ಬುಧವಾರ, ಆಗಸ್ಟ್ 3, 2016

ಎಲ್ಲಾಡಿ ಬಂದೇ ಎನ್ನ ಕೃಷ್ಣಯ್ಯ


ಎಲ್ಲಾಡಿ ಬಂದೇ  ಎನ್ನ ಕೃಷ್ಣಯ್ಯ ನೀ,
ಎಲ್ಲಾಡಿ ಬಂದೇ ಎನ್ನ  ರಂಗಯ್ಯಾ?
ಬಾಲಯ್ಯ  ನೀನೆನ್ನ  ಕಣ್ಣ  ಮುಂದಾಡದೆ,
ಎಲ್ಲಾಡಿ ಬಂದೇ  ಎನ್ನ ಕೃಷ್ಣಯ್ಯ ನೀ,
ಎಲ್ಲಾಡಿ  ಬಂದೇ ಎನ್ನ  ರಂಗಯ್ಯಾ?

ಆಲಯದೊಳಗೇ ನೀನಾಡದೇ ಬೆಣ್ಣೆ,
ಹಾಲು ಸಕ್ಕರೆ  ನೀ  ಬೇಡದೆ,
ಇಲ್ಲಿ  ಬಾಲರಿಂದೊಡಗೂಡಿ ಆಡದೇ,
ಮುದ್ದು  ಬಾಲಯ್ಯ  ನೀನೆನ್ನ  ಕಣ್ಣ  ಮುಂದಾಡದೆ,
ಎಲ್ಲಾಡಿ ಬಂದೇ  ಎನ್ನ ಕೃಷ್ಣಯ್ಯ ನೀ,
ಎಲ್ಲಾಡಿ  ಬಂದೇ ಎನ್ನ  ರಂಗಯ್ಯಾ?

ಬಟ್ಟ ಮುತ್ತಿನ  ಬೊಗಸೆ ಕಂಗಳೂ,
ಹಣೆಯೊಳ್ ಇಟ್ಟ ಕಸ್ತೂರಿ  ತಿಲಕ ಗಂಧವೂ,
ದಿಟ್ಟತನದಿ ಓಡ್ಯಾಡಲೂ,
ಪುಟ್ಟ  ಕೃಷ್ಣಯ್ಯ  ನೀನೆನ್ನ  ಕಣ್ಣ  ಮುಂದಾಡದೆ,
ಎಲ್ಲಾಡಿ ಬಂದೇ  ಎನ್ನ ಕೃಷ್ಣಯ್ಯ ನೀ,
ಎಲ್ಲಾಡಿ  ಬಂದೇ ಎನ್ನ  ರಂಗಯ್ಯಾ?

ಅಷ್ಟದಿಕ್ಕಲಿ  ಅರಸಿ  ಕಾಣದೇ,
ನಾ ದೃಷ್ಟಿಗೆಟ್ಟೆನೊ ನಿನ್ನ  ನೋಡದೇ
ಇನ್ನೆಷ್ಟು  ಹೇಳಲಿ  ಕೇಳಬಾರದೇ?
ರಂಗವಿಠ್ಠಲ ನೀನೆನ್ನ  ಕಣ್ಣ  ಮುಂದಾಡದೆ,
ಎಲ್ಲಾಡಿ ಬಂದೇ  ಎನ್ನ ಕೃಷ್ಣಯ್ಯ ನೀ,
ಎಲ್ಲಾಡಿ  ಬಂದೇ ಎನ್ನ  ರಂಗಯ್ಯಾ?

ಸಾಹಿತ್ಯ:  ಶ್ರೀಪಾದರಾಜ  ತೀರ್ಥರು 

Tag: Elladi bande enna  ಕಾಮೆಂಟ್‌ಗಳಿಲ್ಲ: