ಶನಿವಾರ, ಡಿಸೆಂಬರ್ 10, 2016

ಸುನೀತಾ ಶೆಟ್ಟಿ


ಸುನೀತಾ ಶೆಟ್ಟಿ

ಒಂದು  ವರ್ಷದ ಹಿಂದೆ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಸಮೀಪದಲ್ಲೇ ಹಸನ್ಮುಖಿಯೊಬ್ಬರು ಇದ್ದರು.  ನಂತರ ಅವರ ಪುಟಾಣಿ ಪ್ರಾಜ್ಞ ಭಾಷಣ ಕೂಡಾ ಇತ್ತು.  ಅವರನ್ನು ಮಾತನಾಡಬೇಕು ಅನ್ನಿಸಿ, ತಮ್ಮನ್ನು ತುಂಬಾ ನೋಡಿದ್ದೇನೆ ಅನಿಸುತ್ತೆ ಯಾರೂ ಅಂತ ಗೊತ್ತಾಗಲಿಲ್ಲ ಎಂದಾಗ ಆತ್ಮೀಯವಾಗಿ ನಾನು ಕಿರುತೆರೆಯಲ್ಲಿ ಬಹಳಷ್ಟು ಅಭಿನಯಿಸಿದ್ದೇನೆ ಸಾರ್ ಎಂದು ಅದೇ ಹಸನ್ಮುಖದೊಡನೆ,  ಸರಳವಾಗಿ,  ಗೌರವಯುತವಾಗಿ  ನುಡಿದರು.  ಕಿರುತೆರೆಯ ಕಾರ್ಯಕ್ರಮಗಳನ್ನು ಅಷ್ಟೊಂದು ಗಂಭೀರವಾಗಿ ನೋಡದ ನನಗೆ ನಿಧಾನವಾಗಿ ಅರಿವಿಗೆ ಬಂದದ್ದು ಅವರು ಪ್ರಖ್ಯಾತ ಕಲಾವಿದೆ ಸುನೀತಾ ಶೆಟ್ಟಿ ಎಂದು.  ಸುಮಾರು 17 ವರ್ಷಗಳಿಂದ ಕಿರುತೆರೆ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ನಿಷ್ಠೆಯಿಂದ  ಅಪಾರವಾಗಿ ದುಡಿಯುತ್ತಾ ಬಂದಿದ್ದು ಹೆಸರುವಾಸಿಯಾಗಿದ್ದಾರೆ.  ಆದರೆ ಅವರು ಕಿರುತೆರೆಗಳಲ್ಲಿ ನಟಿಸುವ ಪಾತ್ರಕ್ಕೂ ನೇರವಾಗಿ ಅವರನ್ನು ಕಂಡಾಗ ಕಾಣುವ ಹಸನ್ಮುಖತೆಗೂ ಅಜಗಜಾಂತರವಿದೆ.  ಕಾರಣ ಅವರನ್ನು ಕಿರುತೆರೆ ಹೆಚ್ಚು ಖಳ ಪಾತ್ರಗಳಲ್ಲಿ ಕಾಣಿಸಿದೆ.   ‘ಅಮ್ಮ ನಿನಗಾಗಿ', ‘ಬದುಕು', ‘ಕೋಗಿಲೆ', ‘ಕಲ್ಯಾಣಿ', ‘ಮಂದಾರ’  ಮೊದಲಾದ ಧಾರಾವಾಹಿಗಳಲ್ಲಿ ಅವರ ಖಳಮುಖೀ ಪಾತ್ರಗಳು ಬಹು ಜನಪ್ರಿಯ. ‘ಸೂರ್ಯವಂಶ', ‘ಹಬ್ಬ', ‘ಗೌರಮ್ಮ', ‘ಮಿ.ಪುಟ್ಸಾಮಿ', ‘ಸೈಕಲ್‌ ಗ್ಯಾಪಲ್ಲಿ', ‘ರಸಪುರಿ’ ಹೀಗೆ  ಸುಮಾರು 70 ಚಲನಚಿತ್ರಗಳಲ್ಲೂ  ನಟಿಸಿದ್ದಾರೆ. ‘ಅಂಕಿತಾಸುನೀತಾ ಡ್ಯಾನ್ಸ್ ಅಕಾಡೆಮಿ ಅಂಡ್ ಈವೆಂಟ್ಸ್’ ಎಂಬ ಸಂಸ್ಥೆಯನ್ನು ಕೂಡಾ ನಿರ್ವಹಿಸುತ್ತಿದ್ದಾರೆ.

ಉಡುಪಿಯ ಸಮೀಪದ ಊರಲ್ಲಿ ಕಡಲಿಗೆ ಹೊಂದಿಕೊಂಡಂತೆ ತಮ್ಮ ಬಾಲ್ಯವನ್ನು ಕಳೆದ  ಸುನೀತಾ ಅವರು  ಮುಂದೆ ಬೆಳೆದದ್ದು ಹುಬ್ಬಳ್ಳಿಯಲ್ಲಿ.  ಅಮ್ಮ ವನಜಶ್ರೀ ಅಭಿನಯದಲ್ಲಿ ಬಹಳಷ್ಟು ಹೆಸರು ಮಾಡಿದವರಾಗಿದ್ದು,  ಇಂದಿನ ದಿನಗಳಲ್ಲೂ  ಅಜ್ಜಿಯ ಪಾತ್ರಗಳಲ್ಲಿ ಅಭಿನಯಿಸುವುದಿದೆ.  ಮಗ ಅಭಿಷೇಕ್‌ ಓದುತ್ತಿದ್ದಾರೆ.  ಮಗಳು ಸುಪ್ರಿಯಾ ಶೆಟ್ಟಿ ಮಾಡೆಲ್‌ ಮತ್ತು ಡಾನ್ಸರ್‌.

ತಾವಿರುವ ಅಭಿನಯ ಕ್ಷೇತ್ರದ ಬಗ್ಗೆ ಒಂದು ಕಡೆ ಸುನೀತಾ ಶೆಟ್ಟಿ ಅವರು ಹೇಳಿರುವ ಮಾತು ಇಂತಿದೆ: “ನಾನು ಇಲ್ಲಿ  ಪದ್ಮಪತ್ರದ ಮೇಲಿನ ಜಲಬಿಂದುವಿನ ಹಾಗಿದ್ದೀನಿ. ಪಾರ್ಟಿ, ಕ್ಲಬ್‌ ಅನ್ನೋದೆಲ್ಲ ನನಗೆ ದೂರ. ನನ್ನ ಪಾಡಿಗೆ ನಾನಿರುವ ಕಾರಣವೋ ಏನೋ ಹೆಚ್ಚೇನೂ ಸಮಸ್ಯೆ ಎದುರಾಗಿಲ್ಲ.”  ಹೀಗೆ ತಮ್ಮ ಬದುಕು, ವೃತ್ತಿ ಮತ್ತು ಸಮಾಜ ಇವೆಲ್ಲವನ್ನೂ ಆತ್ಮೀಯವಾಗಿ ಕಾಣುವ ಸುನೀತಾ ಶೆಟ್ಟಿ, ಫೇಸ್ಬುಕ್ನಲ್ಲಿರುವ ನಮ್ಮನ್ನು ಒಳಗೊಂಡಂತೆ ಎಲ್ಲರಿಗೂ ಆತ್ಮೀಯ ಜೀವಿ.  ಇವರಿಗೆ ಬದುಕು ನಿರಂತರವಾಗಿ ಸುಖಮಯವಾಗಿರಲಿ ಎಂದು ಹಾರೈಸುತ್ತಾ  ಹುಟ್ಟುಹಬ್ಬದ ಆತ್ಮೀಯ ಶುಭಹಾರೈಕೆಗಳನ್ನು ಹೇಳೋಣ.ಕಾಮೆಂಟ್‌ಗಳಿಲ್ಲ: