ಗುರುವಾರ, ಫೆಬ್ರವರಿ 18, 2016

ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಛಲತೊಟ್ಟ ಭಾರ್ಗವ

ಎಚ್. ಕೆ.  ಭಾರ್ಗವ

ಕಂಪ್ಯೂಟರ್ ತಂತ್ರಜ್ಞಾನದಲ್ಲಿ  ಉತ್ತಮ ಸಾಧನೆಗಳೊಂದಿಗೆ ಇಂಜಿನಿಯರಿಂಗ್ ಪದವಿ, ಎಂಟೆಕ್ ಪದವಿಗಳನ್ನು ಪಡೆದು ಪಿ.ಎಚ್.ಡಿ ಪದವಿಗೂ ಸಮೀಪದಲ್ಲಿ  ಒಬ್ಬ  ವ್ಯಕ್ತಿ ಇದ್ದಾರೆಂದರೆ  ನಾವು ಅವರನ್ನು ಹೇಗೆ ಊಹಿಸಬಹುದು?  ಅವರು ವಿಶ್ವಪ್ರಖ್ಯಾತ ನಗರದ, ವಿಶ್ವಪ್ರಖ್ಯಾತ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ  ದೊಡ್ಡ ಅಂಕೆಯ  ಸಂಬಳದ  ಹುದ್ದೆಯಲ್ಲಿದ್ದಾರೆ  ಇತ್ಯಾದಿ ಇತ್ಯಾದಿ  ಊಹೆಗಳು  ಇಂದಿನ ಯುಗದಲ್ಲಿ  ಸರ್ವೇಸಾಮಾನ್ಯ.  ಆದರೆ  ಈ ಎಲ್ಲಾ  ಸಾಧನೆಗಳನ್ನೆಲ್ಲಾ ಮಾಡಿದ್ದರೂ  ಶಿಕ್ಷಣಕ್ಷೇತ್ರದಲ್ಲಿ ಗಣನೀಯ ರೀತಿಯಲ್ಲಿ  ಕೊಡುಗೆ ನೀಡಬೇಕು ಎಂಬ  ಸಮಾಜಮುಖಿ   ನಿಲುವನ್ನು ತಳೆದು ಶಿಕ್ಷಣಕ್ಷೇತ್ರದತ್ತ  ಒಲಿದು ಬಂದವರು ನಮ್ಮ ಗೆಳೆಯ ಎಚ್. ಕೆ. ಭಾರ್ಗವ.

ಮೇ 5, 1983ರ ವರ್ಷದಲ್ಲಿ  ಕೊಪ್ಪಳ  ಜಿಲ್ಲೆಯ ಯಲಬುರ್ಗಾ  ತಾಲ್ಲೂಕಿನ  ಕರಮುಡಿ ಗ್ರಾಮದಲ್ಲಿ ಜನಿಸಿದ  ಭಾರ್ಗವರ  ಕುಟುಂಬವೆಲ್ಲಾ  ಶಿಕ್ಷಕರಿಂದಲೇ  ತುಂಬಿ ತುಳುಕುತ್ತಿರುವಂತದ್ದು.  ತಂದೆ  ಹನುಮಂತಪ್ಪ  ಮತ್ತು ತಾಯಿ ಅನ್ನಪೂರ್ಣ  ಇಬ್ಬರೂ ನಿಷ್ಟಾವಂತ  ಶಿಕ್ಷಕರಾದ್ದರಿಂದ  ಶಿಕ್ಷಕ ಪ್ರವೃತ್ತಿ  ಭಾರ್ಗವರಲ್ಲಿ  ರಕ್ತಗತವಾದ  ಆಸಕ್ತಿಯಾಗಿಬಿಟ್ಟಿದೆ.  ಗ್ರಾಮೀಣ ಪರಿಸರದಲ್ಲಿ  ಬೆಳೆದರೂ  ಓದಿನಲ್ಲಿ  ನಿರಂತರವಾಗಿ  ಉನ್ನತ ದರ್ಜೆಯನ್ನು ಕಾಯ್ದುಕೊಂಡು, ಗಣಕ ಯಂತ್ರ ವಿಜ್ಞಾನದಲ್ಲಿ   ಬಿ.ಟೆಕ್,  ಎಂ.ಟೆಕ್  ಪದವಿಗಳನ್ನು ಗಳಿಸಿರುವ  ಭಾರ್ಗವರು ಪ್ರಸಕ್ತದಲ್ಲಿ ಗದಗ ಜಿಲ್ಲೆಯ,  ಲಕ್ಷ್ಮೇಶ್ವರದ, ಅಗಡಿ ತಾಂತ್ರಿಕ  ಮಹಾವಿದ್ಯಾಲಯದಲ್ಲಿ  ಸಹ ಪ್ರಾಧ್ಯಾಪಕ ಹುದ್ದೆಯನ್ನು ಅಲಂಕರಿಸಿ  ತಮ್ಮ ವೃತ್ತಿಪರವಾದ  ತಾಂತ್ರಿಕ  ಜ್ಞಾನವನ್ನು  ವಿದ್ಯಾರ್ಥಿಗಳಿಗೆ  ಬೋಧಿಸುತ್ತಿದ್ದಾರೆ.  ಜೊತೆಗೆ  ತಮ್ಮ ಜ್ಞಾನಾರ್ಜನೆಗೆ  ಯಾವುದೇ  ವಿರಾಮ  ಹಾಕದೆ  ಬಸವೇಶ್ವರ  ತಾಂತ್ರಿಕ  ಮಹಾವಿದ್ಯಾಲಯದ  ಗಣಕ ಯಂತ್ರ ವಿಜ್ಞಾನ  ವಿಭಾಗದ  ಮುಖ್ಯಸ್ಥರಾದ  ಡಾ.  ವೀರಪ್ಪ ಪಾಗಿ  ಅವರ ಮಾರ್ಗದರ್ಶನದಲ್ಲಿ  ಪಿ. ಎಚ್.ಡಿ ಪದವಿಗಾಗಿನ  ಸಂಶೋಧನೆಯಲ್ಲೂ    ನಿರತರಾಗಿದ್ದಾರೆ. 

ತಾವಾಯಿತು  ತಮಗೆ ಸಂಬಳ ತರುವ ಕಸುಬಾಯಿತು  ಎಂಬ  ಜಾಯಮಾನ  ಭಾರ್ಗವರದ್ದಲ್ಲ.  “ಶಾಲಾ ಶಿಕ್ಷಣ ವ್ಯವಸ್ಥೆಗಳು ಇಂದಿನ ಮಕ್ಕಳಿಗೆ  ಏನನ್ನು ಕಲಿಯಬೇಕು ಎಂಬುದರ ಕುರಿತು  ತಿಳುವಳಿಕೆ  ನೀಡುತ್ತಿಲ್ಲ, ಮಕ್ಕಳಲ್ಲಿ   ವಿಚಾರ ಶಕ್ತಿಯನ್ನು ಬೆಳೆಸುತ್ತಿಲ್ಲ,  ಮಕ್ಕಳಲ್ಲಿ  ಸ್ವಾಭಾವಿಕವಾಗಿ  ವಿಚಾರಶಕ್ತಿ  ಬೆಳೆಯುವ  ಸಾಧ್ಯತೆಗಳು ಇರುವುದು ನಿಜವಾದರೂ  ಆ ವಿಚಾರಶಕ್ತಿಗೆ ಸ್ಪಷ್ಟತೆಯನ್ನು  ಗಳಿಸಿಕೊಳ್ಳುವುದರಲ್ಲಿ  ನೆರವಾಗುತ್ತಿಲ್ಲ”  ಎಂಬ  ಅತೃಪ್ತ  ಭಾವ  ಭಾರ್ಗವರ ಅಂತರಾಳದಲ್ಲಿ  ತುಂಬಿಕೊಂಡಿತ್ತು.   ಆಸಕ್ತರಿಗೆ ತಾನೇ ತಾನಾಗಿ ಹಲವು ದಾರಿಗಳು ತೆರೆದುಕೊಳ್ಳುತ್ತವೆ!  ಅಂತಹ  ಒಂದು ದಾರಿ  ಭಾರ್ಗವರ ಮುಂದೆಯೂ  ತೆರೆದುಕೊಂಡಿತು.....

ಒಮ್ಮೆ  ಭಾರ್ಗವರಿಗೆ  ಶಿಕ್ಷಣದಲ್ಲಿ  ಇರುವ  ಶ್ರದ್ಧೆ,  ಚಾಕಚಕ್ಯತೆ,  ಪ್ರೀತಿ ಹಾಗೂ ಅವರು ಅನುಸರಿಸುತ್ತಿದ್ದ ಸ್ವತಂತ್ರ  ರೀತಿಯ ಬೋಧನಾ  ಕೌಶಲದ  ನಿಲುವುಗಳ  ಬಗ್ಗೆ  ಅರಿವಿದ್ದ  ಶಿಕ್ಷಣ ಅಧಿಕಾರಿಗಳೊಬ್ಬರು  ಗ್ರಾಮೀಣ  ಶಾಲೆಯೊಂದರಲ್ಲಿ  ಕಲಿಸುತ್ತಿರುವ  ಶಿಕ್ಷಕರಿಗೆ  ಅವರು  ಅನುಸರಿಸುವ  ಬೋಧನಾ  ಮಾರ್ಗದ  ಕುರಿತಾಗಿ ತಿಳುವಳಿಕೆ  ನೀಡುವಂತೆ  ಆಹ್ವಾನವೊಂದನ್ನು ನೀಡಿದಾಗ,  ಅದು  ಸಾಂಕ್ರಾಮಿಕ ಸುದ್ಧಿಯಂತೆ  ಊರೂರುಗಳ  ಶಾಲೆಗಳನ್ನು ತಲುಪಿ, ಇಂದು ಭಾರ್ಗವರಿಂದ  ತರಬೇತಿ ಪಡೆದ ಶಿಕ್ಷಕರ ಸಂಖ್ಯೆ  4000ವನ್ನು ಮೀರಿವೆ.  ‘ಆರ್ಟ್ ಆಫ್  ಟೀಚಿಂಗ್’ ಎಂಬ ಪರಿಕಲ್ಪನೆಯೊಂದಿಗೆ  ನಡೆಯುತ್ತಿರುವ ಭಾರ್ಗವ ಅವರ  ಶಿಕ್ಷಕ ತರಬೇತಿ ಕಾರ್ಯಕ್ರಮಗಳು  ಯಲಬುರ್ಗಾ,  ಹೊಸಪೇಟೆ, ಲಕ್ಷ್ಮೇಶ್ವರ, ದಾವಣಗೆರೆ, ಶಿಂಗನೂರು,  ಆಂಧ್ರದ ಕುಪ್ಪಂ  ಮುಂತಾದ  ಊರುಗಳಲ್ಲದೆ ಧಾರವಾಡ,  ಮೈಸೂರು, ಬೆಂಗಳೂರುಗಳಂತಹ   ಕೇಂದ್ರಗಳ  ಶಾಲೆಗಳಲ್ಲೂ    ನೆರವೇರುತ್ತಿವೆ. 

ತಾವು  ಅನುಸರಿಸುತ್ತಿರುವ  ಶಿಕ್ಷಣ ಪದ್ಧತಿಯ ಬಗ್ಗೆ  ಆಪ್ತತೆಯಿಂದ  ತಮ್ಮನ್ನು ತೆರೆದಿಟ್ಟುಕೊಳ್ಳುವ  ಭಾರ್ಗವರು “ಸಾಂಪ್ರಾದಾಯಿಕ ಬೋಧನಾ ಕಲೆ ಮತ್ತು  ಇಂದಿನ  ಸಾಂಕೇತಿಕ  ಬೋಧನಾ ಕಲೆಯ ತಾಕಲಾಟಗಳ  ನಡುವೆ ಒಂದು ಹೊಸ ಬೋಧನಾ ಪದ್ಧತಿಯನ್ನು  ಹೇಳಿಕೊಡುತ್ತಿದ್ದೇನೆ.  ಎಲ್ಲಕ್ಕಿಂತ  ಮಿಗಿಲಾಗಿ  ವೇದಿಕ ಗಣಿತದ ಬಗ್ಗೆ  ಹೆಚ್ಚು ಒತ್ತು  ಕೊಡುತ್ತಿದ್ದೇನೆ.  ಶಿಕ್ಷಕರಿಗೆ  ಶಬ್ದಸಂಗ್ರಹ, ಭಾಷಾ ಪ್ರಾವೀಣ್ಯತೆ  ಹೆಚ್ಚಿಸಿಕೊಳ್ಳುವುದರಲ್ಲಿ ಮಾರ್ಗದರ್ಶನ  ನೀಡುವುದರ ಜೊತೆ ಜೊತೆಗೆ,  ಶಾಲಾ ಕೊಠಡಿಯಲ್ಲಿ ಮಕ್ಕಳನ್ನು ನಿಯಂತ್ರಿಸುವ ಬಗ್ಗೆ ಹಾಗೂ  ಮಕ್ಕಳಲ್ಲಿ  ಕಲಿಕಾ ಸುಧಾರಣೆಗಳನ್ನು  ಮೂಡಿಸುವ ಬಗ್ಗೆ  ಶಿಕ್ಷಕರಿಗಾಗಿ  ಸಲಹಾತ್ಮಕ   ವಿಧಾನಗಳ ಮೂಲಕ  ಮಾರ್ಗದರ್ಶನ ಮಾಡುತ್ತಿದ್ದೇನೆ”  ಎಂದು  ವಿವರಣಾತ್ಮಕವಾಗಿ  ತಮ್ಮ ಕಾರ್ಯಕ್ರಮ  ರೂಪುರೇಷೆಗಳನ್ನು  ಬಿಡಿಸಿ ಹೇಳುತ್ತಾರೆ. 

ಹನ್ನೆರಡನೇ ಶತಮಾನದಲ್ಲಿ  ಹೇಗೆ  ಶೂನ್ಯದಿಂದ  ಅಕ್ಷರ ಕ್ರಾಂತಿಯಾಯಿತು  ಎಂಬ  ಬಸವಣ್ಣನವರ  ಮಾದರಿ”   ಅನುಸರಣ ಯೋಗ್ಯ ಎಂದು   ಭಾರ್ಗವರು ಆಳವಾಗಿ ನಂಬಿದ್ದಾರೆ.  ಗಣಿತದ  ಲೆಕ್ಕಾಚಾರದ ನಿಟ್ಟಿನಲ್ಲಿ ಪ್ರಸ್ತುತತೆಯಲ್ಲಿ  ಇದನ್ನು  ನಿಟ್ಟಿಸುವ ಭಾರ್ಗವರು  ಇದು  12ನೆಯ ಶತಮಾನದದಲ್ಲಿ ನಡೆದ  ಕ್ರಾಂತಿ ಎಂಬುದನ್ನು  ನೆನೆಯುತ್ತಾ, 12ನ್ನು ಉಲ್ಟಾ ಮಾಡಿಕೊಂಡಾಗ 21 ಆಗುತ್ತದೆ. ಅಂದರೆ ಇಂದು  ನಾವಿರುವ  21ನೆಯ ಶತಮಾನ, ಅಂದಿನ ಇತಿಹಾಸದ ಪುನರಾವರ್ತನೆಗೊಂದು ನಾಂದಿಯಂತಿದೆ  ಎಂದು  ಹೇಳುವಲ್ಲಿ ಅವರಲ್ಲೊಂದು  ಆಪ್ತತೆಯ ಮಿನುಗಿದೆ.  ಇದರ ಪ್ರಯೋಜನ  ಇಂದಿನ  ಶಿಕ್ಷಕರ ಮೂಲಕ  ಉತ್ತಮವಾಗಿ  ವಿದ್ಯಾರ್ಥಿಗಳನ್ನು  ಮೊಳಕೆಯಲ್ಲೇ  ತಲುಪಬೇಕು  ಎಂಬ  ಸದುಧ್ಯೇಯವನ್ನು  ಭಾರ್ಗವ ಅವರು ತಮ್ಮದಾಗಿರಿಸಿಕೊಂಡಿದ್ದಾರೆ. ಭಾರ್ಗವರು  ಈ ಕಾಯಕವನ್ನು  ಹೆಚ್ಚಿನ  ಸಂಪಾದನೆಯ ಹಾದಿಯನ್ನಾಗಿ  ಮಾಡಿಕೊಂಡಿಲ್ಲ.  ತಮ್ಮ ಬದುಕಿಗೆ  ತಾವು  ನಿರ್ವಹಿಸುತ್ತಿರುವ  ಕಾಲೇಜು ಅಧ್ಯಾಪನದ ಸಂಬಳವನ್ನು ಮಾತ್ರ  ಅವಲಂಬಿಸಿರುವ  ಭಾರ್ಗವರು  ತಮಗೆ  ಶಿಕ್ಷಕರ ತರಬೇತಿಯಿಂದ  ಬರುವ ಸಂಭಾವನೆಗಳೆಲ್ಲವನ್ನೂ ವಿದಾರ್ಥಿಗಳಿಗೆ  ಶಬ್ದಕೋಶ,  ಉತ್ತಮ  ಜ್ಞಾನಪ್ರಚೋದನಾ  ಪುಸ್ತಕಗಳ  ರೂಪದಲ್ಲಿ  ಕೊಡುಗೆಯಾಗಿ  ಹಿಂದಿರುಗಿಸಿಬಿಡುತ್ತಿದ್ದಾರೆ.

ಭಾರ್ಗವ ಅವರು  ಹಲವು ಪತ್ರಿಕೆಗಳಲ್ಲಿ  ಬೋಧನಾ ಕಲೆ ಬಗ್ಗೆ  ಅಂಕಣಕಾರರೂ ಆಗಿದ್ದಾರೆ.  ಎಚ್.  ಕೆ.  ಭಾರ್ಗವರು ನಡೆಸುತ್ತಿರುವ  ಸಮಸ್ತ  ಶಿಕ್ಷಕ  ತರಬೇತಿಯ  ಅರಿವಿನ  ರಸಪಾಕವಾಗಿ  ‘ಅಭಿಪ್ರೇರಣೆಯ ಬೋಧನಾ ಕೌಶಲ್ಯ’  ಎಂಬ ಗ್ರಂಥ  ಕಳೆದ  ಜನವರಿ  ತಿಂಗಳಿನಲ್ಲಿ ಬಿಡುಗಡೆಗೊಂಡು  ಒಂದೇ ತಿಂಗಳ  ಅವಧಿಯಲ್ಲಿ  ಬಹುತೇಕ  ಪ್ರತಿಗಳು   ಮಾರಾಟವಾದ  ಸೌಭಾಗ್ಯವನ್ನು ಕಂಡಿವೆ. 

ಭಾರ್ಗವ ಅವರ ಕಾಯಕದ ಕುರಿತು  ಅವರ ಹೋದೆಡೆಯಲ್ಲೆಲ್ಲಾ  ಸಹೃದಯತಾ  ಭಾವ ಹೊರಹೊಮ್ಮುತ್ತಿದೆ.  ಅವರ  ಕಾಯಕವನ್ನು  ಶ್ಲಾಘನಾ ಭಾವದಿಂದ  ಕಂಡಿರುವ ಹಲವಾರು ಶಿಕ್ಷಣ ಸಂಸ್ಥೆಗಳು ಮತ್ತು  ಸಾರ್ವಜನಿಕ  ಸೇವಾ ಸಂಸ್ಥೆಗಳು  ಅವರನ್ನು  ಹಲವು ರೀತಿಯ ಗೌರವಗಳಿಂದ  ಸಂಮಾನಿಸಿವೆ. 

ಭಾರ್ಗವ  ಅವರ  ಈ ಜ್ಞಾನ ಪ್ರಸರಣ ಕ್ರಾಂತಿ  ಹೆಚ್ಚು  ಹೆಚ್ಚು  ಪ್ರಜ್ವಲಿಸಿ  ಎಲ್ಲೆಡೆಯಲ್ಲಿ  ಶಿಕ್ಷಣದಲ್ಲಿ  ಮಹತ್ವದ  ಬದಲಾವಣೆ ಮೂಡಲಿ.  ಭಾರ್ಗವರ  ಕೃತಿಗಳು  ಇನ್ನೂ ಹೆಚ್ಚು ಹೆಚ್ಚು  ಬೆಳಕು ಕಾಣಲಿ.  ಅವರಿಂದ  ಶಿಕ್ಷಣ ಕ್ಷೇತ್ರಕ್ಕೆ  ಹಾಗೂ ಸಮಾಜದಲ್ಲಿ ಉತ್ತಮತೆಯ ಬದಲಾವಣೆಗೆ  ಮಹತ್ತರವಾದ  ಕೊಡುಗೆಗಳು ನಿರಂತರವಾಗಿ  ಮೂಡುತ್ತಲೇ  ಇರಲಿ. ಅವರ ಉತ್ಸಾಹ  ಶಕ್ತಿ ಸಾಮರ್ಥ್ಯಗಳು  ನಿರಂತರವಾಗಿ  ಬೆಳೆಯುತ್ತಲೇ  ಇರಲಿ  ಎಂದು ಹಾರೈಸೋಣ. 

ಭಾರ್ಗವ ಅವರನ್ನು  ಹೀಗೂ ಸಂಪರ್ಕಿಸಬಹುದು.    
ದೂರವಾಣಿ :090089 82657  
ಫೇಸ್ಬುಕ್ಕಿನಲ್ಲಿ Bhargav H K Ravi
ಈಮೈಲ್: bhargavwin@gmail.com
ವಾಸ:  ವಿವೇಕಾನಂದನಗರ,  ಗದಗ

Tag: H K Bhargav
ಕಾಮೆಂಟ್‌ಗಳಿಲ್ಲ: