ಸೋಮವಾರ, ಮಾರ್ಚ್ 21, 2016

ರವಿ ತಿರುಮಲೈ

ರವಿ ತಿರುಮಲೈ

ಇಂದು ನನ್ನ ಆತ್ಮೀಯರೂ, ಫೇಸ್ಬುಕ್ ವಲಯದಲ್ಲಿ  ಕಗ್ಗದ ಗುರುವರ್ಯ  ಎಂದು  ಆಪ್ತವಾಗಿ  ಗುರುತಿಸಲ್ಪಡುವ  ರವಿ ತಿರುಮಲೈ ಅವರ ಜನ್ಮದಿನ.  ನಮಗೆಲ್ಲಾ ತಿಳಿದ  ಹಾಗೆ  ರವಿ ತಿರುಮಲೈ ಅವರು  ಡಿ. ವಿ. ಗುಂಡಪ್ಪನವರ  ಮಂಕುತಿಮ್ಮನ ಕಗ್ಗದ ಕುರಿತಾದ  ವ್ಯಾಖ್ಯಾನಗಳನ್ನು ಈಗಾಗಲೇ  3 ಬೃಹತ್  ಸಂಪುಟಗಳಲ್ಲಿ ಹೊರತಂದಿದ್ದಾರೆ.  ಇದು  ಫೇಸ್ಬುಕ್ಕಿನ  ಬ್ಲಾಗ್ ಮೂಲಕ  ಪ್ರತಿನಿತ್ಯ ಹರಿದು ಬಂದು  ಆ ನಂತರದಲ್ಲಿ  ಪ್ರೀತಿಪಾತ್ರರ ಒತ್ತಾಯದ ಮೇರೆಗೆ ಗ್ರಂಥರೂಪದಲ್ಲಿ  ಹೊರಹೊಮ್ಮಿ ಬಂತು  ಎಂಬುದು ನಮಗೆಲ್ಲರಿಗೂ ತಿಳಿದ ವಿಚಾರ.  ಈ ಪ್ರತಿಯೊಂದು ಸಂಪುಟ ಹೊರಬಂದಾಗ  ಅದಕ್ಕೆ  ನಡೆದ ಸಮಾರಂಭದ  ವೈಖರಿ ಮತ್ತು  ಅದು  ಆಪ್ತರೀತಿಯಲ್ಲಿ  ಜನರನ್ನು ಒಂದು ಸೇರಿಸಿದ ಬಗೆ ಮನನೀಯವಾದದ್ದು.  ಫೇಸ್ಬುಕ್  ಗೆಳೆಯರು ಬಹುತೇಕವಾಗಿ  ಒಬ್ಬರಿಗೊಬ್ಬರು ಮುಖ ನೋಡಿದ್ದು  ಇಂತಹ ಸಮಾರಂಭಗಳ ಮೂಲಕ.  ಇಂತಹ  ಸಮಾರಂಭಗಳು  ಇತ್ತೀಚೀನ ದಿನಗಳಲ್ಲಿ   ಹಲವಾರು  ಗೆಳೆಯ ಗೆಳತಿಯರ  ಪುಸ್ತಕ ಬಿಡುಗಡೆ  ಮುಂತಾದ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿಲ್ಲದೆ  ಹಲವಾರು ಮಹನೀಯರ ಸ್ಮರಣೆ ರೂಪದ ಕಾರ್ಯಕ್ರಮಗಳಾಗಿ ಸಹಾ  ಹೆಚ್ಚು ಹೆಚ್ಚು ನಡೆಯುತ್ತಿರುವುದು  ಕನ್ನಡ ಭಾಷೆಗೆ  ಒಂದು ಹೊಸ ವ್ಯಾಪ್ತಿಯಾಗಿ  ಸಹಾ ಕಾಣುತ್ತಿದೆ. 

ಮಂಕುತಿಮ್ಮನ  ಕಗ್ಗದಂತಹ  ಒಂದು  ಭಗವದ್ಗೀತಾ  ಸದೃಶ ಗ್ರಂಥದ ಕುರಿತು ಸುಮಾರು ಸಹಸ್ರ ಪುಟಗಳ ಬಗ್ಗೆ  ಬರೆದ ಮಹನೀಯರನ್ನು  ಹೇಗೆ ಉಲ್ಲೇಖಿಸಬೇಕುಈ ಪ್ರಶ್ನೆ ಹುಟ್ಟುವುದು ಏಕೆ ಅಂದರೆ  ರವಿ ತಿರುಮಲೈ ಅವರಿಗಿರುವ  ಸರಳ  ಸಜ್ಜನಿಕೆಯಲ್ಲಿ.  ಅವರು ತಮ್ಮ ಕಗ್ಗರಸಧಾರೆಯ  ಪ್ರಸ್ತಾವನೆಯನ್ನು  ಪ್ರಾರಂಭಿಸುವುದೇ ನಾನು ಸಾಹಿತಿಯೂ  ಅಲ್ಲ ಲೇಖಕನೂ ಅಲ್ಲಎಂದು.  ಹೀಗೆನ್ನುವ  ವ್ಯಕ್ತಿಯ ಕೈಂಕರ್ಯವನ್ನು ಏನೆನ್ನಬೇಕುಅದು ಅವರಿಗೆ  ಭಕ್ತಿ. ಆ ಭಕ್ತಿಯಿಂದ ಅವರು ತಮ್ಮನ್ನು  ತಮ್ಮಿಂದ ಹೊರಗಿಟ್ಟುಕೊಂಡು ಆಂತರ್ಯದ ಮೂಲಕ  ಹೇಳಿರುವುದರಿಂದಲೇ ಅದು ಅಷ್ಟೊಂದು ಆಪ್ತ ಹೃದಯಗಳನ್ನು ತಟ್ಟಿದೆ.  ಈ ಭಾವ ಅವರ ಹೃದಯದಲ್ಲಿ ತುಂಬಿರುವುದರಿಂದಲೇ  ರವಿ ತಿರುಮಲೈ ಅವರಿಗೆ  ಕಗ್ಗ ರಸಧಾರೆಯನ್ನು  ಹೊರಹೊಮ್ಮಿಸುವಾಗ, ಎಷ್ಗೊಂದು ಕೃತಿಗಳು ಈಗಾಗಲೇ  ಬಂದಿವೆ.  ಎಷ್ಟೊಂದು  ದೊಡ್ಡವರು ಇದರ ಬಗ್ಗೆ  ಹೇಳಿದ್ದಾರೆಈಗ  ನಾನೇಕೆ  ಎಂಬ  ಭಾವ  ಕಾಡಿದಂತಿಲ್ಲ.  ಭಕ್ತಿಗೆ  ಆ ಪ್ರಶ್ನೆಗಳು ಹುಟ್ಟುವುದಿಲ್ಲ.  ಅದು  ಯಾವಾಗಲೂ ಶರಣಾಗತಿಯತ್ತ  ಹೊರಟು ಇದು ನನ್ನದಲ್ಲ  ಇದು ನಿನಗೆ ಅರ್ಪಣೆ ಎನ್ನುತ್ತದೆ.  ಅಂತಹ  ಆಧ್ಯಾತ್ಮ ಭಾವದಿಂದ  ರವಿ ತಿರುಮಲೈ ಅವರು  ಕೆಲಸ  ಮಾಡಿದ್ದಾರೆ.  ಕಳೆದ ವಾರದಲ್ಲಿ  ಡಿ.ವಿ.ಜಿ ಅವರ  ಹುಟ್ಟುಹಬ್ಬದ ಸಂದರ್ಭದಲ್ಲಿ  ಫೇಸ್ಬುಕ್ಕಿಗೆ ಸಂಬಂಧಪಟ್ಟ  ಸ್ನೇಹ ವಲಯಗಳೇ, ಹಲವೆಡೆಗಳಲ್ಲಿ  ಯಾವುದೇ ರೀತಿಯ  ಏಕತಾನತೆ ಇಲ್ಲದ ಹಾಗೆ  ವಿವಿಧರೀತಿಯಲ್ಲಿ  ಮನೋಜ್ಞವಾಗೆಂಬ ಹಾಗೆಜನತುಂಬಿದ  ಆತ್ಮೀಯ ಕಾರ್ಯಕ್ರಮಗಳನ್ನು ನಡೆಸಿದವು.  ಒಂದು ಭಕ್ತಿ  ಹಲವೆಡೆಗಳಲ್ಲಿ  ಹೊರಹೊಮ್ಮಿಸುವ ಸುಸಂಸ್ಕೃತಿಯ  ನಾದದ  ಅಲೆಯಿದು  ಎಂದು ಅನಿಸುತ್ತದೆ.

ಮೂಲತಃ ಕೋಲಾರ ಜಿಲ್ಲೆಯವರಾದ ರವಿ ತಿರುಮಲೈ ಅವರು  ವಾಣಿಜ್ಯ ಪದವಿ ಪಡೆದು ಕೆನರಾ ಬ್ಯಾಂಕಿನಲ್ಲಿ  ಎರಡು ದಶಕಗಳ ಸೇವೆ ಸಲ್ಲಿಸಿ, ಐಚ್ಛಿಕ ನಿವೃತ್ತಿ ಪಡೆದು, ಹಲವಾರು ವರ್ಷಗಳ ಕಾಲ ಮೈಸೂರಿನಲ್ಲಿ ವಾಸಿಸಿ, ಪ್ರಸ್ತುತ ಬೆಂಗಳೂರಿನ ನಿವಾಸಿಯಾಗಿದ್ದಾರೆ.  ಪತ್ನಿ, ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿಯ ಸುಖೀ ಸಂಸಾರ ಅವರದ್ದು.  ಕನ್ನಡ ಪ್ರೇಮ, ಅಧ್ಯಯನ, ತರ್ಜುಮೆ, ಕವನ - ಹಾಡು ಬರೆಯುವುದು, ರಂಗಭೂಮಿ, ಹಳೆಯ ಚಿತ್ರ ಸಂಗೀತ ಹೀಗೆ ವೈವಿಧ್ಯಮಯ ಸುಸಂಸ್ಕೃತ ಆಸಕ್ತಿಗಳ  ನೆಲೆ ಅವರಲ್ಲಿದೆ.  ಉತ್ತಮ  ಶಾಸ್ತ್ರೀಯ ಸಂಗೀತದಲ್ಲಿ  ಮುಳುಗಿಹೋಗುವ ತನ್ಮಯತೆ ಅವರಲ್ಲಿದೆ.  ಕಗ್ಗ ರಸಧಾರೆಯನ್ನು  ಅಂತರ್ಜಾಲದಲ್ಲಿ ಹರಿಸಿರುವ  ರವಿ ತಿರುಮಲೈ ಅವರಿಂದ  ಇತ್ತೀಚೆಗೆ ಸುಭಾಷಿತ ರೂಪದ ಚೆನ್ನುಡಿಗಳು  ನಿರಂತರವಾಗಿ ಹರಿದು ಬರುತ್ತಿವೆ.  ರವಿ ತಿರುಮಲೈ ಅವರ  ಕಗ್ಗರಸಧಾರೆ’  ಇದೀಗ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ  ಅಂತರ್ಜಾಲದಲ್ಲಿ  ನಿರಂತರವಾಗಿ ಲಭ್ಯವಾಗುವ  ಅವಕಾಶ ಸಹಾ ಕೂಡಿ ಬಂದಿದೆ. ಅವರ ಚಿಂತನಗಳು ಹಲವಾರು ಪತ್ರಿಕೆಗಳಲ್ಲೂ ಆಗಾಗ  ಹರಿದಿವೆ.

ಎತ್ತರದ ನಿಲುವು, ಹಸನ್ಮುಖದೊಂದಿಗೆ  ಹೊಳೆವ ನಾಮದ  ತಿಲಕ,    ಶುಭ್ರ ಶ್ವೇತ ವಸ್ತ್ರ, ಸುಮಧುರ ಧ್ವನಿ, ಎಲ್ಲರೊಂದಿಗೆ  ನಾನೂ ಒಬ್ಬ ಎನ್ನುವ ಸಜ್ಜನಿಕೆಯ ಆಂತರ್ಯದಿಂದ ಜೊತೆಗೂಡಿದ  ಆಕರ್ಷಕ ವ್ಯಕ್ತಿತ್ವದಿಂದ   ತಮ್ಮೆಡೆಗೆ  ಸೆಳೆಯುವ ಗುಂಪುಆ ಗುಂಪಿನ ನಡುವೆ ಅವರು ಹೊರಡಿಸುವ ಸುಸಂಸ್ಕೃತ ಭಾವವನ್ನು ಮೀರದ  ವಿನೋದ ಪೂರ್ಣ  ಮಾತು ಇವು ರವಿ ತಿರುಮಲೈ ಎಂದರೆ ನಮಗೆ ತಕ್ಷಣಕ್ಕೆ ಬರುವ ಹೃದ್ಭಾವ.  ಇಂತಹ  ಮಹನೀಯರ  ಸ್ನೇಹ ಮಾರ್ಗದರ್ಶನಗಳು ನಮ್ಮೊಂದಿಗೆ ನಿರಂತರ ಇರಲಿ.  ಅವರಿಂದ  ನಾವು  ಹೆಚ್ಚು ಹೆಚ್ಚು ತಿಳಿಯುವಂತಾಗಲಿ.  ಅವರ  ಮತ್ತು ಅವರ ಕುಟುಂಬದವರ  ಬದುಕು  ಸದಾ  ಸುಖ, ಸಂತಸ, ಆರೋಗ್ಯ, ಸೌಭಾಗ್ಯಗಳಿಂದ ಕಂಗೊಳಿಸುತ್ತಿರಲಿ ಎಂಬುದು ನಮ್ಮೆಲ್ಲರ ಹಾರೈಕೆ.  

Tag: Tirumalai Ravi


ಕಾಮೆಂಟ್‌ಗಳಿಲ್ಲ: