ಭಾನುವಾರ, ಮಾರ್ಚ್ 26, 2017

ಕೆ. ಎ. ದಯಾನಂದ

ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಪ್ರಾಮಾಣಿಕತೆ, ಕಾರ್ಯಾಸಕ್ತಿ ಮತ್ತು ಸಜ್ಜನಿಕೆಗಳಿಗೆ ಹೆಸರಾಗಿರುವ  ಕೆ.ಎ. ದಯಾನಂದ ಅವರ ಜನ್ಮದಿನ.  ಅವರ ಮಾತುಗಳನ್ನು ಕೇಳುವಾಗ, ಅದರಲ್ಲಿರುವ ಕಾಳಜಿಗಳನ್ನು ಗಮನಿಸುವಾಗ  ನಾವು ಕೆಟ್ಟು ಹೋಗಿದೆ ಎಂದು ಭಾವಿಸುವ ವ್ವವಸ್ಥೆಗಳ ನಡುವೆಯೂ ಯಾವುದೋ ಒಂದು ಆಶಯದ ಮಿನುಗು ಹುಟ್ಟುತ್ತದೆ.

ಕಲಾಕ್ಷೇತ್ರಗಳ ಕಾದಿರಿಸುವಿಕೆ, ಕಲಾವಿದರಿಗೆ ಸಲ್ಲಬೇಕಾದ ಸಂಭಾವನೆ ಇತ್ಯಾದಿ ಅನೇಕ ವಿಚಾರಗಳಲ್ಲಿ ಅಂತರ್ಜಾಲದ ಮುಖೇನ ಆಡಳಿತವನ್ನು ಸ್ಥಾಪಿಸಿ ಅನವಶ್ಯಕ ಹಸ್ತಕ್ಷೇಪ ಅಳಿಸಿ, ಶುದ್ಧತೆಗಳಿಗೆ ಆಸ್ಪದ ನೀಡಿರುವ ಅವರ ಕಾರ್ಯಗಳು ಪ್ರಶಂಸನೀಯವಾಗಿವೆ.
ಅನೇಕ ವೈರುದ್ಧ್ಯಗಳು ತುಂಬಿ ತುಳುಕುವ ಸರ್ಕಾರಿ ವ್ಯವಸ್ಥೆಗಳ ಮಧ್ಯೆ  ಹೇಗೆ  ತಾನೇ ಒಳ್ಳೆಯ ಕೆಲಸ ಮಾಡಲಿಕ್ಕೆ ಸಾಧ್ಯ ಎಂಬ ಬಗ್ಗೆ ಅವರು ಒಮ್ಮೆ ಹೇಳಿದ ಮಾತು ನನಗೆ ಆಗಾಗ ನೆನಪಿಗೆ ಬರುತ್ತದೆ.  “ಯಾವುದೇ ಒಂದು ಕೆಲಸ ಮಾಡುವಾಗಲೂ ಹಲವಾರು ವ್ಯವಸ್ಥೆಗಳಲ್ಲಿ ಅನೇಕ ರೀತಿಯ ಶಕ್ತಿಗಳು ಉತ್ತಮ ಪ್ರಯತ್ನಗಳನ್ನು ಕೆಳಗೆ ಎಳೆಯುವಂತೆ  ಮಾಡುತ್ತಿರುತ್ತವೆ.  ಇಂತಹ ಸಂದರ್ಭಗಳಲ್ಲಿ ನಾವು ಇನ್ನೂ ಹೆಚ್ಚು ಹೆಚ್ಚು ಸಮರ್ಥವಾಗಿ ಕೆಲಸ ಮಾಡುವ ರೀತಿಯನ್ನು ರೂಢಿಸಿಕೊಳ್ಳಬೇಕಾಗುತ್ತದೆ.  ಭೂಮಿಯ ಗುರುತ್ವಾಕರ್ಷಣ ಶಕ್ತಿ ಎಷ್ಟೊಂದು ಬಲಯುತವೆಂದರೆ ಅದು ಯಾವುದನ್ನೂ ಹೆಚ್ಚು ಹೊತ್ತು ಮೇಲಿರುವುದಕ್ಕೆ ಬಿಡುವುದಿಲ್ಲ.  ಆದರೆ, ಒಂದು ರಾಕೆಟ್,  ಈ ಗುರುತ್ವಾಕರ್ಷಣ ಶಕ್ತಿಯನ್ನೇ ಮೀರುವಂತಹ ಸಾಮರ್ಥ್ಯವನ್ನು ರೂಪಿಸಿಕೊಂಡು ತನ್ನ ಎತ್ತರದ ಗುರಿಗಳನ್ನು ತಲುಪುವಂತೆ,  ನಮಗೂ ಅನೇಕ ಸಾಧ್ಯತೆಗಳಿವೆ ಎಂಬುದನ್ನು ನಾವು ಮನಗಂಡರೆ ಏನನ್ನೂ ಸಾಧಿಸಬಹುದು.” 

ಸಮಾಜದಲ್ಲಿ ನಾವು ಕೆಟ್ಟದ್ದನ್ನು ಗುರುತಿಸುವಷ್ಟು ಒಳ್ಳೆಯದನ್ನು ಗುರುತಿಸುವುದು ಕಡಿಮೆ.   ಒಳ್ಳೆಯದನ್ನು ಗುರುತಿಸುವ ಮನೋಭಾವನೆಯನ್ನು ನಾವು ಹೆಚ್ಚಿಸಿಕೊಂಡಷ್ಟೂ ನಮ್ಮಲ್ಲಿ ಆರೋಗ್ಯಕರ ಸಮಾಜದ  ಕನಸೂ ಹೆಚ್ಚು ಹೆಚ್ಚು ವಿಸ್ತರಿಸುತ್ತದೆ.  ಅಂತಹ ಕನಸುಗಳು ಮಾತ್ರವೇ ಉತ್ತಮ ವ್ಯವಸ್ಥೆಗಳಿಗೆ ಹುಟ್ಟು ನೀಡಬಲ್ಲವು.  ಹೀಗಾಗಿ  ನಾವು ಕೆ. ಎ. ದಯಾನಂದರಂತಹ ಉತ್ತಮ ಆಶಯಗಳಿರುವ ಸರ್ಕಾರಿ ಪ್ರತಿನಿಧಿಗಳ ಉತ್ತಮ ಕೆಲಸಕ್ಕೆ ಬೆಂಬಲ ನೀಡುವುದೂ ಅತ್ಯಂತ ಅವಶ್ಯಕ.  ಹಾಗಾಗುತ್ತದೆ ಎಂದು ಆಶಿಸುತ್ತಾ ದಯಾನಂದರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳನ್ನು ಸಲ್ಲಿಸೋಣ. 

Tag: K.A. Dayananda, K. A. Dayananda ಕಾಮೆಂಟ್‌ಗಳಿಲ್ಲ: