ಗುರುವಾರ, ಜೂನ್ 2, 2016

ಕೆ. ಶೇಷಾದ್ರಿ ಅಯ್ಯರ್

ಕೆ. ಶೇಷಾದ್ರಿ ಅಯ್ಯರ್ 

ದಿವಾನ್  ಸರ್ ಕೆ. ಶೇಷಾದ್ರಿ ಅಯ್ಯರ್  ಅವರು  ನಮ್ಮ  ನಾಡು ಕಂಡ  ಅಭಿವೃದ್ಧಿಯ ಪ್ರಮುಖ ಹರಿಕಾರರಲ್ಲೊಬ್ಬರು.  ಸುಮಾರು ಹದಿನೆಂಟು ವರ್ಷಗಳ ಕಾಲ ಮೈಸೂರು ಸಂಸ್ಥಾನದ ದಿವಾನರಾಗಿ ದಕ್ಷತೆಯಿಂದ ರಾಜ್ಯಾಡಳಿತ ನಡೆಸಿದವರು ಶೇಷಾದ್ರಿ ಅಯ್ಯರ್; ಅಷ್ಟು ಮಾತ್ರವಲ್ಲ, ಉತ್ತಮ ಮಟ್ಟದ ರಾಜ್ಯ ವ್ಯವಹಾರ ನಿಪುಣ ಎಂಬ ಕೀರ್ತಿಯೂ ಅವರದ್ದಾಗಿತ್ತು.

ಶೇಷಾದ್ರಿ ಅಯ್ಯರ್ ಅವರ ವಂಶದ ಹಿರಿಯರು ಮೊದಲಿಗೆ ಇಂದಿನ ತಮಿಳು ನಾಡಿನ ತಂಜಾವೂರು ಜಿಲ್ಲೆಗೆ ಸೇರಿದ ಗಣಪತಿ ಅಗ್ರಹಾರ ಎಂಬ ಹಳ್ಳಿಯ ನಿವಾಸಿಗರಾಗಿದ್ದು  ಮುಂದೆ  ಇಂದಿನ ಕೇರಳ ರಾಜ್ಯಕ್ಕೆ ಸೇರಿದ ಪಾಲಘಾಟ್  ಸಮೀಪದಲ್ಲಿರುವ ಕುಮಾರಪುರಂಗೆ ಬಂದು ನೆಲೆಸಿದರು. ಶೇಷಾದ್ರಿ ಅಯ್ಯರ್ ಅವರ ತಂದೆ ಅನಂತಕೃಷ್ಣ ಅಯ್ಯರ್ ಅವರು ಕುಮಾರಪುರಂನಿಂದ ಕಲ್ಲೀಕೋಟೆಗೆ ಬಂದು   ಅಲ್ಲಿನ ನ್ಯಾಯಸ್ಥಾನದಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದರು. ಇವರ ಮೊದಲನೆಯ ಹೆಂಡತಿ ಅನಂತ ನಾರಾಯಣಿ. 1826ರ ಸುಮಾರಿನಲ್ಲಿ ಈಕೆಗೆ ಒಬ್ಬ ಗಂಡು ಮಗ ಹುಟ್ಟಿದ; ಆತನ ಹೆಸರು ವೆಂಕಟ ಸುಬ್ರಹ್ಮಣ್ಯ ಅಯ್ಯರ್. ಅನಂತ  ನಾರಾಯಣಿ ಅವರು ತೀರಿಕೊಂಡ ಮೇಲೆ ಅನಂತಕೃಷ್ಣ ಅಯ್ಯರ್ ಅವರು ವೆಂಕಟಲಕ್ಷ್ಮೀ ಎಂಬಾಕೆಯನ್ನು ಮದುವೆಯಾದರು. ಇವರಿಬ್ಬರ ಮಗನಾಗಿ  ಶೇಷಾದ್ರಿ ಅಯ್ಯರ್ ಅವರು  1845ರ ಜೂನ್ 1 ರಂದು ಜನಿಸಿದರು.

ಶೇಷಾದ್ರಿ ಅಯ್ಯರ್  ಅವರು  ಇನ್ನೂ ಏಳೆಂಟು ತಿಂಗಳ ಮಗುವಾಗಿರುವಾಗಲೇ  ತಂದೆ  ಅನಂತಕೃಷ್ಣ ಅಯ್ಯರ್  ಅವರು  ತೀರಿಕೊಂಡರು.  ಆಗ ಶೇಷಾದ್ರಿ ಅಯ್ಯರ್  ಅವರ ತಂದೆಯವರ   ಹಿರಿಯಪತ್ನಿಗೆ  ಜನಿಸಿದ್ದ   ಅಣ್ಣ ವೆಂಕಟ ಸುಬ್ರಹ್ಮಣ್ಯ ಅಯ್ಯರ್  ಅವರಿಗೆ   ವಯಸ್ಸು ಇಪ್ಪತ್ತು ವರ್ಷ.   ಶೇಷಾದ್ರಿ ಅಯ್ಯರ್  ಅವರ   ತಾಯಿಗಾದರೋ   ವಯಸ್ಸು ಇನ್ನೂ ಹದಿನೆಂಟು. ಅನಂತ ಕೃಷ್ಣ ಅಯ್ಯರ್ ಅವರ ಸಾವಿನಿಂದ ಈ ಸಾಮಾನ್ಯ ವರ್ಗದ ಕುಟುಂಬ ತುಂಬಾ ಕಷ್ಟಕ್ಕೆ ಸಿಲುಕಿಕೊಂಡಿತು. ತನ್ನ ಬಲತಾಯಿಯನ್ನೂ ಆಕೆಯ ಎಳೆಯ ಮಗುವನ್ನೂ ಕಾಪಾಡುವ ಹೊಣೆ ತರುಣ ವೆಂಕಟಸುಬ್ರಹ್ಮಣ್ಯ  ಅಯ್ಯರ್ ಅವರ ಮೇಲೆ ಬಿತ್ತು. ಆತ ಧೈರ್ಯದಿಂದ  ಈ ಹೊಣೆಯನ್ನು ಹೊತ್ತರು.

“ನನಗೆ ದೊರೆತಿರುವ ದೊಡ್ಡ ಅಧಿಕಾರ, ಹೆಚ್ಚಿನ ಯಶಸ್ಸು ಇವಕ್ಕೆ ಕಾರಣರಾದವರು ನನ್ನ ಅಣ್ಣ ಅವರ ಪ್ರೀತಿ, ಪ್ರೋತ್ಸಾಹ, ತ್ಯಾಗ ಇವುಗಳ ಬೆಂಬಲ ಇಲ್ಲದೆ ಇದ್ದಲ್ಲಿ ನಾನು ಇಂದು ಈ ಉನ್ನತ ಸ್ಥಿತಿಯಲ್ಲಿ ಇರುತ್ತಿರಲಿಲ್ಲ”  ಎಂದು ತಮ್ಮ ಅಣ್ಣನನ್ನು ಮೇಲಿಂದ ಮೇಲೆ ನೆನಪಿಗೆ ತಂದುಕೊಂಡು, ಅವರಿಗೆ ತಮ್ಮ ಗೌರವ, ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದರು ಸರ್.ಕೆ. ಶೇಷಾದ್ರಿ ಅಯ್ಯರ್.

ಶೇಷಾದ್ರಿ ಅಯ್ಯರ್ ಅವರಿಗೆ ನಾಲ್ಕು ವರ್ಷ ವಯಸ್ಸಾಗಿದ್ದಾಗ ಅಣ್ಣ  ವೆಂಕಟ ಸುಬ್ರಹ್ಮಣ್ಯ ಅಯ್ಯರ್ ಅವರಿಗೆ ಕಲ್ಲೀಕೋಟೆಯ ಮುನ್ಸೀಫ್ ಕೋರ್ಟಿನಿಂದ ಕೊಚ್ಚಿಯ ದಂಡಿನ ಪ್ರದೇಶದಲ್ಲಿದ್ದ ಸಬ್ ಕಮೀಷನರ್ ಕೋರ್ಟಿಗೆ ವರ್ಗವಾಯಿತು.  ಹೀಗಾಗಿ ಶೇಷಾದ್ರಿ ಅಯ್ಯರ್ ಅವರ ವಿದ್ಯಾಭ್ಯಾಸ ಆರಂಭವಾದದ್ದು ಕೊಚ್ಚಿಯ ದಂಡಿನ ಪ್ರದೇಶದಲ್ಲಿ; ಅಂದಿನ  ದಿನಗಳಲ್ಲಿ  ಪಂಡಿತರೊಬ್ಬರು ಮನೆಯ ಜಗಲಿಯ ಮೇಲೆ ನಡೆಸುತ್ತಿದ್ದ ಪಾಠಶಾಲೆಯಲ್ಲಿ ಅವರು ತಮಿಳು ಸಂಸ್ಕೃತಗಳನ್ನು  ಕಲಿತರು. ವೇದಾಧ್ಯಯನ ಮಾಡಿದರು. ಅವರ ಇಂಗ್ಲಿಷ್ ವಿದ್ಯಾಭ್ಯಾಸ ಆರಂಭವಾದದ್ದು 1857ರಲ್ಲಿ ಕೊಚ್ಚಿಯ ದಂಡಿನ ಪ್ರದೇಶದಲ್ಲೇ ಇದ್ದ ಫ್ರೀಚರ್ಚ್ ಮಿಷನ್ ಇಂಗ್ಲಿಷ್ ಸ್ಕೂಲಿನಲ್ಲಿ; ಮಾರನೆಯ ವರ್ಷ ಅವರು ಕಲ್ಲೀಕೋಟೆಯ ಪ್ರೊವಿನ್ಷಿಯಲ್ ಪ್ರಾಂತೀಯ ವಿದ್ಯಾಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಶೇಷಾದ್ರಿ  ಅಯ್ಯರ್ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಪ್ರತಿ ತರಗತಿಯಲ್ಲೂ  ಮೊದಲಿಗರಾಗಿ ಉತ್ತೀರ್ಣರಾಗುತ್ತಾ  ಸಾಗಿದರು. 1863ರಲ್ಲಿ, ಅಂದರೆ ಹದಿನೆಂಟನೆಯ ವಯಸ್ಸಿನಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಇಡೀ ಮದರಾಸು ಪ್ರಾಂತ್ಯಕ್ಕೇ ಮೊದಲನೆಯವರಾಗಿ ಉತ್ತೀರ್ಣರಾದರು.

ತಮ್ಮ ಸುಖ-ದುಃಖಗಳನ್ನು ಲಕ್ಷಿಸದೆ, ಬಾಲಕ ಶೇಷಾದ್ರಿಯನ್ನು ಮುಂದಕ್ಕೆ ತರಬೇಕೆಂದು ಅಷ್ಟೊಂದು  ಉತ್ತಮ  ಹಣಕಾಸು  ಪರಿಸ್ಥಿತಿ ಇಲ್ಲದೆ  ಶ್ರಮಿಸುತ್ತಿದ್ದ ಅವರ ತಾಯಿ ಮತ್ತು ಅಣ್ಣ, ಇವರಿಗೆ ಶೇಷಾದ್ರಿ ಅಯ್ಯರ್  ಅವರ ಈ  ಸಾಧನೆ  ತುಂಬಾ ಸಂತೋಷವನ್ನುಂಟು ಮಾಡಿತು. ಹೇಗಾದರೂ ಮಾಡಿ ಶೇಷಾದ್ರಿಯನ್ನು ಮುಂದಕ್ಕೆ ಓದಿಸಲೇಬೇಕೆಂಬ ಅವನ ತಾಯಿ ಮತ್ತು ಅಣ್ಣ ಯೋಚಿಸುತ್ತಿರುವಾಗಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಮೊತ್ತ ಮೊದಲನೆಯವನಾಗಿ ತೇರ್ಗಡೆ ಹೊಂದಿದ್ದಕ್ಕಾಗಿ ಶೇಷಾದ್ರಿ ಅಯ್ಯರ್  ಅವರಿಗೆ ಕಾನ್ನೋಲಿ ವಿದ್ಯಾರ್ಥಿವೇತನ ದೊರೆಯಿತು. ಹೀಗೆ  ಕಾಲೇಜು  ವಿದ್ಯಾಭ್ಯಾಸಕ್ಕಾಗಿ ಶೇಷಾದ್ರಿ ಅಯ್ಯರ್  ದೂರದ  ಮದರಾಸಿಗೆ ಬಂದರು.  ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿಕೊಂಡ ಶೇಷಾದ್ರಿ ಅಯ್ಯರ್ ತಮ್ಮ ಸೌಜನ್ಯ, ಶ್ರದ್ಧೆ, ಬುದ್ಧಿ ಚಾತುರ್ಯಗಳಿಂದ ಉತ್ತಮ ವಿದ್ಯಾರ್ಥಿಯೆಂದು ಹೆಸರು ಗಳಿಸಿ 1866ರ ವರ್ಷದ ಬಿ.ಎ. ಪರೀಕ್ಷೆಯಲ್ಲಿ ಇಡೀ ವಿಶ್ವವಿದ್ಯಾಲಯಕ್ಕೇ ಮೊದಲಿಗರಾಗಿ ಉತ್ತೀರ್ಣರಾದರು. 1865ರಲ್ಲೇ ಧರ್ಮಸಂವರ್ಧಿನಿ ಎಂಬ ಹದಿನೈದು ವರ್ಷದ ಕನ್ಯೆಯೊಡನೆ ಅವರ ಮದುವೆ ಕೂಡ ಆಗಿತ್ತು.

ಮುಂದೆ ಶೇಷಾದ್ರಿ ಅಯ್ಯರ್  ಅವರಿಗೆ ಕಲ್ಲಿಕೋಟೆಯ ಸರ್ಕಾರಿ  ಕಲೆಕ್ಟರ್ ಕಛೇರಿಯಲ್ಲಿ ಭಾಷಾಂತರಕಾರರಾಗಿ  ತಿಂಗಳಿಗೆ 70 ರೂಪಾಯಿ ಸಂಬಳದ ಮೇಲೆ ನೌಕರಿ ದೊರೆಯಿತು.  ಮುಂದೆ  ಶೇಷಾದ್ರಿ  ಅಯ್ಯರ್  ಅವರಿಗೆ  ಪ್ರಚಂಡ ಪ್ರತಿಭಾವಂತರೆಂದೂ ದಕ್ಷ ಆಡಳಿತಗಾರರೆಂದೂ ಖ್ಯಾತರಾಗಿದ್ದ ವ್ಯಕ್ತಿ ರಂಗಾಚಾರ್ಲು ಅವರ  ಸಂಪರ್ಕ ದೊರೆಯಿತು.    ರಂಗಾಚಾರ್ಲು ಅವರು ಮದರಾಸು ಪ್ರಾಂತ್ಯ ಸರ್ಕಾರದಲ್ಲಿ ಸಹಾಯಕ ಗುಮಾಸ್ತೆಯಾಗಿ ಕೆಲಸಕ್ಕೆ ಸೇರಿದ ಒಂಬತ್ತು ವರ್ಷಗಳೊಳಗಾಗಿ ಡೆಪ್ಯುಟಿ ಕಲೆಕ್ಟರ್ ಅಧಿಕಾರಕ್ಕೆ ಏರಿದ  ಧೀಮಂತರಾಗಿದ್ದವರು. ಅಯ್ಯರ್ ಅವರ ಚುರುಕು ಬುದ್ಧಿ, ಕಾರ್ಯಶಕ್ತಿ, ದಕ್ಷತೆಗಳು ಅಚಾರ್ಲು ಅವರ ಮೆಚ್ಚುಗೆಗೆ ಪಾತ್ರವಾಗಿದ್ದವು. ತಕ್ಕ ಸಂದರ್ಭ ಒದಗಿದಾಗ ಇಂಥ ತರುಣನಿಗೆ ಪ್ರೋತ್ಸಾಹ ಕೊಟ್ಟು ಮುಂದಕ್ಕೆ ತರಬೇಕು ಎಂದು  ರಂಗಾಚಾರ್ಲು ಅವರಿಗೆ  ಅನ್ನಿಸಿತ್ತು. ಅಂತಹ ಸಂದರ್ಭ ಕೂಡ ಬೇಗ ಒದಗಿತು.

ಮೈಸೂರು ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರು 1868ರಲ್ಲಿ ತೀರಿಕೊಂಡರು. ಅಂದಿನ  ದಿನದಲ್ಲಿ  ಎಲ್.ಬಿ. ಬೌರಿಂಗ್ ಎಂಬ ಬ್ರಿಟಿಷ್ ಅಧಿಕಾರಿ ಮೈಸೂರು ಸಂಸ್ಥಾನದ ಚೀಫ್ ಕಮೀಷನರ್ ಆಗಿ ಆಡಳಿತ ನಡೆಸುತ್ತ  ಇದ್ದರು. ಮಹಾರಾಜರು  ತೀರಿಕೊಂಡ ಮೇಲೆ ಅವರ ಅರಮನೆಯ ವ್ಯವಹಾರಗಳನ್ನು ಸುವ್ಯಸ್ಥಿತಗೊಳಿಸಲು ಉದ್ದೇಶಿಸಿದ ಅವರು ಈ ಕೆಲಸದಲ್ಲಿ ಸಹಾಯ ಮಾಡಲು ಆರಿಸಿಕೊಂಡಿದ್ದು ಮದರಾಸು ಪ್ರಾಂತದಲ್ಲಿ ಡೆಪ್ಯುಟಿ ಕಲೆಕ್ಟರರಾಗಿದ್ದ ಸಿ.  ರಂಗಾಚಾರ್ಲು ಅವರನ್ನು. 1868ರ ಜೂನ್ ತಿಂಗಳಲ್ಲಿ ತಮ್ಮ ಹೊಸ ಅಧಿಕಾರವನ್ನು ವಹಿಸಿಕೊಂಡ ರಂಗಾಚಾರ್ಲು ಅವರು  ಒಡನೆಯೇ ಶೇಷಾದ್ರಿ ಅಯ್ಯರ್ ಅವರನ್ನು ಮೈಸೂರು ಸಂಸ್ಥಾನದ ಸೇವೆಗೆ ಕರೆಸಿಕೊಳ್ಳಲು ಏರ್ಪಾಡು ಮಾಡಿದರು. ಇದರ ಫಲವಾಗಿ ಶೇಷಾದ್ರಿ ಅಯ್ಯರ್ ಅವರು ಅಷ್ಟಗ್ರಾಮ ಡಿವಿಜನ್ನಿನ ಅಂದರೆ ಆಗಿನ ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳ ಪ್ರದೇಶದ ಸೂಪರಿಂಟೆಂಡೆಂಟರ ಕಛೇರಿಯ ನ್ಯಾಯಾಂಗ ವಿಭಾಗದ ಶಿರಸ್ತೇದಾರರಾಗಿ ನೇಮಕವಾದರು.

ದಕ್ಷ ಅಧಿಕಾರಿ ಎಂದು ಹೆಸರು ಗಳಿಸಿ ಶೇಷಾದ್ರಿ ಅಯ್ಯರ್ ಬೇಗ ಬೇಗ ಮೇಲು ಮೇಲಿನ ಅಧಿಕಾರಗಳಿಗೆ ಏರಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಆದರು; ನ್ಯಾಯಾಂಗ ಶಾಖೆಯ ಅಸಿಸ್ಟೆಂಟ್ ಕಮೀಷನರ್ ಆದರು. ಅರಮನೆಯ ಖರ್ಚು ವೆಚ್ಚಗಳ ನಿಯಂತ್ರಣಾಧಿಕಾರಿಯಾದರು. ಏತನ್ಮಧ್ಯೆ ನ್ಯಾಯಶಾಸ್ತ್ರವನ್ನು ಅಭ್ಯಾಸ ಮಾಡಿ ಮದರಾಸು ವಿಶ್ವವಿದ್ಯಾನಿಲಯ ಬಿ.ಎಲ್. ಪರೀಕ್ಷೆಗೆ ಕಟ್ಟಿ ಉತ್ತೀರ್ಣರಾದರು. ತಾವು ನ್ಯಾಯಾಂಗ ವಿಭಾಗದ ಶಿರಸ್ತೇದಾರರಾಗಿ ಕೆಲಸ ಮಾಡಿದ್ದ ಅಷ್ಟಗ್ರಾಮ ಡಿವಿಜನ್ನಿನಲ್ಲೇ ಜಿಲ್ಲಾ ನ್ಯಾಯಾಧೀಶರಾದರು. ಮುಂದೆ 1879ರಲ್ಲಿ  ಡೆಪ್ಯುಟಿ ಕಮೀಷನರ್ ಅಂದರೆ ಜಿಲ್ಲಾಧಿಕಾರಿ ಆದರು. ಆ ಹೊತ್ತಿಗೆ ಅವರು ಮೈಸೂರು ಸಂಸ್ಥಾನಕ್ಕೆ ಸುಮಾರು ಹನ್ನೊಂದು ವರ್ಷ ಸೇವೆ ಸಲ್ಲಿಸಿದ್ದರು. ಮೊದಲು ತುಮಕೂರು ಜಿಲ್ಲೆಯಲ್ಲಿ ಸುಮಾರು ಎರಡು ವರ್ಷಕಾಲ ಜಿಲ್ಲಾಧಿಕಾರಿಯಾಗಿದ್ದ ಮೇಲೆ ಅವರು 1881ರಲ್ಲಿ ಮೈಸೂರು ಜಿಲ್ಲಾಧಿಕಾರಿಯಾದರು.

1881ರ  ವರ್ಷದಲ್ಲಿ  ಮೈಸೂರು  ಸಂಸ್ಥಾನದ ಆಳ್ವಿಕೆ ಬ್ರಿಟಿಷರಿಂದ  ಮುಮ್ಮಡಿಯವರ ದತ್ತು ಪುತ್ರ ಚಾಮರಾಜ ಒಡೆಯರ್ ಅವರ  ಕೈಗೆ ಬಂತು.  ಒಡೆಯರ್  ಅವರು  ಆ ಕ್ಷಣದಿಂದಲೇ  ಸಿ. ರಂಗಾಚಾರ್ಲು ಅವರನ್ನು ತಮ್ಮ ದಿವಾನರನ್ನಾಗಿ ನೇಮಿಸಿದರು. ಆ ಹೊತ್ತಿಗಾಗಲೇ ರಂಗಾಚಾರ್ಲುರವರು ಸುಮಾರು 13 ವರ್ಷಕಾಲ ಮೈಸೂರು ಸಂಸ್ಥಾನಕ್ಕೆ ಸೇವೆ ಸಲ್ಲಿಸಿದ್ದರು. ಬ್ರಿಟಿಷ್ ಅಧಿಕಾರಿಗಳ ಕೈಕೆಳಗೆ ಸಂಸ್ಥಾನದ ಆರ್ಥಿಕ ಪರಿಸ್ಥಿತಿ, ಬ್ರಿಟಿಷರ ಆಡಳಿತದ ಬಲಾಬಲಗಳು, ಲೋಪದೋಷಗಳು ಇವನ್ನು ಅವರು ಚೆನ್ನಾಗಿ ಅರಿತಿದ್ದರು. ಅಲ್ಲದೆ ಸಂಸ್ಥಾನದ ಸ್ಥಿತಿಗತಿಗಳನ್ನು ಉತ್ತಮಗೊಳಿಸಲು ಅಗತ್ಯವಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳೇನು ಎಂಬುದನ್ನು ಅವರು  ಚೆನ್ನಾಗಿ  ಆಲೋಚಿಸಿದ್ದರು.

ರಂಗಾಚಾರ್ಲು ಅವರು ದಿವಾನರ ಅಧಿಕಾರಕ್ಕೆ ಬಂದಾಗ ಮೈಸೂರು ಸಂಸ್ಥಾನದ ಆರ್ಥಿಕ ಸ್ಥಿತಿ ತುಂಬಾ ಕೆಟ್ಟಿತ್ತು.  1975-77ರ ಅವಧಿಯಲ್ಲಿ  ಸಂಸ್ಥಾನದಲ್ಲಿ ಭೀಕರ ಕ್ಷಾಮವುಂಟಾಗಿತ್ತು. ಇದರಿಂದ ಜನರು ಅನುಭವಿಸಬೇಕಾದ ತೊಂದರೆಗಳನ್ನು ಪರಿಹರಿಸಲು ಅಂದಿನ ಆಡಳಿತ ತುಂಬಾ ಹಣವನ್ನು ಖರ್ಚು ಮಾಡಬೇಕಾಯಿತು. ಇದರ ಪರಿಣಾಮವಾಗಿ ಸಂಸ್ಥಾನದ ಬೊಕ್ಕಸದಲ್ಲಿ ಶೇಖರಿಸಿ ಇಟ್ಟಿದ್ದ 63 ಲಕ್ಷ ರೂಪಾಯಿ ಕರಗಿಹೋಯಿತು ಅಷ್ಟು ಮಾತ್ರವಲ್ಲ ಮೈಸೂರು ಸರ್ಕಾರ ಬ್ರಿಟಿಷ್ ಸರ್ಕಾರದಿಂದ 80 ಲಕ್ಷ ರೂಪಾಯಿ ಸಾಲ ತೆಗೆದುಕೊಳ್ಳಬೇಕಾಯಿತು. ತೀವ್ರ ಕ್ಷಾಮದ ದುಷ್ಪರಿಣಾಮಗಳನ್ನು ತಡೆಗಟ್ಟಲು ಸರ್ಕಾರ ಧಾರಳವಾಗಿಯೇ ಹಣವನ್ನು ಖರ್ಚು ಮಾಡಿತು. ಆದರೂ ಕ್ಷಾಮದ ಪರಿಣಾಮವಾಗಿ ಹತ್ತು ಲಕ್ಷ ಜನರು ಸತ್ತರು. ಸುಮಾರು ಹತ್ತು ಕೋಟಿ ರೂಪಾಯಿ ಬೆಲೆಯ ಆಸ್ತಿಪಾಸ್ತಿಗಳೂ ನಷ್ಟವಾದವು. ಜನರು ಕಂಗಾಲಾಗಿ ಹೋಗಿದ್ದರು.

ಸನ್ನಿವೇಶ ಹೀಗೆ  ದಾರುಣವಾಗಿದ್ದರೂ ದಿವಾನ್ ರಂಗಾಚಾರ್ಲು ಅವರು ಸಂಸ್ಥಾನದ ಸ್ಥಿತಿಗಳನ್ನು ಸುಧಾರಿಸಲು ನಿರ್ಧರಿಸಿದರು. ಬಹುಮುಖ ಪ್ರಗತಿಯನ್ನು ಸಾಧಿಸಲು ಕಾರ್ಯಾರಂಭ ಮಾಡಿದರು. ಈ ಕಾರ್ಯಕ್ರಮಗಳು ಯಶಸ್ವಿಯಾಗಲು ಸಂಸ್ಥಾನದ ಆಡಳಿತ ವಿಧಾನವನ್ನು ಸುವ್ಯವಸ್ಥಿತಗೊಳಿಸಬೇಕಾಗಿತ್ತು. ಅಂದರೆ ಆಡಳಿತಕ್ಕೆ ಸಂಬಂಧಿಸಿದ ಕಾನೂನು, ನಿಯಮಾವಳಿ, ಕಾರ್ಯವಿಧಾನ ಮುಂತಾದುವನ್ನು ಖಚಿತಗೊಳಿಸಬೇಕಾಗಿತ್ತು. ಇದಕ್ಕೆ ವಿಶಾಲವಾದ ಆಡಳಿತಾನುಭವ ಹಾಗೂ ನಿರಂತರ ಶ್ರಮ ಅವಶ್ಯವಾಗಿತ್ತು ಈ ಕಾರ್ಯಕ್ಕೆ ರಂಗಾಚಾರ್ಲು ಅವರ ಕಣ್ಣು ಶೇಷಾದ್ರಿ ಅಯ್ಯರ್ ಅವರ ಮೇಲೆ ಬಿತ್ತು. ತಾವು ದಿವಾನರ ಅಧಿಕಾರವನ್ನು ವಹಿಸಿಕೊಂಡು ಐದು ತಿಂಗಳಾಗುವ ಹೊತ್ತಿಗೆ ಶೇಷಾದ್ರಿ ಅಯ್ಯರ್ ಅವರನ್ನು ಮೈಸೂರಿನಿಂದ ತಮ್ಮ ಕಛೇರಿಗೆ ವರ್ಗಾಯಿಸಿ ಅವರಿಗೆ ಆ ಕೆಲಸವನ್ನು ವಹಿಸಿದರು. ಅವರಾದರೋ ಆ ಕೆಲಸವನ್ನು ರಂಗಾಚಾರ್ಲು ಅವರ ಮೆಚ್ಚುಗೆಗೆ ಪಾತ್ರವಾಗುವಂತೆ ನಿರ್ವಹಿಸಿದರು. ಈ ಅವಧಿಯಲ್ಲಿ ರಂಗಾಚಾರ್ಲು ಅವರ ಆಶೋತ್ತರಗಳು, ಧ್ಯೇಯ, ಧೋರಣೆಗಳು, ಕಾರ್ಯನಿರ್ವಹಣಾ ವಿಧಾನಗಳು ಇವನ್ನು ವಿವರವಾಗಿ ಅರಿತುಕೊಳ್ಳುವ ಅವಕಾಶ ಶೇಷಾದ್ರಿ ಅಯ್ಯರ್ ಅವರಿಗೆ ದೊರೆಯಿತು. ಅವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ದಿವಾನರ ಮೆಚ್ಚುಗೆಗೆ ಮಾತ್ರವಲ್ಲ. ನಂಬಿಕೆಗೆ ಕೂಡ ಪಾತ್ರರಾದರು.

ದಿವಾನರಾದ ಮೇಲೆ ರಂಗಾಚಾರ್ಲು ಹೊರಬೇಕಾಗಿ ಬಂದ ವಿಶೇಷ ಜವಾಬ್ದಾರಿ ಮತ್ತು ಅದರ ಫಲವಾದ ವಿಶ್ರಾಂತಿ ಇಲ್ಲದ ದುಡಿಮೆ ಇವುಗಳಿಂದಾಗಿ ಅವರ ಆರೋಗ್ಯ ಕೆಟ್ಟಿತು. ವಿಶ್ರಾಂತಿ ಮತ್ತು ಚಿಕಿತ್ಸೆಗಾಗಿ ಅವರು ಆಗಾಗ ರಜೆ ತೆಗೆದುಕೊಳ್ಳಬೇಕಾಗುತ್ತಿತ್ತು. ಇಂತಹ ಸಂದರ್ಭಗಳಲ್ಲಿ ಅವರು, ತಮ್ಮ ಸ್ಥಾನದ ಮಾಮೂಲು ಕೆಲಸಗಳನ್ನು ನೋಡಿಕೊಳ್ಳಲು ಶೇಷಾದ್ರಿ ಅಯ್ಯರ್ ಅವರನ್ನು ನೇಮಿಸುತ್ತಿದ್ದರು. ಇದರಿಂದ, ದಿವಾನರ ಅಧಿಕಾರ ಸ್ಥಾನದ ಆಡಳಿತ ಜವಾಬ್ದಾರಿಯ ಪರಿಚಯವೂ ಶೇಷಾದ್ರಿ ಅಯ್ಯರ್ ಅವರಿಗೆ ಆಯಿತು.

ದಿವಾನ್ ಪದವಿಗೆ ಬಂದ ಮೇಲೆ ರಂಗಾಚಾರ್ಲು ಅವರು ಬಹುಕಾಲ ಬದುಕಲಿಲ್ಲ.  ಡಿ.ವಿ.ಜಿ  ಅವರಿಂದ  ಮುಂದೆ   ಇಬ್ಬರು  ಶ್ರೇಷ್ಠ  ರಾಷ್ಟ್ರಕರಲ್ಲೊಬ್ಬರೆಂದು (ಮತ್ತೊಬ್ಬರು  ಗೋಪಾಲಕೃಷ್ಣ  ಗೋಖಲೆ)   ಪರಿಗಣಿಸಲ್ಪಟ್ಟ    ರಂಗಾಚಾರ್ಲು ಅವರು   1883ರ ಜನವರಿ 20ರಂದು ಅವರು ಮದರಾಸಿನಲ್ಲಿ ತೀರಿಕೊಂಡರು. ಅದಕ್ಕೆ ಕೆಲವು ದಿವಸಗಳ ಮೊದಲು, ತಮ್ಮ ಅನಂತರ ಶೇಷಾದ್ರಿ ಅಯ್ಯರ್ ಅವರನ್ನೇ ದಿವಾನರನ್ನಾಗಿ ಮಾಡಬೇಕೆಂದು ಮಹಾರಾಜರಿಗೆ ಖಚಿತವಾಗಿ ಸಲಹೆ ಮಾಡಿದರು.

1883ರ ಫೆಬ್ರವರಿ 12ರಂದು ಶೇಷಾದ್ರಿ ಅಯ್ಯರ್ ಅವರನ್ನು ಮೈಸೂರ ಸಂಸ್ಥಾನದ ದಿವಾನರನ್ನಾಗಿ ನೇಮಿಸಿರುವಾಗಿ ರಾಜಾಜ್ಞೆ ಪ್ರಕಟವಾಯಿತು. ಆಗ ಅವರ ವಯಸ್ಸು ಇನ್ನೂ  38 ವರ್ಷ. ಅಷ್ಟು ಚಿಕ್ಕ ವಯಸ್ಸಿನಲ್ಲಿ ತಮಗೆ ದಿವಾನಗಿರಿ ದೊರತೀತೆಂದು ಅವರು ನಿರೀಕ್ಷಿಸಿರಲಿಲ್ಲ.  ಅದು ದೊರೆತಾಗ ಅವರ ಮನಸ್ಸಿನಲ್ಲಿ ಒಂದು ಆತಂಕವೂ ಮೂಡಿತು ಅದೇನೆಂದರೆ ತಮ್ಮ ಸರ್ಕಾರಿ ಸೇವಾ ಅವಧಿ ಮುಗಿಯುವುದಕ್ಕೆ ಇನ್ನೂ 17-18 ವರ್ಷಗಳು ಬೇಕು. ಸಾಮಾನ್ಯವಾಗಿ ದೇಶೀಯ ಸಂಸ್ಥಾನಗಳಲ್ಲಿ ಯಾರೂ ಐದು ವರ್ಷಗಳಿಗಿಂತ ಹೆಚ್ಚಾಗಿ ದಿವಾನರಾಗಿರುತ್ತಿರಲಿಲ್ಲ. ತಮ್ಮ ಈ ಅಧಿಕಾರಾವಧಿಯೂ 5 ವರ್ಷಕ್ಕೆ ಮುಗಿದರೆ ಮುಂದೇನು ಮಾಡುವುದು? ಒಮ್ಮೆ ದಿವಾನರಾಗಿ ಕೆಲಸ  ಮಾಡಿದ ಮೇಲೆ ಅದಕ್ಕಿಂತ ಕಡಿಮೆ ಅಧಿಕಾರದ ಕೆಲಸಕ್ಕೆ ಹೋಗುವಂತಿರಲಿಲ್ಲ!

ಶೇಷಾದ್ರಿ ಅಯ್ಯರ್ ತಮ್ಮ ಈ ಸಮಸ್ಯೆಯನ್ನು ಮಹಾರಾಜರ ಮುಂದಿಟ್ಟರು. ಆಗ ಅವರು ನಸುನಕ್ಕು, ’ನಿಮ್ಮ ಮನಸ್ಸಿನಲ್ಲಿ ಅಂತಹ ಹೆದರಿಕೆಗಳನ್ನು ಇಟ್ಟುಕೊಂಡು ಪೇಚಾಡಬೇಡಿ. ನೀವು ಸಂಸ್ಥಾನದ ವ್ಯವಹಾರಗಳನ್ನು ಚೆನ್ನಾಗಿ ನೋಡಿಕೊಂಡರೆ, ನಿಮ್ಮ ಭವಿಷ್ಯದ ವಿಚಾರವಾಗಿ ನೀವು ಆತಂಕಪಟ್ಟುಕೊಳ್ಳಬೇಕಾಗಿಲ್ಲಎಂದು ಆಶ್ವಾಸನೆ ಕೊಟ್ಟರು. ಇದರಿಂದ ಶೇಷಾದ್ರಿ ಅಯ್ಯರ್ ಅವರ ಮನಸ್ಸಿಗೆ ಸಮಾಧಾನವಾಯಿತು. ಅತ್ಯಂತ ದಕ್ಷತೆಯಿಂದ ಮಹಾರಾಜರ  ಮೆಚ್ಚುಗೆಗೆ ಪಾತ್ರವಾಗುವಂತೆ ಕೆಲಸ ಮಾಡಬೇಕು; ಸಂಸ್ಥಾನ ಎಲ್ಲ ರೀತಿಯಲ್ಲೂ ಮುಂದುವರಿಯುವಂತೆ ಮಾಡಬೇಕು ಎಂದು ಅವರು ನಿರ್ಧರಿಸಿದರು.

ಶೇಷಾದ್ರಿ ಅಯ್ಯರ್ ಅವರು ದಿವಾನರಾದೊಡನೆಯೆ ಅವರು ಎದುರಿಸಬೇಕಾದ ದೊಡ್ಡ ಸಮಸ್ಯೆಯೊಂದಿತ್ತು. ಆ ಕಾಲದಲ್ಲಿ ಮೈಸೂರು ಸಂಸ್ಥಾನದ ವಾರ್ಷಿಕ ಖರ್ಚು, ವಾರ್ಷಿಕ ಆದಾಯಕ್ಕಿಂತ  8 - 9 ಲಕ್ಷ ರೂಪಾಯಿ ಹೆಚ್ಚಾಗಿತ್ತು.  ಈ  ನಿಟ್ಟಿನಲ್ಲಿ  ಕಾರ್ಯಪ್ರವೃತ್ತರಾದ  ಶೇಷಾದ್ರಿ ಅಯ್ಯರ್, ಸಂಸ್ಥಾನಕ್ಕೆ ಬರದೆ ತಪ್ಪಿಹೋಗಿದ್ದ ಆದಾಯವನ್ನು ಹಿಂದಕ್ಕೆ ಪಡೆಯಲು ಮತ್ತು ಸಂಸ್ಥಾನ ಬ್ರಿಟಿಷ್ ಸರ್ಕಾರಕ್ಕೆ ಕೊಡಬೇಕಾಗಿದ್ದ ಪೊಗದಿಯ ಹೊರೆ ಏರದಂತೆ ನೋಡಿಕೊಳ್ಳಲು ಪ್ರಯತ್ನಿಸಿದರು. ಶೇಷಾದ್ರಿ ಅಯ್ಯರ್ ಅವರು ಅಧಿಕಾರ ವಹಿಸಿಕೊಂಡೊಡನೆಯೇ ಬ್ರಿಟಿಷ್ ಸರ್ಕಾರ ಬೆಂಗಳೂರಿನ ದಂಡಿನ ಪ್ರದೇಶದ ಆಡಳಿತವನ್ನು ತಾನೇ ವಹಿಸಿಕೊಂಡಿತು. ಇದರ ಪರಿಣಾಮವಾಗಿ ಆ  ಪ್ರದೇಶದ ಆಡಳಿತದ ವೆಚ್ಚದ ಅನಂತರ ಸಂಸ್ಥಾನಕ್ಕೆ ಉಳಿಯುತ್ತಿದ್ದ ಹಣ ದಕ್ಕುವುದು  ತಪ್ಪಿತು. ಈ ಉಳಿತಾಯವನ್ನು ಸರ್ಕಾರ ಸಂಸ್ಥಾನಕ್ಕೆ ಕೊಡಬೇಕೆಂದು ಶೇಷಾದ್ರಿ ಅಯ್ಯರ್ ಬ್ರಿಟಿಷ್ ಸರ್ಕಾರದ ಮನವೊಲಿಸುವಲ್ಲಿ  ಯಶಸ್ವಿಯಾದರು.  ಜೊತೆಗೆ ಅಂದಿನ  ದಿನಗಳಲ್ಲಿ  ಮೈಸೂರು ಸಂಸ್ಥಾನ ಬ್ರಿಟಿಷ್ ಸರ್ಕಾರಕ್ಕೆ ಪ್ರತಿ ವರ್ಷ 24.5 ಲಕ್ಷ ರೂಪಾಯಿ ಪೊಗದಿ ಕೊಡುತ್ತಿತ್ತು. 1886ರಿಂದ ಇದನ್ನು 35 ಲಕ್ಷಕ್ಕೆ  ಬ್ರಿಟಿಷ್ ಸರ್ಕಾರ ಏರಿಸಿತ್ತು. ಸಂಸ್ಥಾನದ  ಆರ್ಥಿಕ ದುರ್ಬಲತೆಯಿಂದಾಗಿ ಈ ಹೊಸ ಹೊರೆ ವಹಿಸಿಕೊಳ್ಳುವುದು ಮೈಸೂರು ಸರ್ಕಾರಕ್ಕೆ ಸಾಧ್ಯವಿಲ್ಲವೆಂದು ಶೇಷಾದ್ರಿ ಅಯ್ಯರ್ ಅವರು  ಅಂಕಿ-ಅಂಶಗಳನ್ನು ಮುಂದಿಟ್ಟು ವಾದಿಸಿ ಅಲ್ಲೂ  ಬ್ರಿಟಿಷ್  ಸರ್ಕಾರದ  ಮನವೊಲಿಸುವಲ್ಲಿ  ಯಶಸ್ವಿಯಾದರು. 

1875-77ರ ಮಹಾಕ್ಷಾಮದ ಕಾಲದಲ್ಲಿ ಸಂಸ್ಥಾನದ ಹೊರಗಿನಿಂದ ಆಹಾರ ಪದಾರ್ಥಗಳನ್ನು ತರಿಸಿಕೊಂಡರೂ ಅವನ್ನು ಶೀಘ್ರವಾಗಿ ಒಳನಾಡಿಗೆ ಸಾಗಿಸುವ ಸೌಕರ್ಯವಿರಲಿಲ್ಲ. ಇದರಿಂದಾಗಿ ಅನೇಕರು ಅಹಾರವಿಲ್ಲದೆ ಸತ್ತರು. ಇಂತಹ ದುರಂತವನ್ನು ತಪ್ಪಿಸಲು, ಸಂಸ್ಥಾನದ ವಿವಿಧ ಭಾಗಗಳಲ್ಲಿ ರೈಲು ಮಾರ್ಗ ನಿರ್ಮಿಸುವುದು ಅವಶ್ಯವಾಗಿತ್ತು. ಹೀಗಾಗಿ  ಅಂದು  ಬೆಂಗಳೂರು ಮಾರ್ಗವಾಗಿ ಮೈಸೂರಿನಿಂದ ತಿಪಟೂರಿನವರೆಗೆ ಇದ್ದ   ರೈಲುಮಾರ್ಗವನ್ನು ಹರಿಹರದವರೆಗೆ ಮುಂದುವರಿಸುವುದು ಅವಶ್ಯಕವಾಗಿತ್ತು.  ಸರ್ಕಾರದ ಆರ್ಥಿಕ ಸ್ಥಿತಿ ದುರ್ಬಲವಾಗಿದ್ದರೂ ಈ ಕೆಲಸ ತಡವಾಗಬಾರದೆಂಬ ಉದ್ದೇಶದಿಂದ ಶೇಷಾದ್ರಿಯ ಅಯ್ಯರ್ ಅವರು ಇಂಡಿಯಾ ಸರ್ಕಾರದ ಸಹಕಾರ ಪಡೆದು, ಪುಣೆಯಿಂದ ಹರಿಹರದವರೆಗೆ ರೈಲು ಮಾರ್ಗ ನಡೆಸುತ್ತಿದ್ದ ಸದರ್ನ್ ಮಹಾರಾಷ್ಟ್ರ ರೈಲ್ವೆ ಕಂಪೆನಿಯ ಜೊತೆಗಿನ  ಒಪ್ಪಂದದ ಮೂಲಕ  ಈ ರೈಲು ಮಾರ್ಗವನ್ನು  ಆಗಗೊಳಿಸಿದ್ದಷ್ಟೇ  ಅಲ್ಲದೆ,  ಬೆಂಗಳೂರಿನಿಂದ ತಿಪಟೂರಿನವರೆಗೆ ಇದ್ದ  ರೈಲು  ಮಾರ್ಗವನ್ನೂ  ಆ  ಸಂಸ್ಥೆಯ  ನಿರ್ವಹಣೆಗೊಳಪಡಿಸಿ,  ಅಂದು  ಸಂಸ್ಥಾನಕ್ಕೆ  ಬೆನ್ನೆಲುಬಾಗಿ ಬಂದ  68 ಲಕ್ಷ ರೂಪಾಯಿಗಳಿಗೆ  ಕಾರಣಕರ್ತರಾದರು.  ಈ ವ್ಯವಸ್ಥೆಯಿಂದ ತಿಪಟೂರು ಹರಿಹರ ರೈಲುಮಾರ್ಗ ಶೀಘ್ರವಾಗಿ ರೂಪುಗೊಳ್ಳಲು ಅವಕಾಶ ಏರ್ಪಟ್ಟಿತು. ಹಾಸನ, ಚಿತ್ರದುರ್ಗ ಜಿಲ್ಲೆಗಳ ಅಭಿವೃಧ್ಧಿ ಮಾರ್ಗ ತೆರೆಯಿತು.  ಜೊತೆಗೆ  ಬಂದ  68 ಲಕ್ಷ ರೂಪಾಯಿಗಳನ್ನು ಶೇಷಾದ್ರಿ ಅಯ್ಯರ್ ಆಡಳಿತದ ಖರ್ಚಿಗಾಗಿ ಬಳಸದೆ  ಇದಕ್ಕೆ ಇನ್ನಷ್ಟು ಹಣ ಸೇರಿಸಿ, ಕ್ಷಾಮ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರದಿಂದ ತೆಗೆದುಕೊಂಡಿದ್ದ 80 ಲಕ್ಷ ರೂಪಾಯಿ ಸಾಲವನ್ನು ತೀರಿಸಿಬಿಟ್ಟರು. ಇದರಿಂದ ಸಾಲದ ಮೇಲೆ ವರ್ಷವರ್ಷವೂ ಕೊಡಬೇಕಾಗಿದ್ದ ನಾಲ್ಕು ಲಕ್ಷ ರೂಪಾಯಿ ಉಳಿತಾಯವಾಗತೊಡಗಿತು.

ಮಹಾಕ್ಷಾಮದ ಪರಿಣಾಮವಾಗಿ ತುಂಬಾ ಇಳಿದು ಹೋಗಿದ್ದ ಭೂಕಂದಾಯ ಶೇಷಾದ್ರಿ ಅಯ್ಯರ್ ಅವರ ಕಾಲದಲ್ಲಿ ಉತ್ತಮಗೊಂಡಿತು. ಇದಕ್ಕೆ ಕಾರಣ ಕ್ಷಾಮದ ನಂತರ ಬೆಳೆಗಳು ಉತ್ತಮಗೊಂಡಿದ್ದು.  ಶೇಷಾದ್ರಿ ಅಯ್ಯರ್ ಅವರು ಮಾದಕ ವಸ್ತುಗಳ ತಯಾರಿಕೆ ಮತ್ತು ಮಾರಾಟ ವ್ಯವಸ್ಥೆಯಲ್ಲಿ ಕಟ್ಟುನಿಟ್ಟಿನ  ಬದಲಾವಣೆಗಳನ್ನು ಮಾಡಿ, ಅವುಗಳ ಮೇಲೆ ಸರ್ಕಾರದ ಹಿಡಿತವನ್ನು ಬಲಪಡಿಸಿದರು. ಇದರಿಂದಾಗಿ ಈ  ನಿಟ್ಟಿನಲ್ಲಿ  ಮಧ್ಯವರ್ತಿಗಳು  ಹಾಗೂ  ತೆರಿಗೆಗಳ್ಳರ ಮೂಲಕ  ಸೋರಿಹೊಗುತ್ತಿದ್ದ  ವರಮಾನ  ಸಂಸ್ಥಾನಕ್ಕೆ  ಲಭ್ಯವಾದಂತಾಯಿತು. 

ಕಾಡುಗಳಲ್ಲಿ ಮರಗಳನ್ನು ಮನಸ್ವಿ ಕಡಿಯುತ್ತಿದ್ದುದನ್ನು ತಪ್ಪಿಸಲು ಅರಣ್ಯ ರಕ್ಷಣೆ ಮಾಡಿ, ಹೊಸ ಮರಗಳನ್ನು ಬೆಳೆಸಲು ತಕ್ಕ ವ್ಯವಸ್ಥೆ ಮಾಡಿದ್ದರಿಂದ ಅರಣ್ಯಗಳಿಂದ ಸರ್ಕಾರಕ್ಕೆ ಬರುತ್ತಿದ್ದ ಆದಾಯವೂ ಹೆಚ್ಚಿತು. ಬರಗಾಲದ ಹಾವಳಿಯಿಂದ ರಕ್ಷಿಸುವುದಕ್ಕಾಗಿ, ರೈತರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವುದಕ್ಕಾಗಿ ಶೇಷಾದ್ರಿ ಅಯ್ಯರ್ ಅವರು ನೀರಾವರಿ ಅಭಿವೃದ್ಧಿಗೆ  ತುಂಬಾ ಗಮನಕೊಟ್ಟರು. ಕೆರೆಗಳನ್ನು ಕಟ್ಟಿಸಿದರು. ಏತದ ಬಾವಿಯಿಂದ ನೀರಾವರಿ  ಒದಗಿಸಿಕೊಳ್ಳುವವರಿಗೆ  ಉತ್ತೇಜನಕೊಟ್ಟರು. ಮಳೆಯ ಅಭಾವವಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ವಾಣೀವಿಲಾಸ ಸಾಗರದಂತಹ ದೊಡ್ಡ ಜಲಾಶಯದ ನಿರ್ಮಾಣಕ್ಕೆ ಕಾರಣರಾದರು. ವ್ಯವಸಾಯಾಭಿವೃದ್ಧಿಗಾಗಿ ವ್ಯವಸಾಯದ ಇಲಾಖೆಯನ್ನು ಸ್ಥಾಪಿಸಿದರು. ರೈತರ ನೆರವಿಗಾಗಿ ವ್ಯವಸಾಯ ಬ್ಯಾಂಕುಗಳನ್ನು ಸ್ಥಾಪಿಸಿದರು. ಕಾಫಿ ತೋಟಗಳ ವಿಸ್ತರಣೆಗೆ ಬೆಂಬಲ ಕೊಟ್ಟರು. ಅಗತ್ಯವಾದ ಅಂಕಿ ಅಂಶಗಳನ್ನು ಸಂಗ್ರಹಿಸಿ ಜಮೀನುಗಳನ್ನು ಅಳತೆ ಮಾಡಿಸಿ ಭೂ ಕಂದಾಯವನ್ನು ನಿಗದಿ ಮಾಡಿ ರೈತರಿಗೆ ಅನುಕೂಲ ಮಾಡಿದರು.

ಮೈಸೂರು ಸಂಸ್ಥಾನದಲ್ಲಿ ಖನಿಜ ಸಂಪತ್ತು ಹೇರಳವಾಗಿದೆ ಎಂಬುದನ್ನು ಗಮನಿಸಿದ ಶೇಷಾದ್ರಿ ಅಯ್ಯರ್ ಅದರ  ಮೇಲ್ವಿಚಾರಣೆ ನೋಡಿಕೊಳ್ಳಲು ಭೂಗರ್ಭ ಶೋಧನೆ ಮತ್ತು ಗಣಿ ಇಲಾಖೆಯನ್ನು ಸ್ಥಾಪಿಸಿದರು. ಕೋಲಾರ ಚಿನ್ನದ ಗಣಿ ಕೆಲಸ ಲಾಭದಾಯಕವಾಗಿ ನಡೆದು ಅದರಿಂದ ಸರ್ಕಾರಕ್ಕೆ ರಾಜಾದಾಯ ಸಲ್ಲಲು ಆರಂಭವಾಗಿ, ಈ ರಾಜಾದಾಯ ವರ್ಷವರ್ಷಕ್ಕೆ ಏರುತ್ತಾ ಹೋಗಿ ಸರ್ಕಾರದ ವಾರ್ಷಿಕ ಆದಾಯದ ಒಂದು ಗಣನೀಯ ಭಾಗವಾದದ್ದು  ಶೇಷಾದ್ರಿ ಅಯ್ಯರ್  ಅವರ  ಕಾಲದಲ್ಲಿ.

ಶಿವನಸಮುದ್ರದ ಜಲವಿದ್ಯುತ್ ಉತ್ಪಾದನಾ ಯೋಜನೆ ಶೇಷಾದ್ರಿ ಅಯ್ಯರ್ ಅವರ ಅದ್ಭುತ ಸಾಧನೆಗಳಲ್ಲಿ ಒಂದು. ಇಡೀ ಭಾರತದಲ್ಲೇ ಮೊಟ್ಟ ಮೊದಲನೆಯದಾದ ಈ ಯೋಜನೆಯನ್ನು ಆದಷ್ಟು ಕಡಿಮೆ ವೆಚ್ಚದಿಂದ, ಅತ್ಯಂತ ಶೀಘ್ರವಾಗಿ ಕಾರ್ಯರೂಪಕ್ಕೆ ತಂದ ಕೀರ್ತಿ ಶೇಷಾದ್ರಿ ಅಯ್ಯರ್ ಅವರದು. ಮುಂದುವರೆದ  ದೇಶಗಳಿಗೂ  ಅಂದಿನ  ದಿನದಲ್ಲಿ  ಊಹಿಸಲಿಕ್ಕೆ  ಕಷ್ಟ  ಎನಿಸುವಂತಿದ್ದ  ಆ  ಕಾಲದಲ್ಲಿ,  ಶಿವನಸಮುದ್ರದಿಂದ ಕೋಲಾರ ಚಿನ್ನದ ಗಣಿಗಳಿಗೆ ಸುಮಾರು 100 ಮೈಲಿ ದೂರಕ್ಕೆ ವಿದ್ಯುತ್  ಸಾಗಿಸುವ ಸಾಹಸವನ್ನು ಶೇಷಾದ್ರಿ ಅಯ್ಯರ್ ಮಾಡಿದರು. ಇದರಿಂದ ಚಿನ್ನದ ಗಣಿಗಳ ಉತ್ಪಾದನೆ ಹೆಚ್ಚಲು ಅವಕಾಶವಾಯಿತಲ್ಲದೆ, ವಿದ್ಯುತ್ ಸರಬರಾಜಿನಿಂದ ಸರ್ಕಾರದ ಆದಾಯವೂ ಏರಿತು.

ಸಂಸ್ಥಾನದ ಜನರ ಬಹುಮುಖಿ ಅಭಿವೃದ್ಧಿ ಶೇಷಾದ್ರಿ ಅಯ್ಯರ್ ಅವರ ಗುರಿಯಾಗಿತ್ತು. ಆದ್ದರಿಂದ ಅವರು ವಿದ್ಯಾಭ್ಯಾಸದ ಸೌಕರ್ಯಗಳನ್ನು ಒಳನಾಡಿಗೆ ವಿಸ್ತರಿಸಿದರು. ಹರಿಜನರಿಗಾಗಿ ಶಾಲೆಗಳನ್ನು ಸ್ಥಾಪಿಸಿದರು. ರೈತರು ಕಾರ್ಮಿಕರನ್ನು ಅಕ್ಷರಸ್ಥರನ್ನಾಗಿ ಮಾಡಲು ರಾತ್ರಿ ಶಾಲೆಗಳನ್ನು ಏರ್ಪಡಿಸಿದರು. ವೈದ್ಯಕೀಯ ನೆರವಿನ ಪ್ರಮಾಣ ಹೆಚ್ಚಿಸಿದರು. ಸಂಸ್ಥಾನದ ಎಲ್ಲ ಭಾಗಗಳಲ್ಲೂ ಸುಶಿಕ್ಷಿತ ಸೂಲಗಿತ್ತಿಯರನ್ನು ನೇಮಿಸಲಾಗಿತ್ತು. ಜಿಲ್ಲಾ ಕೇಂದ್ರಗಳಲ್ಲಿ ಹೆಂಗಸರು ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಆಸ್ಪತ್ರೆಗಳನ್ನು ಸ್ಥಾಪಿಸಲಾಯಿತು. ಅಖಿಲ ಭಾರತ ಖ್ಯಾತಿಯನ್ನು ಗಳಿಸಿದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸ್ಥಾಪಿತವಾದದ್ದು ಕೂಡ ಶೇಷಾದ್ರಿ ಅಯ್ಯರ್ ಅವರ ಕಾಲದಲ್ಲೇ.  ಜನರು ವಾಸ ಮಾಡುವ ಪ್ರದೇಶಗಳನ್ನು ಶುಚಿಯಾಗಿಡುವುದು ಅವರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ತುಂಬ ಮುಖ್ಯವಾದದ್ದೆಂಬುದನ್ನು ಶೇಷಾದ್ರಿ ಅಯ್ಯರ್ ಮನಗಂಡಿದ್ದರು. ಅನೇಕ ಊರುಗಳಲ್ಲಿ ಹೊಸದಾಗಿ ಪುರಸಭೆಗಳನ್ನು ಸ್ಥಾಪಿಸಿದರು. ಪುರಸಭೆಗಳು ತಮ್ಮ ಪ್ರದೇಶವನ್ನು ಹೆಚ್ಚು ಹೆಚ್ಚು ನಿರ್ಮಲವಾಗಿಡಲು ಶ್ರದ್ಧೆ ವಹಿಸುವಂತೆ ಮಾಡಿದರು.

ಮೈಸೂರು, ಬೆಂಗಳೂರು ನಗರಗಳಿಗೆ ಶುದ್ಧವಾದ ನೀರಿನ ಸರಬರಾಜು ಮತ್ತು ಚರಂಡಿ ವ್ಯವಸ್ಥೆಗಳನ್ನು ಮಾಡಿದವರೂ ಈ ನಗರಗಳ ವಿಸ್ತರಣೆ ಸಮರ್ಪಕವಾದ ರೀತಿಯಲ್ಲಿ ನಡೆಯುವಂತೆ ನಿಯೋಜಿಸಿದವರೂ ಶೇಷಾದ್ರಿ ಅಯ್ಯರ್ ಅವರೇ. ಬೆಂಗಳೂರಿನ ಬಸವನಗುಡಿ ಮತ್ತು ಮಲ್ಲೇಶ್ವರ ವಿಸ್ತರಣಗಳು ರೂಪುಗೊಂಡಿದ್ದು ಅವರ ಕಾಲದಲ್ಲೇ. ಕಲಾ ಸಂಸ್ಕೃತಿಗಳ ರಕ್ಷಣೆ ಅಭಿವೃದ್ಧಿಗಳಲ್ಲಿ ಕೂಡ ಅವರಿಗೆ ಅಪಾರ ಆಸಕ್ತಿಯಿತ್ತು. ಪೂರ್ವಕಾಲದ ದೇವಾಲಯಗಳು, ಇತರ ಕಟ್ಟಡಗಳ ರಕ್ಷಣೆ, ಶಾಸನಗಳ ಸಂಗ್ರಹಣೆ ಮತ್ತು ಪ್ರಕಟಣೆ, ಇತಿಹಾಸ ಸಂಶೋಧನೆ ಮುಂತಾದ ಕಾರ್ಯಗಳನ್ನು ನಡೆಸಲು ಪುರಾತತ್ತ್ವ ಶೋಧನೆ ಇಲಾಖೆಯನ್ನು ಸ್ಥಾಪಿಸಿದರು. ಸಂಸ್ಕೃತ ಮತ್ತು ಕನ್ನಡ ಭಾಷೆಯ ಪ್ರಾಚೀನ ಗ್ರಂಥಗಳ ಹಸ್ತ ಪ್ರತಿಗಳನ್ನು ಸಂಗ್ರಹಿಸಿಡುವ ಪ್ರಕಟಿಸುವ ಉದ್ದೇಶದಿಂದ ಮೈಸೂರಿನಲ್ಲಿ ಓರಿಯಂಟಲ್ ಲೈಬ್ರರಿ (ಈಗ ಇದರ ಹೆಸರು ಓರಿಯೆಂಟಲ್ ರಿಸರ್ಚ್ ಇನ್ ಸ್ಟಿಟ್ಯೂಟ್) ಸ್ಥಾಪಿತವಾದದ್ದು ಕೂಡ ಶೇಷಾದ್ರಿ ಅಯ್ಯರ್ ಅವರ ಕಾಲದಲ್ಲೇ.

ಆಗಿನ ಕಾಲದಲ್ಲಿ ಶಿಶುವಿವಾಹ ಅಂದರೆ 4 - 5 ವರ್ಷ ವಯಸ್ಸಿನ  ಮಕ್ಕಳಿಗೆ ಮದುವೆ ಮಾಡುವ ಪದ್ಧತಿಯಿತ್ತು. ಚಿಕ್ಕ ವಯಸ್ಸಿನಲ್ಲೇ ಅನೇಕ ಮಂದಿ ಹೆಣ್ಣು ಮಕ್ಕಳು ವಿಧವೆಯರೂ ಆಗುತ್ತಿದ್ದರು. ಕಾನೂನಿನ ಬೆಂಬಲವಿಲ್ಲದೆ, ಈ ದುಷ್ಟ ಪದ್ಧತಿ ನಿಲ್ಲುವುದಿಲ್ಲವೆಂದು ಭಾವಿಸಿದ ಶೇಷಾದ್ರಿ ಅಯ್ಯರ್ ಅವರು ಶಿಶುವಿವಾಹ ನಿರೋಧಕ ಕಾನೂನನ್ನು ಜಾರಿಗೆ ತಂದರು. ಆ ಕಾಲಕ್ಕೆ ಬ್ರಿಟಿಷ್ ಇಂಡಿಯಾ ಪ್ರದೇಶದಲ್ಲಿ ಕೂಡ ಇಂತಹ ಕಾನೂನು ಇರಲಿಲ್ಲವೆಂಬುದು ಗಮನಾರ್ಹ.

ಸರ್ಕಾರಿ ನೌಕರರು, ಅದರಲ್ಲಿಯೂ ಕಡಿಮೆ ಸಂಬಳದ ನೌಕರರು ಅಕಾಲ ಮರಣಕ್ಕೆ ತುತ್ತಾದಾಗ ಅಥವಾ ಕೆಲಸದಿಂದ ನಿವೃತ್ತರಾದಾಗ ಅವರ ಸಂಸಾರಗಳು ಹಣವಿಲ್ಲದೆ ಬಹು ಕಷ್ಟ ಸ್ಥಿತಿಗೆ ಸಿಕ್ಕಿಕೊಳ್ಳುತ್ತಿದ್ದವು. ಇದನ್ನು ಗಮನಿಸಿದ ಶೇಷಾದ್ರಿ ಅಯ್ಯರ್  ಅಂತಹ ಕಷ್ಟಗಳ ನಿವಾರಣೆಗಾಗಿ ಸರ್ಕಾರಿ ನೌಕರರರಲ್ಲಿ ಒತ್ತಾಯದ ಜೀವ ವಿಮಾ ಪದ್ಧತಿಯನ್ನು ಆಚರಣೆಗೆ ತಂದರು. ಆ ಕಾಲಕ್ಕೆ ಇಂತಹ ಸೌಲಭ್ಯ ಭಾರತದ ಇನ್ನಾವ ಪ್ರದೇಶದಲ್ಲೂ ಜಾರಿಯಲ್ಲಿರಲಿಲ್ಲ. ಶೇಷಾದ್ರಿ ಅಯ್ಯರ್ ಅವರ ದೂರದೃಷ್ಟಿ, ಬಡವರ ಮೇಲೆ ಅವರಿಗಿದ್ದ ಕಾಳಜಿಗಳಿಗೆ ಇದು ಸಾಕ್ಷಿಯಾಗಿದೆ.

ಶೇಷಾದ್ರಿ ಅಯ್ಯರ್ ಅವರ ಮೈಕಟ್ಟು ಪುಷ್ಪ, ಭವ್ಯಅವರ ನಡೆ, ನಡವಳಿಕೆ ಎರಡೂ ಗಂಭೀರ. ನೋಡಿದೊಡನೆಯೇ ಗೌರವವನ್ನು ಉಂಟು ಮಾಡುವಂತಹ ವ್ಯಕ್ತಿತ್ವ. ಅವರು ಕಾರ್ಯದಕ್ಷರಾಗಿದ್ದಂತೆ ಕಟ್ಟುನಿಟ್ಟಿನ  ಶಿಸ್ತನ್ನು  ಉದ್ಯೋಗಿಗಳಿಂದ  ನಿರೀಕ್ಷಿಸುವವರಾಗಿದ್ದರು.  ಈ  ಶಿಸ್ತು ಕೇವಲ  ದೇಶಿಯ  ಸಿಬ್ಬಂಧಿ  ವರ್ಗದವರಿಗೆ  ಮಾತ್ರವಲ್ಲದೆ ಸರ್ಕಾರಿ  ಸೇವೆಯಲ್ಲಿದ್ದ  ಬ್ರಿಟಿಷ್ ಅಧಿಕಾರಿಗಳಿಗೂ  ಅನ್ವಯವಾಗುತ್ತಿದ್ದು  ಯಾರಿಗೂ  ಆ ವಿಚಾರದಲ್ಲಿ  ವಿನಾಯತಿಯೇ  ಇರಲಿಲ್ಲ.  ಕೆ.   ಶೇಷಾದ್ರಿ ಅಯ್ಯರ್   ಆವರ ದಕ್ಷತೆಗೆ  ಬ್ರಿಟಿಷ್  ಸರ್ಕಾರಿ  ವಲಯದಲ್ಲಿ  ಉನ್ನತ ಗೌರವಾಭಿಪ್ರಾಯಗಳು    ಇದ್ದ ಕಾರಣದಿಂದ,  ಸಂಸ್ಥಾನದ  ಸೇವೆಯಲ್ಲಿದ್ದ   ಬ್ರಿಟಿಷ್ ಅಧಿಕಾರಿಗಳು ಯಾವುದೇ  ಆಲಸ್ಯಕ್ಕೂ  ಎಡೆ ಇಲ್ಲದೆ  ಶೇಷಾದ್ರಿ  ಅಯ್ಯರ್  ಅವರ  ಆಡಳಿತದಲ್ಲಿ  ದಕ್ಷತೆಯಿಂದ  ಕಾರ್ಯನಿರ್ವಹಿಸುವುದು  ಅನಿವಾರ್ಯವಾಗಿತ್ತು.  

ಮೈಸೂರು ಮಹಾರಾಜರು ದಿವಾನ್  ಕೆ.  ಶೇಷಾದ್ರಿ  ಅಯ್ಯರ್  ಅವರಿಗೆ  ’ರಾಜ್ಯಧುರಂಧರಎಂಬ ಬಿರುದನ್ನು ಕೊಟ್ಟು ಗೌರವಿಸಿದರು.  ಬ್ರಿಟಿಷ್ ಸರ್ಕಾರ ನೀಡಿದ  ಹಲವಾರು  ಗೌರವಗಳಲ್ಲಿ  ‘ಸರ್’  ಎಂಬ  ಗೌರವವೂ  ಸೇರಿತ್ತು.  ಹೀಗೆ ರಾಜ್ಯಾಡಳಿತ, ಅಭಿವೃದ್ಧಿಗಳ ಹಿರಿಯ ಭಾರವನ್ನು ಯಶಸ್ವಿಯಾಗಿ ಹೊತ್ತ ಮಹನೀಯರು ಶೇಷಾದ್ರಿ ಅಯ್ಯರ್. 

ವರ್ಷಗಟ್ಟಲೆ ಶ್ರಮಪಟ್ಟಿದ್ದರಿಂದಲೇ ಶೇಷಾದ್ರಿ ಅಯ್ಯರ್ ಅವರ ಆರೋಗ್ಯ ಕೆಡುತ್ತ ಬಂದಿತ್ತು. ತೀವ್ರ ಅನಾರೋಗ್ಯದ ನಿಮಿತ್ತ 1901 ಮಾರ್ಚ್ 18ರಂದು ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟರು.  ದಿವಾನರ ಅಧಿಕಾರಕ್ಕೆ ರಾಜೀನಾಮೆ ಕೊಟ್ಟು ನಿವೃತ್ತರಾದ ಮೇಲೆ ಶೇಷಾದ್ರಿ ಅಯ್ಯರ್ ಅವರು ಬದುಕಿದ್ದು ಕೇವಲ ಆರು ತಿಂಗಳಷ್ಟು ಮಾತ್ರ. 1901 ಸೆಪ್ಟೆಂಬರ್ 13ರಂದು ಅವರು ತೀರಿಕೊಂಡರು. ಶೇಷಾದ್ರಿ ಅಯ್ಯರ್ ಅವರು ಮೈಸೂರು ಸಂಸ್ಥಾನಕ್ಕೆಸಲ್ಲಿಸಿರುವ ಅಪಾರ ಸೇವೆಯನ್ನು ಗಮನಿಸಿ ಅವರ ನೆನಪಿಗಾಗಿ ಉಚಿತ ಸ್ಮಾರಕವನ್ನು ರಚಿಸುವುದು ಅವಶ್ಯಕವೆಂದು ವೈಸ್ ರಾಯ್ ಲಾರ್ಡ್ ಕರ್ಜನ್ ಅವರೇ ಸೂಚಿಸಿದರು. ಅಷ್ಟು ಮಾತ್ರವಲ್ಲ, ಅದಕ್ಕಾಗಿ ತಾವೇ ಪ್ರಥಮ ವಂತಿಗೆಯನ್ನು ಕೊಟ್ಟರು. ಅನಂತರ ಸ್ಮಾರಕ ರಚನೆಗಾಗಿ ಸಾರ್ವಜನಿಕರಿಂದ ಧನ ಸಂಗ್ರಹ ಮಾಡಿ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿರುವ ಸಾರ್ವಜನಿಕ ಪುಸ್ತಕ ಭಂಡಾರದ ಕಟ್ಟಡದ ಮುಂದಿರುವ ಶೇಷಾದ್ರಿ ಅಯ್ಯರ್ ಅವರ ಪ್ರತಿಮೆಯನ್ನು ಅವರ ಸ್ಮಾರಕವಾಗಿ ಸ್ಥಾಪಿಸಲಾಯಿತು. ಈ  ಮಹಾನ್  ಚೇತನಕ್ಕೆ  ನಮ್ಮ  ನಮನ. 


 Tag: K. Sheshadri Iyer

ಕಾಮೆಂಟ್‌ಗಳಿಲ್ಲ: