ಗುರುವಾರ, ಜನವರಿ 1, 2015

ವೈಜಯಂತಿ ಕಾಶಿ

ವೈಜಯಂತಿ ಕಾಶಿ

ಪ್ರಸಿದ್ಧ ನೃತ್ಯ ಕಲಾವಿದೆ ವೈಜಯಂತಿ ಕಾಶಿ ಅವರು ಜನವರಿ 1, 1960ರ ವರ್ಷ  ಬೆಂಗಳೂರಿನಲ್ಲಿ ಜನಿಸಿದರು.  ನಾಟಕರತ್ನ ಗುಬ್ಬಿ ವೀರಣ್ಣನವರ ಮೊಮ್ಮಗಳಾದ ವೈಜಯಂತಿ ಕಾಶಿ ಅವರ ತಂದೆ ವಿಶ್ವನಾಥ್ ಅವರು ಹಾಗೂ ತಾಯಿ ಗಿರಿಜಮ್ಮನವರು.  

ತಮ್ಮ ನೃತ್ಯ ಶಿಕ್ಷಣವನ್ನು ಮೊದಲಿಗೆ ತುಮಕೂರಿನಲ್ಲಿ ನಾಟ್ಯಾಚಾರ್ಯ ಕೆ.ಎ. ರಾಮನ್‌ ಅವರಲ್ಲಿ ನಡೆಸಿದ  ವೈಜಯಂತಿ ಅವರು  ಮುಂದೆ ಅಹಮದಾಬಾದಿನ ದರ್ಪಣ ಸಂಸ್ಥೆಯ ಹಿರಿಯ ನಾಟ್ಯಾಚಾರ್ಯ ಸಿ.ಆರ್. ಆಚಾರ್ಯಲು, ಗುರು ವೇದಾಂತಂ ಪ್ರಹ್ಲಾದ ಶರ್ಮ, ಪದ್ಮಭೂಷಣ ಡಾ. ನಟರಾಜ ರಾಮಕೃಷ್ಣ ಮುಂತಾದ ದಿಗ್ಗಜರುಗಳ ಬಳಿ ಕೂಚಿಪುಡಿ ನೃತ್ಯ ಕಲೆಯಲ್ಲಿ ಶಿಕ್ಷಣ ಪಡೆದು ಆ ಪ್ರಕಾರದಲ್ಲಿ ಹೆಚ್ಚಿನ  ಸಂಶೋಧನೆಯನ್ನು ಕೂಡಾ ನಡೆಸಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಫೆಲೋಷಿಪ್ ಪಡೆದ ಕರ್ನಾಟಕದ ಪ್ರಥಮ ಮಹಿಳಾ ಕಲಾವಿದೆ ಎಂಬ ಖ್ಯಾತಿಗೂ ಅವರು ಪಾತ್ರರಾಗಿದ್ದಾರೆ. 

ಕೆಲ ಕಾಲ ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸಿದ ವೈಜಯಂತಿ ಅವರು ಮುಂದೆ ನೃತ್ಯವನ್ನೇ ತಮ್ಮ ಬದುಕಾಗಿಸಿಕೊಂಡವರು.  ಇತ್ತೀಚಿನ ವರ್ಷಗಳಲ್ಲಿ ಅವರು ದೂರದರ್ಶನ ಧಾರಾವಾಹಿಗಳಲ್ಲಿ ಕೂಡಾ ಪಾತ್ರ ನಿರ್ವಹಿಸಿದ್ದಾರೆ. 

ವೈಜಯಂತಿ ಕಾಶಿ ಅವರು ಅಮೆರಿಕದ ಇಂಟರ್ ನ್ಯಾಷನಲ್ ಕುಚಿಪುಡಿ ಕನ್ವೆನ್ಷನ್, ಜರ್ಮನಿಯ  ಓರಿಯಂಟಲ್ ಡ್ಯಾನ್ಸ್ ಫೆಸ್ಟಿವಲ್, ಆಫ್ರಿಕಾದ  ಫೆಸ್ಟಿವಲ್ ಆಫ್ ಇಂಡಿಯಾ, ಕೊರಿಯಾದ ಅಪ್ಪನ್ ಡ್ಯಾನ್ಸ್ ಫೆಸ್ಟಿವಲ್, ಇಟಲಿಯ ಒಲಿಂಪಿಕ್ ಫೆಸ್ಟಿವಲ್, ಲಾಸ್ ಏಂಜಲಿಸ್ ಕನ್ನಡ ಕನ್ವೆನ್ಶನ್, ಈಜಿಪ್ಟ್ನಲ್ಲಿ ಇಂಟರ್ ನ್ಯಾಷನಲ್  ಡ್ಯಾನ್ ಅಂಡ್ ಮ್ಯೂಸಿಕ್ ಫೆಸ್ಟಿವಲ್ ಮುಂತಾದ ಪ್ರತಿಷ್ಟಿತ ನೃತ್ಯೋತ್ಸವಗಳೇ ಅಲ್ಲದೆ  ವಿಶ್ವದೆಲ್ಲೆಡೆಯಲ್ಲಿ  ತಮ್ಮ  ನೃತ್ಯ ಕಾರ್ಯಕ್ರಮಗಳನ್ನು ನಿರಂತರವಾಗಿ ನೀಡಿ ನೃತ್ಯ ಕಲಾರಸಿಕರನ್ನು ತಣಿಸಿದ್ದಾರೆ. ಅಲ್ಲದೆ ಅವರು ವಿಶ್ವದೆಲ್ಲೆಡೆಯಲ್ಲಿ ತಮ್ಮ ಮನೋಜ್ಞ ನೃತ್ಯ ಪ್ರಾತ್ಯಕ್ಷಿಕೆಗಳಿಗಾಗಿ ಸಹಾ ಪ್ರಸಿದ್ಧಿ ಪಡೆದಿದ್ದಾರೆ.

ತಮ್ಮದೇ ಆದ ಶಾಂಭವಿ ನೃತ್ಯ ಶಾಲೆಹಾಗೂ ನಾಟ್ಯ ಶಾಸ್ತ್ರದ ನೃತ್ಯ ಕೇಂದ್ರಗಳ ಸಂಸ್ಥಾಪಕ ನಿರ್ದೇಶಕಾರಾಗಿ ವೈಜಯಂತಿ ಕಾಶಿ  ಅವರು ಅನೇಕ ಪ್ರಯೋಗಗಳನ್ನು ವೇದಿಕೆಯ ಮೇಲೆ ಪ್ರದರ್ಶಿಸಿದ್ದಾರೆ. ಅನೇಕ ಪ್ರಸಂಗಗಳನ್ನು ಸಂಯೋಜನೆ ಮಾಡಿದ್ದಾರೆ. ಅವರು ಕೆಂಗೇರಿ ಉಪನಗರದಲ್ಲಿ ತಮ್ಮದೇ ಆದ ನಾಟ್ಯ ಮಂದಿರವನ್ನೂ ನಿರ್ಮಿಸಿದ್ದಾರೆ. ಇವರು ರೂಪಿಸಿದ 'ನೃತ್ಯಜಾತ್ರೆ' ಭಾರತದ ಏಕೈಕ ‘ನೃತ್ಯಮೇಳ’ವೆಂಬ ಪ್ರಸಿದ್ಧಿಗೆ ಪಾತ್ರವಾಗಿದ್ದು ಕಲಾಜಗತ್ತಿನಲ್ಲೊಂದು  ಇತಿಹಾಸವನ್ನೇ ಸೃಷ್ಟಿಸಿದೆ. ಇವರ ಕಾರ್ಯಕ್ರಮಗಳ ಕುರಿತಾಗಿ ಅನೇಕ ವಿಮರ್ಶಾತ್ಮಕ ಲೇಖನಗಳು ರಾಷ್ಟ್ರದ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೂಚಿಪುಡಿ ನೃತ್ಯ ಸಂಪ್ರದಾಯ’, ’ಮಂತ್ರಗಳ ಶಕ್ತಿಮುಂತಾದ ಧ್ವನಿ ದೃಶ್ಯ ಸುರುಳಿಗಳನ್ನು ಸಹಾ ಅವರು  ಹೊರ ತಂದಿದ್ದಾರೆ.

ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರಗಳೇ ಅಲ್ಲದೆ ‘ಕರ್ನಾಟಕ ಕಲಾಶ್ರೀ’,  ಸಿಂಗಾರಮಣಿ’, ’ಆರ್ಯಭಟಮುಂತಾದ ಅನೇಕ ಗೌರವಗಳು ವೈಜಯಂತಿ ಕಾಶಿ ಅವರನ್ನರಸಿ  ಬಂದಿವೆ.  ವೈಜಯಂತಿ ಕಾಶಿ ಅವರು ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಸಹಾ ಸೇವೆ ಸಲ್ಲಿಸಿದ್ದಾರೆ.


ಈ ಮಹಾನ್ ಕಲಾವಿದರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳನ್ನು ಸಲ್ಲಿಸೋಣ. 

ಕಾಮೆಂಟ್‌ಗಳಿಲ್ಲ: