ಬುಧವಾರ, ಏಪ್ರಿಲ್ 12, 2017

ಬಿ. ವಿ. ಭಾರತಿ


ಬಿ.ವಿ. ಭಾರತಿ

ಇಂದು ನಮ್ಮೆಲ್ಲರ ಆಪ್ತರಾದ ಬರಹಗಾರ್ತಿ ಬಿ.ವಿ. ಭಾರತಿ ಅವರ ಹುಟ್ಟುಹಬ್ಬ. 

ನಾನು  ಫೇಸ್ಬುಕ್ನ ಕನ್ನಡ  ವಾತಾವರಣದಲ್ಲಿ ಕಳೆದ  ಏಳೆಂಟು ವರ್ಷಗಳಿಂದ  ಇದ್ದರೂ ಹೊರದೇಶದಲ್ಲಿ,  ನಂತರ  ಸ್ವಲ್ಪಕಾಲ ಮೈಸೂರಿನ  ಮೂಲೆಯಲ್ಲಿ  ಇದ್ದದ್ದರಿಂದ   ಫೇಸ್ಬುಕ್  ಗೆಳೆಯರ ನೇರ  ಸಂಪರ್ಕ ಸಿಕ್ಕಿದ್ದು ಇತ್ತೀಚಿನ  ವರ್ಷದಲ್ಲಿ.  ಹೀಗೆ ನನಗೆ ಸಿಕ್ಕ  ಸಂಪರ್ಕದಲ್ಲಿ  ಕೆಲವು ತಿಂಗಳ  ಹಿಂದೆ  ನಡೆದ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ  ನನ್ನ ಗಮನ ಸೆಳೆದವರು  ಬಿ. ವಿ.  ಭಾರತಿ.  ಅವರು ಬರಹಗಾರ್ತಿ   ಎಂದು  ಎಲ್ಲೋ  ಓದಿದ್ದರಿಂದ  ನಾನೇ  ಅವರ ಬಳಿ ಹೋಗಿ  ಒಂದೆರಡು ಮಾತನಾಡಿದ್ದೆ.  ಪರಿಚಯ  ಇರಲಿಲ್ಲವೆಂಬ  ಭಾವ  ನನ್ನಲ್ಲೂ ಉಂಟಾಗಲಿಲ್ಲ. ಅವರಲ್ಲೂ  ಕಾಣಲಿಲ್ಲ.  ಆ ನಂತರವೇ  ನಾವು  ಫೇಸ್ಬುಕ್  ಗೆಳೆಯರಾದದ್ದೂ ಸಹಾ.   ಇದಾದ  ನಂತರದಲ್ಲಿ ಅವರು ಬರೆದ ಪುಸ್ತಕದ ಹೆಸರು ನನಗೆ ಜಗತ್ತಿನಲ್ಲಿ ಇಷ್ಟವಾದ ಬುದ್ಧನ  ಕಥೆಯನ್ನು ನೆನಪಿಸುವ ‘ಸಾಸಿವೆ ತಂದವಳು’  ಎಂಬ ಆಕರ್ಷಣೆ ಹುಟ್ಟಿ  ಅದನ್ನು  ಓದಲೇಬೇಕು  ಅನಿಸಿತು.  ಕೋರಮಂಗಲದಲ್ಲಿ ನನ್ನ ಕಚೇರಿ  ಹಾದಿಯಿಂದ  ಬರುವ  ಹಾದಿಯಲ್ಲಿದ್ದ  ಸಪ್ನಾದಲ್ಲಿ  ನಾನು ಕೇಳಿದ ಪುಸ್ತಕ  ಎಂದೂ ಸಿಕ್ಕಿದ್ದೇ ಇಲ್ಲ.  ಪ್ರತೀ ಸಲ ಹೋದಾಗಲೂ  ಯೋಚಿಸಿದ್ದು ಬಿಟ್ಟು ಮತ್ಯಾವುದೋ  ಪುಸ್ತಕ  ಕೊಂಡು ತರುವುದು ಅನಿವಾರ್ಯತೆ.  ಹಾಗಾಗಿ  ‘ಸಾಸಿವೆ ತಂದವಳು’ ಕೃತಿ ಅಲ್ಲಿ ಸಿಗದೇ ಆ ಕೃತಿಯನ್ನು ಆನ್ ಲೈನ್ನಲ್ಲಿ  ಆರ್ಡರ್ ಮಾಡಿ  ತರಿಸಿಕೊಂಡೆ.

ಈ ಪುಸ್ತಕದ  ಹಿನ್ನುಡಿಯನ್ನು ಬರೆದಿರುವ ಯು. ಆರ್. ಅನಂತಮೂರ್ತಿ  ಹಾಗೂ ಮುನ್ನುಡಿಯನ್ನು ‘ಬದುಕು ನಿನ್ನಲ್ಲೆಂಥಾ  ಮುನಿಸು...’ ಎಂಬ ಶೀರ್ಷಿಕೆಯಡಿಯಲ್ಲಿ ಬರೆದಿರುವ  ನೇಮಿಚಂದ್ರರ  ಬರಹಗಳು  ಈ ಕೃತಿಯ ಸಾರವನ್ನು  ಮನಮುಟ್ಟುವಂತೆ ಕಟ್ಟಿಕೊಡುತ್ತವೆ.  ಇವನ್ನು ಓದಿದ ನಂತವೂ ಸಾಮಾನ್ಯವಾಗಿ  ಕಷ್ಟಕರ  ವಿಚಾರಗಳಿರಲಿ,  ಗಲಭೆ-ನೋವು-ಕುತಂತ್ರಗಳ ಸುದ್ಧಿ  ಯಾಕೆ  ಓದುವುದು ಎಂದು  ಪತ್ರಿಕೆಗಳ  ಮುಖಪುಟವನ್ನೂ  ಓದುವುದನ್ನು ಬಿಟ್ಟಿರುವ  ನಾನು,   ಕ್ಯಾನ್ಸರ್ ಬದುಕನ್ನು  ನಮ್ಮ ಮನೆಯಲ್ಲೇ  ಎರಡು ಸಾರಿ  ಕಂಡಿದ್ದು,  ನನಗೆ  ಇದನ್ನು ಒಂದು  ಡಾಕ್ಯುಮೆಂಟರಿ ಚಿತ್ರ ನೋಡುವ  ಹಾಗೆ  ಓದಬೇಕಾದೀತೇನೋ ಎಂಬ ಅಳುಕಿನಿಂದ  ಪ್ರಾರಂಭ  ಮಾಡಲು ಕೆಲವು ದಿನಗಳೇ ಬೇಕಾಯಿತು.  ಆದರೆ  ಈ ಪುಸ್ತಕವನ್ನು ಓದದೆ  ಪ್ರತೀವಾರ  ಹೊಸ ಹೊಸತು ಸೇರುತ್ತಲೇ ಇರುವ  ನನ್ನ ಪುಸ್ತಕ ಭಂಡಾರದ  ಬೇರೆ ಪುಸ್ತಕಗಳನ್ನೂ  ತೆರೆಯುವ  ಮನಸ್ಸಿಲ್ಲದಂತಾಯ್ತು.  ಹಾಗಾಗಿ  ಭಾರತಿಯವರ  ಮೊದಲ  ನುಡಿಗಳಾದ ‘ಬದುಕಿನ ಜೋಳಿಗೆಯಿಂದ  ನಾಳೆಗಳನ್ನು ಕಸಿದೆ’ ಓದಿದಾಗ  ನಾನು  ಈಗ ಮಾಡುತ್ತಿರುವುದು ಕಷ್ಟಕರ ಪಯಣವಲ್ಲ  ಎಂಬ  ಭಾವ ಮೂಡಿಸಿತು.

ಬದುಕಿನಲ್ಲಿ  ನಾನು ಹೇಗೆ ಕಷ್ಟಗಳನ್ನು  ಓದುವುದಕ್ಕೆ  ಹಿಂಜರಿಯುತ್ತೇನೋ  ಹಾಗೆ  ರೈಲಿನಲ್ಲಿ ಹೋದರೆ ಹೇಗೆ,  ವಿಮಾನದಲ್ಲಿ ಹೋದರೆ ಹೇಗೆ  ಎಂದು  ಭಯಪಡುತ್ತಿದ್ದ  ಭಾರತಿ; ಕ್ಯಾನ್ಸರ್, ಟ್ಯೂಮರ್  ಅಂತದ್ದು  ಎಲ್ಲಾದರೂ  ಬಂದು ಬಿಟ್ಟರೆ  ಎಂದು  ಭಯಪಡುತ್ತಿದ್ದ  ಭಾರತಿ; ಕ್ಯಾನ್ಸರ್ ಎಂಬುದೇ  ಬಂದು ತನ್ನನ್ನಪ್ಪಿ  ನಿಂತಾಗ  ಅದಕ್ಕೆ  ಅನುಭವಿಸಿದ ತಳಮಳ,  ಹಿಂಸೆ, ನೋವು, ಭಯ ಇತ್ಯಾದಿಗಳನ್ನು  ನಿಧಾನವಾಗಿ  ತನ್ನ  ಅಂತರಂಗದಲ್ಲಿನ  ಆತ್ಮವಿಶ್ವಾಸದ  ಮೂಲಕ  ಒಪ್ಪಿಕೊಂಡು ಅದರಿಂದ  ಮೇಲೇರಿ ನಿಂತ  ರೀತಿ, ಅದರ  ಹಿಂದಿರುವ ಅವರ ಗಟ್ಟಿಗತನ,  ಇವೆಲ್ಲವನ್ನೂ  ಹಾಸ್ಯದ ಕಣ್ಣಿನಿಂದ  ನೋಡುವ  ಪರಿ,  ಇದನ್ನು ಬಣ್ಣಿಸಿರುವ  ಒಕ್ಕಣೆ  ಇವೆಲ್ಲಾ  ನಮ್ಮಲ್ಲಿ  ಸಂವೇದನೆ,  ಸುಲಲಿತ  ಓದುವಿಕೆ, ಗಂಭೀರತೆ ಮತ್ತು  ಪ್ರಿಯ ಓದುವಿಕೆ  ಇವೆರಡೂ ಒಂದಕ್ಕೊಂದು  ವೈರುಧ್ಯ ದಿಕ್ಕು ಹಿಡಿಯದಂತ ಮೋಡಿ ಇವೆಲ್ಲಾ   ಓದುಗರಾದ ನಮ್ಮನ್ನು  ದೋಣಿಯಲ್ಲಿ  ವಿಹಾರದಂತೆ  ತಲ್ಲೀನವಾಗಿಸುತ್ತಾ  ಸಾಗುತ್ತದೆ.
ಇಲ್ಲಿ  ಕ್ಯಾನ್ಸರ್ ಎಂಬ  ಕರಾಳತೆಯ ದರ್ಶನ ಇದೆ;  ವೈದ್ಯರು ಹೇಗಿದ್ದಾರೆ ಎಂಬುದರ ಜೊತೆಗೆ ಹೇಗಿದ್ದರೆ ಯಮ ಯಾತನೆ,  ಹೇಗಿದ್ದರೆ ಚೆನ್ನ  ಎಂಬ  ನೈಜ ನಿದರ್ಶನಗಳಿವೆ;  ಎಲ್ಲದರಲ್ಲೂ  ದೇಹ  ಸುಲಲಿತವಾಗಿ  ತೊಡಗಿಕೊಳ್ಳುತ್ತಿದ್ದಾಗ  ಎಲ್ಲದಕ್ಕೂ  ನಾನೇ ಬೇಕು ಎಂಬ ಅಹಂ, ಎಲ್ಲದಕ್ಕೂ ನಾನೇ ಸಾಯಬೇಕು ಎಂಬ ಸಿಟ್ಟು;  ದೇಹ  ಕೈಕೊಟ್ಟು  ತ್ರಾಣವಿಲ್ಲದಿದ್ದಾಗ, ನಾನಿಲ್ಲದಿದ್ದರೂ  ವ್ಯವಸ್ಥೆ  ನಡೆದುಬಿಡುತ್ತದೆಯಲ್ಲ , ನನ್ನ ಅಗತ್ಯವೇ  ಪ್ರಪಂಚಕ್ಕಿಲ್ಲ  ಎಂದು ಕಾಡುವ ಹತಾಶೆ;  ಕ್ಯಾನ್ಸರ್ ಕಾಯಿಲೆ ಎಷ್ಟು  ಜೀವವನ್ನು ತಿನ್ನುತ್ತದೋ ಅದಕ್ಕೆ  ಇರುವ  ಪರಿಹಾರ  ಜೀವವನ್ನು ತಿನ್ನುವುದರಲ್ಲಿ    ಮೀರಿಸಿದ್ದು ಎಂಬ  ಅನುಭವದ ಚಿತ್ರಣ;  ಸಮಾಜ  ಕ್ಯಾನ್ಸರ್ ರೋಗಿ ಎಂಬ ವ್ಯಕ್ತಿಯನ್ನು  ತನ್ನ ಮಾತುಗಳ  ಚಪಲತೆಯ ಇರಿತದಲ್ಲಿ ಕೊಲ್ಳುವ ರೀತಿ ಸಾಕಷ್ಟು ಇದ್ದ್ಯಾಗ್ಯೂ   ಈ ಲೋಕ ನಮಗೆ  ಕೊಡುಗೆ ನೀಡಿರುವ  ನಿರ್ಮಲ ಸ್ನೇಹವು ಕೊಡುವ  ಅಮೃತ ಸಿಂಚನ ಮತ್ತು ಅದು   ಬಾಳನ್ನು  ಬೆಳಗುವ ರೀತಿ ಇವೆಲ್ಲವನ್ನೂ  ಭಾರತಿ  ಪ್ರಸ್ತಾಪಿಸಿರುವ  ರೀತಿಯನ್ನು   ಓದುವಾಗ  ಸಮಸ್ತ  ಬದುಕಿನ ಕುರಿತಾದ  ಆಧ್ಯಾತ್ಮ  ದರ್ಶನ ಪಡೆದಂತ  ಭಾವ  ಮೂಡುತ್ತದೆ. 

 “.... ಬದುಕು ಎಷ್ಟೆಲ್ಲ ಬದುಕನ್ನು ಕಲಿಸುತ್ತದೋ, ಅದಕ್ಕಿಂತ  ಹೆಚ್ಚಿನದನ್ನು  ಸಾವು ಅಥವಾ  ಸಾವಿನ  ನೆರಳಿನ  ಸ್ವಲ್ಪ  ದಿನದ  ಬದುಕು  ಕಲಿಸುತ್ತದೆ.   ಈ  ರೀತಿ  ಸಾವಿಗೆ  ಸೆಡ್ಡು ಹೊಡೆದಂತೆ  ಬದುಕುವುದು  ಬ್ರಹ್ಮ ವಿದ್ಯೆಯೇನೂ  ಅಲ್ಲ.  ಸ್ವಲ್ಪ ಧೈರ್ಯ, ಇನ್ನೊಂದು ಸ್ವಲ್ಪ ಆತ್ಮವಿಶ್ವಾಸ, ಜೊತೆಗೆ ಆಸಾಧ್ಯ ಬದುಕಿನ ಮೋಹ ಇಷ್ಟಿದ್ದರೆ  ಸಾಕು .... ಬದುಕಿನ  ನಳಪಾಕ  ತಯಾರು!  ನನ್ನಂಥ  ‘ನಾನು’ ಅದನ್ನು ಎದುರಿಸಬಲ್ಲೆ  ಎನ್ನುವುದಾದರೆ ‘ನಿಮ್ಮಿಂದ’ ಯಾಕೆ ಅದು ಸಾಧ್ಯವಿಲ್ಲ?  ನಾನು ಮಾತನಾಡುತ್ತಿರುವುದು  ಬರೀ ಸಾವಿನ ಬಗ್ಗೆ  ಮಾತ್ರ ಅಲ್ಲ,  ಬದುಕಿನ  ಪ್ರತೀ ಹಂತದಲ್ಲೂ  ಎದುರಾಗುವ  ಸಮಸ್ಯೆಗಳ ಬಗೆಗೂ – Just remember , when you think all is lost, the future remains....”  ಎಂದು  ತಮ್ಮ ಮೊದಲ ಮಾತಿನಲ್ಲಿ ಹೇಳಿರುವ  ಭಾರತಿಯವರ  ನುಡಿ ಎಲ್ಲಿಂದಲೂ  ಪೋಣಿಸಿದ ಒಣ ಘೋಷ ವಾಕ್ಯವಲ್ಲ.  ಅನುಭವವೆಂಬ  ತಪಸ್ಸಿನ ಮೂಸೆಯ  ಅನುಭಾವದಿಂದ  ಹೊರಹೊಮ್ಮಿರುವಂತದ್ದು  ಎಂಬುದನ್ನು  ಕೃತಿಯನ್ನು  ಓದಿದವರಿಗೆಲ್ಲಾ  ಖಂಡಿತ  ಅರ್ಥವಾಗುವಂತದ್ದು.  ಹೀಗಾಗಿ  ಭಾರತಿ ಕೇವಲ   ಕ್ಯಾನ್ಸರ್ ಎಂಬ ರೋಗಮುಕ್ತಿ ಸಾಧನೆಯ    ಸಾಸಿವೆಯನ್ನು ತಂದವರಾಗಿಲ್ಲದೆ,  ಬದುಕಿನ  ಅನಂತತೆಯ  ಅನುಭಾವದಲ್ಲೂ  ಮಹತ್ವದ  ಸಾಧಕಿಯಾಗಿ    ಕಂಡು ಬರುತ್ತಾರೆ.  ಭಾರತಿ ಅವರೇ,  ನೀವು   ಆರೋಗ್ಯವಂತರಾಗಿ    ಸ್ಫೂರ್ತಿಧಾಯಕರಾಗಿ ನಿರಂತರ ನಮ್ಮೊಡನಿರುತ್ತೀರಿ  ಎಂಬುದು ನಮ್ಮೆಲ್ಲರ ವಿಶ್ವಾಸ ಮತ್ತು  ನಮಗೆಲ್ಲಾ  ಸಂತೋಷ  ತರುವ ಸಂಗತಿ. 


ಫೇಸ್ಬುಕ್ನಲ್ಲಿ ತಮ್ಮ ನಳ ನಳಿಸುವ ಸ್ನೇಹಮಯ ಬರಹಗಳಿಂದ ಹಾಗೂ ಎಲ್ಲೆಲ್ಲಿ ವಿಶೇಷ ಕನ್ನಡದ ಸಾಂಸ್ಕೃತಿಕ ವಾತಾವರಣವಿರುತ್ತದೋ ಅಲ್ಲಿ ತಪ್ಪದೆ  ಹಾಜರಿದ್ದು  ಆಪ್ತವಾಗಿ ಮಾತಿಗೆ ಸಿಗುವ ನಮ್ಮೆಲ್ಲರ ಆತ್ಮೀಯರಾದ  ಭಾರತಿ ಅವರ ಮೇಲ್ಕಂಡ ಕೃತಿಯೇ ಅಲ್ಲದೆ, ಸುಲಲಿತ ಪ್ರಬಂಧಗಳ ಸಂಗ್ರಹ ‘ಮಿಸಳ್ ಭಾಜಿ’ ಮತ್ತು  ರಂಗಪ್ರದರ್ಶನಗಳ ಮೂಲಕ  ‘ಅನಾಹತ’  ಜನಪ್ರಿಯವಾಗಿವೆ.  ಅವರ ಸರಳ ಸಜ್ಜನಿಕೆಯ ಎಲ್ಲರೊಂದಿಗೆ ಒಂದಾಗಿ ನಗುನಗುತ್ತಾ ಬೆರೆಯುವ ಗುಣವಿದೆಯೆಲ್ಲಾ  ಇದೆಲ್ಲಾ  ಇಡೀ ಜಗತ್ತನ್ನೇ  ಕೂಗಿ ಕರೆಯುವಂತೆ ಶಕ್ತಿಶಾಲಿಯಾದದ್ದಾಗಿದೆ.  ಈ ಭವ್ಯ ಶಕ್ತಿಯ ಬಿ.ವಿ. ಭಾರತಿಯವರಿಗೆ  ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಹೇಳೋಣ.  

Tag: B.V. Bharathi

ಕಾಮೆಂಟ್‌ಗಳಿಲ್ಲ: