ಶುಕ್ರವಾರ, ಜುಲೈ 14, 2017

ಬೇಳೂರು ಸುದರ್ಶನ


ಬೇಳೂರು ಸುದರ್ಶನ

ಎತ್ತರದ ಆಕರ್ಷಕ ನಿಲುವು, ಸ್ಪಷ್ಟ ಮಾತುಗಾರಿಕೆ, ಅಷ್ಟೇ ಖಚಿತ ಅಭಿಪ್ರಾಯ ಮಂಡನೆ, ತೆಗೆದುಕೊಂಡ ಕೆಲಸಕ್ಕೆ ಅರ್ಪಣಾ ಮನೋಭಾವಗಳ ಸಂಗಮರೂ,  ಆತ್ಮೀಯರೂ ಆದ ಬೇಳೂರು ಸುದರ್ಶನ ಅವರ ಹುಟ್ಟುಹಬ್ಬದ ದಿನವಿದು.  ಕನ್ನಡ ಪತ್ರಿಕಾ ಕ್ಷೇತ್ರ, ಮಾಹಿತಿ ತಂತ್ರಜ್ಞಾನ, ಬ್ಲಾಗಿಂಗ್, ಮುಕ್ತಜ್ಞಾನ ಪ್ರಸರಣ, ಬರವಣಿಗೆ, ಸಮಾಜ ಸೇವೆ ಹೀಗೆ ವಿವಿದೆಡೆಗಳಲ್ಲಿ ಅವರ ಕೊಡುಗೆಗಳು ಎದ್ದು ಕಾಣುವಂತದ್ದು.

ಬೇಳೂರರ ಕುರಿತು ತಿಳಿಯುವಾಗ ಸುಂದರ ವ್ಯಕ್ತಿಯ ವಯಸ್ಸನ್ನು ಹೇಗಪ್ಪಾ ಕೇಳುವುದು ಎಂಬ ಹಿಂಜರಿಕೆ ಬೇಕಿಲ್ಲ.  ತೆರೆದಿಟ್ಟ ಪುಸ್ತಕವಾಗಿ ತಮ್ಮನ್ನು ಅಭಿವ್ಯಕ್ತಿಸುವ  ಬೇಳೂರರು ತಮ್ಮ ವಯಸ್ಸಿನ ಅರ್ಧ  ಸೆಂಚುರಿಯ ಕುರಿತು ತಮ್ಮ ಬ್ಲಾಗ್ ‘beluru.com’ನಲ್ಲಿ  ವಿವರವಾಗಿ  ಬರೆದಿದ್ದಾರೆ.

1965 ಜುಲೈ 14ರಂದು ಶಿವಮೊಗ್ಗ ಜಿಲ್ಲೆಯ ಬೇಳೂರಿನಲ್ಲಿ ಜನಿಸಿದ  ಸುದರ್ಶನರು  ಚಿಕ್ಕಂದಿನಿಂದಲೇ ತಮ್ಮ ತಾತ ಮತ್ತು ತಂದೆಯವರು ಒಳ್ಳೆಯ ಉದ್ದೇಶಕ್ಕಾಗಿ ಸಮಾಜವನ್ನು ಎದುರು ಹಾಕಿಕೊಳ್ಳಲು ಹೆದರದೆ ತೋರಿದ  ಪ್ರಗತಿಪರ ನಿಲುವುಗಳನ್ನು   ಅಭಿಮಾನಿಸುತ್ತಾ ಬೆಳೆದವರು.  ಬದುಕಿನಲ್ಲಿ ನೆಲೆಗಾಗಿ ಊರೂರೂ ಅಲೆಯ ಬೇಕಾದ ಪರಿಸ್ಥಿತಿಯಲ್ಲಿ ಸಾಗಿದ ಇವರ ವಿದ್ಯಾಭ್ಯಾಸ ವರ್ಷಕ್ಕೊಂದು - ಎರಡು -ಮೂರು ಶಾಲೆಗಳಲ್ಲಿ ಎಂಬಂತೆ ವಿಶಾಲ ಕರ್ನಾಟಕದ ಬಹುತೇಕ ಕಡೆ ನಡೆದಿದೆ.  “ಕಡು ಬಡತನವು ದಟ್ಟ ಅನುಭವಗಳನ್ನು ಒದಗಿಸುತ್ತದೆ!” ಎಂಬ ಅವರ ಮಾತು ಇಲ್ಲಿ ಉಲ್ಲೇಖನೀಯ.  ಇಂಜಿನಿಯರಿಂಗ್ ಡ್ರಾಪೌಟ್ ಎಂಬುದು ಅವರು ತಮ್ಮ ವಿವರದಲ್ಲಿ ನಮೂದಿಸಿರುವ ಉನ್ನತ ಶಿಕ್ಷಣ!  ಆದರೆ,  ಸಂಪರ್ಕ, ಪತ್ರಿಕಾ ಸಂಪಾದನೆ, ಡಿ.ಟಿ.ಪಿ ಇಂದ ಮೊದಲ್ಗೊಂಡು ಮುದ್ರಣ ಮಾಧ್ಯಮದ ಎಲ್ಲ ಸ್ತರಗಳು,  ಟಿ.ವಿ., ಸಾಂಸ್ಥಿಕ ಸಂವಹನ, ಅಂತರ್ಜಾಲ, ಕಂಪ್ಯೂಟರ್, ಮುಕ್ತಜ್ಞಾನ, ಬರವಣಿಗೆ, ರಾಸಾಯನಿಕಗಳು,  ಹೀಗೆ ಅವರು ಕಲಿತ, ಕಲಿಸಿದ, ಅನುಭಾವಿಸಿದ ಕ್ಷೇತ್ರಗಳ ವಿಶ್ವ ಅನಂತವೆನಿಸುವಂತದ್ದು.    

ವಿದ್ಯಾರ್ಥಿ ಪರಿಷತ್ತಿನಲ್ಲಿ  ‘ವಿದ್ಯಾರ್ಥಿ ಪಥ’ ಮಾಸಪತ್ರಿಕೆ ನಡೆಸಿದ  ಬೇಳೂರು ಸುದರ್ಶನ  ಅವರು, ಕೊಳೆ ನೀರನ್ನು ವಿವಿಧ ರಾಸಾಯನಿಕ ಮತ್ತು ಭೌತಿಕ ಕ್ರಿಯೆಗಳ ಮೂಲಕ ಶುದ್ಧೀಕರಿಸುವ ತಂತ್ರಜ್ಞನಾಗಿ, ಟಿ ವಿ ಮಾರುವ ಹುಡುಗನಾಗಿ ಹೀಗೆ ಹಲವು ರೀತಿಯಲ್ಲಿ ಕೆಲಸಮಾಡಿ, 1991ರಲ್ಲಿ ಶಿರಸಿಯಲ್ಲಿ ‘ಧ್ಯೇಯನಿಷ್ಠ ಪತ್ರಕರ್ತ’ ಎಂಬ ಪತ್ರಿಕೆಯಲ್ಲಿ ತಮ್ಮ ಪತ್ರಿಕಾ ವೃತ್ತಿಯನ್ನು ಪ್ರಾರಂಭಿಸಿದರು.  ಅಸೀಮಾ, ಹೊಸ ದಿಗಂತ, ವಿಕ್ರಮ, ಮಿತ್ರಮಾಧ್ಯಮ, ವಿಜಯ ಕರ್ನಾಟಕ ಮುಂತಾದೆಡೆಗಳಲ್ಲಿ ಅವರ ಪತ್ರಿಕಾ ಸಂಪಾದನೆ ವೃತ್ತಿ ನಡೆಯಿತು.  ಟಿ.ವಿ. ಚಾನೆಲ್, ಬ್ಯಾಂಕ್ ಮತ್ತು ಕೈಗಾರಿಕಾ  ಉದ್ಯಮಗಳಲ್ಲಿ ಕೂಡಾ ಅವರ ಸೇವೆ ಸಂದಿತು. 

ಕನ್ನಡದ ಅತಿದೊಡ್ಡ ಅಂತರಜಾಲ ಜ್ನಾನಕೋಶವಾದ ‘ಕಣಜ’ದ ಅಭಿವೃದ್ಧಿಯಲ್ಲಿ ಬೇಳೂರು ಸುದರ್ಶನರ  ಪಾತ್ರ  ಪ್ರಮುಖವಾದದ್ದು.   2011ರ ಒಂದೇ  ವರ್ಷದಲ್ಲೇ  ‘ಕಣಜ’ವನ್ನು ಬೃಹತ್ತಾಗಿ ಬೆಳೆಸಿದ್ದು ಒಂದು ರಾಷ್ಟ್ರೀಯ ದಾಖಲೆಯಾಗಿದೆ.  ಕನ್ನಡದಲ್ಲಿ ಬ್ಲಾಗಿಂಗ್ ಆರಂಭಿಸಿದ ಪ್ರಥಮ ಪೀಳಿಗೆಯ ಪತ್ರಕರ್ತರಾದ ಬೇಳೂರು ಸುದರ್ಶನರು  ಅಂತರಜಾಲದಲ್ಲಿ ಕನ್ನಡದಲ್ಲೇ ವ್ಯವಹರಿಸುವ ಅಭಿಯಾನಕ್ಕೆ ಇಂಬುಕೊಟ್ಟ ಪ್ರಮುಖರಲ್ಲೊಬ್ಬರಾಗಿ ಸಹಾ  ಗುರುತಿಸಲ್ಪಡುತ್ತಾರೆ.  ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾಗಿ  ಇಂಟರ್ನೆಟ್, ಹಾರ್ಡ್ವೇರ್ ಮತ್ತು  ಕಂಪ್ಯೂಟರ್  ವಿಷಯಗಳ ಪುಸ್ತಕ ರಚನೆ, ತಾಂತ್ರಿಕ ಬರವಣಿಗೆ ಪುಸ್ತಕ ರಚನೆ, ಕನ್ನಡ ಪತ್ರಿಕೋದ್ಯಮಕ್ಕಾಗಿ 500ಕ್ಕೂ ಹೆಚು ಯುವ ಪತ್ರಕರ್ತರಿಗೆ  ತರಬೇತಿ, ಹಲವಾರು ಸಾಮಾಜಿಕ ಶೈಕ್ಷಣಿಕ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಮಾಧ್ಯಮ ಮತ್ತು ತಂತ್ರಜ್ಞಾನಗಳ ಸಲಹೆಗಾರ ಹೀಗೆ ಅವರ ಕೊಡುಗೆ ಸಲ್ಲುತ್ತಿದೆ.  ಪ್ರಸಕ್ತದಲ್ಲಿ ಅವರು ಭಾರತ ಸರ್ಕಾರದ ಸಕಲ ಭಾರತೀಯ ಭಾಷೆಗಳ ಬೃಹತ್  ಮುಕ್ತಜ್ಞಾನ ಅಂತರಜಾಲ ತಾಣವಾದ ‘ಭಾರತವಾಣಿ’ಯ (bharatvani.in) ಪ್ರಮುಖ ಸಲಹೆಗಾರರಲ್ಲೊಬ್ಬರಾಗಿ ಬಿರುಸಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ.   

ಆರುನೂರಕ್ಕೂ ಹೆಚ್ಚಿನ  ಪತ್ರಿಕಾ ಲೇಖನಗಳು,  ‘ಉರಿಯ ಸಿರಿ’ ಜೈವಿಕ ಇಂಧನ ಕುರಿತಾದ ಕೃತಿ, ‘ವರ್ತಮಾನ ಬಿಸಿಲು’ ಕವನ ಸಂಕಲನ, ರಾಸಾಯನಿಕಗಳ ಕುರಿತಾದ ‘ನಾನೇಕೆ ವಿಷಮಯವಾಗಬೇಕು’, ಅನುವಾದಗಳಾದ ‘ರಜನೀಕಾಂತ್’ ಒಂದು ಖಚಿತ ಜೀವನಚರಿತ್ರೆ, ಜೆ.ಡಿ. ದೇಶಮುಖರ ಭಾಷಣಗಳು, ‘ಹುಲ್ಲಿನ ಸಾರು’ ಚೀನೀ ಲೇಖಕನ ಆತ್ಮಕಥೆ, ‘ಹಿಮದೊಡಲ ತಳಮಳ’ ಟಿಬೆಟಿಯನ್ ಭಿಕ್ಷುವಿನ ಸೆರೆಮನೆಯ ಕಥನ, ‘ಸ್ಕಲ್ ಮಂತ್ರ’ ಚೀನೀ ಟಿಬೆಟನ್ ರೋಚಕ ಕಾದಂಬರಿ, ಸರಸ್ವತೀ ನದಿಯಿಂದ ಸಿಂಧೂ ಲಿಪಿಯವರೆಗೆ ಮುಂತಾದವು ಬೇಳೂರು ಸುದರ್ಶನರ ಲೇಖನಿಯಿಂದ ಮೂಡಿಬಂದಂತಹ ಇತರ ಕುಸುಮಗಳು.  ‘ಉರಿಯ ಸಿರಿ’ ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ವಿಜ್ಞಾನ ಲೇಖಕ ಪುರಸ್ಕಾರ ಅವರಿಗೆ ಸಂದಿದೆ.  ಈ ಹಿಂದೆ ಅವರಿಗೆ ಇವರಿಗೆ ಬಾವೂರಾವ್ ದೇವರಸ್ ಟ್ರಸ್ಟಿನ ‘ರಾಷ್ಟ್ರೀಯ ಯುವ ಬರಹಗಾರ ಪುರಸ್ಕಾರ’ವೂ ಸಂದಿತ್ತು.   

ಬಿಡುವಿಲ್ಲದ ವೃತ್ತಿ, ಹವ್ಯಾಸಗಳ ನಡುವೆ ಸಮಾಜಸೇವೆಯಲ್ಲೂ ತಮ್ಮನ್ನು  ತೊಡಗಿಸಿಕೊಂಡಿರುವ  ಬೇಳೂರು ಸುದರ್ಶನರು  ತಮ್ಮ ‘ಮಿತ್ರ ಮಾಧ್ಯಮ’ ಟ್ರಸ್ಟ್ ಮೂಲಕ ಅನೇಕ ಜನಪರ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ.  ಹೀಗೆ ಸದಾಕ್ರಿಯಾಶೀಲರಾಗಿದ್ದರೂ ಹಸನ್ಮುಖಿ ಆತ್ಮೀಯ ವ್ಯಕ್ತಿತ್ವದ ಬೇಳೂರು ಸುದರ್ಶನರಿಗೆ  ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Tag: Beluru Sudarshana, Belur Sudarshan





ಕಾಮೆಂಟ್‌ಗಳಿಲ್ಲ: