್ಲಿಂದ ಆತ ಹಿಂದಿರುಗಿ ನೋಡಿದ್ದೇ ಇಲ್ಲ.   ನಾಡಿನೆಲ್ಲೆಡೆಯಲ್ಲಿ ಮ್ಯಾಂಡೊಲಿನ್ ಎಂಬ ವಿದೇಶಿ ವಾದ್ಯ ಶ್ರೀನಿವಾಸರ ಕೈಚಳಕದಲ್ಲಿ ಸುಮಧುರವಾದ ಕರ್ನಾಟಕ ಶಾಸ್ರೀಯ ಸಂಗೀತವನ್ನು ಝೇಂಕರಿಸತೊಡಗಿತ್ತು.   ಇದರ ಪ್ರತಿಧ್ವನಿ ವಿಶ್ವದೆಲ್ಲೆಡೆಯಲ್ಲೂ ಆತನ ಕಾರ್ಯಕ್ರಮಗಳ ಮೂಲಕ ಧ್ವನಿಸುರುಳಿಗಳ ಮೂಲಕ ನಿರಂತರವಾಗಿ ಮಾರ್ದನಿಸುತ್ತಿತ್ತು.

ಶ್ರೀನಿವಾಸರ ಮ್ಯಾಂಡೊಲಿನ್ ನಾದ ಅಂತರರಾಷ್ರೀಯ ಪಾಶ್ಚಿಮಾತ್ಯ ಸಂಗೀತ ಖ್ಯಾತರಾದ ಜಾನ್ ಮೆಕ್ಲಾಗ್ಲಿನ್, ಮೈಖೇಲ್ ಬ್ರೂಕ್, ಟ್ರೇ ಗನ್, ನೈಗೆಲ್ ಕೆನ್ನಡಿ ಮುಂತಾದವರೊಂದಿಗೆ ಸಹಾ ಜುಗಲ್ಬಂದಿ ನಡೆಸಿ ಪ್ರಖ್ಯಾತಗೊಂಡಿತ್ತು.

ಭಾರತ ಸರ್ಕಾರದ ಪದ್ಮಶ್ರೀ ಗೌರವ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಸಂಗೀತ ರತ್ನ, ಸನಾತನ ಸಂಗೀತ ಪುರಸ್ಕಾರ, ಪಿಟೀಲು  ಚೌಡಯ್ಯ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಮ್ಯಾಂಡೊಲಿನ್ ಶ್ರೀನಿವಾಸರನ್ನು ಅರಸಿ ಬಂದಿದ್ದವು.   


ಇಂತಹ ಮಹಾನ್ ಪ್ರತಿಭೆ 45ರ ಕಿರು ವಯಸ್ಸಿನಲ್ಲೇ ಈ ಲೋಕದಿಂದ ಕಣ್ಮರೆಯಾಗಿದ್ದು ಸಂಗೀತ ಲೋಕಕ್ಕಾದ ದೊಡ್ಡ ನಷ್ಟ.  ಈ ಮಹಾನ್ ಪ್ರತಿಭೆಯ ಸಂಗೀತ -  ಧ್ವನಿ ಸುರುಳಿಗಳು, ದೃಶ್ಯ ಮಾಧ್ಯಮಗಳು ಮತ್ತು ಅವೆಲ್ಲಕ್ಕೂ ಮಿಗಿಲಾಗಿ ಸಂಗೀತ ಪ್ರೇಮಿಗಳ ಹೃದಯ ಮಿಡಿತಗಳಲ್ಲಿ ಬಹುಕಾಲದವರೆಗೆ ತನ್ನ ಹೃದ್ಭಾವವನ್ನು ತುಂಬಿರುತ್ತದೆ.  ಈ ಮಹಾನ್ ಚೇತನದ ಆತ್ಮಕ್ಕೆ ಶಾಂತಿ ಸಿಗಲಿ.

ಕಾಮೆಂಟ್‌ಗಳಿಲ್ಲ: