ಶನಿವಾರ, ನವೆಂಬರ್ 26, 2016

ಅನಿತಾ ನರೇಶ್ ಮಂಚಿ

ಅನಿತಾ ನರೇಶ್ ಮಂಚಿ

ಕಳೆದ 9 ವರ್ಷಗಳಿಂದ ಫೇಸ್ಬುಕ್ಕಿನಲ್ಲಿರುವ ನಮಗೆ, ಆ ದಿನಗಳಿಂದಲೇ ತಮ್ಮ ಸುಮಧುರ ಕನ್ನಡ ಬಳಕೆಯಿಂದ ಹೃನ್ಮನಗಳಿಗೆ ಅಪ್ಯಾಯಮಾನತೆ ತಂದವರು, ನಾವೆಲ್ಲಾ ಅನಿತಕ್ಕ ಎಂದು ಕರೆಯುವ ಅನಿತಾ ನರೇಶ್ ಮಂಚಿ. ಈ ಫೇಸ್ಬುಕ್ಕಿನಲ್ಲಿ ಹರಿದಾಡುವ ಲಕ್ಷಾಂತರ ಭಿತ್ತರಿಕೆಗಳು ಒಂದು ರೀತಿ ಬೆಂಗಳೂರಿನ ಟ್ರಾಫಿಕ್ನಲ್ಲಿ ಹರಿದಾಡುವ ವಾಹನಗಳ ದಟ್ಟಣೆಯನ್ನು ಪ್ರತಿಬಿಂಬಿಸುವಂತದ್ದು. ಇಲ್ಲಿ ಒಂದು ಕ್ಷಣ ಆರಾಮ ಎಂಬುವ ತಂಗುದಾಣಗಳೇ ಅಪರೂಪ. ಇಂತಹ ಅಪರೂಪದ ತಂಗುದಾಣಗಳ ಆಪ್ತತೆ ಅನಿತಾ ಅವರ ಬರಹಗಳಲ್ಲಿ ನಮಗೆ ದಕ್ಕುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅವರ ಬರಹಗಳ ವ್ಯಾಪ್ತತೆ ಎಲ್ಲ ಪತ್ರಿಕೆ, ಅಂತರ್ಜಾಲದ ಕಾಲುವೆಗಳನನ್ನೂ ದಾಟಿ ಪುಸ್ತಕಗಳ ನಿಧಿಯಾಗಿ ರೂಪುಗೊಳ್ಳುತ್ತಿರುವುದು ಸಂತಸದ ವಿಷಯವಾಗಿದೆ.

ಅನಿತಾ ಅವರ ಬರಹಗಳಲ್ಲಿ ಏಕತಾನತೆಯಿಲ್ಲ. ಅಚ್ಚರಿ ಹುಟ್ಟಿಸುವಷ್ಟು ವೈವಿಧ್ಯವಿದೆ. ಅವರ ಬ್ಲಾಗಿನ ಹೆಸರಿನಂತೆ (‘ಕಡಲು’) ಅವರಲ್ಲಿ ವಿಸ್ಮಯ ತುಂಬಿರುವ ವಿಚಾರ ವೈವಿಧ್ಯಗಳ ‘ಕಡಲೇ’ ಇದೆ. ಇಲ್ಲಿ ವೈಚಾರಿಕತೆಯ ಯಾವುದೇ ಸೋಗಿಲ್ಲ. “ನೀವು ಪ್ರಕೃತಿಯ ಪುಸ್ತಕವನ್ನು ಓದಬಲ್ಲಿರಾದರೆ ಕಲ್ಲೂ ಕಥೆ ಹೇಳೀತು” ಎಂದೆನ್ನುವ ಅವರ ಮಾತು ಅವರಲ್ಲಿ ಪರಿಪೂರ್ಣವಾಗಿ ಅಂತರ್ಗತಗೊಂಡಿದೆ. ಹಾಗೆಂದು ಅವರ ಚಿಂತನೆ ಕೇವಲ ಪ್ರಕೃತಿಯಲ್ಲಿನ ಹೂವು, ಗಿಡ, ಮರ, ಗದ್ದೆ - ತೋಟ, ಬೆಟ್ಟ, ಮರ, ನದಿ, ಪ್ರಾಣಿ ಪಕ್ಷಿ ಸಂಕುಲ ಇತ್ಯಾದಿಗಳಲ್ಲಿ ಮೈಮರೆತು ನಿಲ್ಲುವುದಿಲ್ಲ. ಅವುಗಳೊಂದಿಗೇ ಸುಲಲಿತವಾಗಿ ಹೆಜ್ಜೆ ಹಾಕುವುದರ ಜೊತೆ ಜೊತೆಗೇ, ಮನೆಯಲ್ಲಿ ಸೇರಿಕೊಂಡ ಇಲಿ, ಅಡುಗೆ ಮನೆಯಲ್ಲಿನ ಪ್ರತಿಯೊಂದು ಪಾತ್ರೆ ಪಗಡ, ರಿಪೇರಿ ಮಾಡಲು ಹೋಗಿ ಸರಿಹೋಗದ ತಿಂಡಿ, ಮುಂದಿಟ್ಟ ತಿಂಡಿಯನ್ನು ಒಪ್ಪದ ನಾಯಿಮರಿ, ಅಕ್ಕ ಪಕ್ಕದ ಮನೆ ಅಜ್ಜಿ - ಮಕ್ಕಳು, ವಾಹನ, ಸಣ್ಣ ಪುಟ್ಟ ಮಾತು, ಇವ್ಯಾವುವೂ ಅನಿತಾರ ಕಣ್ತಪ್ಪಿಸಿಕೊಳ್ಳುವುದಿಲ್ಲ. ಅವರ ಬರಹಗಳನ್ನು ಓದುವುದೆಂದರೆ ನಮ್ಮ ಸುತ್ತಮುತ್ತಲಿನ ಅಥವಾ ನಮ್ಮ ಬದುಕನ್ನೇ ಆತ್ಮೀಯವಾಗಿ ಕನ್ನಡಿಯಲ್ಲಿ ನೋಡಿಕೊಳ್ಳುವ ಒಂದು ಅನುಭಾವದಂತೆ.

ಅನಿತಾ ಅವರ ಬರಹಗಳಲ್ಲಿ ವಾಸ್ತವತೆಯಿದೆ. ಬದುಕಲ್ಲಿ ವಾಸ್ತವತೆ ಎಂಬುದನ್ನು ತೆರೆದಿಡುವವರೆಲ್ಲಾ ಅದನ್ನು experi’mental’ ಸಿನಿಮಾ ಮಾಡುವುದೇ ಹೆಚ್ಚು. ಅನಿತಾರ ‘ಹ್ಹೋ... ಏನು...?’ ಕೃತಿಯ ಮೊದಲ ಮಾತುಗಳಲ್ಲಿ ಮಾಸ್ಟರ್ ಹಿರಣ್ಣಯ್ಯನವರು ಹೇಳುವಂತೆ ಅನಿತಾ ಅವರ ಬರಹಗಳು “ಮನಸ್ಸನ್ನು ಹಗುರಗೊಳಿಸುವುದು ಮಾತ್ರವಲ್ಲ, ಮುದಗೊಳಿಸುವುದರಲ್ಲೂ ಮುಂಚೂಣಿಯಲ್ಲಿವೆ”. ಪ್ರಕೃತಿ ಚಿತ್ರಣ, ವ್ಯಕ್ತಿ ಚಿತ್ರಣ, ಪೌರಾಣಿಕ ಪಾತ್ರಗಳ ಅಂತಃಪ್ರವೇಶ, ಹಬ್ಬ ಹರಿದಿನಗಳು; ಮದುವೆ ಮುಂಜಿ ಮುಂತಾದ ವಿಶೇಷಗಳು, ಪ್ರತಿ ನಿತ್ಯದ ತಲ್ಲಣಗಳು, ಯಕ್ಷಗಾನ, ನಾಟಕ ಪ್ರಸಂಗಗಳು; ಮನೆಯಲ್ಲಿ ಪ್ರಯೋಗಿಸಿದ ತಿಂಡಿ ತಿನಿಸುಗಳು; ನೆಟ್ಟ ಹೂ ಗಿಡಗಳು; ಬಾಲ್ಯದಿಂದ ಪ್ರಸ್ತುತದವರೆಗಿನ ಘಟನಾವಳಿಗಳ ನೆನಪುಗಳು; ಪತಿ ನರೇಶ್ ಮಂಚಿ ಅವರ ಕ್ಯಾಮರಾ ಲೋಕ, ಮಕ್ಕಳ ಆಟಾಟ, ಪ್ರಾಂತೀಯ ಕೌಟುಂಬಿಕ ಭಾಷಾ ಪ್ರಯೋಗಗಳ ವೆತ್ಯಾಸಗಳಲ್ಲಿನ ಪೇಚು ಮೋಜುಗಳು, ಅತಿಯಾದ ಜಾಗರೂಕತೆ ತರುವ ಎಡವಟ್ಟು, ಎಲ್ಲೋ ಹುದುಗಿಹೋಗಿರುವ ಒಳ್ಳೆಯತನವನ್ನು ಹುಡುಕುವಿಕೆ ಹೀಗೆ ಬದುಕಿನಲ್ಲಿ ತಾವು ಅನುಭಾವಿಸಿದ್ದೆಲ್ಲವನ್ನೂ ಸಹಜ ನಗೆಮೊಗದೊಂದಿಗೆ, ಆ ನಗೆಮೊಗದ ಹಿಂದಿರುವ ಆತ್ಮೀಯ ಹೃದಯ ಹಾಗೂ ಹಾಸ್ಯಮನೋಭಾವಗಳಿಗೆ ಕಿಂಚಿತ್ತೂ ಕಡಿಮೆಯಾಗದ ಹಾಗೆ ಅಪ್ಯಾಯಮಾನವಾದ ಭಾಷೆಯಲ್ಲಿ ಹದವಾಗಿ ಇಡುವ ಅನಿತಾ ನರೇಶ್ ಮಂಚಿ ಅವರ ಅಭಿವ್ಯಕ್ತಿ ಕಲೆ ಖುಷಿ ಕೊಡುವಂತದ್ದು.

ಅನಿತಾ ಅವರ ಮೊದಲೆರಡು ಪುಸ್ತಕಗಳು ‘ನಕ್ಷತ್ರ ಲೋಕ’ ಮತ್ತು ‘ಬಣ್ಣದ ಕಡ್ಡಿ’ ಎಂಬ ಎರಡು ಸುಂದರ ಶೀರ್ಷಿಕೆಗಳು. ಮುಂದೆ ‘ಹ್ಹೋ... ಏನು ....?’, ‘ಹವಿಕಥೆ’, ‘ಕನಸಿನ ಪಯಣ’, ‘ಮಂಚಿಯ ಪಾಕಲೋಕ’ ಮುಂತಾದವು ಬಂದವು. ಕಳೆದ ವರ್ಷ ತಮ್ಮ ಪುತ್ರನ ವಿವಾಹದ ಸಂದರ್ಭದಲ್ಲಿ 'ಪದ ಕುಸಿಯೆ ನೆಲವಿಹುದು' ಕಾದಂಬರಿ ಹೊರತಂದ ಅನಿತಾ ನಿನ್ನೆಯ ದಿನ 'ನೈಲಾ' ಎಂಬ ಕಥಾ ಸಂಕಲನ ಮತ್ತು 'ಮಹತಿ' ಎಂಬ ಅಂಕಣ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ.

ಇಂದು ಅನಿತಾ ಅವರ ಬರಹಗಳು ಎಲ್ಲಾ ಪತ್ರಿಕೆಗಳ ಅಂಕಣಗಳು, ವಿಶೇಷಾಂಕಗಳು ಮತ್ತು ಅಂತರ್ಜಾಲ ವಾಹಿನಿಗಳಲ್ಲಿ ಕಂಗೊಳಿಸುತ್ತಾ ಬಂದಿವೆ. ಅನೇಕ ಬಹುಮಾನಗಳಿಗೆ ಪಾತ್ರವಾಗಿವೆ. ಅವರ ಕವಿತೆಗಳು ಗೀತಗಳಾಗುತ್ತಿವೆ.

ಹೀಗೇ ಅನಿತಾ ಅವರ ಸುಂದರ ಬರಹಗಳ ಲೋಕ ನಮಗೆ ಅನವರತ ದೊರಕುತ್ತಿರಲಿ ಎಂದು ಆಶಿಸುತ್ತಾ ಅವರಿಗೆ ಆತ್ಮೀಯವಾಗಿ ಹುಟ್ಟುಹಬ್ಬದ ಶುಭ ಹಾರೈಕೆಗಳನ್ನು ಹೇಳೋಣ. ‘ಹ್ಞಾ.... ಮುಂದೇನು’ ಎಂಬುದು ಅನಿತಾ ಅವರ ಮುಂದಿನ ಪುಸ್ತಕವಲ್ಲ. ನಮ್ಮ ಬಳಿ ಇರುವ ಅವರ ಕುರಿತಾದ ಎಂದಿನ ಆತ್ಮೀಯ ನಿರೀಕ್ಷೆ.

Tag: Anitha Naresh Manchi

ಕಾಮೆಂಟ್‌ಗಳಿಲ್ಲ: