ಬುಧವಾರ, ಏಪ್ರಿಲ್ 13, 2016

ಕಿಶೋರಿ ಅಮೋನ್ಕರ್


ಕಿಶೋರಿ ಅಮೋನ್ಕರ್

ಹಿಂದೂಸ್ಥಾನಿ ಸಂಗೀತ ಗಾಯನದ ಮೇರುಶಿಖರರಲ್ಲೊಬ್ಬರಾದ  ಕಿಶೋರಿ ಅಮೋನ್ಕರ್ ಅವರು  ಖಯಾಲ್ ಶಾಸ್ತ್ರೀಯ ಸಂಗೀತ ಹಾಗೂ  ಸಂಗೀತದ ಸುಗಮ ಶಾಸ್ತ್ರೀಯ ಸ್ವರೂಪಗಳಾದ  ತುಮ್ರಿ ಮತ್ತು ಭಜನ ಸಂಗೀತಗಳಲ್ಲಿ  ಪ್ರಸಿದ್ಧರಾಗಿದ್ದಾರೆ. ಕಿಶೋರಿ ಅಮೋನ್ಕರ್ ಅವರು ಏಪ್ರಿಲ್ 10, 1932ರ ವರ್ಷದಲ್ಲಿ  ಮುಂಬೈನಲ್ಲಿ ಜನಿಸಿದರು.    

ಬಾಲ್ಯದಲ್ಲೇ ತಮ್ಮ ಸಂಗೀತ ಪಾಠಗಳನ್ನು ಅಂಜನಿಬಾಯಿ ಮಲ್ಪೇಕರ ಮತ್ತು  ಜಯಪುರ್ ಘರಾನಾದ ಮಹತ್ವದ ಗಾಯಕಿ ಹಾಗೂ ಹಿಂದೂಸ್ಥಾನಿ ಸಂಗೀತ ಲೋಕದ  ದಿಗ್ಗಜರಾದ ಅಲ್ಲಾದಿಯಾ ಖಾನ್ ಸಾಹೇಬರ ಶಿಷ್ಯೆಯಾದ  ತಮ್ಮ ತಾಯಿ ಮೊಗುಬಾಯ್ ಕುರ್ಡಿಕರ್ ಅವರ ಮಾರ್ಗದರ್ಶನದಲ್ಲಿ ತಮ್ಮ  ಶಾಸ್ತ್ರೀಯ ಸಂಗೀತಭ್ಯಾಸವನ್ನು ಮೊದಲು ಆರಂಭಿಸಿದ  ಕಿಶೋರಿ ಅಮೋನ್ಕರ್ ಅವರು, ಮುಂದೆ ಸಂಗೀತ ಸಾಗರದ  ಇತರ ಶಾಖೆಗಳಲ್ಲೂ ಮಹತ್ವದ ಗುರುಗಳೊಂದಿಗೆ  ಕಲಿಕೆ ನಡೆಸಿ,   ಮಹತ್ವದ ಪ್ರಯೋಗಗಳನ್ನೂ ಕೈಗೊಂಡರು.  1950ರ ದಶಕದ ಉತ್ತರಾರ್ಧದಲ್ಲಿ ಕಿಶೋರಿ ಅಮೋನ್ಕರ್ ಅವರು ಎರಡು ವರ್ಷ ತಮ್ಮ ಧ್ವನಿಯನ್ನು ಕಳೆದುಕೊಂಡಿದ್ದರಾದರೂ ತಮ್ಮ ನಿರಂತರ ಸಾಧನೆಯಿಂದ  ತಮ್ಮ ಧ್ವನಿಯನ್ನು  ಪುನಃ ಗಳಿಸಿಕೊಂಡರು.  ನಿರಂತರ  ಜ್ಞಾನಾಕಾಂಕ್ಷಿಯಾದ  ಕಿಶೋರಿ ಅಮೋನ್ಕರ್ ಅವರು  ಪ್ರಾಚೀನ  ಸಂಗೀತ  ಶಾಸ್ತ್ರಗಳ ಸುದೀರ್ಘ ಅಧ್ಯಯನವನ್ನೂ ಕೈಗೊಂಡವರಾಗಿದ್ದು,  ಆ ಜ್ಞಾನವನ್ನು ತಮ್ಮ ಸಾಧನೆಗಳ ಆಳದಲ್ಲಿ  ಸುದೀರ್ಘವಾಗಿ  ವ್ಯಾಪಿಸಿದ್ದಾರೆ.

ಕಿಶೋರಿ  ಅಮೋನ್ಕರ್ ಅವರಿಗೆ ಸಿನಿಮಾ ಸಂಗೀತದಲ್ಲಿ  ಆಕರ್ಷಣೆ ಹುಟ್ಟಿ 1964ರ ವರ್ಷದಲ್ಲಿ ‘ಗೀತ್ ಗಾಯೋ ಪತ್ತರೋನೆ’ ಚಿತ್ರದಲ್ಲಿ ಹಾಡಿದರಾದರೂ,  ಸಿನಿಮಾ ಕ್ಷೇತ್ರದ ನಡಾವಳಿಗಳ  ಬಗ್ಗೆ  ಬೇಸರ ಹುಟ್ಟಿ ಪುನಃ ಶಾಸ್ತ್ರೀಯ ಸಂಗೀತಕ್ಕೇ ಮರಳಿದರು.  ಮುಂದೆ 1990ರ ವರ್ಷದಲ್ಲಿ ‘ದೃಷ್ಟಿ’ ಎಂಬ ಚಿತ್ರದಲ್ಲಿ ಮಾತ್ರಾ  ಅವರು ಹಾಡಿದ್ದರು.   

ಸುಗಮ ಸಂಗೀತ ಕ್ಷೇತ್ರಗಳಲ್ಲಿ  ತಮ್ಮ ಸಾಧನೆಯಿಂದ ಪ್ರಭಾವಿತರಾದ  ಕಿಶೋರಿ ಅಮೋನ್ಕರ್ ಅವರು,  ತಮ್ಮ ಜಯಪುರ ಘರಾನಾದ  ಸಂಗೀತದಲ್ಲೂ  ಇತರ ಘರಾನಾದ  ಅಂಶಗಳನ್ನು ಅಳವಡಿಸುವ  ಮಹತ್ವದ ಪ್ರಯೋಗಗಳನ್ನು ಕೈಗೊಂಡರು.  ಹೀಗಾಗಿ ಅವರು  ಹಲವಾರು  ರಾಗಗಳಿಗೆ ಬಹಳಷ್ಟು ಕೃತಿಗಳನ್ನು ಅಳವಡಿಸಿದರು.  ಅವರ ಗಾಯನದಲ್ಲಿ ಭಾವುಕತೆಯ  ಆಪ್ತತೆ  ಅಪ್ಯಾಯಮಾನವೆನಿಸುವಂತದ್ಧಾಗಿದೆ.

ಗಾಯನದಲ್ಲಷ್ಟೇ ಅಲ್ಲದೆ  ಸಂಗೀತ ಶಾಸ್ತ್ರದಲ್ಲಿನ  ರಸ ವರ್ಣನೆಗಳ ಕುರಿತಾದ  ವಿಷಯದಲ್ಲಿ ಕಿಶೋರಿ ಅಮೋನ್ಕರ್ ಅವರು ಜನಪ್ರಿಯ  ಉಪನ್ಯಾಸಕರೆನಿಸಿದ್ದು, ಅವರು ಈ ನಿಟ್ಟಿನಲ್ಲಿ ವ್ಯಾಪಕವಾಗಿ ಸಂಚಾರ ಕೈಗೊಂಡು ದೇಶದೆಲ್ಲೆಡೆ ತಮ್ಮ  ಉಪನ್ಯಾಸಗಳನ್ನು ನೀಡಿದ್ದಾರೆ.

ಕಿಶೋರಿ ಅಮೋನ್ಕರ್ ಅವರ ಶಿಷ್ಯ ವೃಂದದಲ್ಲಿ  ಮನಿಕ್ ಭಿಡೆ, ಮೀನಾ ಜೋಷಿ, ಸುಹಾಸಿನಿ ಮುಲ್ಗೊಂವ್ಕರ್, ಅರುಣ್ ದ್ರಾವಿಡ್, ರಘುನಂದನ್ ಪನಿಷ್ಕರ್, ಆರತಿ ಅಂಕಲಿಕರ್, ದೇವಕಿ ಪಂಡಿತ್, ಮೀರಾ ಫನಿಶ್ಕರ್, ಶಿವರಾಜ್ ಶಿತೋಲೆ, ಸಂಗೀತಾ ಕುಲಕರ್ಣಿ  ಮತ್ತು ಕಿಶೋರಿ ಅಮೋನ್ಕರ್ ಅವರ ಮೊಮ್ಮಗಳು ತೆಜಶ್ರೀ ಅಮೋನ್ಕರ್ ಮುಂತಾದ ಅನೇಕ ಪ್ರಸಿದ್ಧರು ಸೇರಿದ್ದಾರೆ. 

ಪದ್ಮಭೂಷಣ ಪ್ರಶಸ್ತಿ , ಪದ್ಮವಿಭೂಷಣ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕೇಂದ್ರ ಸಂಗೀತ ನಾಟಕ ಆಕಾಡೆಮಿ ಫೆಲೋಷಿಪ್ ಮುಂತಾದ  ಅನೇಕ ಪ್ರತಿಷ್ಟಿತ ಗೌರವಗಳು ಕಿಶೋರಿ ಅಮೋನ್ಕರ್ ಅವರನ್ನು ಅರಸಿ ಬಂದಿವೆ.     

ಈ ಮಹಾನ್ ಹಿರಿಯ ಸಂಗೀತ ಸರಸ್ವತಿಗೆ ನಮ್ಮ ನಮನ.  

Tag: Kishori Amonkar

ಕಾಮೆಂಟ್‌ಗಳಿಲ್ಲ: