ಭಾನುವಾರ, ಜುಲೈ 31, 2016

ಹ್ಯಾರಿ ಪಾಟರ್


ಹ್ಯಾರಿ ಪಾಟರ್

ನನ್ನ ಮಗಳಿಗೆ ಚಿಕ್ಕಂದಿನಿಂದ  ಹ್ಯಾರಿ ಪಾಟರ್ ಅಂದರೆ ಅಪಾರ ಪ್ರೀತಿ.  ಹ್ಯಾರಿ ಪಾಟರ್ ಕೃತಿಯ ಸೃಷ್ಟಿಗಾರ್ತಿ ಜೆ ಕೆ ರೋಲಿಂಗ್ ಹುಟ್ಟಿದ ದಿನವಾದ  (ಜುಲೈ 31, 1965)  ಈ ದಿನವನ್ನು   ಹ್ಯಾರಿ ಪಾಟರ್ ಬರ್ತ್ ಡೇಎಂದೇ  ಸಂಭ್ರಮಿಸುತ್ತಾ  ಬಂದಿದ್ದಾಳೆ.    

ಮಾಯಾ ಮಂತ್ರಗಳ ಕಥೆ, ಈ ಲೋಕವನ್ನು ನಿರಂತರವಾಗಿ ತನ್ನ ರೋಚಕತನದಲ್ಲಿ ಹಿಡಿದಿಟ್ಟಿದೆ.  ಇದು  ಪುರಾತನ ಕಾವ್ಯಗಳಲ್ಲಿನ ಸುರಾಸುರ ಅದಮ್ಯಶಕ್ತಿಗಳಿಂದ ಮೊದಲ್ಗೊಂಡಂತೆ ನಮ್ಮ ಕಾಲದ ಚಂದಮಾಮಪಾತಾಳ ಭೈರವಿಯಂತಹ ಕಥೆಗಳವರೆಗೆ ತನ್ನ ವಿಸ್ತೃತ ಜಾಲವನ್ನು ನಿರಂತರವಾಗಿ ಮುನ್ನಡೆಸುತ್ತಾ ಸಾಗಿದೆ.   ಕಾಲಾನುಕಾಲದಿಂದ  ಆಯಾ ಕಾಲಕ್ಕೆ ತಕ್ಕ ಹಾಗಿನ  ಲೋಕಹಿತಕಾರಕ ವಿಸ್ಮಯಗಳಿಗೂ  ಮತ್ತು ಅದಕ್ಕೆ ಪ್ರತಿರೋಧಕವಾದ  ರಾಕ್ಷಸೀಶಕ್ತಿಗಳ ವಿಚ್ಛಿದ್ರಕಾರಕ ಮಾಯೆಗಳಿಗೂ ಇರುವ ಹೋರಾಟ, ಈ   ಲೋಕಜೀವನವೆಂಬ ಜಾನಪದದಲ್ಲಿ ತಾನೇ ತಾನಾಗಿ ವೈಭವೀಕರಣಗೊಳ್ಳುತ್ತಾ ಸಾಗಿದೆ.  

ಪೂರ್ವದೇಶಗಳಲ್ಲಿನ ಇಂಥಹ ಕಥಾನಕಗಳ ವೈಭವಗಳು , ರೊಮ್ಯಾಂಟಿಸಿಸಂ, ವಾಸ್ತವವಾದ, ಕ್ರಾಂತಿಕಾರಕ  ನವ್ಯಚಿಂತನೆಗಳನ್ನೇ  ಮೋಹವಾಗಿ ಸ್ವೀಕರಿಸಿದ್ದ   ಪಾಶ್ಚಿಮಾತ್ಯ ಚಿಂತನೆಗಳಿಗೆ  ಅಸಂಬದ್ಧ ಎನ್ನುವ ಬುದ್ಧಿವಂತಿಕೆಯ ಸೋಗು ಹಲವಾರು ಶತಮಾನಗಳವರೆಗೆ ಮುಂದುವರೆದಿತ್ತು.  ಈ ಬುದ್ಧಿವಂತ ಜನಾಂಗಕ್ಕೆ ಪೌರಾತ್ಯ ಕಥೆಗಾರರು ತೋರುತ್ತಿದ್ದ ಬೆರಳಿನತ್ತ ನೋಟವಿತ್ತೇ ವಿನಃ, ಅಲ್ಲಿನ ದರ್ಶನಗಳ ಆಳಗಳ ಪರಿಕಲ್ಪನೆಯ ಆಳ ನಿಲುಕದ ಕಡಲಾಗಿತ್ತು. 

ದೇಶ ಪ್ರದೇಶಗಳು ಒಂದಾಗುತ್ತಾ  ಬೇರ್ಪಡುತ್ತಾ ಹೋದಂತೆ ಮತ್ತೊಬ್ಬ ಅನುಭವಿಸಿದ ಸಂತೋಷ ನನಗೇಕಿಲ್ಲ ಎಂಬ ಪ್ರಶ್ನೆಗಳು ಮೂಡುತ್ತಿದ್ದಂತೆವಿಶ್ವಜಾನಪದ ಚಿಂತನೆಗಳೂ ಎಲ್ಲೆಡೆಯಲ್ಲಿ ವಿಸ್ತೃತಗೊಳ್ಳಲು ಪ್ರಾರಂಭಿಸಿದವು.  ಹತ್ತೊಂಬತ್ತು ಇಪ್ಪತ್ತನೆಯ ಶತಮಾನಗಳಲ್ಲಿ  ಪ್ರದರ್ಶನ ಕಲೆಗಳು ತಂದ ಕ್ರಾಂತಿಕಾರಕ ಬದಲಾವಣೆಗಳಂತೂ ವಿಶ್ವದ ಎಲ್ಲ ಚಿಂತನೆಗಳನ್ನೂ ದೃಶ್ಯ ಮಾಧ್ಯಮಗಳ ಭಾಷೆಗಳನ್ನಾಗಿ ಪರಿವರ್ತಿಸತೊಡಗಿತು.  ಒಂದು ಕಾಲದಲ್ಲಿ ಕಥಾನಕಗಳು ದೃಶ್ಯಾನಕಗಳಾಗ  ತೊಡಗಿದರೆಮುಂದೆ ದೃಶ್ಯಾನಕಗಳೇ ಕಥಾನಕಗಳಾಗುವ ಹಾದಿ ಹಿಡಿದವು.  ಇಂಥಹ ಬದಲಾವಣೆಯ ಯುಗದಲ್ಲಿ ಹಿಂದಿನ ಪೌರಾಣಿಕ, ಚಾರಿತ್ರಿಕ, ಜಾನಪದ ಮಾಯಾಜಾಲಗಳು ದೃಶ್ಯ ಮಾಧ್ಯಮಗಳಿಗೆ ಬೇಕಾದ ರೋಚಕ ಆಹಾರಕ್ಕೆ ಹೇಳಿ ಮಾಡಿಸಿದಂತಿದ್ದವು.     ಹೀಗಾಗಿ  ಪುರಾಣದ ದೇವ ಯಕ್ಷ ದಾನವ ಕಥೆಗಳು, ಪಂಚತಂತ್ರದ ಕಥೆಗಳು, ಅಲ್ಲಾ ಉದ್ದೀನ್ ಅದ್ಭುತ ದೀಪದ ಕಥೆ ಹೀಗೆ ವಿಶ್ವದೆಲ್ಲೆಡೆಯ ಕಥೆಗಳು ಹಲವು ಕಲಸು ಮೇಲೋಗರದಲ್ಲಿ ಹೊಸ ಬಾಟಲಿನಲ್ಲಿ ಹಳೆಯ ಮಧ್ಯದಂತೆ ಪ್ರತಿನಿತ್ಯ ರಾರಾಜಿಸುತ್ತಿವೆ. 

ಈ ನಿಟ್ಟಿನಲ್ಲಿ ಕಳೆದ ಎರಡು  ದಶಕಗಳ ಕಾಲದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದದ್ದು ಹ್ಯಾರಿ ಪಾಟರ್ ಎಂಬ ಬ್ರಿಟಿಷ್ ಬರಹಾರ್ತಿಯ ಸೃಷ್ಟಿ.     ಏಳು ಬೃಹತ್ ಸಂಪುಟಗಳಲ್ಲಿ ಬಂದಿರುವ ಈ ಕಥಾನಕಗಳ ಪ್ರಾರಂಭದ ಕೃತಿ 1997ರಲ್ಲಿ ಪ್ರಕಟಗೊಂಡ ಹ್ಯಾರಿ ಪಾಟರ್ ಅಂಡ್ ದ ಫಿಲಾಸಫರ್ಸ್ ಸ್ಟೋನ್‌.   ಹ್ಯಾರಿ ಪಾಟರ್‌ ಎಂಬ ಬಾಲ ಮಾಂತ್ರಿಕನ ಕಾಲ್ಪನಿಕ ಕಥೆಯಿರುವ  ಈ ಪುಸ್ತಕದಲ್ಲಿ ಬಾಲಕ ಹ್ಯಾರಿ ಹೇಗೆ ತಾನೊಬ್ಬ ಮಾಂತ್ರಿಕ ಎಂಬುದನ್ನು ಕಂಡುಕೊಳ್ಳುತ್ತಾನೆ, ಹಾಗ್ವರ್ಟ್ಸ್‌ ಸ್ಕೂಲ್ ಆಫ್ ವಿಚ್‌ಕ್ರಾಫ್ಟ್ ಅಂಡ್ ವಿಜಾರ್ಡ್ರಿಯನ್ನು ಸೇರಿದ ಆತ ಅಲ್ಲಿ ಕೆಲವು ಆತ್ಮೀಯ ಗೆಳೆಯರು ಮತ್ತು ಶತ್ರುಗಳನ್ನು ಸಂಪಾದಿಸುತ್ತಾನೆ, ಗೆಳೆಯರ ಸಹಾಯದೊಂದಿಗೆತನ್ನ ತಂದೆತಾಯಿಯರನ್ನು ಕೊಂದ ಕೆಟ್ಟ ಮಾಂತ್ರಿಕ ವೋಲ್ಡೆಮಾರ್ಟ್‌ ಮತ್ತೆ ಬರುವ ಪ್ರಯತ್ನವನ್ನು ಹೇಗೆ ತಡೆಯುತ್ತಾನೆ ಇತ್ಯಾದಿ ಪಥಗಳಲ್ಲಿ ಈ  ಕಥೆ ಸಾಗುತ್ತದೆ. 

ಸಂಪುಟದಿಂದ ಸಂಪುಟಕ್ಕೆ ವಿಸ್ಮಯಕಾರಕ ಮಾಂತ್ರಿಕಶಕ್ತಿಗಳ ವಿಜೃಂಭಣೆಯ ಜೊತೆ ಜೊತೆಗೆ  ಮಕ್ಕಳ ಮುಗ್ಧತೆ. ಸಾಹಸ ಪ್ರವೃತ್ತಿ, ರೋಮಾಂಚಕಾರಿ ತಿರುವುಗಳು, ಭಾವುಕತೆ, ಹಾಸ್ಯ  ಇತ್ಯಾದಿಗಳನ್ನು ತುಂಬಿ ತುಳುಕಿಸುತ್ತಾ ಸಾಗಿದ ಹ್ಯಾರಿ ಪಾಟರ್ ಎಂಬ ಹುಡುಗ ಮತ್ತು ಆತನ ಆತ್ಮೀಯ ಗೆಳೆಯ ಪರಿವಾರಗಳ ಕಥೆ, ಹ್ಯಾರಿ ಪಾಟರ್ ಯುವಕನಾಗಿ ಪ್ರಣಯದಾಟ ಆಡುವಷ್ಟರ ಮಟ್ಟಿಗೆ ಬೆಳೆದುದರ ಜೊತೆಗೆ ಸಿನಿಮಾಗಳಲ್ಲಿನ ಹೊಸ ಹೊಸ ತಂತ್ರಜ್ಞಾನಕ್ಕೆ ಹೇಳಿ ಮಾಡಿಸಿದಂತಹ ವಿನೂತನ ಸತ್ವ ರಜೋ ತಮೋಗುಣಕಾರಿ ಪಾತ್ರಗಳನ್ನೂ ವೈಭವೀಕರಿಸಿದೆ.

ಹ್ಯಾರಿ ಪಾಟರ್ ಸರಣಿಯ  ಪುಸ್ತಕಗಳು ಸುಮಾರು 50 ಕೋಟಿ ಪ್ರತಿಗಳಷ್ಟು ಮಾರಾಟವಾಗಿದೆ ಎನ್ನಲಾಗಿದ್ದು  ವಿಶ್ವದ ಸುಮಾರು 75  ಭಾಷೆಗಳಲ್ಲಿ ಪ್ರಕಟಗೊಂಡಿವೆ.  ಇತ್ತೀಚಿನ ವರ್ಷಗಳಲ್ಲಿ ಈ  ಬುಕ್  ಮಾದರಿಯಲ್ಲಿ  ಮತ್ತಷ್ಟು  ಕೋಟಿಗಳು  ಸೇರಿವೆ.     ಈ ಸರಣಿಯ ಕಥೆಗಳ ಆಧಾರಿತ ಚಿತ್ರಗಳೂ ಕೂಡಾ ಯಶಸ್ವಿಯಾಗಿವೆ.  ಪ್ರಾರಂಭಿಕ ಹಂತಗಳಲ್ಲಿ ಬಂದ ಈ ಚಿತ್ರಗಳು ತುಂಬಾ ಸುಂದರವಾಗಿದ್ದವು.  ಮುಂದಿನ ಸರಣಿಯ ಚಿತ್ರಗಳು ಅದೇ ಕುತೂಹಲವನ್ನು ಕಾಯ್ದುಕೊಳ್ಳುವುದರಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗದಾದರೂ ಮಾರುಕಟ್ಟೆಯ ಜನಪ್ರಿಯ ವ್ಯಾಪ್ತಿಯ ದೃಷ್ಟಿಯಿಂದ ಇದು ಮಕ್ಕಳು ಮತ್ತು ಯುವಜನಾಂಗವನ್ನು ಅಪಾರವಾಗಿ  ಆಕರ್ಷಿಸಿವೆ.    ನಮ್ಮ ಹಳ್ಳಿಯ ಮಕ್ಕಳು ಕೂಡಾ ಮನೆಯಲ್ಲಿನ ಕಸಪೊರಕೆ ಹಿಡಿದು ನಾನೂ ಹ್ಯಾರಿ ಪಾಟರ್ ತರ ಹಾರ್ತೀನಿ ಎಂಬುವಷ್ಟರ ಮಟ್ಟಿಗೆ ಇದರ ಖ್ಯಾತಿ ಹಬ್ಬಿದೆ.  ಈ ಎಲ್ಲ ಜನಪ್ರಿಯತೆಗಳ ಜೊತೆಗೆ ಹಲವಾರು ದೇಶಗಳಲ್ಲಿನ ವೈಚಾರಿಕರು ಈ ಕಥೆಗಳು ಸೃಷ್ಟಿಸುತ್ತಿರುವ ಮಾಂತ್ರಿಕ ಅಂಶಗಳ ಅವಾಸ್ತವಿಕತೆಯನ್ನು ಪ್ರತಿರೋಧಿಸುತ್ತಲೂ ಸಾಗಿದ್ದಾರೆ.

ಇವೆಲ್ಲದರ ಪರಿಧಿಯಾಚೆಗೆ  ಹ್ಯಾರಿ ಪಾಟರ್ ಅಲೆ ನಮ್ಮ ಮಕ್ಕಳಿಗೆ ಹಾಗೂ ನಮ್ಮ ಮಕ್ಕಳಿಂದ ನಮಗೆ  ವಿಶಿಷ್ಟ ಮೋಡಿ ಹಾಕಿರುವುದಂತೂ ನಿಜ.

Tag: Harry Potter


ಕಾಮೆಂಟ್‌ಗಳಿಲ್ಲ: