ಭಾನುವಾರ, ಜೂನ್ 26, 2016

ಡಿ. ಬಾಲಕೃಷ್ಣ


ವೈಣಿಕ ವಿದ್ವಾಂಸರಾದ ಡಿ. ಬಾಲಕೃಷ್ಣ


ವೈಣಿಕ ವಿದ್ವಾಂಸರಾದ ಡಿ. ಬಾಲಕೃಷ್ಣ ಅವರು ಮೈಸೂರು ಶೈಲಿಯ ವೀಣಾವಾದನದಲ್ಲಿ ಪ್ರಸಿದ್ಧರಾಗಿದ್ದು ನವುರಾದ ಮೀಟುವಿಕೆ, ಸಂಪ್ರದಾಯಬದ್ಧ ಸಂಗೀತ ಶೈಲಿ ಮತ್ತು ಸುಶ್ರಾವ್ಯತೆಗಳ ಸಂಗಮದಂತಹ ಸಂಗೀತಾಭಿವ್ಯಕ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸುಪ್ರಸಿದ್ಧ ವೈಣಿಕರಾದ ವೀಣಾ ದೊರೆಸ್ವಾಮಿ ಅಯ್ಯಂಗಾರ್ ಅವರ ಸುಪುತ್ರರಾದ ಡಿ. ಬಾಲಕೃಷ್ಣ ಅವರಿಗೆ ಅವರ ತಂದೆಯೇ ಗುರು. ತಾಯಿ ಶಾರದಮ್ಮನವರು. ಬಾಲಕೃಷ್ಣರು ಜೂನ್ 26, 1955ರ ವರ್ಷದಲ್ಲಿ ಮೈಸೂರಿನಲ್ಲಿ ಜನಿಸಿದರು.


ಡಿ. ಬಾಲಕೃಷ್ಣರು ಸಂಗೀತದಲ್ಲಿ ತಮ್ಮ ತಂದೆಯವರ ಶಾಸ್ತ್ರಬದ್ಧ, ಶಿಸ್ತಿನ ಶಿಕ್ಷಣದಲ್ಲಿ ಉನ್ನತಿ ಸಾಧಿಸಿದ್ದರ ಜೊತೆ ಜೊತೆಗೆ ಓದಿನಲ್ಲಿ ಕೂಡಾ ಉತ್ತಮ ಸಾಧನೆ ಮಾಡಿ ಎಂ.ಎಸ್‌.ಸಿ (ಸ್ಟಾಟಿಸ್ಟಿಕ್ಸ್) ಪದವಿ ಪಡೆದರು. ಸಂಗೀತವನ್ನೇ ವೃತ್ತಿಯಾಗಿ ಸ್ವೀಕರಿಸಬೇಡ ಎಂಬ ತಂದೆಯವರ ಮಾತಿಗೆ ಅನುಗುಣವಾಗಿ ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಉದ್ಯೋಗ ಮಾಡಿದರು.


ಬಾಲಕೃಷ್ಣರು ಬಾಲ್ಯದಲ್ಲಿರುವಾಗಲೇ, ತಂದೆ ದೊರೆಸ್ವಾಮಿ ಅಯ್ಯಂಗಾರ್ ಅವರು ಬೆಂಗಳೂರಿನ ಆಕಾಶವಾಣಿಯಲ್ಲಿ ಉದ್ಯೋಗಸ್ಥರಾದ ಸಂದರ್ಭದಲ್ಲಿ ಬೆಂಗಳೂರಿಗೆ ಬಂದರು. ಬಾಲ್ಯದಲ್ಲಿ ಮೃದಂಗ ವಾದ್ಯದತ್ತ ಆಕರ್ಷಿತರಾಗಿದ್ದ ಅವರು ವಿದ್ವಾನ್ ಇಯ್ಯಾಮಣಿ ಅಯ್ಯರ್ ಅವರಿಂದ ಮೃದಂಗವಾದನವನ್ನು ಕಲಿತಿದ್ದರು. ಆದರೆ ತಾತ ವೆಂಕಟೇಶ ಅಯ್ಯಂಗಾರ್ ಅವರ ಒತ್ತಾಸೆಯ ಮೇರೆಗೆ ವಂಶಪಾರಂಪರ್ಯವಾಗಿ ಬಂದ ವೀಣಾವಾದನದತ್ತ ಬಂದರು. ಬಾಲ್ಯದಲ್ಲೇ ತಿಟ್ಟೆ ಕೃಷ್ಣಯ್ಯಂಗಾರ್, ಚೌಡಯ್ಯ, ರಮಣಿ ಮುಂತಾದ ಮಹಾನ್ ಕಲಾವಿದರ ಸಂಗೀತಗಳಿಗೆ ಮಾರುಹೋಗಿದ್ದ ಬಾಲಕೃಷ್ಣರಿಗೆ ಸಂಗೀತದ ಮೇಲೆ ಅಪಾರವಾದ ಆಸಕ್ತಿ ಮೂಡಿತ್ತು.


ಡಿ. ಬಾಲಕೃಷ್ಣ ಅವರು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ರಾಮನವಮಿ ಕಾರ್ಯಕ್ರಮದಲ್ಲಿ ತಮ್ಮ ತಂದೆಯವರೊಂದಿಗೆ ವೀಣಾನಾದಕ್ಕೆ ಜೊತೆಯಾಗುವುದರೊಂದಿಗೆ ಮೊಟ್ಟ ಮೊದಲ ಬಾರಿಗೆ ಸಂಗೀತ ಕಛೇರಿ ನೀಡಿದರು. ಬಾಲಕೃಷ್ಣರು ಆಕಾಶವಾಣಿಯ ಉನ್ನತ ದರ್ಜೆ ಕಲಾವಿದರು. ತಮ್ಮ ತಂದೆಯವರೊಂದಿಗೆ ಕರ್ನಾಟಕದಲ್ಲಷ್ಟೇ ಅಲ್ಲದೆ ದೇಶದ ವಿವಿದೆಡೆಗಳಲ್ಲೂ, ವಿದೇಶಗಳಲ್ಲೂ ಸಂಗೀತ ನೀಡಿರುವ ಅವರು ತಮ್ಮದೇ ಪ್ರತ್ಯೇಕ ಸಂಗೀತ ಕಛೇರಿಗಳನ್ನು ಸಹಾ ನೀಡಿ ಹೆಸರುವಾಸಿಯಾಗಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನಗಳಲ್ಲೂ ಅವರ ಕಛೇರಿಗಳು ಸಂಗೀತ ರಸಿಕರನ್ನು ಸೆಳೆದಿವೆ. ಪಿಟೀಲು ವಿದ್ವಾನ್ ಎಮ್. ಚಂದ್ರಶೇಖರ್ ಮತ್ತು ಸರೋದ್ ವಾದಕರಾದ ಪಂಡಿತ್ ರಾಜೀವ್ ತಾರಾನಾಥರೊಂದಿಗೆ ಸಹಾ ಬಾಲಕೃಷ್ಣರ ವೀಣಾನಾದ ಝೇಂಕರಿಸಿದೆ.


1987ರ ವರ್ಷದಲ್ಲಿ ತಂದೆ ವೀಣಾ ದೊರೆಸ್ವಾಮಿ ಅಯ್ಯಂಗಾರ್ ಅವರೊಂದಿಗೆ ರಷ್ಯಾದಲ್ಲಿ ಪಂಚವೀಣಾ ಸಂಗೀತದಲ್ಲಿ ಪಾಲ್ಗೊಂಡ ಬಾಲಕೃಷ್ಣರು, 1988ರಲ್ಲಿ ಬ್ರಿಟನ್ನಿನಲ್ಲಿ, 1991ರಲ್ಲಿ ಜರ್ಮನಿಯಲ್ಲಿನಭಾರತ ಉತ್ಸವಸಂದರ್ಭದಲ್ಲಿ ಹಾಗೂ, 2002 ಮತ್ತು 2006ರ ವರ್ಷದಲ್ಲಿ ಅಮೆರಿಕದ ವಿವಿದೆಡೆಗಳಲ್ಲಿ ಹೀಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಸಂಗೀತ ಕಛೇರಿಗಳಲ್ಲಿ ಭಾಗಿಯಾಗುತ್ತಾ ಬಂದಿದ್ದಾರೆ.


ಕಂಚಿ ಕಾಮಕೋಟಿ ಪೀಠದ ಆಸ್ಥಾನ ವಿದ್ವಾನ್ ಗೌರವ, ಚೆನ್ನೈ ಮ್ಯೂಸಿಕ್‌ ಅಕಾಡೆಮಿಯಿಂದ 1979, 1991, 1996, 2006, 2008ರ ವರ್ಷಗಳಲ್ಲಿ ಗೌರವ, 1997ರಲ್ಲಿ ಬೆಂಗಳೂರಿನ ಗಾನ ಕಲಾ ಪರಿಷತ್‌ನಿಂದ ಗಾನ ಕಲಾಶ್ರೀ ಗೌರವ, ತಾಳವಾದ್ಯ ಕಲಾಕೇಂದ್ರದಿಂದ ಪುಟ್ಟಾಚಾರ್ ಸ್ಮಾರಕ ಪ್ರಶಸ್ತಿ, 2002, 2003ರ ಗಾನಕಲಾ ಪರಿಷತ್ತಿನ ಸಂಗೀತ ಸಮ್ಮೇಳನ ಪ್ರಶಸ್ತಿ, ಅತ್ಯುತ್ತಮ ಪಲ್ಲವಿ ಪ್ರಾತ್ಯಕ್ಷಿಕೆಗಾಗಿ ಪ್ರಶಸ್ತಿ, 2014ಸಂಸ್ಕಾರ ಭಾರತಿ'ಗುರು ಪೂರ್ಣಿಮಾಗೌರವ, 2014-15ರ ಕರ್ನಾಟಕ ಸಂಗೀತ ನಾಟಕ ಅಕಾಡೆಮಿಯಕರ್ನಾಟಕ ಕಲಾಶ್ರೀಗೌರವ ಮುಂತಾದ ಅನೇಕ ಗೌರವಗಳು ವಿದ್ವಾನ್ ಡಿ. ಬಾಲಕೃಷ್ಣ ಅವರನ್ನರಸಿ ಬಂದಿವೆ.


ಬಾಲಕೃಷ್ಣ ಅವರು ತಾವು ಅನುಭಾವಿಸುತ್ತಾ ಬಂದಿರುವ ಸಂಗೀತ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಅನೇಕ ಶಿಷ್ಯರನ್ನೂ ತಯಾರುಮಾಡುತ್ತಾ ಬಂದಿದ್ದಾರೆ. ಸಂಗೀತ ಶ್ರೇಷ್ಠ ಪರಂಪರೆಯ ಈ ಕಲಾವಿದರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಸಲ್ಲಿಸೋಣ.



Tag: Vainik D. Balakrishna, D.Balakrishna

ಕಾಮೆಂಟ್‌ಗಳಿಲ್ಲ: