ಬುಧವಾರ, ನವೆಂಬರ್ 18, 2015

ಮಂಜುಳಾ ಬಬಲಾದಿ


ನನ್ನ ಸೈಕ್ಲಿಂಗ್ ಪ್ರೇರಣೆ ಮತ್ತು ಆತ್ಮೀಯ ಗೆಳತಿ ಮಂಜುಳಾ ಬಬಲಾದಿ

ನಮ್ಮ ಬಾಲ್ಯದ ದಿನಗಳಲ್ಲಿ ಸೈಕಲ್ ಎಂಬುದು ನಮಗತ್ಯಂತ ಆಕರ್ಷಣೆಯ ವಿಚಾರ. ಈ ಎರಡು ಚಕ್ರಗಳ ಮೇಲೆ ಸಮತೋಲನದಲ್ಲಿ ಮಿನುಗಲು ನಾವು ಅರ್ಧ ಪೆಡಲ್ ತುಳಿತದ ಅಸಮತೋಲನದ ವಿಧಿಯಿಂದ ಮೊದಲ್ಗೊಂಡು ಅಂದಿನ ಮಹಾರಾಜರು ಜಂಭೂಸವಾರಿಯಲ್ಲಿ ಕುಳಿತ ಠೀವಿಯಲ್ಲಿ ಹೆಮ್ಮೆಯಿಂದ ಸೈಕಲ್ ಮೇಗಡೆಯಲ್ಲಿ ಸೀಟಿನಲ್ಲಿ ಅಲಂಕೃತಗೊಂಡು ತೇಲಿ ತೇಲಿ ತೇಲಿ ಹೋಗುತ್ತಿದ್ದಂತೆ ಕಂಡ ಕನಸು, ಅದು ಸಾಕಾರಗೊಂಡ ನನಸು ಇವೆಲ್ಲಾ ಮನದಲ್ಲಿ ಮೂಡಿಸುವ ಚಿತ್ರಣ ಸರಿಸಾಟಿಯಿಲ್ಲದಂತೆ ಹೃದಯ ತುಂಬಿಕೊಡುವಂತದ್ದು. ನಾವುಗಳು ಇಂದು ಐಷಾರಾಮಿ ಸ್ಕೂಟರ್, ಬೈಕ್, ಕಾರು, ಬಸ್ಸು, ವಿಮಾನಗಳ ಯುಗದಲ್ಲಿ ನಮ್ಮ ಜೀವನವನ್ನು ಸಾಕಷ್ಟು ತೇಯುತ್ತಿದ್ದೇವೆ. ಆದರೆ ಇವ್ಯಾವುವೂ ಅಂದು ನಾವನುಭವಿಸಿದ ಸೈಕಲ್ ಸಂತೃಪ್ತಿಯ ಸಮೀಪಕ್ಕೂ ನಮ್ಮನ್ನು ಕೊಂಡೊಯ್ಯುತ್ತಿಲ್ಲ. ಒಂದು ರೀತಿಯಲ್ಲಿ ಇಂದು ಅವೆಲ್ಲಾ ನಮ್ಮ ಬಾಳನ್ನುಸುರುಗಟ್ಟಿಸುತ್ತಿವೆ ಎಂದರೂ ತಪ್ಪಿಲ್ಲ! ಆದರೂ ನಾವು ಸೈಕಲ್ ಯುಗಕ್ಕೆ ಮರಳಿ ಬರುವತ್ತ ಮನಸ್ಸು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮನಸ್ಸು ಚಡಪಡಿಸುತ್ತಿತ್ತು. ಇದಕ್ಕೇನಾದರೂ ದಾರಿಯಿದೆಯೇ ಎಂದು ಆಗಾಗ ಮಿನುಗಿಹೋಗುವ ಚಿಂತನೆಗಳ ನಿಟ್ಟಿನಲ್ಲಿ, ನಾವು ಬಯಸಿರುವ ಈ ಹಾದಿಗೆ ಒಂದಷ್ಟು ಯಶಸ್ಸಿನಿಂದ ಮರಳಿ ಮುನ್ನುಗ್ಗುತ್ತಿರುವ ಗೆಳತಿ ಮಂಜುಳಾ ಬಬಲಾದಿ ಅವರನ್ನು ಈ ಕುರಿತು ಮಾತನಾಡಿಸಬೇಕು ಎಂದು ಮೂಡಿದ್ದ ಹಂಬಲ ಮೂರು ವರ್ಷಗಳ ಹಿಂದೆ ಕೂಡಿಬಂತು. (ಈ ಮಾತುಕತೆಯ ಬಗ್ಗೆ ಹೇಳುವ ಮುಂಚೆ ನಾನು ಇಲ್ಲಿಂದ ಪ್ರೇರಣೆ ಪಡೆದು ನನ್ನ ಬದುಕಿನಲ್ಲಿ ಸೈಕಲ್ ಅನ್ನು ನನ್ನ ಅವಿಭಾಜ್ಯವಾಗಿ ಮಾಡಿಕೊಂಡಿರುವುದನ್ನು ಕೊಚ್ಚಿಕೊಂಡುಬಿಡುತ್ತೇನೆ 😊)

ಹಾಗೂ ಹೀಗೂ ಅವರೊಡನೆ ಯಾವುದೋ ನಿಮಿತ್ತವಾಗಿ ಪ್ರಾರಂಭವಾದ ಫೇಸ್ಬುಕ್ ಸಂಭಾಷಣೆ, “ನನಗೆ ತಮ್ಮ ಅಪಾಯಿಂಟ್ಮೆಂಟ್ ಯಾವಾಗ ಸಿಗುತ್ತೆ?” ಎಂಬ ಹಂತಕ್ಕೆ ಬಂದಾಗ, “ಸಾರ್, ಇಷ್ಟೆಲ್ಲಾ ಫಾರ್ಮಲ್ ಆದ್ರೆ ಸಂಕೋಚ ಆಗುತ್ತೆ ಸಾರ್, ಭೇಟಿಯ ಕುರಿತು ಮುಂಬರುವ ದಿನಗಳಲ್ಲಿ ಯೋಚಿಸೋಣ” ಎಂದು ಸಡನ್ ಆಗಿ ಒಂದು ದಿನ ಮುಕ್ತಾಯವಾದಾಗ ಪುನಃ ಹೇಗಪ್ಪ ಇವರನ್ನು ಸಂಪರ್ಕಿಸೋದು ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ಅವರ ಈ ಮಾತು ನಿಷ್ಠುರದ್ದಲ್ಲ! “ಬದುಕಿಗೇಕೆ ಒಂದು ಫಾರ್ಮಾಲಿಟಿ, ಇದಕ್ಕೇಕೆ ಒಂದು ಪ್ರಚಾರ ಎಂಬ ಸೀದಾಸಾದಾತನದ್ದು” ಎಂಬ ಅವರ ಸರಳತೆ ಬಹಳ ಬೇಗ ಅರಿವಿಗೆ ಬಂತು. ಅವರ ಬದುಕಂತೂ ಸೈಕಲ್ಲಿನೊಂದಿಗೆ ನಮ್ಮ ಊಹೆಗೂ ನಿಲುಕದಷ್ಟು ಹೊಂದಿಕೊಂಡಿದೆ. “ನಾಳೆ ಶನಿವಾರ ಬೆಳಿಗ್ಗೆ ತಮ್ಮ ಭೇಟಿ ಸಿಗಬಹುದೇ?” ಎಂದು ಕೇಳಿದಾಗ, “ನಾಳೆ ಬೆಳಿಗ್ಗೆ ನಾನು 5 ಗಂಟೆಗೆ ಹೊರಟು ಎಲ್ಲಿ ಹೋಗ್ತೀನಿ, ಎಷ್ಟು ಗಂಟೆಗೆ ಹಿಂದಿರುಗ್ತೀನಿ ಗೊತ್ತಿಲ್ವಲ್ಲಾ” ಅಂದ್ರು. ಆಯ್ತು ಮುಂದಿನ ವಾರ ಪ್ರಯತ್ನಿಸ್ತೀನಿ ಅಂತ ಹೇಳಿದ ಸ್ವಲ್ಪ ತಾಸಿನ ನಂತರ ಮಂಜುಳ ಧ್ವನಿಯ ಕರೆ ಬಂತು. “ಸಾರ್, ನಾಳೆ ಬೆಳಿಗ್ಗೆ ನಾನು ಎಲ್ಲೂ ಹೋಗೋಲ್ಲ, ಸೈಕಲ್ ಕ್ಲೀನ್ ಮಾಡ್ಬೇಕು ‘ಎಂ.ಟಿ.ಆರ್ 1924’ರಲ್ಲಿ ಬ್ರೇಕ್ಫಾಸ್ಟ್ ಭೇಟಿ ಮಾಡೋಣ”. ಖುಷಿ ಆಯ್ತು! ಜೊತೆಗೆ ಎಂ.ಟಿ.ಆರ್ ತಿಂಡಿ ಬೇರೆ! ಹಾಗೇ ಖುಷಿಯಿಂದ ಅಂದೆ “ಹೋ, ನಾಳೆ ನಿಮ್ಮ ಸೈಕಲ್ಗೆ ದೀಪಾವಳಿ ಎಣ್ಣೆ ಸ್ನಾನಾನ?”. ಸಂತಸದ ಶುಭ್ರ ಮಂಜುಳ ನಗು ಬಂತು ಅತ್ತಲಿಂದ.

ಈ ಬರಹದ ಮಧ್ಯೆ ಫೇಸ್ಬುಕ್ ಕಡೆ ಒಮ್ಮೆ ಕಣ್ಣಾಡಿಸಿದಾಗ ಮಂಜುಳಾರ ಹೃದ್ಭಾವ ಸೂಚಿಸುವ ಪೋಸ್ಟಿಂಗ್ “ರೆಕ್ಕೆ ಇದ್ದರೆ ಸಾಕೆ? ಹಕ್ಕಿಗೆ ಬೇಕು ಬಾನು” ಎಂಬ ಗೀತೆಯ ಅವರಲ್ಲಿ ತೇಲಿಹೋದ ನೆನಪು ನೋಡಿದೆ. ಇದು ಮಂಜುಳಾರಲ್ಲಿ ಅಡಗಿರುವ ಅನ್ವೇಷಕಿಯ ಪ್ರೇರಣೆ ಕೂಡಾ ಹೌದು ಎಂಬುದು ಅವರೊಡನೆ ಮಾತಿಗೆ ತೊಡಗಿದ ಕೆಲವೇ ನಿಮಿಷಗಳಲ್ಲಿ ನಮ್ಮ ಹೃದಯವನ್ನಾವರಿಸತೊಡಗುತ್ತದೆ. ಇಲ್ಲಿ ತಾನೇನೋ ಮಾಡುತ್ತಿದ್ದೇನೆ ಎಂಬ ಅಹಂ ಆಗಲಿ, ಯಾರೋ ನನ್ನನ್ನು ಲೈಕಿಸಬೇಕೆಂಬ ಅಲ್ಪತೃಪ್ತಿಯಾಗಲಿ, ಇಂದು ಇಷ್ಟಾಯ್ತು ಮುಂದೆ ಯಾವತ್ತೋ ನೋಡೋಣ ಎಂಬ ಸೋಂಬೇರಿತನದ ಒಣ ನಿರೀಕ್ಷೆಯಾಗಲಿ ಒಂದಿನಿತೂ ಇಲ್ಲ. ಈ ತೆರನಾದ ಬೇಲಿಗಳೇ ಮಂಜುಳಾರ ಬಳಿ ಇಲ್ಲ. ನಮ್ಮ ಕಾಲೇಜಿನ ಗುರುಗಳೊಬ್ಬರು ಬರೆದ ನುಡಿ “ಬಾನ್ ಎತ್ತರ ಭುವಿಯ ಅಗಲ ಮನಸಿರಲಿ ಸದಾ” ಎಂಬ ದರ್ಶನವಿಲ್ಲಿದೆ. ಯಾವುದೇ ವೈಭೋಗ ಇಲ್ಲಿಲ್ಲ. ಎಂ.ಟಿ. ಆರ್ ನಲ್ಲಿ ನಮಗೆ “ಬಾದಾಮಿ ಹಲ್ವಾ, ಚೌ ಚೌ ಬಾತಿರಲಿ” ಎಂಬ ವರ್ಣರಂಜಿತ ಜಿಹ್ವಾಚಪಲ ಬಯಕೆಯ ಆರ್ಡರ್ ಆದರೆ, ಮಂಜುಳಾರದ್ದು ನನಗೆ “ಪ್ಲೈನ್ ದೋಸೆ” ಎನ್ನುವ ಸರಳತೆಯದ್ದು. ಅಂತೆಯೇ ‘ಆಡಿ’, ‘ಜಾಗ್ವಾರ್’, ‘ಬೆಂಜ್’ ಕಾರುಬಾರುಗಳ ಯುಗದಲ್ಲಿ ಮಂಜುಳಾರ ಸೀದಾ ಸರಳ ಆಯ್ಕೆ ಪರಿಸರ ಸ್ನೇಹಿ ‘ಬೈಸಿಕಲ್ಲು”.

ಕಾರಂತರ “ಹುಚ್ಚು ಮನಸ್ಸಿನ ಹತ್ತು ಮುಖಗಳನ್ನು” ನೆನೆಯುತ್ತಾ ಮಂಜುಳಾ ಬಬಲಾದಿಗೆ ಇರುವ ಹುಚ್ಚಿನ ಮುಖಗಳೆಷ್ಟು ಎಂದು ನನಗೆ ಅವರ ಬಗ್ಗೆ ಗೊತ್ತಿರುವ “ಕವಿತೆ, ಲಲಿತಪ್ರಬಂಧ, ಪ್ರವಾಸಿ ಕಥನ, ಕಾರ್ಯಕ್ರಮ ನಿರೂಪಣೆ, ಸ್ನೇಹ ಜೀವನ, ಛಾಯಾಗ್ರಹಣ, ಪರಿಸರ ಪ್ರೇಮ, ಸೈಕ್ಲಿಂಗ್, ಸ್ಕೇಟಿಂಗ್, ರಾಫ್ಟಿಂಗ್” ಹೀಗೆ ಪಟ್ಟಿ ಮಾಡಿ ಉಃಶ್ಶಪ್ಪ ಎಂದುಕೊಳ್ಳುತ್ತಿರುವಂತೆಯೇ ಇನ್ನೂ ಬಹಳಷ್ಟಿವೆ! ಎಂದು ನಗುತ್ತಾರೆ. ಆದರೆ ಅವೆಲ್ಲವನ್ನೂ ಬಿಟ್ಟುಕೊಡುವುದಿಲ್ಲ. ತಾವಾಗಿ ತಮ್ಮನ್ನು ದೊಡ್ಡದಾಗಿಸಿಕೊಳ್ಳದ ಈ ಅನ್ವೇಷಕಿಯನ್ನು ಅನ್ವೇಷಿಸುವುದು ಅಷ್ಟು ಸುಲಭದ ಮಾತಲ್ಲ.

ಮಾತೃ ಹೃದಯಿ ಜವಾಬ್ಧಾರಿ, ಐ.ಟಿ ತಂತ್ರಜ್ಞೆಯ ಕಾರ್ಯಬಾಹುಳ್ಯ, ಬೃಹತ್ ಬೆಂಗಳೂರು ಬದುಕಿನಲ್ಲಿ ಅನಿವಾರ್ಯವಾಗುವ ನೂರೆಂಟು ಹೊಂದಾಣಿಕೆಗಳು ಈ ಮಧ್ಯೆ ನಿಮ್ಮ ಸೈಕಲ್ಲಿಗೆ ಸಮಯವೆಲ್ಲಿ ಅಂದ್ರೆ, “ನೀವೂ ಸೈಕಲ್ ತೊಗೊಳ್ಳಿ ಗೊತ್ತಾಗುತ್ತೆ!” ಎಂದು ಬಿರುಸಿನಿಂದ ಪ್ರತಿಕ್ರಯಿಸುತ್ತಾರೆ. ಆದರೆ, ಅದು ಒರಟುತನದ ತಿರುಗೇಟೇನಲ್ಲ. ಈ ಪ್ರತಿಕ್ರಿಯೆಯೊಡನೆ ಆಪ್ತಭಾವಯುಕ್ತ ಸೈಕಲ್ ಪ್ರೀತಿಭಾವ ಅವರ ಕಂಗಳಲ್ಲಿ ಸ್ಫುರಿಸತೊಡಗುವುದನ್ನು ಕಾಣುವಾಗ ನಮಗಲ್ಲೊಂದು ಅಭಿಮಾನ ಹುಟ್ಟುತ್ತದೆ.

ಈ ಸೈಕಲ್ ಎಂಬುದು ವಾಹನ ಸಂಚಾರವಿಲ್ಲದಿದ್ದಾಗ ಮಾತ್ರ ವಿಹಾರ ಸಾಧನವೆ?, ಹೆಚ್ಚು ಹೆಚ್ಚು ಬೆಲೆಗಳ ಆವಿಷ್ಕಾರಗಳ ದೆಸೆಯಿಂದಾಗಿ ಇದನ್ನು ಹೊಂದುವುದೂ ಕೆಲವರಲ್ಲಿ ಪ್ರತಿಷ್ಠೆಯಾಗುತ್ತಿದೆಯೇ? ಇತ್ಯಾದಿ ನನಗೆ ತೋರಿದ ಸೀಮಿತ ವೈಚಾರಿಕತೆಗಳ ಲಹರಿಯ ಪ್ರಶ್ನೆಗಳಿಗಿಳಿದಾಗ ಬಂದ ಮಂಜುಳ ಪ್ರತಿಧ್ವನಿ ಇಂಪಿನದ್ದಾಗಿತ್ತು. “ಹಾಗೇನಿಲ್ಲ, ಇದೇ (ಸೈಕಲ್ಲೇ) ಇಂದಿನ ಅವಶ್ಯಕತೆ ಎಂಬ ಜಾಗೃತಿ ಸಮುದಾಯದಲ್ಲಿ ಮೂಡತೊಡಗಿದೆ. ನನ್ನ ಸಹೋದ್ಯೋಗಿಗಳಲ್ಲೇ ಹಲವಾರು ಜನ ಸೈಕಲ್ನಲ್ಲಿ ಕಚೇರಿಗೆ ಬರುತ್ತಿದ್ದಾರೆ, ನಾನೂ ಕಡೇಪಕ್ಷ ವಾರ್ದಲ್ಲೊಂದೆರಡು ಬಾರಿ ಕಚೇರಿಗೆ ಸೈಕಲ್ ಉಪಯೋಗಿಸುತ್ತೇನೆ. ಸೈಕಲ್ ಸಂಚಾರಕ್ಕೆ ವ್ಯವಸ್ಥಾತ್ಮಕವಾಗಿ ಹಾದಿಗಳು ಸುಗಮವಲ್ಲವೆನಿಸಿದರೂ, ಸೈಕಲ್ನಲ್ಲಿ ಕಡಿಮೆ ಸಮಯದಲ್ಲಿ ನಮಗೆ ಬೇಕಾದ ಕಡೆ ತಲುಪುವ ಸಾಧ್ಯತೆಗಳು ಹೆಚ್ಚಿವೆ” ಎಂದು ಆಶಾದಾಯಕವಾದ ಚಿತ್ರಣವನ್ನು ಮಂಜುಳಾ ಕಟ್ಟಿ ಕೊಡುತ್ತಾರೆ.

ಇಷ್ಟೆಲ್ಲಾ ಆದ್ರೂ ನನ್ನ ಹುಡುಕಾಟದ ಮನದಲ್ಲಿ ಮಂಜುಳಾ ಎಂಬ ಈ ಸೈಕಲ್ ಮಾರ್ಗದ ಅನ್ವೇಷಕಿಯಲ್ಲಿ ಮತ್ತಿನೇನೋ ಇದೆ ಅನಿಸಿತು. ಹಾಗಾಗಿ ರಾತ್ರಿ ಎಲ್ಲಾ ರಾಮಾಯಣ ಕೇಳಿ ಬಾಲ ಇರೋದು “ರಾಮಂಗೋ, ಹನುಮಂತನಿಗೋ” ಅನ್ನೋ ಪ್ರಶ್ನೆ ತರಹ “ಅದೆಲ್ಲಾ ಸರಿ, ಆಟೋ ಇದೆ, ಸ್ಕೂಟರ್ ಇದೆ, ಕಾರಿದೆ.... ಈ ಸೈಕಲ್ ಯಾಕೆ ಬೇಕು?” ಅಂತ ಅಂದೆ. ಮಂಜುಳಾ ಸಿಟ್ಟಾಗಿದ್ದಾರೋ ಹೇಗೋ ಅಂತ ಸ್ವಲ್ಪ ದೃಷ್ಟಿ ಕೆಳಗೆ ಮಾಡಿ ನೋಡ್ದೆ. ಅವರು ನನ್ನತ್ತ ಗಮನವಿಲ್ಲದಂತೆ ತಮ್ಮ ಅಂತರ್ಭಾವುಕತೆಯಲ್ಲಿನ ಪ್ರಪಂಚದಿಂದ ಉಸುರಿದರು “ಅದರಲ್ಲೆಲ್ಲಾ (ಆಟೋ, ಸ್ಕೂಟರ್, ಕಾರು ಇತ್ಯಾದಿಗಳಲ್ಲಿ) ಹೋಗುವಾಗ ನಾನು ಹೋಗ್ತಾ ಇರ್ತೀನಿ ಅಷ್ಟೇ, ಅಲ್ಲಿ ನಾನು ನನ್ನ ಪ್ರಪಂಚದ ಜೊತೆ ಒಂದಾಗಿರಲ್ಲ. ಸೈಕಲ್ನಲ್ಲಿರುವಾಗ ನಾನು ನನ್ನ ಪ್ರಪಂಚ ಎಲ್ಲವೂ ಒಂದೇ.” ಹೀಗನ್ನುವಾಗ ಮಂಜುಳಾ, ಅಧ್ಯಾತ್ಮದ ಭಾವವನ್ನೇ ತೆರೆದಿಡುವಂತೆನಿಸುತ್ತದೆ. ಮಂಜುಳಾ ಆಗಾಗ ಸೆರೆಹಿಡಿದು ತೋರುವ ಪ್ರಕೃತಿ ಚಿತ್ರಣ, ಸುಂದರ ಪ್ರಕೃತಿ ದರ್ಶನದ ಹನಿಗವನಗಳು, ‘ಹೃದಯ ಅರಳೋ ಕಾಲ’ದಂತಹ ವಸಂತಕಾಲದ ರೂಪಕದ ರಮ್ಯಲೇಖನಗಳು ಇವೆಲ್ಲದರ ಜಾಡು ನಮಗೆಲ್ಲೋ ಸ್ಪುರಿಸಿದಂತಾಗುತ್ತದೆ. ಈ ಸಂದರ್ಭದಲ್ಲಿ ಅರ್ನೆಸ್ಟ್ ಹೆಮಿಂಗ್ಸ್ವೆ ಅವರ ಈ ಮಾತು ನೆನಪಾಗುತ್ತದೆ “It is by riding a bicycle that you learn the contours of a country best, since you have to sweat up the hills and coast down them. Thus you remember them as they actually are, while in a motor car only a high hill impresses you, and you have no such accurate remembrance of country you have driven through as you gain by riding a bicycle.

ಮಳೆ, ಬಿಸಿಲು, ಹಸಿವೆ ನೀರಡಿಕೆಗಳ ಪರಿವೆಯೂ ಇಲ್ಲದಂತೆ ಮಂಜುಳ ತಮ್ಮ ಸೈಕಲ್ ಮೇಲೆ ಹಲವು ಸಹಸ್ರ ಮೈಲುಗಳ ಯಶಸ್ವಿ ಪಯಣ ಸಾಗಿಸಿದ್ದಾರೆ. ಅವುಗಳಲ್ಲಿ ಹಿಮಾಲಯದ ಅತಿ ಎತ್ತರದ ರಸ್ತೆ ಇರುವ ಪ್ರದೇಶಗಳು, ಯೂರೋಪಿನ ಹಲವು ಪ್ರದೇಶಗಳು ಕೂಡಾ ಸೇರಿವೆ. ಜೊತೆಗೆ ಅವರು ಉದ್ಯೋಗದ ನಿಮಿತ್ತವಾಗಲಿ ಅಥವಾ ಇನ್ಯಾವುದೇ ಕಾರಣಕ್ಕಾಗಲಿ ಎಲ್ಲಿಗೇ ಪಯಣಿಸಿದರೂ ಅಲ್ಲಿ ಸೈಕಲ್ ತುಳಿಯದೆ ಬರುವುದಿಲ್ಲ. ಕೊಡಗಿನ ವೈವಿಧ್ಯಮಯ ಮಳೆಯಡಿಯಲ್ಲಿ ಸೈಕಲ್ ಸವಾರಿ ಕುರಿತು ಹೇಳುವಲ್ಲಿ ಅಲ್ಲಿನ ಮಳೆಯಲ್ಲಿ ಮಂಜುಳಾ ಕಂಡಿರಬಹುದಾದ ಮಿಂಚು, ಅವರು ವಿವರಿಸುವ ಉತ್ಸಾಹಿ ಮೊಗದಲ್ಲಿ ನಮಗೂ ಗೋಚರಿಸಿದಂತೆನಿಸುತ್ತದೆ. ಅವರ ಈ ಅನುಭಾವದ ಸೊಗಸುಗಾಥೆಯ ಬರಹ ಪತ್ರಿಕೆಗಳಲ್ಲಿ ಸಹಾ ಸುಂದರವಾಗಿ ಮೂಡಿಬಂದಿತ್ತು. ಹಲವಾರು ವಿದ್ಯಾಸಂಸ್ಥೆಗಳು ಮತ್ತು ಸಮಾಜಸೇವಾ ಬೆಂಬಲಿತ ಉದ್ದೇಶವುಳ್ಳ ನಿಧಿ ಸಂಗ್ರಹಣಾ ಸೈಕಲ್ ಯಾತ್ರೆಗಳಲ್ಲೂ ಮಂಜುಳಾ ಬಬಲಾದಿ ಭಾಗವಹಿಸಿದ್ದಾರೆ.

ಕನ್ನಡ ಮಾತೃಭಾಷಾ ಮಾಧ್ಯಮದಲ್ಲೇ ಹೈಸ್ಕೊಲ್ ತನಕದ ಓದನ್ನು ನಡೆಸಿದ ಮಂಜುಳಾ ಮುಂದೆ ಇಂಜಿನಿಯರಿಂಗ್ ಪದವೀಧರರಾಗಿ ಪ್ರತಿಷ್ಟಿತ ಐ.ಟಿ ಉದ್ಯೋಗಸ್ಥೆಯಾಗಿದ್ದರೂ ಕವಿತೆ, ಲಲಿತ ಬರಹ, ಕನ್ನಡ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ, ಅಂತರಜಾಲದಲ್ಲಿನ ಸ್ನೇಹಸೇತುವೆಗಳಲ್ಲಿ ಆತ್ಮೀಯ ಕನ್ನಡ ಸಂಭಾಷಣೆ, ಸಂವಾದ ಮುಂತಾದವುಗಳಿಂದ ತಮ್ಮ ಪ್ರೀತಿಯ ಕನ್ನಡ ಭಾಷೆಗೆ ಅತ್ಯಂತ ಆಪ್ತರಾಗಿದ್ದಾರೆ.

ಮಂಜುಳಾ ಅವರಿಗೆ ಕಾವ್ಯ, ಲಲಿತ ಬರಹಗಳ ರೂಪಕಗಳಲ್ಲಿ ಅವರದ್ದೇ ಆದ ವಿಶೇಷತೆಯಿದೆ. ಇದಕ್ಕೆ ಒಂದು ಉದಾಹರಣೆಯಾಗಿ ಅವರ ಗ್ಯಾಂಗ್ಟಾಕ್, ಡಾರ್ಜಿಲಿಂಗ್ ಪ್ರವಾಸದ ಕುರಿತಾಗಿ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ಮೂಡಿಬಂದ ‘ಮಳೆಯಲಿ ಜೊತೆಯಲಿ’ ಬರಹವನ್ನು ಗಮನಿಸಬಹುದು. ಇಲ್ಲಿನ ವರ್ಣನೆಗಳನ್ನು ಕಾಣುವಾಗ ಪ್ರಕೃತಿಯ ಪ್ರತಿಯೊಂದು ಎಳೆಯನ್ನೂ ಬಿಡಿ ಬಿಡಿಯಾದ ಸೂಕ್ಷ್ಮಜ್ಞತೆಯಲ್ಲಿ ತೆಗೆದು ಬದುಕಿನಲ್ಲಿ ಅನುಭಾವದಲ್ಲಿ ಹೇಗೆ ತಾನೇ ಇವರಿಗೆ ಬೆಸೆಯಲು ಸಾಧ್ಯವಾಯ್ತು ಎಂಬಷ್ಟು ಆಪ್ತ ಅಚ್ಚರಿ ಮೂಡಿಸುತ್ತಾರೆ. ಹೃದಾಯಾಳದಿಂದ ಕಾಣುವ ಕಣ್ಣುಗಳು ಮಾತ್ರ ಇಂತದ್ದನ್ನು ಚಿತ್ರಿಸಬಲ್ಲವು. ಈ ಪ್ರವಾಸದಲ್ಲಿ ಪರ್ವತ ಪ್ರದೇಶಗಳಲ್ಲಿ ಕಾರಿನಲ್ಲಿ ಸಾಗುವಾಗ ಪ್ರಕೃತಿಯ ರಮಣೀಯತೆಯಲ್ಲಿನ ಒಂದೊಂದು ಕ್ಷಣದಲ್ಲೂ ಅಯ್ಯೋ ಈ ಕಾರು ಆಗಾಗ ನಿಲ್ಲಬಾರದೇ ಎಂದು ಅವರ ಮನ ಚಡಪಡಿಸುತ್ತದೆ. ಆಗ್ಗಿಂದಾಗ್ಗೆ ತಾವು ಬಯಸುವ ಪ್ರಕೃತಿ ಸಾಂಗತ್ಯದಲ್ಲಿ ಈ ಚಡಪಡಿಕೆ ಬೇಡ ಎಂದೇ ಅವರು ಪ್ರಕೃತಿಗೆ ಪೂರಕವಾದ ಸೈಕಲನ್ನೇ ತಮ್ಮ ಸಂಚಾರಿ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ.

ಮಂಜುಳಾ ಅವರಿಗೆ ತಾವಿರುವ ಸಮಾಜಕ್ಕೇನಾದರೂ ಮಾಡಬೇಕು ಎಂಬ ಅಂತರಾಳದ ಆಶಯವಿದೆ. “ಯಾರು ಯಾವುದೇ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಾರೋ ಅವರೆಲ್ಲರ ಬಗ್ಗೆ ನನಗೆ ಗೌರವ” ಎನ್ನುತ್ತಾರೆ ಮಂಜುಳಾ. ಕೆಲವೊಮ್ಮೆ ಸೈಕಲ್ ಯಾತ್ರೆಯಲ್ಲಿ ಏನೂ ಸಿಗದಂತೆ ಇರುವ ಜಾಗದಲ್ಲಿ ಹಸಿವಿನಿಂದ ಬಳಲಿದ್ದಾಗ ನೀರು ದೊರೆತ ಗುಡಿಸಲು, ಅನ್ನ ದೊರೆತ ದೇಗುಲ, ನೆರಳು ದೊರೆತ ಮರ ಗಿಡ ತೋಟ ಎಲ್ಲದರ ಬಗ್ಗೆಯೂ ಅವರಿಗೆ ಕೃತಜ್ಞತಾಪೂರ್ವ ಗೌರವ ಉಂಟು. ಇವೆಲ್ಲಕ್ಕೂ ಮಿಗಿಲಾಗಿ “ಎಷ್ಟು ಬೇಕೋ ಅಷ್ಟು ಮಾತ್ರ ಭಯವುಂಟು, ಇಡೀ ವಿಶ್ವವೇ ನನ್ನನ್ನು ಸಂರಕ್ಷಿಸುತ್ತಿದೆ ಎಂಬ ಭಾವ ಭರವಸೆ ನನ್ನಲ್ಲಿ ಸ್ಪುರಿಸುತ್ತಿರುತ್ತದೆ” ಎಂಬ ಆವರ ನುಡಿ ಅವರ ಸರಳತೆ, ಸಜ್ಜನಿಕೆ, ಧೈರ್ಯವಂತಿಕೆ, ಸಾಧನೆ ಇವುಗಲೆಲ್ಲದರ ಬಗ್ಗೆ ಬಹಳಷ್ಟು ಹೇಳುತ್ತದೆ.

ಮಂಜುಳಾ ಬಬಲಾದಿ ಎಂಬ ಆತ್ಮೀಯ ವ್ಯಕ್ತಿತ್ವದಲ್ಲಿ ಎಲ್ಲೆಡೆ ಮೊದಲು ಎದ್ದು ಕಾಣುವುದು ಅವರ ಸೈಕಲ್ ಪ್ರೇಮ. ಇಂದಿನ ಹಿಂಸೆ ಹುಟ್ಟಿಸುವ ರಸ್ತೆ ಸಂಚಾರ ವ್ಯವಸ್ಥೆಯಲ್ಲಂತೂ ಈ ಪ್ರವೃತ್ತಿ ಅತ್ಯಂತ ಮಹತ್ವದ್ದು. ಹೀಗಾಗಿ ಅವರು ನಮ್ಮಂತಹವರಿಗೆ ಅನುಕರಣೀಯರು ಕೂಡ. ಅವರಿಂದ ಉತ್ತೇಜಿತರಾಗಿ ಬಹಳಷ್ಟು ಜನ ಸೈಕಲ್ ಉಪಯೋಗಕ್ಕೆ ಧಾವಿಸಿದ್ದಾರೆ. ನಾನು ಬೆಂಗಳೂರು ಮತ್ತು ದುಬೈನಲ್ಲಿ ಕಳೆದ ಮೂರು ವರ್ಷಗಳಲ್ಲಿ ತುಳಿದಿರುವ ಹಲವು ಸಹಸ್ರ ಕಿಲೋಮೀಟರ್ ಪಯಣಕ್ಕೆ ಪ್ರೇರಕರಾದ ಮಂಜುಳಾ ಬಬಲಾದಿ ಅವರಿಗೆ ಕೃತಜ್ಞತೆ ಶುಭ ಹಾರೈಕೆಗಳೊಡನೆ ಈ ಲಹರಿಯನ್ನು ಸದ್ಯಕ್ಕೆ ಮುಗಿಸುತ್ತಿದ್ದೇನೆ. ಮುಂದೆ ಮಂಜುಳಾರ ಯಶಸ್ವೀ ಪಯಣದ ಕುರಿತು ನಮಗೆ ಹೆಚ್ಚು ಹೆಚ್ಚು ತಿಳಿಯುತ್ತದೆ ಎಂಬ ಆಶಯ ನನ್ನಲ್ಲಿದೆ.


Tag: Manjula Babaladi

ಕಾಮೆಂಟ್‌ಗಳಿಲ್ಲ: