ಶನಿವಾರ, ಮಾರ್ಚ್ 28, 2015

ಶ್ರೀರಾಮಚಂದ್ರ ಎಂಬುವ ದಿವ್ಯಮೌಲ್ಯ

ಶ್ರೀರಾಮಚಂದ್ರ ಎಂಬುವ ದಿವ್ಯಮೌಲ್ಯ

ರಾಮಾಯಣವನ್ನು ವಾಲ್ಮೀಕಿ ಮಹರ್ಷಿಯವರು ರಚಿಸಿದ ಪೂರ್ವಭಾವಿಯಾಗಿ ವಾಲ್ಮೀಕಿ ಮಹರ್ಷಿಗೆ ನಾರದ ಮಹರ್ಷಿಗಳಿಂದ ಒಂದು ಪ್ರೇರಣೆ ಒದಗುವ ಸಂಭಾಷಣೆ ಇದೆ.  ನಾರದ ಮಹರ್ಷಿಗಳನ್ನು ಮುನಿಶ್ರೇಷ್ಠರಾದ ವಾಲ್ಮೀಕಿ ಪ್ರಶ್ನಿಸುತ್ತಾರೆ:

ಈ ಲೋಕದಲ್ಲಿ ಈಗ ಸಕಲ ಸದ್ಗುಣ ಸಂಪನ್ನ, ಪರಾಕ್ರಮಶಾಲಿ, ಧರ್ಮಜ್ಞ, ಸತ್ಯದ ವ್ರತ ಹಿಡಿದವನು, ಮಾಡಿದ ಸಂಕಲ್ಪವನ್ನು ಬಿಡದವನು, ಪರಂಪರೆಯಾಗಿ ಬಂದ ಸದಾಚಾರ ಸಂಪನ್ನ, ಎಲ್ಲ ಭೂತಗಳ ಹಿತದಲ್ಲಿ ನಿರತ, ಸರ್ವಶಾಸ್ತ್ರಗಳನ್ನು ಬಲ್ಲವನು, ಸರ್ವ ಕಾರ್ಯ ದುರಂಧರ, ಪ್ರಿಯದರ್ಶನ, ಧೈರ್ಯಶಾಲಿ, ಕಾಂತಿಮಂತ, ಕೋಪವನ್ನು ಜಯಿಸಿದವನು, ಅಹಂಕಾರ ರಹಿತ, ಅಸೂಯೆ ಇಲ್ಲದವನು, ಯುದ್ಧಕ್ಕೆ ನಿಂತರೆ ದೇವತೆಗಳನ್ನೇ ಗೆಲ್ಲಬಲ್ಲವನು ಇದ್ದಾನೆಯೇ?  - ಈ ಹದಿನಾರು ಗುಣಗಳಿಂದ ಕೂಡಿದಂಥವ ಈಗ ಲೋಕದಲ್ಲಿ ಇದ್ದರೆ ದಯವಿಟ್ಟು ತಿಳಿಸಿ." 

ವಾಲ್ಮೀಕಿಗಳ ಈ ಪ್ರಶ್ನೆಯನ್ನು ಕೇಳಿದ ನಾರದರು  ಸಂತೋಷದಿಂದ ವಾಲ್ಮೀಕಿಗಳಿಗೆಗೆ ನೀವು ಕೇಳುವಂತೆ ಸಕಲ ಗುಣಗಳಿಂದ ಕೂಡಿದವನು  ಇದ್ದಾನೆ.  ಅವನೇ ಇಕ್ಷ್ವಾಕು ವಂಶದಲ್ಲಿ ಅವತರಿಸಿದ ಶ್ರೀರಾಮಎಂದು ಶ್ರೀರಾಮನ ಕಥೆಯನ್ನು ವಿವರಿಸುತ್ತಾರೆ. 

ಮೇಲೆ ಹೇಳಿದ ಒಂದೊಂದು ಗುಣಕ್ಕೂ ಶ್ರೀರಾಮಚಂದ್ರನ ಕಥೆ ತಿಳಿದವರಿಗೆ ಅರ್ಥ ತಿಳಿದಿರುತ್ತದೆ.   ಅದರಲ್ಲಿ ಧರ್ಮಜ್ಞಎಂಬ ಮಾತಿದೆ.  ಜಗತ್ತಿನಲ್ಲಿ ಧರ್ಮವನ್ನು ಸಂಸ್ಥಾಪಿಸಲು ಅವತಾರವೆತ್ತಿದ ಶ್ರೀರಾಮ, ಕೈಕೇಯಿಗೆ ಹೀಗೆ ಹೇಳುತ್ತಾನೆ ನನಗೆ ಹಣ, ರಾಜ್ಯ, ಭೋಗ ಭಾಗ್ಯ ಇವೆಲ್ಲದರ ಚಿಂತೆ ಇಲ್ಲ.  ಧರ್ಮಾಚರಣೆಯೇ ನನ್ನ ವ್ರತ”.  ಹಾಗೆಯೇ  ಶುದ್ಧಚಾರಿತ್ರ್ಯಎಂಬ ಮಾತು ಶ್ರೀರಾಮನ ವಿಚಾರದಲ್ಲಿ ಬರುತ್ತದೆ.   ಅಂದರೆ ಬ್ರಹ್ಮಚರ್ಯ ನಿಷ್ಠೆಯಿಂದ ಕೂಡಿದವ.  ಸರ್ವ ಭೂತಗಳಿಗೂ ಸದಾ ಹಿತವನ್ನೇ ಬಯಸತಕ್ಕವ.  ವಿದ್ವಾಂಸನಾಗಿರುವವ.  ಸರ್ವಶಾಸ್ತ್ರಗಳನ್ನೂ ತಿಳಿದವನು ಮಾತ್ರವಲ್ಲ ಅವೆಲ್ಲವನ್ನೂ ಯಥಾವತ್ತಾಗಿ ಅನುಷ್ಟಾನಕ್ಕೆ ತಂದಿರುವಂಥವ.  ಎಂಥ ಕಷ್ಟಕಾರ್ಯವನ್ನಾದರೂ ಸಾಧಿಸುವಂತಹ ಧೃತಿಯುಳ್ಳವ. 

ಶ್ರೀ ರಾಮಾಯಣ ಕೃತಿಯಲ್ಲಿ  ಆಗಾಗ  ವಾಲ್ಮೀಕಿ ಮಹರ್ಷಿಗಳು 'ರಾಮೋ ವಿಗ್ರಹವಾನ್ ಧರ್ಮಃ' ಎಂಬ  ಮಾತನ್ನು  ಉದ್ಘರಿಸುತ್ತಾರೆ.  ರಾಮ  ಎಂಬುದೇ  ಧರ್ಮದ ಪ್ರತಿರೂಪರಾಮನೇ  ಸತ್ಯ ಪ್ರತಿಕೃತಿ  ಎಂಬ  ಈ  ಅಂಶಕ್ಕೆ  ಅನೇಕ  ನಿದರ್ಶನಗಳನ್ನು ಕಥಾನಕದಲ್ಲಿ  ಕಾಣುತ್ತಾ ಹೋಗುತ್ತೇವೆ.  ಈ ನಿಟ್ಟಿನಲ್ಲಿ  ನನಗೆ  ಹೆಚ್ಚು ಆಪ್ತವಾಗಿ  ಕಾಣುವುದು  ಲಕ್ಷ್ಮಣನು  ಇಂದ್ರಜಿತ್ತುವನ್ನು ವಧಿಸುವ ಸಂದರ್ಭದಲ್ಲಿ.  ಲಕ್ಷ್ಮಣ  ಶ್ರೀರಾಮನಿಗೆ  ತಂದೆ ಮತ್ತು ಕೈಕೇಯಿಯಿಂದ  ಆದ  ಅನ್ಯಾಯಕ್ಕೆ  ನಿರುಂತರ  ಅಸಹನೆ ಹೊಂದಿರುತ್ತಾನೆ.  ಶ್ರೀರಾಮ  ಕಾಡಿನಲ್ಲಿ  ಪತ್ನಿಯನ್ನು  ಕಳೆದುಕೊಂಡು ಅನೇಕ  ಕಷ್ಟಗಳಿಗೆ  ಸಿಲುಕಿ  ನೊಂದಿರುವಾಗ  ಧರ್ಮಕ್ಕೆ  ಬೆಲೆ ಆದರೂ ಏನು ಎಂಬ ಕುರಿತು  ಅಣ್ಣನೊಡನೆ  ಆಗಾಗ  ವಾದಕ್ಕೂ ಇಳಿದಿರುತ್ತಾನೆ.  ಇಂದ್ರಜಿತ್ತುವನ್ನು  ತಾನು ವಧಿಸಲು ನಡೆದ  ಪ್ರಯತ್ನಗಳೆಲ್ಲಾ  ಫಲ ನೀಡದಿರುವಾಗ  ಕಡೆಗೆ  ತಾನು ಐಂದ್ರಾಸ್ತ್ರವನ್ನು ಪ್ರಯೋಗಿಸುವಾಗ  ಹೀಗೆ  ಹೇಳಿಕೊಳ್ಳುತ್ತಾನೆ: "ರಾಮನು ಧರ್ಮಾತ್ಮ, ಸತ್ಯಸಂಧ, ಪೌರುಷದಲ್ಲಿ ಅಸಮ ಎಂಬುದು ಸತ್ಯವಾಗುವುದಾದರೆ ಈ ಅಸ್ತ್ರ  ರಾವಣನ ಮಗನಾದ ಇಂದ್ರಜಿತ್ತನ್ನು  ವಧಿಸಲಿ".  ಈ ಮಾತು  ಇಂದ್ರಜಿತ್ತನ್ನು ವಧಿಸುವ  ಒಂದು  ಶಕ್ತಿಯಾಗುವುದರ ಜೊತೆಗೆ ರಾಮನ ಚಾರಿತ್ರ್ಯವನ್ನೇ  ಪ್ರತಿಬಿಂಬಿಸುತ್ತದೆ. 

ಶ್ರೀರಾಮನ  ಆಧ್ಯಾತ್ಮಿಕ ಶಕ್ತಿಯನ್ನು ರಾಮಾಯಣದಲ್ಲಿ  ನಾನು ಆಪ್ತವಾಗಿ  ಕಾಣುವ ಮತ್ತೊಂದು ಘಟನೆ ಎಂದರೆ ರಾಮ ಏಕಾಕಿಯಾಗಿ ರಾವಣನ ಮೂಲಬಲವನ್ನು ನಿಗ್ರಹಿಸುವ ಪ್ರಕರಣ.  ಶ್ರೀರಾಮ ಯುದ್ಧ ಮಾಡುವಾಗ  ಅವನ  ಸಂಚಲನ ಹೇಗಿತ್ತೆಂದರೆ ಒಬ್ಬ ರಾಕ್ಷಸನಿಗೆ  ತನ್ನ  ಪಕ್ಕದಲ್ಲಿದ್ದ  ಮತ್ತೊಬ್ಬ ರಾಕ್ಷಸನೇ ರಾಮನಾಗಿ - ಯಮನಾಗಿ   ಕಾಣುತ್ತಿದ್ದನಂತೆ.   ಹೀಗೆ  ಅಲ್ಲಿ  ರಾಮ! ಇಲ್ಲಿ ರಾಮ! ಎಲ್ಲೆಲ್ಲೂ  ರಾಮ ಎಂಬ  ಭಾವ ಅಲ್ಲಿ ಸೃಷ್ಟಿಯಾಗಿ ಹೋಗಿ ಅವರು ತಮ್ಮ ಬಳಿ ಇರುವ ಪ್ರತಿಯೋರ್ವರಲ್ಲೂ ಶ್ರೀರಾಮನನ್ನು ಕಾಣುತ್ತಾ   ಒಬ್ಬರಿಗೊಬ್ಬರು ತಾವೇ ಹೊಡೆದಾಡಿಕೊಂಡು ಹತರಾಗಿ ಹೋಗುವ  ಭ್ರಮಾತ್ಮಕ  ಸ್ಥಿತಿ ಅಲ್ಲಿ  ಕಾಣುತ್ತದೆ.  ಮತ್ತೊಂದು  ನಿಟ್ಟಿನಲ್ಲಿ ನೋಡಿದರೆ ಎಲ್ಲೆಲ್ಲಿ ನೋಡಿದರೂ ಅಲ್ಲಿ ಶ್ರೀರಾಮ ಎಂಬುವ ಸೊಲ್ಲೇ ವೇದಾಂತದ ಗಹನ ತತ್ವವನ್ನು ಹೊರಗೆಡಹುತ್ತಿದೆ.  "ಸರ್ವಂ ಬ್ರಹ್ಮಮಯಂ ಜಗತ್" ಎಂಬ ಶ್ರುತಿ ವಾಕ್ಯ  ಇಲ್ಲಿ  ಪ್ರಮಾಣಿಕರಣಗೊಳ್ಳುತ್ತದೆ.  ಒಂದು ಯುದ್ಧದಲ್ಲಿ  ಒಬ್ಬ ಹೇಗೆ ಅಷ್ಟೊಂದು  ಜನರನ್ನು ಬಗ್ಗು ಬಡಿಯಲು ಸಾಧ್ಯ  ಎಂಬುದು ನಮ್ಮ ಸಾಮಾನ್ಯ ಬುದ್ಧಿ ಗ್ರಹಿಸದಾದರೂ ಈ ಲೋಕದಲ್ಲಿ  ಸಾಮಾನ್ಯರಾದ ಅನೇಕರು  ತಾವೇ  ಒಂದು ದೊಡ್ಡ ಆಧ್ಯಾತ್ಮಿಕ  ಇಲ್ಲವೇ  ಸಾತ್ವಿಕ ಶಕ್ತಿಯಾಗಿ ತಾವಿರುವ  ಲೋಕದಲ್ಲೆಲ್ಲಾ  ವ್ಯಾಪಿಸಿ ತಮ್ಮ ಸುತ್ತ ಹರಡಿರುವ ಅಶಾಂತ ವಾತಾವರಣವನ್ನು ಹೋಗಲಾಡಿಸಿರುವ  ಘಟನೆಗಳನ್ನು ಚರಿತ್ರೆಯ ತುಂಬಾ ಕಾಣಬಹುದಾಗಿದೆ ಎಂಬುದಂತೂ  ಸತ್ಯ..     

ಹೀಗೆ ಶ್ರೀರಾಮಂಚಂದ್ರನ ಕಥೆಯನ್ನುನೀವು ಕೇಳುತ್ತಾ, ಓದುತ್ತಾ ಹೋದಲ್ಲಿ ಅಲ್ಲಿ ಕಾಣುವುದು ಗುಣಗಳ ಸೊಬಗು.  ಇದನ್ನು ನೋಡುವಾಗಲೆಲ್ಲಾ ಸೂಕ್ಷ್ಮವಾಗಿ ಅನಿಸುತ್ತದೆ.  ಇಗ್ಲಿಷಿನಲ್ಲಿ ‘God’ ಎಂಬುದು ಏನು ಏನು  ‘Good’ ಎಂಬುದಿದೆಯೋ ಅದರ ಸಂಗ್ರಹ ಸಾರಾಂಶವಾಗಿರಬಹುದಲ್ಲವೇ!  ಅಂತ. 

ಸುಮಾರು 50006000 ವರ್ಷಗಳಿಗೂ ಹಿಂದೆ ನಡೆದಿದ್ದೆಂದು ಊಹಿಸಲಾಗಿರುವ ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ಎಂಬ ವ್ಯಕ್ತಿ ಅದೆಷ್ಟೆಷ್ಟೋ ಹಿಂದಿನ ಸಹಸ್ರವರ್ಷಗಳ ಹಿಂದಿನಿಂದ  ನಡೆದುಕೊಂಡು ಬಂದ ಶ್ರೇಷ್ಠ ಪರಂಪರೆಯನ್ನು ಈ ರೀತಿ ಮುಂದುವರೆಸಿದ ಎಂಬುದು ಭಾರತೀಯರಾದ ನಾವು ಅತ್ಯಂತ ಹೆಮ್ಮೆಪಟ್ಟುಕೊಳ್ಳಬೇಕಾದ ಸಂಗತಿ.  ಇದು ಚರಿತ್ರೆಯಲ್ಲಿ ನಡೆದೇ ಇಲ್ಲ ಎಂದು ಯಾರಾದರೂ ಭಾವಿಸಿದ್ದಾದರೂ ಸರಿಯೇ.  ರಾಮಾಯಣ ಎಂಬುದು ಅನಾದಿ ಕಾಲದಿಂದಲೂ ಪ್ರಚಲಿತವಿರುವ ಒಂದು ಕಥೆ ಎಂಬುದನ್ನು ನಂಬಿದರೂ ಸಾಕು.  ಭಾರತೀಯರಲ್ಲಿ ಇಂತಹ ಒಂದು ಶ್ರೇಷ್ಠ ಕಲ್ಪನೆ ಇತ್ತು ಎಂಬುವ ವಿಷಯ ಕೂಡಾ ನಮ್ಮ ಹಿರಿಮೆಯೇ ಸರಿ.

ಶ್ರೀರಾಮಚಂದ್ರ ದೇವರಾದ ಮಹಾವಿಷ್ಣುವಿನ ಅವತಾರ. ಭೂಮಿಯ ಮೇಲೆ ರಾಕ್ಷಸೀಕೃತ್ಯ ಎಸಗುತ್ತಿದ್ದವರನ್ನು ನಿಗ್ರಹಿಸಲಿಕ್ಕೆ ಈ ಭೂಮಿಯ ಮೇಲೆ ಅವತರಿಸಿದ ಎಂದಾದರೂ ನಂಬಬಹುದು, ಇಲ್ಲವೇ ಇಲ್ಲಿ ಜನಿಸಿದ ಒಬ್ಬ ಮಹನೀಯ ತನ್ನಲ್ಲಿದ್ದ ಶ್ರೇಷ್ಠಗುಣ ಮಾತ್ರದಿಂದ ರೂಢಿಸಿಕೊಂಡ ಅಧ್ಯಾತ್ಮ ಶಕ್ತಿಯ ಮೂಲಕ ಈ ಲೋಕಕ್ಕೆ ಒದಗಿದ ಕಂಟಕವನ್ನು ಸಮರ್ಥವಾಗಿ ಪರಿಹರಿಸಿದ ಎಂಬ ನಿಟ್ಟಿನಲ್ಲಿ ತೆಗೆದುಕೊಂಡರೂ ಆತ ನಮಗೆ ದೈವಶಕ್ತಿಯ ಪ್ರತೀಕವೆ.  ಏಕೆಂದರೆ ಭಾರತೀಯರಿಗೆ ದೇವರೆಂಬುದು ಶ್ರೇಷ್ಠತೆಯ ಸಂಖೇತ.  ಶ್ರೀರಾಮಚಂದ್ರ ಪ್ರಭುವನ್ನು ಆದರ್ಶವಾಗಿ ಇರಿಸಿಕೊಂಡು ಬಾಳಿದ ಋಷಿ ಮುನಿಗಳು, ದಾಸಶ್ರೇಷ್ಠರು, ಸಾಧು ಸಂತರು ಮತ್ತು ಅವರ ಚರಿತ್ರೆ, ಸಾಹಿತ್ಯ ಎಲ್ಲಾ ನಮ್ಮೊಡನಿದ್ದು ಅವರೇ ನಮಗೆ ಅಷ್ಟೊಂದು ಪೂಜ್ಯರಾಗಿರುವಾಗ ಅವರ ಪೂಜ್ಯಭಾವವಾದ ಶ್ರೀರಾಮಚಂದ್ರ ಎಂಬುವ ಮೂಲಭಾವ ನಮಗಿನ್ನೆಷ್ಟು ಪೂಜ್ಯವಾಗಿರಬೇಡ.  ನಮ್ಮ ದೇಶದ ಆಧ್ಯಾತ್ಮ ಕೀರ್ತಿಯನ್ನು ವಿಶ್ವದೆಲ್ಲೆಡೆ ಬೆಳಗಿಸಿದ ಸ್ವಾಮೀ ವಿವೇಕಾನಂದರು ಹೇಳುತ್ತಿದ್ದ ಆದರ್ಶ  ಎಂಬುದು 'ರಾಮ ಮತ್ತು  ಸೀತೆ'ಯರ ಕುರಿತಾದದ್ದುಮತ್ತು ನಮಗೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹತ್ವದ ಪಾತ್ರವಹಿಸಿದ ರಾಷ್ಟ್ರಪಿತ ಗಾಂಧೀಜಿ ಅವರಿಗೆ ಎಲ್ಲದಕ್ಕೂ ಶ್ರೀರಾಮ ಎಂಬುವ ಆದರ್ಶವೇ ಕೇಂದ್ರವಾಗಿತ್ತು.  ಈ ಸತ್ಯ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಇವು   ನಮ್ಮ ನಂಬುಗೆಗಳು, ಅದರ ಆಧಾರ, ಅದರ ಮೌಲ್ಯ ಮತ್ತು ಅದಕ್ಕಿರುವ ಆಳವನ್ನೂ ಮತ್ತು  ಅದರಲ್ಲಿರುವ ಪೌರುಷೇಯವನ್ನು ಇನ್ನಷ್ಟು ಆಪ್ತವಾಗಿಸುತ್ತದೆ.

ಶ್ರೀರಾಮಚಂದ್ರ ಪ್ರಭುವಿನ ಬಾಳೇ ಒಂದು ಧರ್ಮ.  ರಾಮಾಯಣದಲ್ಲಿ ಸ್ವಯಂ ಶ್ರೀರಾಮಚಂದ್ರ ಪ್ರಭು ತನಗೆ  ದೇವರೆಂಬುವ ಗುಣವಾಚಕವನ್ನು ಸ್ವಯಂ ಎಲ್ಲಿಯೂ  ಪ್ರಯೋಗಿಸಿಕೊಳ್ಳುವುದೇ ಇಲ್ಲ.  ಹಾಗೆ ನೋಡಿದರೆ, ನಮ್ಮ ವೇದಗಳಲ್ಲಿರುವ ದೇವತೆಗಳೆಲ್ಲ ರಾಮಾಯಣದಲ್ಲಿ ಸ್ವಯಂ ಈ ಪ್ರಭುವನ್ನು ನಮಸ್ಕರಿಸುವುದನ್ನು ಕಾಣುತ್ತೇವೆ.  ಶ್ರೀರಾಮಚಂದ್ರ ಪ್ರಭು ಮಾತ್ರ ಎಲ್ಲ ಕಡೆ ಹೇಳುವುದು ಇಷ್ಟೇ ಆತ್ಮಾನಂ ಮಾನುಷಂಮನ್ಯೇ ರಾಮಂ ದಶರಥಾತ್ಮಜಂ”  ನಾನು ದಶರಥನ ಮಗ ರಾಮ.    ಶ್ರೀರಾಮಚಂದ್ರ ಸೀತೆಯರು, ಭರತ, ಲಕ್ಷ್ಮಣ ಶತ್ರುಘ್ನರು, ಹನುಮಾನ್ ಮತ್ತಿತರ ಪಾತ್ರಗಳು ತೋರುವ ಹಿರಿಮೆ ಬದುಕಿನಲ್ಲಿ ನಡೆದುಕೊಳ್ಳುವ ಶ್ರೇಷ್ಟ ರೀತಿಯೇ ಬಾಳಿಗೆ ದಿವ್ಯಬೆಳಕಾಗುತ್ತದೆ.  

ನಮ್ಮ ಚಿಕ್ಕಂದಿನ ದಿನಗಳಲ್ಲಿ ಶ್ರೀರಾಮಚಂದ್ರನ ದೇವಸ್ಥಾನಗಳು ಬಹಳ ಇದ್ದವು.  ರಾಮಮಂದಿರ ಎಂಬ ಪ್ರವಚನ ಮಂದಿರಗಳು, ಸಂಗೀತ ಸಾಂಸ್ಕೃತಿಕ ಕೇಂದ್ರಗಳು ಹೆಚ್ಚಿದ್ದವು.   ನಾವು ಶಾಲೆಗಳಿಗೆ ಪರೀಕ್ಷೆಗಳಿಗೆ ಶ್ರದ್ಧೆಯಿಂದ ಓದದಿದ್ದರೂ ರಾಮಾಯಣದ ಕಥೆಯನ್ನು ಅಷ್ಟೊಂದು ಬಾರಿ ಓದಿದರೂ ಅದೇ ಮೊದಲಸಲವೇನೋ ಎಂಬಂತೆ ಉತ್ಸಾಹದಿಂದ, ಪ್ರೀತಿಯಿಂದ  ವರ್ಷಾವರ್ಷ ಓದುತ್ತಿದ್ದೆವು.  ಆಗ ಅದರ ಒಳಹುಗಳು ಇಷ್ಟರಮಟ್ಟಿಗೆ ಇದ್ದಿರಲಾರದು.  ಆದರೂ ಈ ಆದರ್ಶ ಕಥೆಗಳು ನಮ್ಮ ಬದುಕಿಗೆ ಒಂದು ಅವ್ಯಕ್ತವಾದ ಕಿಂಚಿತ್ತು ಶಿಸ್ತನ್ನು ಮೂಡಿಸಿತ್ತು ಎಂಬುದರಲ್ಲಂತೂ ಭಿನ್ನ ಭಾವನೆಗಳಿಲ್ಲ.  

ಇಂದು ಪ್ರಪಂಚದೆಲ್ಲೆಡೆ ನಾವು ವಿಶಿಷ್ಟ ಸೌಧಗಳಲ್ಲಿ, ಸ್ವರ್ಣ ಮಂದಿರಗಳಲ್ಲಿ ವಿವಿಧ ದೇವರುಗಳನ್ನು ಕಡೆದಿದ್ದೇವೆ.   ದೇವರ ಕಥೆಗಳ ಕೆಲವೊಂದು ಭಾಗಗಳನ್ನು ರೋಮಾಂಟಿಸಿಸಂ ಎಂಬ ಸೀಮಿತ ಪರಿಧಿಯಲ್ಲೋ ಇಲ್ಲವೇ ಕಮರ್ಷಿಯಲ್ ಕಲಾಭಾಗವಾಗಿಯೋ ನೋಡುವ ಒಂದು ಪರಿಪಾಠ ಕೂಡಾ ಇಂದು ಹೆಚ್ಚುತಿರುವುದನ್ನು ಕಾಣುತ್ತಿದ್ದೇವೆ.  ನಮ್ಮ ಬದುಕಿನಲ್ಲಿ ಹೊಸ ಹೊಸ ದೇವರುಗಳ ಆವಿಷ್ಕಾರವಾಗಿದೆ.  ಐಶ್ವರ್ಯ ಬೇಕೆಂದೇ ವ್ರತಗಳನ್ನು ಮಾಡುವ ಹಲವು ವಿಶೇಷ ಪರಿಪಾಠಗಳು ಕೂಡಾ ನಮ್ಮ ಜನರಲ್ಲಿ ಹಬ್ಬಿವೆ.  ಹಲವು ರೀತಿಯ ಗುರುಗಳು, ಅವರ ಬೋಧನೆಗಳು ಮತ್ತು ಅವರಲ್ಲಿನ ಜನರ ಭಕ್ತಿಗಳು ಮುಂತಾದವು ಎಲ್ಲ ದೈವ ಭಕ್ತಿಗಳನ್ನೂ ಮೀರಿಸಿವೆ.  ಇದರಲ್ಲಿ ಪ್ರಶ್ನೆ ಇರುವುದು ಇದು ಸರಿಯೇ ಅಥವಾ  ತಪ್ಪೇ ಎಂಬುವ ನಿರ್ಣಯ ಕೊಡುವುದರಲ್ಲಿ ಅಲ್ಲ.   ನಮ್ಮ ಭಕ್ತಿ ಭಾವಗಳಲ್ಲಿನ ಪ್ರದರ್ಶನಗಳ ಆಚೆಗೆ, ನಮ್ಮ ಬದುಕಿನಲ್ಲಿ ನಾವು ದೇವರೆಂದು ಕೊಂಡಾಡುವ ಮೂಲನೀತಿ ಮೌಲ್ಯಗಳಿಗೆ ನಾವೆಷ್ಟು ಬದ್ಧರಾಗಿದ್ದೇವೆ ಎಂಬುದನ್ನು ನಮ್ಮಲ್ಲಿ ನಾವೇ ವಿವೇಚಿಸಿಕೊಳ್ಳುವ ಅವಶ್ಯಕತೆ ಇದೆ ಎನಿಸುತ್ತದೆ.  

ಹೀಗೆ ನಮ್ಮನ್ನು ನಾವು ವಿವೇಚನೆಗೆ ಒಳಪಡಿಸಿಕೊಂಡಾಗ  ಮಾತ್ರ ನಾವೆಲ್ಲೋ ಕಳೆದುಹೋಗಿದ್ದೇವೆ ನಮ್ಮನ್ನು ಹುಡುಕಿಕೊಳ್ಳೋಣ ಎಂಬ ಶ್ರದ್ಧೆಯಿಂದ, ಇಂದು ಪ್ರಚಲಿತವಿರುವ   ಹಲವು ಪ್ರದರ್ಶನಾ ರೂಪದ ವೈಪರೀತ್ಯ ಪರಿಗಳು, ವ್ಯಸನಗಳು, ಚಟಗಳು, ಮದ್ದುಗಳೆಂಬ ತೀವ್ರತೆಗಳು, ಮನೋವೈದ್ಯರೆಂಬ ಪರಿಹಾರಗಳುಹಲವು ಸ್ವಘೋಷಿತ ದೇವರುಗಳೆಂಬ ಗೋಮುಖ ವ್ಯಾಘ್ರರು - ಮುಂತಾದವುಗಳಿಂದ ನಾವು ಸಮರ್ಥವಾಗಿ ಈಚೆ ಬಂದು ನಮ್ಮ ಬದುಕಿಗೆ ಬೇಕಿರುವ ಕೇಂದ್ರವನ್ನು ನಾವೇ ಸೃಷ್ಟಿಸಿಕೊಂಡು ಅಥವಾ ಅದು ಯಾರಲ್ಲಿ ಸರಿಯಾಗಿ ಇದೆಯೋ ಅದನ್ನು ಕಂಡುಕೊಂಡು ಅವರನ್ನು ಗುರುವಾಗಿಸಿಕೊಂಡು ನಮ್ಮನ್ನು ಸಮರ್ಥವಾಗಿ ಬಾಳಿಸಿಕಕೊಳ್ಳಲು ಸಾಧ್ಯವಾಗುತ್ತದೆ. 

ಶ್ರೀರಾಮಪ್ರಭುವಿನ ಶ್ರೇಷ್ಠ ಗುಣಗಳು ನಮ್ಮ ಬದುಕಿನಲ್ಲಿ ಅಳವಡಿತಗೊಂಡು ನಮ್ಮ ಬದುಕು ಭವ್ಯವಾಗಲಿ, ನಾವು ಕಳೆದುಕೊಂಡಿರುವ ರಾಮರಾಜ್ಯ ಪುನಃ ನಮ್ಮದಾಗಲಿ ಎಂದು ಆಶಿಸುತ್ತಾ ಆ ಮಹಾಪ್ರಭುವೆಂಬ ಸರ್ವಗುಣ ಸಂಪನ್ನನಾದ ಶ್ರೀರಾಮಚಂದ್ರಪ್ರಭುವಿಗೆ, ಸೀತಾ ಮಾತೆಗೆ, ಭ್ರಾತೃ ಲಕ್ಷ್ಮಣ, ಭರತ, ಶತ್ರುಘ್ನರಿಗೆ, ಶ್ರೇಷ್ಠ ಭಾಗವತ ಹನುಮಾನರಿಗೆ, ಬಂಧು ಸುಗ್ರೀವ, ವಿಭೀಷಣ, ಗುಹಾ ಮುಂತಾದವರಿಗೆ ಕೌಸಲ್ಯೆ, ಸುಮಿತ್ರೆ, ಊರ್ಮಿಳೆಯರಂತಹ ಶ್ರೇಷ್ಠ ಮಾತೆಯರಿಗೆ ಹಾಗೂ ಅಲ್ಲಿ ಇಂಚಿಂಚೂ ತುಂಬಿರುವ ಆದರ್ಶಗಳಿಗೆ ಇವೆಲ್ಲವುಗಳನ್ನೂ ಲೋಕಕ್ಕೆ ಉಣಿಸಿರುವ ಶ್ರೇಷ್ಠ ಋಷಿ ಪರಂಪರೆಗೆ ಮತ್ತು ಅದರ ವಕ್ತಾರರಾದ ವಾಲ್ಮೀಕಿ ಮಹರ್ಷಿಗಳಿಗೆ ಹಾಗೂ ಅವೆಲ್ಲವನ್ನೂ ನಮ್ಮೊಡನೆ ನಿರಂತರವಾಗಿರಿಸಿರುವ ಸಹಸ್ರಾರು ವರ್ಷಗಳ ದೇಶದ ಈ ಶ್ರೇಷ್ಠ ಜನಪದಕ್ಕೆ  ಹಾಗೂ ಈ ವಿಶ್ವವೆಂಬ ಸುಂದರ ಸೃಷ್ಟಿಯನ್ನು ಮೂಡಿಸಿರುವ ಶ್ರೇಷ್ಠ ಶಕ್ತಿಗೆ  ಸಾಷ್ಟಾಂಗ ಭಕ್ತಿಪ್ರಣಾಮಗಳು.

ಶ್ರೀರಾಮಚಂದ್ರ ಪ್ರಭು ನಮಗೆಲ್ಲರಿಗೂ ಆಶೀರ್ವಾದ ನೀಡಿ ಮಂಗಳಗಳನ್ನುಕರುಣಿಸಲಿ.


Tag: Sriramachandra, Sriram

ಕಾಮೆಂಟ್‌ಗಳಿಲ್ಲ: