ಶನಿವಾರ, ಜೂನ್ 18, 2016

ರಾಮಚಂದ್ರ ಹಡಪದ್


ರಾಮಚಂದ್ರ  ಹಡಪದ್

ಇಂದಿನ  ರಂಗ ಸಂಗೀತದಲ್ಲಿ  ರಾಮಚಂದ್ರ  ಹಡಪದ್ ಸಂಗೀತ  ಸಂಯೋಜಕರಾಗಿ   ಪ್ರಧಾನ  ಹೆಸರು. ಅವರು  ಸಂಗೀತ,  ಸುಗಮ ಸಂಗೀತ  ಮತ್ತು  ಇತ್ತೀಚಿನ  ದಿನಗಳಲ್ಲಿ  ಸಿನಿಮಾ ಸಂಗೀತದಲ್ಲೂ  ತಮ್ಮದೇ ಆದ  ರೀತಿಯಲ್ಲಿ  ಲಗ್ಗೆ ಇಟ್ಟವರಾಗಿದ್ದಾರೆ.  ಅವರದ್ದೇ  ಸಂಗೀತ  ತಂಡ   ತನ್ನ ವಿನೂತನ ಮತ್ತು  ವೈವಿಧ್ಯಮಯ ಸಂಗೀತ  ಕಾರ್ಯಕ್ರಮಗಳಿಂದ  ಕನ್ನಡಪ್ರಿಯ ಕಿವಿಗಳನ್ನೂ  ಎಲ್ಲೆಡೆ  ತಣಿಸುತ್ತಿದೆ.      ರಂಗಲೋಕದಲ್ಲಂತೂ  ಅವರ ಸಂಗೀತ  ಸಂಯೋಜನೆ  ಮತ್ತು  ಗಾಯನ  ಅಪಾರ  ಸಂಖ್ಯೆಯ  ರಂಗಪ್ರಯೋಗಗಳ ಸಹಸ್ರಾರು  ಪ್ರದರ್ಶನಗಳಿಗೆ  ಹರಿದಿರುವುದಲ್ಲದೆ  ರಾಷ್ಟ್ರೀಯ  ಮಟ್ಟದ  ಸ್ಪರ್ಧೆಗಳಲ್ಲಿ  ಶ್ರೇಷ್ಠ  ಪ್ರಶಸ್ತಿಗಳಿಗೆ  ಪಾತ್ರವಾಗಿವೆ.  ಹೀಗಾಗಿ  ಅವರು ಬೆಂಗಳೂರಿನ  ರಂಗತಂಡಗಳಿಗೆಲ್ಲಾ  ಅಚ್ಚುಮೆಚ್ಚಿನ ಸಂಗೀತಗಾರರಾಗಿದ್ದಾರೆ.

ರಾಮಚಂದ್ರ  ಹಡಪದ್ ಅವರು  ಗುಲ್ಬರ್ಗಾ ಜೆಲ್ಲೆಯ  ಹಳ್ಳಿಯೊಂದರಿಂದ  ಬಂದ  ಪ್ರತಿಭೆ.  ಅವರು ಜೂನ್  18, 1979ರ ವರ್ಷದಲ್ಲಿ  ಗುಲ್ಬರ್ಗ  ಜಿಲ್ಲೆಯ  ಚಿತ್ತಾಪುರ  ತಾಲೂಕಿನ  ಭಂಕುರ್  ಗ್ರಾಮದಲ್ಲಿ  ಜನಿಸಿದರು.  ಅವರ ವಿಧ್ಯಾಭ್ಯಾಸ  ಭಂಕುರ್,  ಶಹಾಬಾದುಗಳಲ್ಲಿ  ನೆರವೇರಿ  ಪದವೀಧರರಾದರು.  ಹೀಗೆ  ವಿದ್ಯಾಭ್ಯಾಸವನ್ನು ನಡೆಸಿದರಾದರೂ ರಾಮಚಂದ್ರ  ಹಡಪದ್ ಅವರಿಗೆ  ಶಾಸ್ತ್ರೀಯ ಸಂಗೀತದಲ್ಲಿ  ಅಪಾರ  ಆಸಕ್ತಿ.  ಸಂಗೀತದಲ್ಲಿ ಅವರಿಗೆ  ಮೊದಲು ಗುರುಗಳಾದವರು  ಎಂ. ಆರ್.  ರುದ್ರಯ್ಯ  ಮತ್ತು  ರೇವಯ್ಯ ವಸ್ತ್ರದ್ ಮಠ ಅವರುಗಳು.  ಮುಂದೆ  ಸಂಗೀತದಲ್ಲಿ  ಹೆಚ್ಚಿನ  ಕಲಿಕೆಯ  ಆಶಯದಿಂದ  ಬೆಂಗಳೂರಿಗೆ  ಬಂದ  ರಾಮಚಂದ್ರ  ಹಡಪದ್ರ ಗುರುಗಳಾದವರು ಪ್ರಸಿದ್ಧ  ಸಂಗೀತಗಾರರಾದ  ಉಸ್ತಾದ್  ಫಯಾಜ್  ಖಾನ್  ಅವರು. 

ರಂಗಸಂಗೀತದಲ್ಲಿ  ರಾಮಚಂದ್ರ  ಹಡಪದ್ ಅವರ  ಸಂಗೀತ  ಮೊದಲಿಗೆ  ಸಂದದ್ದು  ‘ನಾಗರಬೆತ್ತ’  ನಾಟಕಕ್ಕೆ.  ಅಲ್ಲಿಂದ ಸಾಗಿದ  ಅವರ  ರಂಗಪಯಣದಲ್ಲಿ  ಬಹಳಷ್ಟು  ಗಮನಸೆಳೆದ  ‘ಅನಭಿಜ್ಞ ಶಾಕುಂತಲ’ದಂತಹ  ನಾಟಕಗಳನ್ನೂ  ಒಳಗೊಂಡು, ಇತ್ತೀಚಿನ  ‘ಸೂರ್ಯಾಸ್ತದಿಂದ  ಸೂರ್ಯೋದಯದವರೆಗೆ’ದಂತಹ  ನಾಟಕಗಳವರೆಗೆ  ಅಪಾರ  ರಂಗಪ್ರಯೋಗಗಳಿಗೆ  ಹರಿದು  ಸಹಸ್ರಾರು  ಪ್ರದರ್ಶನಗಳಲ್ಲಿ  ಮೂಡಿಬಂದಿದೆ.  ಇತ್ತೀಚೆಗೆ ಮುಂಬೈನಲ್ಲಿ  ನಡೆದ  ರಾಷ್ಟ್ರೀಯ  ನಾಟಕಪ್ರದರ್ಶನದಲ್ಲಿ  ಇವರ  ಸಂಗೀತವನ್ನೊಳಗೊಂಡ ‘ಸೂರ್ಯಾಸ್ತದಿಂದ  ಸೂರ್ಯೋದಯದವರೆಗೆ’  ನಾಟಕ, ಸಂಗೀತವನ್ನೂ  ಒಳಗೊಂಡಂತೆ    ಎಲ್ಲಾ ಹನ್ನೊಂದು ವಿಭಾಗಳಲ್ಲೂ  ಪ್ರಥಮ  ಬಹುಮಾನ ಗಳಿಸಿತು.      ಹಲವು  ಚಲನಚಿತ್ರಗಳಲ್ಲೂ  ಹಾಡಿರುವ  ರಾಮಚಂದ್ರ  ಹಡಪದ್ ಅವರ  ಗಾಯನ  ಇನ್ನೇನು  ತೆರೆಕಾಣಲಿರುವ  ‘ಸಂತೆಯಲ್ಲಿ  ನಿಂತ  ಕಬೀರ’  ಚಿತ್ರದಲ್ಲಿ  ಭಾರತದ  ಶ್ರೇಷ್ಠ  ಸಿನಿಮಾ ಸಂಗೀತ  ನಿರ್ದೇಶಕರಲ್ಲೊಬ್ಬರಾದ  ಇಸ್ಮಾಯಿಲ್  ದರ್ಬಾರ್  ಅವರ  ಸಂಗೀತ  ನಿರ್ದೇಶನದಲ್ಲಿ ತೇಲಿ ಬರುತ್ತಲಿದೆ.    

ರಾಮಚಂದ್ರ  ಹಡಪದ್ ಅವರು  ತಮ್ಮ  ಸಂಗೀತ  ತಂಡದೊಂದಿಗೆ  ನೀಡುವ  ಕಾರ್ಯಕ್ರಮಗಳು  ಸಾಂಪ್ರದಾಯಿಕ ಶಾಸ್ತ್ರೀಯ  - ಸುಗಮಸಂಗೀತಗಳ  ಬೆಸುಗೆಗಳಿಂದ  ಮಾಧುರ್ಯಕ್ಕೆ  ಹೆಸರಾಗಿರುವುದರ ಜೊತೆ ಜೊತೆಗೆ ಕಾರ್ಯಕ್ರಮ ವೈವಿಧ್ಯವನ್ನು  ಸೂಚಿಸುವ    ‘ಹಾಡುಪದ’,  ‘ರಂಗವಲ್ಲಿ’, ‘ಬೇಂದ್ರೆ ಬೆಳಗು’,   ‘fb ಹಾಡುಗಳು’ ಮುಂತಾದ  ವೈವಿಧ್ಯಮಯ ಆಯ್ಕೆಗಳಿಂದಲೂ  ಜನಮನದ  ಕದವನ್ನು  ತಟ್ಟುತ್ತಿವೆ.  ಅವರು  ತಾವೇ ಹಾಡುಗಾರರಾಗಿರುವುದರ  ಜೊತೆಗೆ ಅನೇಕ  ಯುವ ಪ್ರತಿಭೆಗಳನ್ನೂ  ಕನ್ನಡದ  ಶ್ರೋತೃವರ್ಗಕ್ಕೆ  ಪರಿಚಯ ಮಾಡಿಕೊಡುತ್ತಾ  ಸಾಗಿದ್ದಾರೆ.


ಹೀಗೆ  ಎಲ್ಲೆಡೆ  ತಮ್ಮ  ಸಂಗೀತ ಕಾಂತಿಯನ್ನು  ಪ್ರಖರಿಸುತ್ತಿರುವ  ರಾಮಚಂದ್ರ ಹಡಪದ್ ಅವರ  ಸುಮಧುರ  ಗಾನದ  ಪಯಣ  ಔನ್ನತ್ಯದ  ಹಾದಿಯಲ್ಲಿ  ಸಾಗುತ್ತಿರಲಿ,  ಅಂತೆಯೇ  ಅವರ  ಬದುಕೂ ಸುಮಧುರವಾಗಿರಲಿ  ಎಂದು  ಆಶಿಸುತ್ತಾ  ಅವರಿಗೆ  ಜನ್ಮದಿನದ  ಶುಭಹಾರೈಕೆಗಳನ್ನು  ಸಲ್ಲಿಸೋಣ.   

Tag: Ramachandra Hadapad

ಕಾಮೆಂಟ್‌ಗಳಿಲ್ಲ: