ಸೋಮವಾರ, ಜೂನ್ 22, 2015

ಅಶ್ವಿನಿ ಸತೀಶ್

ಅಶ್ವಿನಿ ಸತೀಶ್

ಹೊರದೇಶಗಳಲ್ಲಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಬೆಳಗುತ್ತಿರುವವರಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಕೇಳಿಬರುತ್ತಿರುವ ಹೆಸರು ಸಂಗೀತ ವಿದುಷಿ ಅಶ್ವಿನಿ ಸತೀಶ್. ಹಲವು ವರ್ಷಗಳ ಹಿಂದೆ ದುಬೈನಲ್ಲಿ ನೆಲೆಸಿದ್ದಾಗ ಅಲ್ಲಿ ತಮ್ಮ ನೆಚ್ಚಿನ ಸಂಗೀತ ಕ್ಷೇತ್ರದ ಕಂಪನ್ನು ಹರಡಿದ ಅಶ್ವಿನಿ ಅವರು, 2012ರ ವರ್ಷದಿಂದೀಚೆಗೆ ಸಿಂಗಾಪುರದಲ್ಲಿದಲ್ಲಿ ನೆಲೆಸಿದ್ದು ಅಲ್ಲಿ ತಮ್ಮ ಕ್ಷೇತ್ರವನ್ನು ಹಲವು ಪಟ್ಟು ವಿಸ್ತರಿಸಿದ್ದಾರೆ.  ಮೂಲತಃ ಶಿವಮೊಗ್ಗದವರಾದ ಅಶ್ವಿನಿ ಸತೀಶ್ ಅವರು ಜನಿಸಿದ ದಿನ ಜೂನ್ 22.

ಆಕಾಶವಾಣಿಯಲ್ಲಿ  ಕರ್ನಾಟಕ ಶಾಸ್ತ್ರೀಯ ಸಂಗೀತ, ಲಘು ಶಾಸ್ತ್ರೀಯ ಸಂಗೀತ ಹಾಗೂ ಲಘು ಸಂಗೀತ ಕ್ಷೇತ್ರಗಳಲ್ಲಿ ಉನ್ನತ ಶ್ರೇಣಿಯ ಕಲಾವಿದರಾದ  ಅಶ್ವಿನಿ ಸತೀಶ್ ಅವರು ಮಹಾನ್ ಸಂಗೀತ ಕಲಾವಿದೆ ಹಾಗೂ ಸಂಗೀತ ಗುರು  ಡಾ.ಟಿ. ಎಸ್. ಸತ್ಯವತಿ ಅವರ ಹೆಸರುವಾಸಿ ಶಿಷ್ಯರಲ್ಲೊಬ್ಬರು.    ಆಕಾಶವಾಣಿ ಹಾಗೂ ಕಿರುತೆರೆಯ ಹಲವಾರು  ಚಾನೆಲ್‌ಗಳಲ್ಲಿ ಹಾಗೂ ವಿವಿಧ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಹೆಸರಾದ  ಅಶ್ವಿನಿ ಸತೀಶ್ ಅವರು ಮುಂದೆ  ಭಾರತದ ವಿವಿದೆಡೆಗಳಲ್ಲಷ್ಟೇ ಅಲ್ಲದೆ  ದುಬೈ, ಬರ್ಮಿಂಗ್‌ಹ್ಯಾಮ್, ಸಿಂಗಪುರ, ಮೆಲ್ಬೋರ್ನ್  ಮುಂತಾದ ಕಡೆಗಳಲ್ಲೆಲ್ಲಾ  ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನೀಡುವುದರ ಜೊತೆಗೆ ತಮ್ಮದೇ ಹಲವಾರು ಸಂಗೀತ ಸುರುಳಿಗಳನ್ನೂ ಬಿಡುಗಡೆ ಮಾಡಿದ್ದಾರೆ. ಸಿಂಗಪುರದ  ನಿವಾಸಿಯಾಗಿದ್ದರೂ  ಅಶ್ವಿನಿ  ಸತೀಶರು  ತಮ್ಮ ಸಂಗೀತಾಭಿಮಾನಿ ಬಳಗಕ್ಕೋಸ್ಕರ  ಆಗ್ಗಿಂದಾಗ್ಗೆ ಭಾರತದ  ಹಲವೆಡೆಗಳಲ್ಲಿ  ತಮ್ಮ  ಸಂಗೀತವನ್ನು  ಉಣಬಡಿಸುತ್ತಾ  ಬಂದಿದ್ದು,  ಇತ್ತೀಚೆಗೆ  ಅವರಿಗೆ  ಪ್ರತಿಷ್ಟಿತ  ‘ಅನನ್ಯ’  ಸಂಗೀತ  ಯುವ ಪುರಸ್ಕಾರ  ಸಂದಿದೆ.   ತಮ್ಮ  ವೈವಿಧ್ಯಮಯ  ಸಂಗೀತ  ಸಾಧನಾ  ಪ್ರಯೋಗಗಳಲ್ಲಿ  ನಿರಂತರ  ಕ್ರಿಯಾಶೀಲರಾದ  ಅಶ್ವಿನಿ  ಸತೀಶ್  ಅವರು  ಉಸ್ತಾದ್  ಫಯಾಜ್  ಖಾನ್  ಅವರ  ಹಿಂದೂಸ್ಥಾನಿ  ಸಂಗೀತದೊಂದಿಗೆ  ತಮ್ಮ  ಕರ್ನಾಟಕ  ಸಂಗೀತದ  ಜುಗಲ್ಬಂದಿ  ಕಾರ್ಯಕ್ರಮವನ್ನು  ಇತ್ತೀಚಿಗೆ ನಡೆಸಿಕೊಟ್ಟಿದ್ದಾರೆ.  ಸಂಗೀತದ  ಕುರಿತಾಗಿ  ಹಲವಾರು  ಕಾರ್ಯಾಗಾರಗಳನ್ನೂ  ಆಯೋಜಿಸುತ್ತಾ   ಬಂದಿರುವ  ಅಶ್ವಿನಿ ಸತೀಶ್  ಅವರು  ಸದ್ಯದಲ್ಲೇ  ಅವರು  ಸಂಗೀತಲೋಕದ  ಶ್ರೇಷ್ಠ  ವಾಗ್ಗೇಯಕಾರರುಗಳಾದ  ಮೈಸೂರು  ವಾಸುದೇವಾಚಾರ್ಯ  ಹಾಗೂ  ಮುತ್ತಯ್ಯ  ಭಾಗವತರ್  ಅವರ  ಕೃತಿಗಳ    ಕುರಿತಾದ  ಸಂಗೀತ  ಕಾರ್ಯಗಾರವನ್ನು  ಹಮ್ಮಿಕೊಂಡಿದ್ದಾರೆ. 


ಭಾರತದಲ್ಲೇ ಇರಲಿ, ವಿದೇಶದಲ್ಲೇ ಇರಲಿ ತಾವು ನೆಲೆ ನಿಂತಲ್ಲೆಲ್ಲಾ ಸಮಾನಾಸಕ್ತರೊಡಗೂಡಿ ಸಂಗೀತವನ್ನು ಆಸಕ್ತರಿಗೆ ಕಲಿಸುವುದರ ಜೊತೆಗೆ ದಾಸ ಸಾಹಿತ್ಯ ಸಂಗೀತೋತ್ಸವಗಳ ಆಯೋಜನೆಸಂಗೀತ ಶಿಬಿರಗಳ ಆಯೋಜನೆ, ಪ್ರಸಿದ್ಧ ಕಲಾವಿದರ ಸಂಗೀತ ಕಾರ್ಯಕ್ರಮಗಳ ಆಯೋಜನೆ ಮುಂತಾದವುಗಳಿಂದ ಸಂಗೀತದ ಕಂಪನ್ನು ನಿರಂತರವಾಗಿ ಪಸರಿಸುತ್ತಿರುವ ವಿದುಷಿ ಅಶ್ವಿನಿ ಸತೀಶ್ ಅವರ ಕಾಯಕ ಶ್ಲಾಘನೀಯವಾಗಿದೆ.  ಅವರ ಸಂಗೀತದ ಕಂಪು ನಿರಂತರವಾಗಿ ವಿಸ್ತರಿಸುತ್ತಿರಲಿ ಎಂದು ಹಾರೈಸುತ್ತಾ ಜನ್ಮದಿನದ ಶುಭ ಹಾರೈಕೆಗಳನ್ನು ಸಲ್ಲಿಸೋಣ.

Tag: Ashwini Satish

ಕಾಮೆಂಟ್‌ಗಳಿಲ್ಲ: