ಶನಿವಾರ, ಡಿಸೆಂಬರ್ 10, 2016

ಗೀತಾಜಯಂತಿ

ಗೀತಾಜಯಂತಿ

ಯೋಗಾಚಾರ್ಯ ಶ್ರೀಕೃಷ್ಣ ಪರಮಾತ್ಮ ಮತ್ತು ಅರ್ಜುನರ ಗುರು ಶಿಷ್ಯ ಸಂವಾದದಂತಿರುವ ಭಗವದ್ಗೀತೆಎಂಬ ಮಹಾನ್ ವೃಕ್ಷವು ತನ್ನ ಅನೇಕಾ ಶಾಕೋಪಶಾಕೆಗಳಂತಿರುವ ಭಾಷೆ, ವಿಮರ್ಶೆ, ಅನುಭಾವ, ವಿಚಾರ ವಿನಿಮಯಗಳ ಮೂಲಕ ಸಹಸ್ರಾರು ವರ್ಷಗಳಿಂದ ನಮ್ಮ ಭಾರತದ ಜ್ಞಾನದೀಪವಾಗಿ ಬೆಳಗುತ್ತಾ, ಈ ದೇಶವು ದುರಂತದ ಅಂಚಿಗೆ ಹೋದಾಗಲೆಲ್ಲಾ ಪುನರ್ಚೈತನ್ಯವನ್ನು ಹರಿಸಿ ನಮ್ಮನ್ನು ಕೈ ಹಿಡಿದು ನಡೆಸುತ್ತಿದೆ. 

ಜೀವಿಗಳಿಗೆ ಇಂದ್ರಿಯಗಳ ಮೂಲಕ ಪ್ರಾಪಂಚಿಕ ವಾಸನೆಗಳು ತಗುಲಿ, ಈ ಬಯಕೆಗಳ ಸಲುವಾಗಿ ಅಲೆಮಾರಿತನ ಉಂಟಾಗುತ್ತದೆ.  ಅದರಲ್ಲೂ ಮನುಷ್ಯನಿಗೆ ಈ ಇಂದ್ರಿಯ ಚಾಪಲ್ಯಗಳು ಸೃಷ್ಟಿಸುವ ಮಾನಸಿಕ ಛಾಯೆಗಳು ಆತನನ್ನು ಭ್ರಮಿತನನ್ನಾಗಿಸಿಬಿಡುತ್ತವೆ.  ಈ ಭ್ರಮೆಯ ಆಳದಲ್ಲಿ ನಾವು ಮಾಯೆಯನ್ನೇ ಶಾಶ್ವತವೆಂದು ಅರಸ ಹೋಗಿ ರಜೋಗುಣ, ತಾಮಸಗುಣ, ಸತ್ವಗುಣಗಳ ವಿವಿಧ ಪರಿಗಳಲ್ಲಿ ಕಳೆದುಹೋಗಿ ನಮ್ಮ ಮೂಲಸೆಲೆಯಾದ ಪರಮಾತ್ಮನ ವರವಾದ ಆತ್ಮಶಕ್ತಿಯನ್ನು ಮರೆತು ಪಶುತನದ ಪರಮಾವಧಿಯಾದ ರಾಕ್ಷಸೀಯ ಪ್ರವೃತ್ತಿಗಳಲ್ಲಿ ಕಳೆದುಹೋಗಿರುತ್ತೇವೆ.  ಇದಕ್ಕೆಲ್ಲಾ ಪರಮಾತ್ಮನೇ ಕಾರಣ, ಆತ ಯಾಕೆ ನಮ್ಮನ್ನು ಸೃಷ್ಟಿಸಬೇಕಿತ್ತುಸೃಷ್ಟಿಸಿ ಈ ಮಿಶ್ರಿತ ದ್ವಂದ್ವ ಭ್ರಮೆಗಳಿಗೆ ಯಾಕೆ ಕುಮ್ಮಕ್ಕು ನೀಡಬೇಕಿತ್ತು ಎಂದುಬಿಡುತ್ತೇವೆ. 

ಭಗವದ್ಗೀತೆಯನ್ನು ಅರಿಯುವುದೆಂದರೆ ಒಂದು ಅಧ್ಯಾತ್ಮ ತಪಸ್ಸು.  ಇಲ್ಲಿ ಭಗವದ್ಗೀತೆಯ ಅಧ್ಯಯನದಿಂದಾಗಿನಾವು ಆಡುವುದಕ್ಕಿಂತ, ತೋರ್ಪಡಿಸಿಕೊಳ್ಳುವುದಕ್ಕಿಂತನಾವು ಆಂತರಂಗಿಕವಾಗಿ ಯಾವ ದಿಕ್ಕಿನಲ್ಲಿ ಯಾವ ನೆಲೆಯಲ್ಲಿ ಎಷ್ಟರ ಮಟ್ಟಿಗೆ ಜಾಗೃತವಾಗಿದ್ದೇವೆ ಎಂಬುದನ್ನು ನಿರ್ಣಯಿಸಿಕೊಳ್ಳಬೇಕಾದುದು ಮುಖ್ಯ.  ದುರದೃಷ್ಟವಶಾತ್ ನಾವು ಎಲ್ಲಾ ಪುರಾಣಗಳನ್ನೂ ಎಲ್ಲಾ ಶ್ಲೋಕಗಳನ್ನೂ ಹೇಳುತ್ತಲೇ ಬುದ್ಧಿವಂತರೆಂದು ಒಂದೆಡೆ ಉದ್ಘೋಷಿಸಿಕೊಳ್ಳುತ್ತಿರುವಂತೆಯೇ, ಮತ್ತೊಂದೆಡೆಯಲ್ಲಿ ಶೋಕಿಸಬಾರದುದಕ್ಕೆ ಶೋಕಿಸುತ್ತಾ ಬದುಕನ್ನು ಕ್ಷಯಿಸುತ್ತಾ ಸಾಗುತ್ತೇವೆ.    ಹೀಗಾಗಿ ನಾವು ಸಾಮಾಜಿಕನೆಲೆಯಲ್ಲಿ ಮಾತ್ರವಲ್ಲದೆ ಪೌರಾಣಿಕವಾಗಿ ಕೂಡಾ ಭ್ರಷ್ಟತನವನ್ನು ಪೋಷಿಸಿಕೊಂಡು ನಮ್ಮನ್ನು ಅಸತ್ಯದ ಪರ್ವತಗಳನ್ನಾಗಿ ರೂಪಿಸಿಕೊಳ್ಳುವುದರಲ್ಲೇ ಮಗ್ನರಾಗಿರುತ್ತೇವೆ.

ಕೌರವರಲ್ಲಿ ಕೀಳರಿಮೆ, ಅಸೂಯೆಗಳಿತ್ತು.  ಇದು ಕ್ರಮೇಣವಾಗಿ ರಾಕ್ಷಸೀಯ ಪ್ರವೃತ್ತಿಯಾಯ್ತು.  ಇದು ತಾಮಸ ಪ್ರವೃತ್ತಿ ಎಂದಾದರೆ, ಭೀಷ್ಮ, ಕರ್ಣ, ಧರ್ಮರಾಯ ಮತ್ತಿತರ ಪಾಂಡವರು ಅಷ್ಟೊಂದು ಉತ್ತಮರಾಗಿ ಕಂಡರೂ ಅವರು ಕೂಡಾ ಏಕೆ ಕಷ್ಟಕ್ಕೀಡಾದರು.  ಒಮ್ಮೆ ಸ್ವಾಮಿ ಸುಖಬೋಧಾನಂದರು ತಮ್ಮ ಉಪನ್ಯಾಸದಲ್ಲಿ ಹೇಳ್ತಾ ಇದ್ರು, ತಮ್ಮ ಗೆಳೆಯ ಸನ್ಯಾಸಿ ಒಬ್ಬರಿಗೆ ಬನ್ನಿ ಪ್ಯಾಂಟು ಶರ್ಟು ಕೊಡ್ತೀನಿ.  ಹಾಕೊಂಡು ಸಿನಿಮಾಗೆ ಹೋಗಿ ಬರೋಣ ಅಂತ.  ಅದಕ್ಕೆ ಹೌಹಾರಿದ ಆ ಮಿತ್ರರು ನುಡಿದರಂತೆ, ಏನು ನಾನು ಪ್ಯಾಂಟು ಶರ್ಟು ಧರಿಸಿ ಸಿನಿಮಾಗೆ ಬರೋದೆ ಅಂತ.  ಅದಕ್ಕೆ  ಸುಖಬೋಧಾನಂದರು ಹೇಳುತ್ತಿದ್ದರು, “he is so much attached to his detachmentಅಂತ.  ಹೀಗೆ ಮೋಹ ಎಂಬ ಬಂಧನ ಪ್ರತೀ ಗುಣದಲ್ಲೂ ವಿಧವಿಧವಾದ ಪ್ರಮಾಣದಲ್ಲಿ ಅಡಗಿ ಕುಳಿತಿರುತ್ತೆ.

ನಿಜ ತಾಮಸ ಗುಣಕ್ಕಿಂತ ರಜೋಗುಣವೂ, ರಜೋಗುಣಕ್ಕಿಂತ ಸತ್ವ ಗುಣವೂ ಬಹಳಷ್ಟು ಉತ್ತಮತೆಯ ವೆತ್ಯಾಸಗಳನ್ನು ಹೊಂದಿದೆ.  ಆದರೆ ಈ ಎಲ್ಲಾ ಗುಣಗಳನ್ನೂ ಮೀರಿದವ ಮಾತ್ರ ನಿರ್ಗುಣ.  ಅದು ಸಕಲವನ್ನೂ ಒಳಗೊಂಡೂ, ಯಾವುದಕ್ಕೂ ಅಂಟಿಕೊಳ್ಳದೆ ಶ್ರೇಷ್ಠತೆಯ ಭಾಗವಾಗಿಯೇ ಆಗಿಬಿಡುವಂತಹ ಸಹಜತೆ.  ಹಾಗಾಗಿ ಶ್ರೀಕೃಷ್ಣರು ಸಾಮಾನ್ಯನಾಗಿದ್ದರೂ ಯಾವುದಕ್ಕೂ ಅಂಟಿಕೊಳ್ಳದೆ ನೋವು, ನಲಿವು, ಸುಖ, ದುಃಖ, ಲಾಭ, ನಷ್ಟ  ಎಲ್ಲವುಗಳನ್ನೂ ಮೀರಿದ ಎಲ್ಲವನ್ನೂ ಸಮಾನವಾಗಿ ದೃಷ್ಟಿಸುವ ಔನ್ನತ್ಯದ ದೃಷ್ಟಾರರಾಗುತ್ತಾರೆ.

ಪ್ರತಿನಿತ್ಯದಲ್ಲಿ ವಿವಷತೆಯಲ್ಲಿ ಮುಳುಗಿ ಹೋಗಿರುವ ನಾವು, ಯಾವುದೇ ಗಂಭೀರ ಪರಿಸ್ಥಿತಿ ಎದುರಾದಾಗ ನಮ್ಮಲ್ಲಿ ಇರುವ ಒಂದಿಷ್ಟು ಸಾಮರ್ಥ್ಯಗಳನ್ನೂ ಮರೆತು, ಅಳಲು ತೊಡಗಿಬಿಡುತ್ತೇವೆ.  ಅರ್ಜುನ ಹದಿಮೂರು ವರ್ಷ ಕಾಡಿನಲ್ಲಿದ್ದು ಕೌರವರನ್ನು ಮುಗಿಸಿಯೇ ಬಿಡುತ್ತೇನೆ ಎಂದು ವ್ಯಾಯಾಮ ಮಾಡುತ್ತಾ, ಶಸ್ತ್ರಾಸ್ತ್ರಕ್ಕೆ ತಪ್ಪಸ್ಸು ಮಾಡುತ್ತಿದ್ದವ ಸೇನೆಯ ಮಧ್ಯಕ್ಕೆ ಬಂದಾಗ ನಾನು ಈ ಯುದ್ಧವನ್ನು ಗೆದ್ದು ಸುಖ ಪಡುವುದು ಯಾವಾಗ, ಅದೆಲ್ಲಾ ಸಾಧ್ಯವೇ? ಸಾಕಪ್ಪಾ ಎಲ್ಲಾ ಬಿಟ್ಟು ಓಡಿ ಹೋಗಿಬಿಡೋಣ ಅಂದುಕೊಳ್ಳುತ್ತಾಎಂಥಹ ಬುದ್ಧಿವಂತ ಕೂಡ ಕಾಠಿಣ್ಯ ಸ್ಥಿತಿಗಳಲ್ಲಿ  ಹೇಗಿರುತ್ತಾನೆ ಎಂಬ ಪ್ರತಿನಿಧಿಯಾಗುತ್ತಾನೆ. 

ಕೌನ್ ಬನೇಗಾ ಕ್ರೋರ್ ಪತಿಸ್ಪರ್ಧೆಯಲ್ಲಿ ಭಾಗವಹಿಸಿದ್ದ ನನ್ನ ಗೆಳೆಯರೊಬ್ಬರು ತಮ್ಮ ಅನುಭವವನ್ನು ವಿವರಿಸುತ್ತಾ, ತಮಗೆ ಅಲ್ಲಿ ಹಲವು ಹಂತದ ಸ್ಪರ್ಧೆಗಳಲ್ಲಿ ಕುಳಿತಿದ್ದಾಗ ಅಯ್ಯೋ ಇದೆಲ್ಲಾ ಯಾವನಿಗೆ ಬೇಕು ಓಡಿ ಹೋಗಿ ಬಿಡಬೇಕು ಅನ್ನಿಸಿಬಿಟ್ಟಿತ್ತು, ಅಷ್ಟೊಂದು ಟೆನ್ಷನ್ ಇತ್ತುಎನ್ನುತ್ತಿದ್ದರು. ಹೀಗೆ ನಾವು ನಮ್ಮ ಕಣ್ಮುಂದೆ ಇರುವ ಪರೀಕ್ಷೆಯಲ್ಲಿ ಯಶಸ್ಸಿನ ಬಗ್ಗೆ ಶಂಕಿತರಾದಾಗ, ಧರ್ಮಕ್ಕೆ ಹೊಸ ವ್ಯಾಖ್ಯಾನ ಕೊಟ್ಟು ಅಯ್ಯೋ ಅವನ ಹತ್ರ ಯಾಕೆ ಬಿಡು ಜಗಳ ಅಂತಾನೋ, ಈ ಪರೀಕ್ಷೇಲಿ ಪಾಸು ಮಾಡಿದ್ರೆ ಮಾತ್ರ ಬದುಕಲಿಕ್ಕಾಗುತ್ತೆ, ಇಲ್ಲದಿದ್ರೆ ಆಗೋಲ್ವೆ ಅಂತಾನೋ ವೇದಾಂತದ ಮಾತು ಹೇಳ್ತೇವೆ. 

ಇದನ್ನು ಭಗವದ್ಗೀತೆ ಭವ್ಯವಾಗಿ ನೇರವಾಗಿ ಗುರುತಿಸುತ್ತೆ.  ಕೆಲಸ ಮಾಡು, ಕೆಲಸದ ಫಲಕ್ಕೆ ಅಂಟಿಕೋಬೇಡಅಂತ ಸುಂದರವಾಗಿ ಶ್ರೀಕೃಷ್ಣರು ನುಡಿಯುತ್ತಾರೆ.  ಆದ್ರೆ ನಾವು ಬೃಹಸ್ಪತಿಗಳು ಎಷ್ಟು ಚೆನ್ನಾಗಿ ಅದನ್ನು ನಮ್ಮ ಬುದ್ಧಿವಂತಿಕೆಯಲ್ಲಿ ವಿಮರ್ಶಿಸುತ್ತೇವೆ ಅಂದ್ರೆ, “ಅಯ್ಯೋ ಹಾಗಂತ ಸಂಭಳ ಬೇಡ, ಬರೀ ಕೆಲಸ ಮಾಡ್ತೀನಿ ಅನ್ನೋಕಾಗುತ್ತಾ?” ಅಂತ ಶ್ರೀಕೃಷ್ಣನನ್ನೇ ಪ್ರಶ್ನಿಸ್ತೇವೆ ಮಾತ್ರವಲ್ಲ, ಸಂಭಳ ತೊಗೊಂಡೂ ಕೆಲಸ ಮಾಡ್ಬೇಕಲ್ಲಾ ಅಂತ ದುಃಖ ಪಡ್ತೀವಿ!  ಭಗವದ್ಗೀತೆ ಹೇಳುತ್ತೆ, "ಕರ್ಮಫಲ ಬರೋದು ಕರ್ಮ ಪೂರ್ತಿ ಆದ್ಮೇಲೆ.  ಕರ್ಮ ಮಾಡ್ಬೇಕಾದ್ರೆ ಫಲ ಬರುತ್ತೋ ಇಲ್ವೋ, ಅದು ಸಾಲತ್ತೋ ಇಲ್ವೋ  ಅಂತ ಸಂದೇಹ, ಟೆನ್ಷನ್ ಇಟ್ಕೊಂಡ್ರೆ, ಫಲ ಬರೋ ಸಮಯದಲ್ಲಿ ನೀನೇ ಇರೋಲ್ಲ.  ಅಕಸ್ಮಾತ್ ನೀನಿದ್ರೂ ಅದರ ಅನುಭವ ನಿನಗೆ ಸಿಹಿಯಾಗಿರೋಲ್ಲ.  ಆದ್ರಿಂದ ಕರ್ಮಫಲದ ಸವಿಯನ್ನು ಕರ್ಮದಿಂದಲೇ ಅನುಭಾವಿಸುತ್ತಾ ಹೋಗು" ಅಂತ. 

ಅದು ಹೇಗೆ ಸಾಧ್ಯವಿವೇಕಾನಂದರು ನಮಗೆ ಅರ್ಥವಾಗುವಂತೆ ಇದನ್ನು ಹೇಳುತ್ತಾರೆ.  ಕಾಯಕವನ್ನು ನಿರ್ವಹಿಸುವುದರಲ್ಲಿ ಯಾವುದೇ ಚಿಂತನೆಯ ಗೀಳೂ ಇಲ್ಲದೆ ಆರಾಮವಾಗಿ ನಿನ್ನಲ್ಲೇ ನೀನು ವಿರಮಿಸು.  ಕಾರ್ಯವನ್ನು ನಡೆಸುವುದು ಆತನ ಜವಾಬ್ಧಾರಿಯಾಗಿರುವಾಗ ನಿನಗೇಕೆ ಈ ಚಿಂತೆ ಉದ್ವಿಗ್ನತೆಗಳುಅಂತ.  ಇದನ್ನೇ ಶ್ರೀಕೃಷ್ಣರು ಸಹಾ ಅರ್ಜುನನಿಗೆ ಹೇಳುತ್ತಾರೆ,  “ಇಲ್ಲಿರುವ ನಿನ್ನ ಶತ್ರುಗಳ ಭವಿತವ್ಯವನ್ನು ನಾನು ಈಗಾಗಲೇ ಬರೆದಾಗಿದೆ.  'ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್’ – ಇವರ ಅಂತ್ಯಕ್ಕೆ ನಿಮಿತ್ತಮಾತ್ರನಾಗಿ   ಜಯದ ಕೀರ್ತಿ ಮತ್ತು ಫಲಾನುಭವಕ್ಕೆ ಬಾಧ್ಯನಾಗು" ಎಂದು.  ಈ ಜೀವನದಲ್ಲಿ ಸತ್ಯವಾಗಿ ನಾವು ಚಿಂತಿಸಿದ್ದೇ ಆದಲ್ಲಿ, ನಾವು ಚಿಂತಿಸಿ ಸಾಯುತ್ತಿರುವುದೇ ವಿನಃ ಸೃಷ್ಟಿಸಿದ್ದೇನಾದರೂ ಉಂಟೇಇಷ್ಟು ದಿನ ಚಿಂತಿಸಿ ಬದುಕಿದ್ದೂ ಸತ್ತದ್ದಕ್ಕೆ ಏನಾದರೂ ಅರ್ಥವಿದೆಯೆ?

ನಾವೆಲ್ಲಾ ಬದುಕನ್ನು ಕುರುಡರು ಆನೆಯನ್ನು ವಿವಿಧ ಭಾಗಗಳಲ್ಲಿ ಮುಟ್ಟಿ ಒಬ್ಬ ಆನೆ ಅಂದ್ರೆ ಹಗ್ಗ, ಮತ್ತೊಬ್ಬ ಆನೆ ಅಂದ್ರೆ ಗೋಡೆ, ಮಗದೊಬ್ಬ ಕಂಬ ಅಂದುಕೊಂಡ ಹಾಗೆ ಭಾವಿಸ್ತೇವೆ.    ಆದ್ದರಿಂದ ಭಗವದ್ಗೀತೆಯಲ್ಲಿ ಮಕ್ಕಿಕಾಮಕ್ಕಿ ಯಾವತ್ತೋ ಟೇಪ್ ರೆಕಾರ್ಡರಿನಲ್ಲಿ ಘಂಟಸಾಲ ಹೇಳಿದ್ದು ಕೇಳಿ ಅದನ್ನೇ ಪುನರಾವರ್ತನೆ ಮಾಡೋದ್ರಲ್ಲೂ ಇಂಥಹ ಅಪಾಯ ಇದೆ.  ಒಂದು ಮಾತ್ರ ನಿಜ.  ನಮಗೆ ಮಾನಸಿಕ ಕ್ಷೋಭೆ ಅನ್ನತಕ್ಕಂತದ್ದು ಸರ್ವೇ ಸಾಧಾರಣ.  ನಮ್ಮ ಮನಸ್ಸು, ಇಂದ್ರಿಯ, ದೇಹ ಬುದ್ದಿಗಳನ್ನು ಪ್ರಪಂಚಕ್ಕೆ ತೆರೆದಿಟ್ಟುಕೊಂಡಾಗ ಹೀಗೆ ಆಗುತ್ತಿರುತ್ತೆ.  ಇಂತಹ ಕ್ಷಣದಲ್ಲಿ ಭಗವದ್ಗೀತೆಯನ್ನು ಆಶ್ರಯಿಸಿದಾಗ ನನಗೆ ಸಿಕ್ಕಿದಂತಹ ನೆರಳು, ಕೃಪೆ, ಆಶೀರ್ವಾದ ದೊಡ್ಡದು.  ಇದನ್ನೇ ಅನೇಕ ಋಷಿವರೇಣ್ಯರು, ಮಹಾತ್ಮರು ಸಾರಿ ಸಾರಿ ಅನುಭಾವಿಸಿ ಹೇಳಿದ್ದಾರೆ.  ಒಮ್ಮೊಮ್ಮೆ ದೃಷ್ಟಿ ಹಾಯಿಸಿದಾಗ ಗೊತ್ತಿರುವ ಒಂದೊಂದು ಶ್ಲೋಕವನ್ನು ನೆನೆಸಿಕೊಂಡು ಶ್ರದ್ಧೆಯಿಂದ ನೋಡಿದಾಗಲೆಲ್ಲಾ ಹೊಸ ಹೊಸ ಅರ್ಥಗಳು ಗೋಚರಿಸುತ್ತೆ.  ಹೀಗೇ ದೊರಕಿದ ಉಪಯೋಗಕ್ಕೆ ಭಕ್ತಿಪೂರ್ವಕ ನಮಸ್ಕಾರವಷ್ಟೇ ಈ ಬರಹ. 

ಉದ್ದರೇದಾತ್ಮನಾತ್ಮಾನಾಂ ನ ಆತ್ಮಾನಂ ಅವಸಾದಯೇತ್
ಆತ್ಮೈವ ಹಿ ಆತ್ಮನೋ ಬಂಧುಹು ಆತ್ಮೈವ ರಿಪುರಾತ್ಮನಃ

ನಾವು ನಮ್ಮ ಮನಸ್ಸಿನ ಸಹಾಯದಿಂದ ನಮ್ಮನ್ನು ಉದ್ಧರಿಸಿಕೊಳ್ಳಬೇಕು ಮತ್ತು ನಮ್ಮನ್ನು ನಾವು ಕೀಳುಗೊಳಿಸಿಕೊಳ್ಳಬಾರದು. ಮನಸ್ಸು ಬದ್ದಾತ್ಮನ ಮಿತ್ರ ಹಾಗೂ ಅವನ ವೈರಿ ಸಹಾ”  ಎಂಬ ಅರ್ಥದ ಈ ಶ್ಲೋಕ ಭಗವದ್ಗೀತೆಯಲ್ಲಿ ನನಗೆ ಪ್ರೀತಿಪಾತ್ರವಾದದ್ದು.  ಇದನ್ನೇ ಉಪನಿಷತ್ತು ಕೂಡ ಹೀಗೆ ಹೇಳುತ್ತೆ

ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೊಕ್ಷಯೋಹೋ
ಬಂಧಾಯ ವಿಷಯಾಸಂಗೋ ಮುಕೈರ್ ನಿರ್ವಿಶಯಂ ಮಮ

ಮನುಷ್ಯನ ಮುಕ್ತಿ ಸ್ವಾತಂತ್ರ್ಯ ಮತ್ತು ಬಂಧನಗಳೆರಡಕ್ಕೂ ಮನಸ್ಸೇ ಕಾರಣ.  ವಿಷಯಾಸಕ್ತಿಗಳಲ್ಲಿನ ಮೋಹವೇ ಬಂಧನ.  ಈ ವಿಷಯಾಸಕ್ತಿಗಳ ಬಗೆಗೆ ಮನಸ್ಸನ್ನು ಸಿಲುಕಿಸಿಕೊಳ್ಳದೆ ಬದುಕುವ ಜಾಣ್ಮೆಯೇ ಮುಕ್ತಿ.

ಅಂತೆಯೇ ಪ್ರೀತಿಯೇ ಭಕ್ತಿ ಎಂಬರ್ಥದ ಪರಮಾತ್ಮನ ಈ ನುಡಿ ಸಹಾ

ತೇಷಾಂ ಸತತ ಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಮ್
ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಂತಿ ತೇ.
ತೇಷಮೇವಾನುಕಂಪಾರ್ಥಂ  ಅಹಂ ಅಜ್ಞಾನಜಂ ತಮಃ
ನಾಶಯಂ ಆತ್ಮಭಾವಸ್ಥೋ ಜ್ಞಾನದೀಪೆನ ಭಾಸ್ವತಾ.

ಯಾರು ನನ್ನನ್ನು ಪ್ರೀತಿಯಿಂದ ಚಿಂತಿಸುತ್ತಾರೋ ನಾನವರಿಗೆ ಸುಜ್ಞಾನವನ್ನು ನೀಡುತ್ತೇನೆ.  ಆ ಸುಜ್ಞಾನದಿಂದ ಅವರು ನನ್ನನ್ನೇ ಹೊಂದುವರು.  ಅವರ ಬಗ್ಗೆ ಅನುಕಂಪ ಉಳ್ಳವನಾದ ನಾನು ಅವರಲ್ಲಿ ಜ್ಞಾನದೀಪವನ್ನು ಬೆಳಗಿ ಅವರಲ್ಲಿರುವ ಅಜ್ಞಾನದ ಕತ್ತಲೆಯನ್ನು ಕಳೆಯುತ್ತೇನೆ. 

ಎಲ್ಲರಲ್ಲೂ ಪರಮಾತ್ಮನ ಕುರಿತಾಗಿ, “ಈಶ್ವರ ಸರ್ವಭೂತಾನಾಂ ಹೃದ್ದೇಶೇsರ್ಜುನ ತಿಷ್ಠತಿ” – ಎಲ್ಲಾ ಹೃದಯಗಳಲ್ಲೂ ಮನೆಮಾಡಿರುವ ಈಶ್ವರ ಅಂದರೆ ಪರಮಾತ್ಮ ತುಂಬಿರುವ ಎಲ್ಲದರ ಕುರಿತೂ ಪ್ರೀತಿಹುಟ್ಟಲಿ, ಅಜ್ಞಾನವೆಂಬ ಕತ್ತಲೆ ಈ ಲೋಕದಿಂದ ಕಳೆದುಹೋಗಲಿ ಎಂದು ಆಶಿಸೋಣ ಮತ್ತು ಪ್ರಾರ್ಥಿಸೋಣ. 

ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ
ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ

ಸರ್ವ ಯೋಗೇಶ್ವರ ಶ್ರೀಕೃಷ್ಣನಿರುವಲ್ಲಿ ಮತ್ತು ಪರಮ ಧನುರ್ಧಾರಿ ಅರ್ಜುನನಿರುವಲ್ಲಿ ಅಂದರೆ ಪರಮಾತ್ಮನ ಇಚ್ಛೆ, ಕೃಪೆ ಹಾಗೂ ಮನುಷ್ಯನಾ ಶ್ರದ್ಧಾಪೂರ್ವಕ ಸಿದ್ಧತೆ ನಿಷ್ಠೆ ಇರುವಲ್ಲಿ ಖಂಡಿತವಾಗಿ ಐಶ್ವರ್ಯ, ವಿಜಯ, ಅಸಾಧಾರಣ ಬಲ, ಮತ್ತು ನೀತಿ ಕೂಡ ಇರುತ್ತದೆ.
ಇವೆಲ್ಲವುಗಳ ಜೊತೆಗೆ ಗೀತೊಪದೆಶದಲ್ಲಿ ಶ್ರೀಕೃಷ್ಣ ಅರ್ಜುನರನ್ನು ಕಲ್ಪಿಸಿಕೊಳ್ಳುವಾಗ ಸ್ವಾಮಿ ವಿವೇಕಾನಂದರು  ಹೇಳುವ ಮಾತು: “ಇದೊಂದು ಸುಂದರ ಚಿತ್ರವನ್ನು ಕಲ್ಪಿಸಿಕೊಳ್ಳಿ.  ಆತ್ಮನೇ ರಥಿ, ದೇಹ ರಥ, ಬುದ್ಧಿಯೇ ಸಾರಥಿ, ಮನಸ್ಸೇ ಲಗಾಮು, ಇಂದ್ರಿಯಗಳೇ ಕುದುರೆಗಳು.  ಯಾರ ಕುದುರೆಗಳು ಪಳಗಿವೆಯೋ, ಲಗಾಮು ಬಿಗಿಯಾಗಿ ಸಾರಥಿಯ ಕೈಯಲ್ಲಿರುವುದೋ ಅವರು ಸರ್ವವ್ಯಾಪಿಯ ಗುರಿಯನ್ನು ಸೇರುವರು.  ಯಾರ ಕುದುರೆ ಪಳಗಿಲ್ಲವೋ, ಲಗಾಮು ನಿಗ್ರಹದಲ್ಲಿ ಇಲ್ಲವೊ, ಅವರು ನಾಶವಾಗುವರು.  ಎಲ್ಲದರಲ್ಲಿಯೂ ಇರುವ ಆತ್ಮವು ಇಂದ್ರಿಯಗಳಿಗೆ ಗೋಚರಿಸುವುದಿಲ್ಲ.  ಯಾರ ಮನಸ್ಸು ಶುದ್ಧವಾಗಿದೆಯೋ, ಸೂಕ್ಷ್ಮವಾಗಿದೆಯೊ ಅವರು ಸಾಕ್ಷಾತ್ಕಾರ ಮಾಡಿಕೊಳ್ಳುವರು.  ಯಾವನು ಎಲ್ಲ ಶಬ್ದದ ಆಚೆ, ರೂಪದ ಆಚೆ, ಆಕಾರದ ಆಚೆ, ನಿರಪೇಕ್ಷನಾಗಿರುವನೊ, ರುಚಿಸ್ಪರ್ಶಗಳನ್ನು ಮೀರಿ ಅನಂತನಾಗಿರುವನೊ, ಆದ್ಯಂತ ರಹಿತನೋ, ಪ್ರಕೃತಿಗೆ ಅತೀತನಾಗಿರುವನೋ, ಅಂತಹವನನ್ನು ಯಾರು ಸಾಕ್ಷಾತ್ಕಾರ ಮಾಡಿಕೊಳ್ಳಬಲ್ಲರೊ, ಅವರು ಮೃತ್ಯುಪಾಶದಿಂದ ಪಾರಾಗುವರು.  ಆದರೆ ಇದು ಬಹಳ ಕಷ್ಟ.  ಹಿರಿದ ಅಲಗಿನ ಮೇಲೆ ನಡೆದಂತೆ, ಇದು.  ಮಾರ್ಗ ಬಹುದೂರ, ಕಷ್ಟ.  ಆದರೆ ಹೋರಾಡಿ, ನಿರಾಶರಾಗಬೇಡಿ.  ಏಳಿ, ಜಾಗ್ರತರಾಗಿ, ಗುರಿ ಸೇರುವವರೆಗೂ ನಿಲ್ಲಬೇಡಿ.”

Tag: Geetha Jaynathi, Gita Jayanthi, Bhagawadgita, Bhagavadgita


ಕಾಮೆಂಟ್‌ಗಳಿಲ್ಲ: