ಸೋಮವಾರ, ಏಪ್ರಿಲ್ 4, 2016

ರಘುಪತಿ ಶೃಂಗೇರಿ

ರಘುಪತಿ ಶೃಂಗೇರಿ

ಇಂದು, ನಮ್ಮ ನಾಡಿನ ಅತ್ಯುತ್ತಮ  ರೇಖಾಚಿತ್ರಗಾರರಲ್ಲೊಬ್ಬರಾದ  ನಮ್ಮೆಲ್ಲರ  ಆತ್ಮೀಯ  ಗೆಳೆಯ  ರಘುಪತಿ ಶೃಂಗೇರಿ ಅವರ ಹುಟ್ಟುಹಬ್ಬ.  ಏಪ್ರಿಲ್ 4, 1973ರಂದು ಶೃಂಗೇರಿಯಲ್ಲಿ  ಶೃಂಗೇಶ್ವರ ರಾವ್ ಮತ್ತು ಯಶೋದ  ದಂಪತಿಗಳಿಗೆ  ಜನಿಸಿದ ರಘುಪತಿ ಶೃಂಗೇರಿ ಅವರು  ನಮ್ಮ ನಾಡು ಕಂಡ  ಶ್ರೇಷ್ಠ  ವ್ಯಂಗ್ಯಚಿತ್ರಕಾರರಲ್ಲೊಬ್ಬರಾದ  ಡಾ. ಸತೀಶ್  ಶೃಂಗೇರಿ ಅವರ  ಸಹೋದರರೂ ಹೌದು.

ತಾವು  ಇಷ್ಟಪಟ್ಟ  ಫೈನ್ ಆರ್ಟ್ಸ್  ಮಾಧ್ಯಮದಲ್ಲೇ  ಪದವಿ ಪಡೆದ  ರಘುಪತಿ ಶೃಂಗೇರಿ ಅವರು  ವೃತ್ತಿಯಲ್ಲಿ  ಅಂತರರಾಷ್ಟ್ರೀಯ ಪ್ರಖ್ಯಾತ  ಸಂಸ್ಥೆಯಲ್ಲಿ  ಹಿರಿಯ  ಗ್ರಾಫಿಕ್  ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಪ್ರವೃತ್ತಿಯಲ್ಲಂತೂ ಅವರ  ಕುಂಚ ಸಾಮರ್ಥ್ಯ  ಕಥಾನಕ, ವ್ಯಂಗ್ಯಚಿತ್ರ,  ವ್ಯಕ್ತಿ ರೇಖಾ ಚಿತ್ರಣ, ಕಾಲ್ಪನಿಕ  ಸೃಷ್ಟಿ, ವೆಬ್ ಡಿಸೈನಿಂಗ್,  ಅನಿಮೇಶನ್ ಹೀಗೆ  ಸಕಲ ವೈವಿಧ್ಯಗಳಲ್ಲೂ  ಪ್ರಕಾಶಿಸುತ್ತಾ ಸಾಗಿದೆ.

ರಘುಪತಿ ಶೃಂಗೇರಿ ಅವರ ರೇಖೆಗಳು ಹರಿದಾಡಿದೆಡೆಯಲ್ಲೆಲ್ಲಾ ಅವರ  ಅಭಿಮಾನಿ ಬಳಗವೂ  ವ್ಯಾಪಿಸುತ್ತಾ ಸಾಗಿದೆ.  ಅವರ ರೇಖಾ ಚಿತ್ರಗಳು ವಿವಿಧ ರೀತಿಯ ಪುಸ್ತಕಗಳಲ್ಲಿ ಮೂಡಿ ಆ ಪುಸ್ತಕಗಳ ಆಕರ್ಷಣೆಯನ್ನು ಹೆಚ್ಚಿಸಿದ್ದರೆ, ಅವರ ವ್ಯಂಗ್ಯ ಚಿತ್ರಗಳಂತೂ  ಎಲ್ಲ ರೀತಿಯ ನಿಯತಕಾಲಿಕಗಳು, ವಿಶೇಷಾಂಕಗಳು, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರದರ್ಶನಗಳು ಹೀಗೆ  ತ್ರಿವಿಕ್ರಮರೂಪಿಯಾಗಿ ವ್ಯಾಪಿಸಿವೆ.  ರಘುಪತಿ  ಶೃಂಗೇರಿ ಅವರ  ಚಿತ್ರರೂಪಕಗಳು ರಾಷ್ಟ್ರ ಮತ್ತು  ಅಂತರರಾಷ್ಟ್ರೀಯ ಮಟ್ಟದಲ್ಲಿ   ನಿರಂತರವಾಗಿ  ಬಹುಮಾನಿತಗೊಳ್ಳುತ್ತಿರುವುದು  ಅವರು  ತಮ್ಮ ಶ್ರೇಷ್ಠತೆಯನ್ನು  ನಿರಂತರವಾಗಿ ಬೆಳೆಸಿಕೊಳ್ಳುತ್ತಿರುವುದರ ಸೂಚಕವೂ ಆಗಿದೆ.

ಇಷ್ಟೆಲ್ಲಾ ಸಾಧಿಸಿದ್ದರೂ ಸರಳ ಸಜ್ಜನಿಕೆಯ ರಘುಪತಿ ಶೃಂಗೇರಿ ಅವರು  ತಮ್ಮ ವೃತ್ತಿಯಲ್ಲಿರುವ  ಹಿರಿಕಿರಿಯ  ಕಲಾವಿದರನ್ನೆಲ್ಲಾ  ಅತ್ಯಂತ ಪ್ರೀತಿ ಗೌರವಗಳಿಂದ  ಕಾಣುವುದನ್ನು,  ಅವರು  ಆಗಾಗ  ಬಿಡಿಸುವ  ಮಹನೀಯರ ರೇಖಾಚಿತ್ರಗಳನ್ನು ಕಂಡಾಗಲೆಲ್ಲಾ  ನಮಗೆ  ಮನವರಿಕೆಯಾಗಿ,  ಅವರ ಹಿರಿತನವನ್ನು ಕಂಡು ಮತ್ತಷ್ಟು ಸಂತಸಾಭಿಮಾನಗಳು ಕೂಡಾ ಮೂಡುತ್ತವೆ. 


ನಮ್ಮ ಫೇಸ್ಬುಕ್ ಆವರಣದಲ್ಲಂತೂ  ನಮ್ಮೆಲ್ಲರಿಗೂ   ಫೇಸ್ಬುಕ್ನಲ್ಲಿ   ಪ್ರತಿದಿನ  ಆಗಾಗ ಮೂಗು ತೂರಿಸುವುದಕ್ಕೆ  ಪ್ರಮುಖ  ಆಕರ್ಷಣೆ  ಅಂದರೆ ರಘುಪತಿ ಶೃಂಗೇರಿ ಅಂತಹ  ಕಲಾವಿದರ  ವ್ಯಂಗ್ಯಚಿತ್ರಗಳು.  ನಮ್ಮ ಓದಿನ ಹವ್ಯಾಸ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಎಲ್ಲವನ್ನೂ ಕ್ಷಿಪ್ರವಾಗಿ  ಅರ್ಥೈಸಬಯಸುವ ಮನಗಳಿಗೆ  ಒಂದೆಡೆಯಲ್ಲಿ  ರೇಖಾ ಚಿತ್ರಗಳು ಸುಲಭ  ಗ್ರಾಹ್ಯತೆಯನ್ನು ಒದಗಿಸಿಕೊಡುವಂತದ್ದಾಗಿವೆ.  ಮತ್ತೊಂದೆಡೆಯಲ್ಲಿ  ಆತಂಕ ಹುಟ್ಟಿಸುವ ರಾಜಕೀಯ ವ್ಯವಸ್ಥೆ,  ಆಡಳಿತ ಅವ್ಯವಸ್ಥೆ,  ಹಣದುಬ್ಬರ, ಮಾರುಕಟ್ಟೆ ವ್ಯವಸ್ಥೆ ಇತ್ಯಾದಿ ಕಟು ವ್ಯವಸ್ಥೆಗಳ ವರದಿಗಳನ್ನೆಲ್ಲಾ  ವಿಧಿಯಿಲ್ಲದೆ ನೋಡಬೇಕಾದ ಮನಸ್ಸುಗಳಿಗೆ  ಅದೇ ವಿಚಾರಗಳನ್ನು ವ್ಯಂಗ್ಯಚಿತ್ರಗಳು  ಹಾಸ್ಯರೂಪಕವಾಗಿ ಒದಗಿಸುತ್ತಿವೆ ಎಂದು ನೆನೆದಾಗ, ಆ   ವ್ಯಂಗ್ಯಚಿತ್ರಗಳು  ನೀಡುತ್ತಿರುವ  ಆಪ್ತತೆಯ ಮೌಲ್ಯ ಬೆಲೆ ಕಟ್ಟುವಂತದಲ್ಲ ಎಂಬ ಭಾವದ   ಅರಿವಾಗುತ್ತದೆ.  ಈ ನಿಟ್ಟಿನಲ್ಲಿ ರಘುಪತಿ ಶೃಂಗೇರಿ ಅಂತಹ ಕಲಾವಿದರ  ಕಲೆ ಸದಾ ಸ್ವಾಗತಾರ್ಹ.   ಇಂತಹ ಕಲಾವಿದರ  ಕಲೆ  ಸದಾ ಬೆಳಗುತ್ತಿರಲಿ ಎಂದು ಆಶಿಸುತ್ತಾ  ಗೆಳೆಯ ರಘುಪತಿ ಶೃಂಗೇರಿ ಅವರಿಗೆ  ಆತ್ಮೀಯವಾಗಿ  ಹುಟ್ಟುಹಬ್ಬದ ಹಾರ್ದಿಕ  ಶುಭ ಹಾರೈಕೆಗಳನ್ನು ಸಲ್ಲಿಸೋಣ.  

Tag: Raghupathi Sringeri

ಕಾಮೆಂಟ್‌ಗಳಿಲ್ಲ: