ಭಾನುವಾರ, ಜನವರಿ 17, 2016

ಗೀತಪ್ರಿಯ ಇನ್ನಿಲ್ಲ

ಗೀತಪ್ರಿಯ ಇನ್ನಿಲ್ಲ

ಕನ್ನಡ ಚಿತ್ರರಂಗದ ಪ್ರಸಿದ್ಧ  ಗೀತರಚನಕಾರರೂ ಮತ್ತು  ಚಿತ್ರ ನಿರ್ದೇಶಕರೂ ಆದ ಗೀತಪ್ರಿಯ ಇಂದು ನಿಧನರಾಗಿದ್ದಾರೆ (17.01.2016).  ಅವರು ಜನಿಸಿದ್ದು ಜೂನ್ 15, 1930ರಲ್ಲಿ.  ಅವರ ಮಣ್ಣಿನ ಮಗ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ.  ಹೊಂಬಿಸಿಲು, ಬೆಸುಗೆ, ಬೆಳುವಲದ ಮಡಿಲಲ್ಲಿ ಮುಂತಾದವು ನೆನಪಿನಲ್ಲುಳಿಯುವ ಚಿತ್ರಗಳು.  ಮಹಮ್ಮದ್ ರಫಿ ಅವರಿಂದ ಹಾಡಿಸಿದ ಅವರ ರಚನೆ ನೀನೆಲ್ಲಿ ನಡೆವ ದೂರಚಿತ್ರರಂಗದಲ್ಲಿ ಎಂದೆಂದಿಗೂ ಚಿರಸ್ಥಾಯಿಯಾಗಿರುವಂತದ್ದು.

ಗೀತಪ್ರಿಯ ಅವರ ಗೀತೆಗಳಲ್ಲಿ ಅಡಗಿರುವ ಮಾನವ ಪ್ರೀತಿ, ಶೋಷಣೆಯ ಬಗ್ಗೆ ಆಕ್ರೋಶ, ಬಡವರ ಪರ ದನಿ, ದೇವರ ಮೇಲೆ ಸಿಟ್ಟು ಇವೆಲ್ಲವೂ ಜನಸಾಮಾನ್ಯರ ದನಿಯೇ ಆಗಿದೆ. 32 ಚಿತ್ರಗಳ ನಿರ್ದೇಶಕರಾದರೂ, ಅವರ ಗಟ್ಟಿತನ ಕಾಣುವುದು ಪರಿಣಾಮಕಾರಿಯಾದ ಅವರ ಸಾಹಿತ್ಯದಲ್ಲಿ. ಅಂತಹ ಸಾಹಿತ್ಯ ಅವರಲ್ಲಿ ಮೂಡಲು ಸಾಧ್ಯವಾದದ್ದು ಕೂಡ ಅವರು ಜೀವನದಲ್ಲಿ ಅನುಭವಿಸಿದ ಕಷ್ಟಕೋಟಲೆ ಪರಂಪರೆಯಿಂದಲೇ. ಲಕ್ಷ್ಮಣರಾವ್ ಮೋಹಿತೆ ಎಂಬುದು ಗೀತಪ್ರಿಯರ ಮೂಲ ಹೆಸರು.   ಅವರ ತಂದೆ ಮೊದಲ ಮಹಾಯುದ್ಧದಲ್ಲಿ ಪಾಲ್ಗೊಂಡು ನಂತರದ ದಿನದಲ್ಲಿ ಬೆಂಗಳೂರು ದಂಡು ಪ್ರದೇಶಕ್ಕೆ ಬಂದು ನೆಲೆಸಿದವರು. ಗೀತಪ್ರಿಯ ಸೀನಿಯರ್ ಇಂಟರ್ ಮೀಡಿಯಟ್ ಓದುವಾಗ ತಂದೆಯ ನಿಧನ. ಇದು ಸಂಸಾರದ ನೊಗವನ್ನು ಅವರ ಮೇಲೆ ಹೊರಿಸಿತು. ಅಂದಿನಿಂದ ಅವರದು ಹೋರಾಟದ ಜೀವನ. ನಾಟಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಚಿಕ್ಕವಯಸ್ಸಿನ ತಂಗಿಯರು. ಶ್ರೀರಾಮಪುರದ ಮನೆಯಲ್ಲಿ ಊದುಬತ್ತಿ ಹೊಸೆಯುವ ಕೆಲಸ.

ರೆಸ್ಟೋರೆಂಟ್ ಒಂದರಲ್ಲಿ ಕ್ಲರ್ಕ್ ಆಗಿ ಸೇರಿದರು. ವೃತ್ತಿರಂಗಭೂಮಿಗೆಂದು ಮದುವೆ ಮಾರ್ಕೆಟ್ ಮತ್ತು ಜನ್ಮಭೂಮಿ ಎಂಬ ಎರಡು ನಾಟಕಗಳನ್ನು ರಚಿಸಿಕೊಟ್ಟರು. ಸಿನಿಮಾಗಳಲ್ಲಿ ಅಭಿನಯಿಸಿದರೆ ಹಣ ಸಂಪಾದನೆ ಮಾಡಬಹುದು ಎಂಬ ಆಸೆಯಿಂದ ಮದರಾಸಿಗೆ ತೆರಳಿದ್ದೂ ಆಯಿತು. ನೃತ್ಯಾಭ್ಯಾಸವೂ ಆಯಿತು. ಹೀರಾಲಾಲ್ ಬಳಿ ನೃತ್ಯ ಕಲಿತು ಪ್ರಿಯರಾಲುಎಂಬ ತೆಲುಗು ಚಿತ್ರದಲ್ಲಿ ನೃತ್ಯ ದೃಶ್ಯದಲ್ಲಿ ಕಾಣಿಸಿಕೊಂಡರು. 1954ರಲ್ಲಿ ಶ್ರೀರಾಮಪೂಜಚಿತ್ರಕ್ಕೆ ಗೀತೆ ಬರೆಯುವ ಮೂಲಕ ಗೀತಪ್ರಿಯಎಂದು ಬದಲಾದರು. ಆನಂತರವೇ ಗೀತಪ್ರಿಯರ ಗೀತೆಗಳ ವೈಖರಿಚಿತ್ರರಂಗದಲ್ಲಿ ಪ್ರಖರವಾಯಿತು.

ಭಾಗ್ಯ ಚಕ್ರದಲ್ಲಿ (1956) ಗೀತಪ್ರಿಯ ಬರೆದ ಈ ಗೀತೆಯನ್ನು ಗಮನಿಸಿ:
ದೇವ ನಿನ್ನ ರಾಜ್ಯದ ನ್ಯಾಯವಿದೇನಾ?
ಬಡವರ ಈ ಗೋಳ ನೋಡಿ ಗುಡಿಗಳಲ್ಲಿ ಅವಿತೆಯಾ?
ಕಲ್ಲು ಮಾಡಿ ಹೃದಯವ ಕಲ್ಲಾಗಿ ಕುಳಿತೆಯಾ?
ಅರ್ಚಕರ ಆಶ್ರಯದಿ ಸ್ವೀಕರಿಸಿ ಪೂಜೆಯಾ
ಮರೆತೆಯೇನು ಬಡವರ ಶೋಕ ಜೀವನ...

ತೀವ್ರ ಬಡತನದಲ್ಲಿದ್ದಾಗ ಗೀತಪ್ರಿಯ ಬರೆದ ಗೀತೆ ಇದು. ರೆಸ್ಟೋರೆಂಟ್‌ನಲ್ಲಿ ಕೆಲಸ ಮುಗಿಸಿ ಮುನಿರೆಡ್ಡಿ ಪಾಳ್ಯದಲ್ಲಿರುವ ಮನೆಗೆ ನಿರ್ಜನ ರಾತ್ರಿಯಲ್ಲಿ ಹೋಗುವಾಗ ಕಷ್ಟಗಳನ್ನು ನೆನೆಸಿಕೊಂಡು ಬರೆದ ಕಣ್ಣೀರ ಗೀತೆ ಇದು. ಆಗಿನ್ನೂ ವಿಧಾನ ಸೌಧದ ಕಾಮಗಾರಿ ನಡೆಯುತ್ತಿತ್ತಂತೆ. ಅದರ ಮುಂದೆ ಹಾದು ಹೋಗುವಾಗ ಹೊಳೆದ ಸಾಲಿದು. ಸಿನಿಮಾದಲ್ಲಿ ಈ ಹಾಡಿಗೆ ದೇವಸ್ಥಾನದ ದೃಶ್ಯಗಳನ್ನು ತೋರಿಸಿದ್ದರಂತೆ. ಸೆನ್ಸಾರ್ ಅಧಿಕಾರಿ ಹಾಡು ಮತ್ತು ದೇಗುಲದ ದೃಶ್ಯವೆರಡಕ್ಕೂ ಕತ್ತರಿ ಹಾಕುವ ಬೆದರಿಕೆ ಹಾಕಿದರಂತೆ. ಕೊನೆಗೆ ದೇವಸ್ಥಾನದ ದೃಶ್ಯಗಳನ್ನು ತೆಗೆದು ಹಾಡನ್ನಷ್ಟೇ ಉಳಿಸಲಾಯಿತಂತೆ. ಹಾಡು ಅಪಾರ ಜನಪ್ರಿಯವಾಯಿತು. ನಂತರದ ದಿನಗಳಲ್ಲಿ ಗೀತಪ್ರಿಯ ತಮಿಳಿನ ಬಂಡಾಯ ಹಾಡುಗಾರ ಕುಯಿಲನ್, ತೆಲುಗು ಕ್ರಾಂತಿಕಾರಿ ಕವಿ ಶ್ರೀ ಶ್ರೀ ಅವರೊಡನೆ ಕೆಲಸ ಮಾಡಿದ್ದು ಅವರಿಗೆ ಮುಂದಿನ ದಿನಗಳಲ್ಲಿ ದೇವರುಗಳ ಮೇಲೆ ಚಾಲೆಂಜ್ ಮಾಡುವ ಗೀತರಚನೆ ಮಾಡಲು ಹೆಚ್ಚು ಪ್ರೇರೇಪಣೆ ನೀಡಿತು.

ದುಡ್ಡು ಇದ್ರೆ ಜಗವೆಲ್ಲ
ದುಡ್ಡು ಇಲ್ದೆ ಜಗವಿಲ್ಲ
ಹೇದೇವ ನೀನೇತಕೋ?

ಎಂಬ ಹಾಡನ್ನು ಗೀತಪ್ರಿಯ ಬೆಟ್ಟದ ಹುಲಿಗಾಗಿ ಬರೆದಿದ್ದಾರೆ. ನನ್ನ ಮನದಾಳದ ಭಾವನೆಗಳನ್ನು ಸಾಹಿತ್ಯದ ಮೂಲಕ ಪ್ರಕಟಿಸಲು ನನಗೆ ಸ್ವಾತಂತ್ರ್ಯವಿತ್ತು. ಅಂತೆಯೇ ನನ್ನಲ್ಲಿ ಮಡುಗಟ್ಟಿದ ವಿಚಾರಾತ್ಮಕ ವಿಷಯರಾಶಿ ಗೀತೆಗಳಲ್ಲಿ ಹೊರಹೊಮ್ಮಿತುಎಂದು ಅಂದಿನ ಗೀತರಚನಕಾರರ ಸ್ವಾತಂತ್ರ್ಯವನ್ನು ಗೀತಪ್ರಿಯ ನೆನಪಿಸಿಕೊಳ್ಳುತ್ತಿದ್ದರು.

ಮೊದಲ ನಿರ್ದೇಶನದ ಮಣ್ಣಿನ ಮಗಚಿತ್ರದಲ್ಲೂ ಇಂತಹ ಪ್ರಯೋಗವೇ ಗೀತಪ್ರಿಯ ಅವರಿಂದಾಯಿತು. ಲಾಲ್‌ ಬಹಾದ್ದೂರ್ ಶಾಸ್ತ್ರಿ ಅವರ ಜೈ ಜವಾನ್, ಜೈ ಕಿಸಾನ್ ಘೋಷವಾಕ್ಯದಿಂದ ಸ್ಫೂರ್ತಿಗೊಂಡು ಮಣ್ಣಿನ ಮಗ ಸಿದ್ಧವಾಯಿತು. ರೈತರ ಜೀವನ, ನಗರ ಸಂಸ್ಕೃತಿಯ ವಿಕೃತಿ ಇವೆಲ್ಲವನ್ನು ಇದೇನಾ ಸಭ್ಯತೆ, ಇದೇನಾ ಸಂಸ್ಕೃತಿ ......ಹಾಡಿನ ಮೂಲಕ ಚುಚ್ಚಿದರು. ಭಗವಂತ ಕೈ ಕೊಟ್ಟ ದುಡಿಯೋಕಂತ, ಅದನ್ಯಾಕೆ ಎತ್ತುವೆ ಹೊಡೆಯೋಕಂತ...ಎಂದು ಮತ್ತೊಂದು ನೀತಿ ಹೇಳಿದರು. ಇಂತಹ ಹಾಡುಗಳಿಂದ ಹೊಸ ಕಲ್ಪನೆಯ ಕತೆಯಿಂದ ಜನಪ್ರಿಯವಾದ ಮಣ್ಣಿನ ಮಗಯಶಸ್ಸು ಗಳಿಸಿತು.

ಒಂದೇ ಬಳ್ಳಿಯ ಹೂಗಳುಚಿತ್ರದಲ್ಲಿ ಮಹಮದ್ ರಫಿ ಅವರಿಂದ ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲು ಲೋಕವೇ, ಈ ಲೋಕವೆಲ್ಲ ಘೋರ ಎಲ್ಲೆಲ್ಲೂ ಶೋಕವೇ?... ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲ....ಎಂಬ ಹಾಡು ಎಂದೆಂದಿಗೂ ಜನಪ್ರಿಯವೆನಿಸಿದೆ.   ಅಣ್ಣ ನಿನ್ನ ಸೋದರಿಯನ್ನ.... ಮರೆಯದಿರು ಎಂದೆಂದೂ...ಎಂಬ ಹಾಡಂತೂ ಜನಪದವೇ ಆಯಿತು. ಭೂಪತಿ ರಂಗ ಚಿತ್ರದಲ್ಲಿ-

ಮಾನವಾ ಮಾನವಾ ನಾಗರೀಕ ಮಾನವಾ,
ಗಗನದಲ್ಲಿ ಮೇಲೆ ಮೇಲೆ ಹಾರುವುದನು ಕಲಿತೆ
ನೀರಿನಲ್ಲಿ ಮೀನಿನಂತೆ ಈಜುವುದನು ಕಲಿತೆ
ಭೂಮಿಯಲ್ಲಿ ಬಾಳುವುದನು ಕಲಿಯಲಿಲ್ಲವೇಕೆ?’
ಎಂದು ಪ್ರಶ್ನಿಸುತ್ತಾರೆ.

ಆಸೆಯು ಜೊತೆಯಲಿ ಹೆಣೆದಿರೆ ಬಾಳು
ಅದಕೇ ಜೀವನದಲಿ ಈ ಗೋಳು

ಎಂದು ಮಕ್ಕಳೇ ಮನೆಗೆ ಮಾಣಿಕ್ಯಚಿತ್ರದಲ್ಲಿ ಹೇಳುತ್ತಾರೆ. ಎಲ್ಲಾರ್ನ್‌ ಕಾಯೋ ದ್ಯಾವ್ರೇ ನೀನು ಎಲ್ಲಿ ಕುಂತಿದ್ದಿಎಂದು ಬೆಳುವಲದ ಮಡಿಲಲ್ಲಿಚಾಲೆಂಜ್ ಮಾಡುತ್ತಾರೆ. ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು, ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದುಎಂಬ ಮಾತುಗಳನ್ನು ಹೊಂಬಿಸಿಲುಚಿತ್ರದ ಗೀತೆಯಲ್ಲಿ ಬರೆದಿದ್ದಾರೆ.

ಗೀತೆಗಳಲ್ಲಿ ಬಂಡಾಯದ ದನಿ ಮೆರೆದಂತೆಯೇ ನಿರ್ದೇಶನದಲ್ಲೂ ಗೀತಪ್ರಿಯ ಅವರ ವಿಶಿಷ್ಟ ಪ್ರಯೋಗಗಳನ್ನು ಗಮನಿಸಲೇಬೇಕು. ಅವರ ನಿರ್ದೇಶನದ ಎರಡನೇ ಚಿತ್ರ ಕಾಡಿನ ರಹಸ್ಯಟಾರ್ಜಾನ್ ಚಿತ್ರ. ಯಾವ ಜನ್ಮದ ಮೈತ್ರಿ’ (1972) ಅತ್ಯಂತ ಜನಪ್ರಿಯಗೊಂಡು ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ರೀಮೇಕ್ ಆಗಿ ಅಪಾರ ಜನಪ್ರಿಯತೆ ಪಡೆಯಿತು. ಅವರ ಬಹುತೇಕ ಎಲ್ಲ ಚಿತ್ರಗಳೂ ಕಾದಂಬರಿ ಆಧಾರಿತ ಎನ್ನುವುದೂ ಒಂದು ವಿಶೇಷವೇ.

ನಾರಿ ಮುನಿದರೆ ಮಾರಿಚಿತ್ರದಲ್ಲಿ ಕಲ್ಪನಾ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ವಿಭಿನ್ನ ನಿರೂಪಣೆಯಿಂದ ಚಿತ್ರ ಯಶಸ್ಸಾಯಿತು. (ಇದೇ ರೀತಿಯ ಕತೆಯನ್ನಾಧರಿಸಿ ಮುಂದೆ ಸೀತಾ ರಾಮುಎಂಬ ಸಿನಿಮಾ ನಿರ್ಮಾಣವಾಯಿತು).

ಬೆಸುಗೆಒಂದು ಯಶಸ್ವಿ ಚಿತ್ರ. ಈ ಚಿತ್ರದಲ್ಲಿ ಬರುವ ಬೆಸುಗೆ... ಬೆಸುಗೆ... ಬೆಸುಗೆ...ಎಂಬ ಹಾಡು ಜನಪದವೇ ಆಯಿತು. ಬೆಸುಗೆ ಎನ್ನುವ ಪದ ಪ್ರಯೋಗ ಎಷ್ಟು ಬಾರಿ ಆಗಿದೆ ಎನ್ನುವ ಕ್ವಿಜ್ಕೂಡ ಸಿನಿಪ್ರಿಯರ ನಡುವೆ ನಡೆಯುವಷ್ಟು ಈ ಹಾಡು ಜನಪ್ರಿಯವಾಯಿತು.

ಬೆಳುವಲದ ಮಡಿಲಲ್ಲಿಗೀತಪ್ರಿಯರ ಮತ್ತೊಂದು ಪ್ರಸಿದ್ಧ ಚಿತ್ರ.  ಈ  ಚಿತ್ರದಲ್ಲಿ ರಾಜೇಶ್, ಕಲ್ಪನಾ ಅಭಿನಯ ಮತ್ತು ಆ ಚಿತ್ರದಲ್ಲಿನ ಹಾಡುಗಳು ಅತ್ಯಂತ ಪ್ರಸಿದ್ಧಿ ಪಡೆದಿತ್ತು.  ಹೊಂಬಿಸಿಲುಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮಹತ್ವದ ಚಿತ್ರ.  ಅದು ಅಂದಿನ ದಿನಗಳಲ್ಲಿ ಅಭಿನಯ, ಹಾಡು, ಮತ್ತು ತಾಂತ್ರಿಕತೆ ಎಲ್ಲಕ್ಕೂ ಬಹಳಷ್ಟು ಪ್ರಶಸ್ತಿಗಳನ್ನು ಗಳಿಸಿಕೊಂಡಿತು.  ಮುಂದೆ ಗೀತಪ್ರಿಯರು ಪ್ರೀತಿಸಿ ನೋಡು, ಸುವರ್ಣ ಸೇತುವೆ ಅಂತಹ ಚಿತ್ರಗಳನ್ನು ನಿರ್ದೇಶಿಸಿದರು. 

ಬಸಂತ್ ಕುಮಾರ್ ಪಾಟೀಲ್ ಹೀರೋ ಆಗಿ ಅಭಿನಯಿಸಿದ್ದ ಅನುರಾಗ ಬಂಧನಚಿತ್ರವನ್ನು ಗೀತಪ್ರಿಯ ಅವರೇ ನಿರ್ದೇಶಿಸಿದ್ದರು. 1978ರಲ್ಲಿ ಪುಟಾಣಿ ಏಜೆಂಟ್ಸ್ 1-2-3ಚಿತ್ರ ನಿರ್ದೇಶಿಸುವುದರೊಂದಿಗೆ ಕನ್ನಡದಲ್ಲಿ ಮಕ್ಕಳ ಚಿತ್ರದ ಟ್ರೆಂಡನ್ನು ಪುನರಾರಂಭಿಸಿದರು. ಶುಭ ಮುಹೂರ್ತಚಿತ್ರದ ಮೂಲಕ ಕಲ್ಯಾಣ ಕುಮಾರ್ ಅವರಿಗೆ ರೀಎಂಟ್ರಿ ನೀಡಿದ್ದೂ ಗೀತಪ್ರಿಯ. ನಿರ್ದೇಶನದಲ್ಲೂ, ಸಾಹಿತ್ಯ, ಗೀತೆ ರಚನೆಯಲ್ಲೂ ಇಂದಿಗೂ ಗೀತಪ್ರಿಯ ಎಲ್ಲರಿಗೂ ಪ್ರಿಯ.

ವಾಸ್ತು ಪ್ರಕಾರ ಮನೆ ಕಟ್ಟು
ಕುಬೇರ ಮೂಲೇಲಿ ಮಾತ್ರ ಕಟ್ಸು
ಟಾಯ್ಲೆಟ್ ಒಳಗೆ ಹೋಗಿ ಮಲಕ್ಕೋ...
ಎಂಬಂತಹ ಹಾಡುಗಳ ರಚನೆಯಾಗುತ್ತಿರುವ ಕಾಲದಲ್ಲಿ-
ಮನುಜರು ಮನುಜರ ಹಾದಿಯಲಿ
ಮುಳ್ಳನು ಹಾಸಿ ಮೆರೆಯುವನು
ಆಸೆಯಿಂದ ಮನೆ ಕಟ್ಟಿ
ಕಡೆಗೆ ಮಣ್ಣಲಿ ಮಲಗುವನು.

ಎನ್ನುವ ಗೀತಪ್ರಿಯರ ಮಾನವಪ್ರೀತಿಯ ಹಾಡು ಎಷ್ಟು ಚೆನ್ನ ನೋಡಿ. ನಮ್ಮೂರ್ನಾಗ್ ನಾನೊಬ್ನೆ ಜಾಣಎಂಬಂತಹ ಗೀತಪ್ರಿಯರ ಹಾಸ್ಯಪೂರ್ಣ ಹಾಡುಗಳು ಅವರ ಆಳವಾದ ಸಾಮರ್ಥ್ಯಕ್ಕೆ ಮತ್ತೊಂದು ಸಾಕ್ಷಿ.

ಗೀತಪ್ರಿಯರಂತಹ ಸದಭಿರುಚಿಯ ಚಿತ್ರಸಾಹಿತಿ, ಚಿತ್ರನಿರ್ದೇಶಕ ಸಾರ್ವಕಾಲಿಕವಾಗಿ ಪ್ರಿಯರಾಗುತ್ತಾರೆ.   ಇಷ್ಟೊಂದು ಸಾಧಿಸಿದ ಈ ಹಿರಿಯರು ಅನಾರೋಗ್ಯದಿಂದ ಬಳಲಿ ಹಣಕಾಸಿನ ಪರಿಸ್ಥಿತಿಯಿಂದ ಕಷ್ಟದಲ್ಲಿದ್ದರೂ ಎಂಬ ಮಾತುಗಳೂ ಕೂಡಾ ಪತ್ರಿಕೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಕಟಗೊಂಡಿತ್ತು.   ಅವರು ಇಂದು ನಿಧನರಾದದ್ದು ಕೂಡಾ ಸರ್ಕಾರಿ ಆಸ್ಪತ್ರೆಯಲ್ಲೇ.  ಸಾವೆಂಬುದು ಅನಾರೋಗ್ಯ, ಹಣಕಾಸಿನ ಬಡತನ ಮುಂತಾದ ಹತ್ತು ಹಲವು ನೋವುಗಳಿಗೆ ಬಿಡುಗಡೆಯೂ ಹೌದು.   ಗೀತಪ್ರಿಯರಂತಹ ಗೀತ ರಚನಕಾರರು ಹಾಗೂ ನಿರ್ದೇಶಕರು ಈ ನಾಡಿನಲ್ಲಿ ಇಲ್ಲವಾಗಿರುವುದು ಒಂದು ಶ್ರೇಷ್ಠ ತಲೆಮಾರಿನ ಕೊಂಡಿ ಕಳಚಿದ ಭಾವ ನೀಡುತ್ತಿದೆ.  ಇವರ ಆತ್ಮಕ್ಕೆ ಶಾಂತಿ ಸಿಗಲಿ.  ಗೀತಪ್ರಿಯರಂತಹ  ಶ್ರೇಷ್ಠರ ನಿಪುಣತೆ ಕಲಾರಂಗದಲ್ಲಿ ಮೂಡುವ ಮುಂದಿನ ಪ್ರತಿಭೆಗಳಿಗೆ ಮಾದರಿಯಾಗಲಿ.

(ಗಂಗಾಧರ ಮೊದಲಿಯಾರ್ ಅವರು ಪ್ರಜಾವಾಣಿಗೆ ಬರೆದ ಲೇಖನದ ಹಲವು ಅಂಶಗಳನ್ನು ಈ ಲೇಖನಕ್ಕೆ ಕೃತಜ್ಞತೆ ಮತ್ತು ಗೌರವಗಳೊಂದಿಗೆ ಅಳವಡಿಸಿಕೊಂಡಿದ್ದೇನೆ)

ಕಾಮೆಂಟ್‌ಗಳಿಲ್ಲ: