ಮಂಗಳವಾರ, ಜೂನ್ 21, 2016

ಅಂತರರಾಷ್ಟ್ರೀಯ ಯೋಗ ದಿನಾಚರಣೆ


ಅಂತರರಾಷ್ಟ್ರೀಯ ಯೋಗ  ದಿನಾಚರಣೆ

ಜೂನ್  21 ದಿನಾಂಕವನ್ನು  ಕಳೆದ  ವರ್ಷದಿಂದ  ಅಂತರರಾಷ್ಟ್ರೀಯ  ಯೋಗ ದಿನವೆಂದು ವಿಶ್ವಸಂಸ್ಥೆಯು ನಿರ್ಣಯಿಸಿರುವುದು  ಭಾರತೀಯ  ಶ್ರೇಷ್ಠ  ಪರಂಪರೆಗೊಂದು  ಗೌರವ  ಸಂದ  ವಿಷಯವಾಗಿದೆ.

“ಯೋಗ” ಎನ್ನುವ  ಪದ  ಸಂಸ್ಕೃತ  ಮೂಲಧಾತುವಾದ “ಯುಜ್” ಎನ್ನುವುದರಿಂದ  ಬಂದಿದ್ದು; ಬಂಧಿಸು,  ಕೂಡಿಸು,  ನೊಗಕ್ಕೆ  ಕಟ್ಟು, ಚಿತ್ತವನ್ನು  ನಿರ್ದೇಶಿಸಿ ಕೇಂದ್ರೀಕರಿಸು, ಉಪಯೋಗಿಸು ಮತ್ತು  ಆಸಕ್ತಿ ವಹಿಸು ಎನ್ನುವ  ಅರ್ಥಗಳನ್ನು ಕೊಡುತ್ತದೆ.  ಸಂಯೋಜನೆ ಅಥವಾ  ಸಂಸರ್ಗ  ಎನ್ನುವ ಅರ್ಥವೂ  ಇದಕ್ಕೆ  ಇದೆ.  ಭಗವಂತನ ಇಚ್ಛೆಯೊಂದಿಗೆ  ನಮ್ಮ ಇಚ್ಛೆಯ ಸಂಸರ್ಗವೆಂದರೆ ಇದೇ.  ಮಹದೇವ ದೇಸಾಯಿಯವರು  ಮಹಾತ್ಮ  ಗಾಂಧೀಜಿಯವರ ದೃಷ್ಟಿಯಲ್ಲಿ  ಗೀತೆ  ಎನ್ನುವ  ಪುಸ್ತಕದ ಪ್ರಸ್ತಾವನೆಯಲ್ಲಿ  “ಶರೀರದ, ಮನಸ್ಸಿನ ಮತ್ತು ಆತ್ಮದ  ಸರ್ವಶಕ್ತಿಗಳನ್ನೂ ಭಗವಂತನೊಡನೆ ಸಂಯೋಜಿಸುವುದು ಯೋಗ.  ಇದು  ಚಿತ್ತ, ಮನಸ್ಸು, ಭಾವನೆಗಳು, ಇಚ್ಛೆ ಎನ್ನುವ  ಯೋಗದ  ಮೂಲಭಾವನೆಗಳನ್ನೂ  ಶಿಸ್ತುಗೊಳಿಸುವುದು ಮತ್ತು ಜೀವನದ  ಎಲ್ಲ ಅಂಶಗಳನ್ನೂ  ಸಮದೃಷ್ಟಿಯಿಂದ  ನೋಡಲು ಸಹಾಯಕವಾಗುವ ಆತ್ಮದ ಒಂದು  ನಿಲುವು” ಎಂದು  ಹೇಳುತ್ತಾರೆ.

ಭಾರತೀಯ  ಆಸ್ತಿಕದರ್ಶನಗಳಲ್ಲಿ  ಯೋಗವೂ ಒಂದು.  ಅದನ್ನು  185 ಕ್ಲಿಷ್ಟ ಸೂತ್ರಗಳನ್ನೊಳಗೊಂಡ ‘ಯೋಗಸೂತ್ರ’ಗಳೆಂಬ ಶಾಸ್ತ್ರೀಯ  ಗ್ರಂಥದಲ್ಲಿ  ಪತಂಜಲಿಮುನಿ ಸಂಶೋಧಿಸಿ ಸಂಯೋಜಿಸಿದ್ದಾರೆ.  ಹಿಂದೂತತ್ವದಲ್ಲಿ  ಪ್ರತಿಯೊಂದು ವಸ್ತುವೂ  ಪರಾತ್ಪರ  ವಿಶ್ವಶಕ್ತಿಯಿಂದ  (ಪರಮಾತ್ಮ ಅಥವಾ ಭಗವಂತ) ಆವಾಸ್ಯವಾಗಿದ್ದು ಜೀವಾತ್ಮನು ಅದರ ಒಂದು ಅಂಶವೆಂದು ಪರಿಗಣಿಸಲ್ಪಟ್ಟಿದೆ.  ಜೀವಾತ್ಮನು ಪರಮಾತ್ಮನೊಂದಿಗೆ  ಐಕ್ಯ ಹೊಂದಲು ಅಥವಾ ಸಂಸರ್ಗ ಹೊಂದಲು ಮಾರ್ಗವನ್ನು ತೋರಿಸಿ ಆ ಮೂಲಕ  ಮೋಕ್ಷ  ಸಂಪಾದಿಸಲು  ಸಹಾಯಮಾಡುವುದರಿಂದ  ಯೋಗಶಾಸ್ತ್ರಕ್ಕೆ  ಆ ಹೆಸರು  ಬರಲು ಕಾರಣ.  ಯೋಗಮಾರ್ಗವನ್ನು ಅವಲಂಬಿಸುವವನು ಯೋಗಿ. 

ಯೋಗದರ್ಶನಕ್ಕೆ  ಬಹುಮುಖ್ಯವಾದ  ಆಧಾರವೆನಿಸುವ  ಭಗವದ್ಗೀತೆಯ ಆರನೆಯ  ಅಧ್ಯಾಯದಲ್ಲಿ  ಶ್ರೀಕೃಷ್ಣರು ಅರ್ಜುನನಿಗೆ    ಯೋಗದ ಅರ್ಥ ‘ನೋವು ಮತ್ತು ದುಃಖಗಳ ಸ್ಪರ್ಶದಿಂದ ಬಿಡುಗಡೆ’ ಎಂದು  ಹೇಳುತ್ತಾರೆ.  “ಯಾವಾಗ ಮನಸ್ಸು, ಬುದ್ಧಿ, ಮತ್ತು ಅಹಂಕಾರ ನಿಗ್ರಹಿಸಲ್ಪಡುತ್ತದೆಯೋ, ಚಂಚಲವಾದ ಕಾಮಗಳಿಂದ  ಬಿಡುಗಡೆ ಹೊಂದಲ್ಪಟ್ಟು ಆತ್ಮನಲ್ಲಿ  ನಿಲ್ಲುತ್ತದೋ, ಆಗ  ಮಾನವನು ಭಗವಂತನೊಡನೆ  ಸಂಸರ್ಗಹೊಂದಿದ ‘ಯುಕ್ತ’ ಎಂದಾಗುತ್ತಾನೆ.  ಎಲ್ಲಿ ಗಾಳಿಯು ಬೀಸುವುದಿಲ್ಲವೋ  ಅಲ್ಲಿ ದೀಪವು ಅಲಗುವುದಿಲ್ಲ.  ಹಾಗೆಯೇ  ಮನಸ್ಸನ್ನೂ,  ಬುದ್ಧಿಯನ್ನೂ, ಅಹಂಕಾರವನ್ನೂ  ಅಧೀನವಾಗಿರಿಸಿಕೊಂಡ ಯೋಗಿಯ ವಿಚಾರವೂ ಕೂಡ.  ಯೋಗ ಸಾಧನೆಯಿಂದ  ಮನಸ್ಸಿನ,  ಬುದ್ಧಿಯ, ಅಹಂಕಾರದ  ಚಂಚಲತೆಯನ್ನು ಯಾವಾಗ ತಡೆಯಬಹುದೋ ಆಗ ಯೋಗಿಯು  ಆತ್ಮದ ಪ್ರಸಾದದಿಂದ  ಸಂತೃಪ್ತನಾಗುತ್ತಾನೆ.  ಆಗ ಬುದ್ಧಿ ತರ್ಕದ  ಹಿಡಿತಕ್ಕೆ ಸಿಗದ, ಇಂದ್ರಿಯಗಳ ಶಕ್ತಿಗೆ ಅತೀತವಾದ ನಿತ್ಯಾನಂದವನ್ನು  ಅರಿಯುತ್ತಾನೆ. ಅಂಥವನು ಈ  ಸದ್ವಸ್ತುವಿನಲ್ಲೇ ನೆಲೆಸಿ ಅದರಿಂದ  ಹೊರಗೆ  ಬರುವುದೇ  ಇಲ್ಲ.  ಎಲ್ಲದಕ್ಕಿಂತ    ಉತ್ಕೃಷ್ಟವಾದ  ನಿಧಿಯನ್ನು  ಹುಡುಕಿರುತ್ತಾನೆ.  ಇದಕ್ಕಿಂತ  ಉತ್ತಮತರ ನಿಧಿ ಬೇರೊಂದಿಲ್ಲ.  ಇದನ್ನು  ಸಾಧಿಸಿದವನು  ಎಂಥ  ತೀಕ್ಷ್ಣವಾದ ದುಃಖದಿಂದಲೂ ಚಲಿಸುವುದಿಲ್ಲ.  ಇದು  ಯೋಗದ  ನಿಜವಾದ  ಅರ್ಥ -  ನೋವು  ಮತ್ತು ದುಃಖದ ಸ್ಪರ್ಶದಿಂದ  ಬಿಡುಗಡೆ”.

ಭಗವದ್ಗೀತೆಯು ಯೋಗವೆನ್ನುವ  ಪದಕ್ಕೆ  ಇತರ  ವಿವರಣೆಗಳನ್ನೂ  ನೀಡಿ  ಕರ್ಮಯೋಗ  ಎನುವುದರ ಮೇಲೆಯೂ  ಹೆಚ್ಚಿನ ಗಮನ  ನೀಡಿದೆ.  “ಕರ್ಮಕ್ಕೆ  ನೀನು  ಅಧಿಕಾರಿ.  ಅದರಿಂದ  ಬರುವ  ಫಲಗಳ  ಮೇಲಲ್ಲ.  ಫಲಗಳೇ ಸಾಧನೆಯ ಗುರಿಯಾಗುವಂತೆ  ಬಿಡಬೇಡ; ಅಲ್ಲದೆ  ಕರ್ಮವನ್ನು  ಮಾಡದೆ ಇರಬೇಡ.  ಸ್ವಾರ್ಥದ  ಆಶೆಗಳನ್ನು  ಬಿಟ್ಟು ದೇವರ  ಹೆಸರಿನಲ್ಲಿ  ದುಡಿ.  ಜಯ ಅಪಜಯಗಳಿಂದ  ಬಾಧಿತನಾಗದಿರು.  ಈ ಸಮತ್ವವೇ  ಯೋಗ”  ಎಂಬ  ಮಾತುಗಳು ಅಲ್ಲಿ  ಉಲ್ಲೇಖಿತಗೊಂಡಿವೆ.  ಅಂತೆಯೇ  ಯೋಗವೆನ್ನುವುದು  ಕರ್ಮದಲ್ಲಿ ಕುಶಲತೆ, ಸಾಮರಸ್ಯ ಮತ್ತು  ತಾಳ್ಮೆಯನ್ನು  ಸೂಚಿಸುವುದೆಂದೂ  ವಿವರವಾಗಿ  ಹೇಳುತ್ತದೆ.  “ಯೋಗವೆನ್ನುವುದು ಅತಿ ಆಶೆಯಿಂದ  ಭಕ್ಷಿಸುವವನಿಗೂ  ಅಲ್ಲ,  ಅತಿಯಾಗಿ ಉಪವಾಸ  ಮಾಡುವವನಿಗೂ  ಅಲ್ಲ,  ಹೆಚ್ಚು  ನಿದ್ರೆ ಮಾಡುವವನಿಗೂ ಅಲ್ಲ, ಯಾವಾಗಲೂ ನಿದ್ರೆ ಮಾಡದವನಿಗೂ  ಅಲ್ಲ.  ತಿನ್ನುವುದರಲ್ಲಿ, ವಿಶ್ರಾಂತಿ  ತೆಗೆದುಕೊಳ್ಳುವುದರಲ್ಲಿ ಮಧ್ಯಮವರ್ತಿಯಾಗುವಂತೆ, ಕೆಲಸ ಅಥವಾ ಕರ್ಮದಲ್ಲಿ  ಕ್ರಮ ಪಾಲಿಸುವಂತೆ, ನಿದ್ರೆ ಮತ್ತು  ಎಚ್ಚರ ಇವುಗಳಲ್ಲಿ  ಸೂಕ್ತ  ಹೊಂದಾಣಿಕೆ ಉಂಟಾಗುವ  ಹಾಗೆ ಮಾಡಿ, ಯೋಗವು ನೋವು  ಮತ್ತು  ದುಃಖವನ್ನು  ನಿವಾರಿಸುತ್ತದೆ”

ಕಠೋಪನಿಷತ್ತು ಯೋಗವನ್ನು  ಈ ರೀತಿ ವಿವರಿಸುತ್ತದೆ:  “ಇಂದ್ರಿಯಗಳು  ನಿಗ್ರಹಿಸಲ್ಪಟ್ಟು, ಮನಸ್ಸು ಸ್ಥಿಮಿತದಲ್ಲಿದ್ದು, ಬುದ್ಧಿ ಚಾಂಚಲ್ಯರಹಿತವಾಗಿದ್ದಾಗ ಅತ್ಯುನ್ನತಪದವನ್ನು  ಸಾಧಿಸಿದಂತಾಗುವುದೆಂದು  ಪಂಡಿತರು ಹೇಳುತ್ತಾರೆ.  ಈ ರೀತಿಯಾದ  ಕ್ರಮಬದ್ಧ  ಇಂದ್ರಿಯಗಳ ಮತ್ತು  ಮನಸ್ಸಿನ  ನಿಗ್ರಹವು  ಯೋಗವೆಂದು ಹೇಳಲ್ಪಟ್ಟಿದೆ.  ಇದನ್ನು  ಸಾಧಿಸಿದವನು ಎಲ್ಲ  ಭ್ರಮೆಗಳಿಂದಲೂ ನಿವೃತ್ತನಾಗುತ್ತಾನೆ”.

ಯೋಗಸೂತ್ರಗಳ  ಪ್ರಥಮ  ಅಧ್ಯಾಯದ  ಎರಡನೆಯ  ಸೂತ್ರದಲ್ಲಿ  ಯೋಗವೆಂದರೆ  “ಚಿತ್ತವೃತ್ತಿಗಳ  ನಿರೋಧ” ಎಂದು ಪತಂಜಲಿ ಮುನಿಗಳು  ಹೇಳುತ್ತಾರೆ.  ಹೀಗೆಂದರೆ  ಮನಸ್ಸಿನ  ವಿವಿಧ ವೃತ್ತಿಗಳನ್ನೂ  ಹತೋಟಿಯಲ್ಲಿಡುವುದೆಂದೂ, ಚಿತ್ತದ  ಚಂಚಲತೆಯನ್ನು  ದಮನಗೊಳಿಸುವುದೆಂದೂ  ಅರ್ಥೈಸಬಹುದಾಗಿದೆ.  ಚಂಚಲ ಮನಸ್ಸಿಗೆ  ಶಾಂತಿ ತರುವ  ಕ್ರಿಯಾತ್ಮಕ ಮಾರ್ಗಗಳಲ್ಲಿ  ನಮ್ಮ ಕ್ರಿಯಾಶಕ್ತಿಯನ್ನು  ನಡೆಸುವುದು ಯೋಗ.  ಮನಸ್ಸು  ಹತೋಟಿಯಲ್ಲಿದ್ದರೆ  ಮಾನವನ  ಪ್ರಗತಿಗೆ ಬೇಕಾದ  ಸಕಲ ಸಾಮರ್ಥ್ಯವನ್ನೂ ಒದಗಿಸುತ್ತದೆ.  ಭಗವದ್ಗೀತೆಯಲ್ಲಿ  ಮನಸ್ಸನ್ನು  ಹತೋಟಿಯಲ್ಲಿಡುವುದು ಕಷ್ಟವಲ್ಲವೇ  ಎಂಬ  ಅರ್ಜುನನ  ಮಾತಿಗೆ  ಶ್ರೀಕೃಷ್ಣರು  ಹೇಳುತ್ತಾರೆ “ಮನಸ್ಸು  ಚಾಂಚಲಸ್ವಭಾವದ್ದು, ನಿಗ್ರಹಿಸಲು ಕಷ್ಟಕರವಾದದ್ದು  ಎಂಬುದು ನಿಜ.  ಆದರೆ  ನಿರಂತರ  ಅಭ್ಯಾಸದಿಂದ  ಮತ್ತು  ವೈರಾಗ್ಯದಿಂದ  ಅದನ್ನು  ನಿಗ್ರಹಿಸಬಹುದು.  ಮನಸ್ಸನ್ನು  ನಿಗ್ರಹಿಸಲಾರದವನಿಗೆ  ದಿವ್ಯಸಂಯೋಗವನ್ನು  ಪಡೆಯಲು ಅಸಾಧ್ಯ.  ಆದರೆ  ತನ್ನ  ಮೇಲೆಯೇ  ನಿಗ್ರಹ  ಮಾಡಿಕೊಳ್ಳಬಲ್ಲವನಿಗೆ, ತನ್ನ ಶಕ್ತಿಯನ್ನು  ಸರಿಯಾದ  ದಾರಿಯಲ್ಲಿ  ಕೊಂಡೊಯ್ಯುವವನಿಗೆ, ಅದು  ಸಾಧ್ಯ.”

ಪತಂಜಲಿ ಮಹರ್ಷಿಗಳು  ಆತ್ಮಸಾಧನೆಗಾಗಿ  ಎಂಟು ಅಂಗಗಳಿರುವ ಯೋಗವನ್ನು ಹೇಳಿದ್ದಾರೆ:
1.    ಯಮ : ಸಾರ್ವತ್ರಿಕ ನೀತಿ-ನಿಯಮಗಳು
2.    ನಿಯಮ : ಶಿಸ್ತಿನಿಂದ  ಆತ್ಮ ಶುದ್ಧೀಕರಣ
3.    ಆಸನ : ದೇಹದ ನಿಲುಮೆ
4.    ಪ್ರಾಣಾಯಾಮ : ಉಚ್ಛ್ವಾಸ ಮತ್ತು ನಿಚ್ಛ್ವಾಸಗಳ ಕ್ರಮಬದ್ಧ ಹತೋಟಿ
5.    ಪ್ರತ್ಯಾಹಾರ : ಇಂದ್ರಿಯಗಳ ಮತ್ತು ಇಂದ್ರಿಯಾರ್ಥಗಳ  ಪ್ರಾಬಲ್ಯದಿಂದ  ಮನಸ್ಸಿನ  ಬಿಡುಗಡೆ
6.    ಧಾರಣ :  ಕೇಂದ್ರೀಕರಣ
7.    ಧ್ಯಾನ  : ಜಪ
8.    ಸಮಾಧಿ : ಜಪದ  ಧ್ಯೇಯವಾದ  ಪರಮಾತ್ಮನಲ್ಲಿ  ಸಾಧಕನ ಐಕ್ಯ

ಹೀಗೆ  ಸಾಧಕನಾದ ಯೋಗಿಯ  ಹೃದಯದಿಂದ  ಆದಿ ಶಂಕರರರು  ಆತ್ಮಷಟ್ಕದಲ್ಲಿ ಹೇಳಿರುವಂತ “ಚಿದಾನಂದರೂಪಃ  ಶಿವೋsಹಂ ಶಿವೋsಹಂ”  ಅಂದರೆ “ಆನಂದಸ್ವರೂಪನಾದ ಸದಾಶಿವನೇ ನಾನಾಗಿದ್ದೇನೆ” ಎಂಬ  ಆತ್ಮಗೀತವು  ಹೊರಹೊಮ್ಮುತ್ತದೆ. 

ಯೋಗವೆಂಬುದು  ಮೇಲ್ಕಂಡ  ಅಷ್ಟ ಅಂಗಗಳಿಂದ  ರೂಢಿಸಿ, ಅನುಭಾವಿಸಿಕೊಂಡು ಬದುಕನ್ನು  ಶ್ರೇಷ್ಠತೆಗೆ  ಕೊಂಡೊಯ್ದುಕೊಳ್ಳುವಂತದ್ದು.  ಕೆಲವು  ಮಾತುಗಳಲ್ಲಿ  ಅದು  ಸಿಗುವಂತದ್ದಲ್ಲ.  ಇಲ್ಲಿ  ಶ್ರೀ ಸ್ವಾಮಿ ವಿವೇಕಾನಂದರ ಈ  ಮಾತುಗಳು  ಹೆಚ್ಚು  ಅರ್ಥಪೂರ್ಣ:  “ಪ್ರತೀ  ಜೀವಿಯೂ  ಮೂಲತಃ  ದಿವ್ಯವೇ.  ಬಾಹ್ಯ ಮತ್ತು  ಆಂತರಿಕ  ಪ್ರಕೃತಿಯ  ನಿಯಂತ್ರಣದಿಂದ  ಸುಪ್ತವಾಗಿರುವ  ಈ ದಿವ್ಯತ್ವವನ್ನು  ಜಾಗೃತಗೊಳಿಸಿ ಅಭಿವ್ಯಕ್ತಗೊಳಿಸುವುದೇ  ಜೀವನದ  ಗುರಿ.  ಕರ್ಮಯೋಗ,  ಭಕ್ತಿಯೋಗ,  ರಾಜಯೋಗ, ಅಥವಾ  ಜ್ಞಾನಯೋಗ  ಇವುಗಳಲ್ಲಿ  ಯಾವುದಾದರೂ ಒಂದು, ಹಲವು  ಅಥವಾ  ಎಲ್ಲವನ್ನೂ ಬಳಸಿಕೊಂಡು ಈ ಗುರಿಯನ್ನು  ಸಾಧಿಸಿ  ಮುಕ್ತರಾಗಿ”.   ಹೀಗೆ  ಯೋಗವನ್ನು  ಬಳಸಿ  ನಿಜಮುಕ್ತರಾಗುವ ಯೋಗ್ಯತೆ ನಮಗೆ  ಸಿದ್ಧಿಸಲಿ ಎಂದು ಆಶಿಸೋಣ. 

Tag: International Yoga Day

ಕಾಮೆಂಟ್‌ಗಳಿಲ್ಲ: