ಶುಕ್ರವಾರ, ಸೆಪ್ಟೆಂಬರ್ 8, 2017

ಆರ್. ಎನ್. ಸುದರ್ಶನ್


ಬಹುಮುಖಿ ಪ್ರತಿಭಾವಂತ ಕಲಾವಿದ ಅರ್. ಎನ್. ಸುದರ್ಶನ್  ಇನ್ನಿಲ್ಲ

ಚಲನಚಿತ್ರರಂಗದ  ಬಹುಮುಖಿ ಪ್ರತಿಭಾವಂತ  ಕಲಾವಿದ  ಆರ್. ಎನ್. ಸುದರ್ಶನ್ ಸೆಪ್ಟೆಂಬರ್ 8, 2017ರಂದು  ನಿಧನರಾಗಿದ್ದಾರೆ.

ಆರ್. ಎನ್. ಸುದರ್ಶನ್ ಚಲನಚಿತ್ರ ಕಲಾವಿದರಾಗಿ  ಹಲವಾರು ನಿಟ್ಟಿನಲ್ಲಿ ನೆನಪಾಗುತ್ತಾರೆ.  ಮೊದಲ ನೆನಪು  ‘ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು’ ಎಂಬ ಭವ್ಯ ಗೀತೆಯಲ್ಲಿ ಮುದ್ದುಮೊಗದ ರಾಜಕುಮಾರನಾಗಿ ಆತ ಪುಟಿಪುಟಿದು ಬರುವ ರೀತಿ.   ಇಂದಿಗೂ  ಆ ಹಾಡನ್ನು  ಗಮನಿಸಿದಾಗಲೆಲ್ಲಾ    ಇವರ  ಕಳೆ ಆ ಗಾನದ ಕಳೆಯೊಂದಿಗೆ  ಸಂಯೋಗ ಹೊಂದಿರುವರ ರೀತಿ ಇನ್ನಿಲ್ಲದಂತೆ ಆಕರ್ಷಿಸುತ್ತದೆ.  ಪ್ರಮುಖ ನಾಯಕ ನಟರಾಗಷ್ಟೇ ಅಲ್ಲದೆ ಅಂದಿನ ಪ್ರಸಿದ್ಧರಾದ ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ ಕುಮಾರ್  ಮುಂತಾದವರೊಂದಿಗೆ ಸಹಾ ಸುದರ್ಶನರ ಮುದ್ದು ಮೊಗ ರಾರಾಜಿಸುತ್ತಿತ್ತು.

ಹಲವಾರು ಚಿತ್ರಗಳಲ್ಲಿ ಸುದರ್ಶನ್ ಅವರು ತಮ್ಮ ಪತ್ನಿ ಶೈಲಶ್ರೀ ಅವರೊಂದಿಗೆ ನಟಿಸಿದ್ದು, ಅವುಗಳಲ್ಲಿ  ‘ನಗುವ ಹೂವು’ ಅಂದಿನ ದಿನಗಳಲ್ಲಿ ಪ್ರಶಸ್ತಿ ವಿಜೇತ ಚಿತ್ರವಾಗಿ ನನ್ನ  ನೆನಪಿನಲ್ಲಿದೆ.     ಅದೇ ಚಿತ್ರದಲ್ಲಿ ಮೊದಲ ಬಾರಿಗೆ  ‘ಇರಬೇಕು, ಇರಬೇಕು ಅರಿಯದ ಕಣ್ಗಳ ತರಹ’ ಎಂಬ ಗೀತೆಯನ್ನು ಅವರು ಹಾಡಿದ್ದರು.  ಸುಶ್ರಾವ್ಯ ಕಂಠವಿದ್ದ ಅವರು ಹೆಚ್ಚಿಗೆ ಯಾಕೆ ಹಾಡಲಿಲ್ಲ ಎಂಬ ಕುತೂಹಲ ಇಂದೂ ನನ್ನನ್ನು ಕಾಡುತ್ತದೆ.  ಬಹುಃಶ ಅವರಿಗೆ ಅಭಿನಯದಲ್ಲಿ ಹೆಚ್ಚು ಆಸಕ್ತಿ ಇದ್ದ ಕಾರಣ, ಅಂದಿನ ಸೀಮಿತ ಮಾರುಕಟ್ಟೆಯಿದ್ದ ಚಲನಚಿತ್ರ ರಂಗದಲ್ಲಿ  ಎರಡು ದೋಣಿಗಳಲ್ಲಿ ಕಾಲಿಡಲು ಅವರಿಗೆ    ಆಸಕ್ತಿಯಿರಲಿಲ್ಲ ಎಂಬುದು ಪ್ರಮುಖ ಕಾರಣವಿದ್ದೀತು.  ಪುಟ್ಟಣ್ಣ ಕಣಗಾಲ್ ಮತ್ತು ವಿಜಯಭಾಸ್ಕರ್ ಜೋಡಿ ಇವರಿಂದ  ಶುಭಮಂಗಳದಲ್ಲಿ   “ಹೊವೊಂದು ಬಳಿ ಬಂದು ತಾಕಿತು ಎನ್ನೆದೆಯ”  ಎಂದು ಹಾಡಿಸಿದ ಗೀತೆ ಹೂವಿನ ಸ್ಪರ್ಶದಂತೆಯೇ  ಸುಕೋಮಲವಾದಂತದ್ದು.  ಈ ಗೀತೆಯ ನಂತರ ಕೆಲವು ವರ್ಷಗಳ ಕಾಲ ಅವರು ಚಲನಚಿತ್ರದಲ್ಲಿ ಅಷ್ಟೊಂದು  ತೊಡಗಿಕೊಂಡಂತೆ ಕಾಣುವುದಿಲ್ಲವಾದರೂ ಸಹಾ, ಯಾಕೆ ಅವರ ಸುಶ್ರಾವ್ಯ ಕಂಠದಿಂದ  ಹೆಚ್ಚಿನ ಗೀತೆಗಳು ಬರಲಿಲ್ಲ ಎಂಬುದು ಮತ್ತೊಂದು ಅಚ್ಚರಿಯ ವಿಷಯ.

ಇವೆಲ್ಲಕ್ಕಿಂತ  ಹೆಚ್ಚು ಅಚ್ಚರಿಯ ವಿಷಯವೆಂದರೆ,  ಅತ್ಯಂತ ಸುಕೋಮಲ ಮೊಗದ ನಟರಾಗಿ  ಕಂಡಿದ್ದ ಸುದರ್ಶನ್  ಆಜಾನುಬಾಹುವಾದ  ಖಳನಟರಾಗಿ ಪ್ರಖ್ಯಾತಿ ಪಡೆದದ್ದು.  ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಹೀಗೆ ಎಲ್ಲ ಭಾಷೆಗಳಲ್ಲಿ ಅವರು  ಖಳನಟರಾಗಿ ಅಪಾರ ಯಶಸ್ಸು ಕಂಡರು.  ಇದು ಅವರಿಗಿದ್ದ ಬಹುಮುಖಿ ಸಾಧ್ಯತೆಗಳು ಮತ್ತು  ಎಂದೂ ಸುಮ್ಮನಿರಲು ಬಯಸದ, ಒಂದೇ ರೀತಿಯ ಅವಕಾಶಗಳಿಗೆ ಕಾದು ಕೂರದ  ಅವರ  ಮನೋಧರ್ಮವನ್ನು ಯಶಸ್ವಿಯಾಗಿ ಪ್ರತಿಬಿಂಬಿಸುತ್ತದೆ.  ಅವರು ಸುಮಾರು 250ಕ್ಕೂ ಚಿತ್ರಗಳಲ್ಲಿ ನಟಿಸಿ, ಕೆಲವು ನಿರ್ಮಾಣದಲ್ಲೂ ತೊಡಗಿ, ಹಾಡಿ, ಕಿರುತೆರೆಯಲ್ಲೂ ನಟಿಸಿದ್ದರು.  ಚಲನಚಿತ್ರರಂಗದಲ್ಲಿ ಅವರು ಯಾವುದೇ ಖಳ ಪಾತ್ರವಹಿಸಿದ್ದರೂ, ಇಂದಿನ ದಿನದಲ್ಲೂ ಅವರ ಮುಖದಲ್ಲಿದ್ದ ಸಾತ್ವಿಕ ಸಹಜ ನಗುವ ಕಳೆ,  ನಮ್ಮ ಮನಗಳಲ್ಲಿ ಮಾಸದಂತದ್ದು. 

ಕನ್ನಡದಲ್ಲಿ ಮಾತ್ರವಲ್ಲದೆ ಭಾರತೀಯ ಚಲನಚಿತ್ರರಂಗ ಮತ್ತು ರಂಗಭೂಮಿಯ ಮಹಾನ್ ಸಾಧಕರಾದ ಆರ್. ನಾಗೇಂದ್ರರಾಯರ ಪುತ್ರರಾದ  ಆರ್. ಎನ್. ಸುದರ್ಶನ್ ಜನಿಸಿದ್ದು ಮೇ 2, 1939ರಂದು.  ನಾಗೇಂದ್ರರಾಯರಂತೆಯೇ ಅವರ ಪುತ್ರರಾದ ದಿವಂಗತ  ಆರ್. ಎನ್. ಜಯಗೋಪಾಲ್, ಅರ್. ಎನ್. ಕೃಷ್ಣಪ್ರಸಾದ್ ಮತ್ತು ಆರ್. ಎನ್. ಸುದರ್ಶನ್ ಮೂವರೂ ಬಹುಮುಖಿ ಪ್ರತಿಭಾವಂತರು.  ಇವರೆಲ್ಲರೂ ಕಣ್ಮರೆಯಾಗಿರುವುದು ನಮ್ಮ ಕಲಾರಂಗದ ಶ್ರೇಷ್ಠ ಕೊಂಡಿಯೊಂದು ಕಳಚಿದಂತಾಗಿದೆ. 

ಹಿರಿಯರು - ಸಾಧಕರು ಹೋದಾಗ ಅಯ್ಯೋ ಹೋಗಿಬಿಟ್ಟರೆ ಅನಿಸುತ್ತೆ.  ಅವರಿದ್ದಾಗ ನಾವು ಎಷ್ಟು ಹೊತ್ತು ಅವರನ್ನು  ನೆನೆಸುತ್ತಿದ್ದೆವು ಅಂತಲೂ ಅನಿಸುತ್ತದೆ.  ಹಿರಿಯ ವಯಸ್ಸಲ್ಲಿ ದೇಹ ಜರ್ಜರವಾಗುತ್ತಿದ್ದಂತೆ ಹಲವು  ಕಾಯಿಲೆಗಳು ಮುತ್ತಿ ಕಷ್ಟಪಡುವುದಕ್ಕಿಂತ  ಹಸನಾಗಿ ಹೋಗುವುದೇ ಮೇಲು ಎಂಬುದು ಸತ್ಯ.  ಆದರೆ ಕಳೆದುಕೊಂಡವರಿಗೆ  ಹೀಗೆ ಹೇಳಲಾಗದು.  ಅವರಿಗೆ ಸಹಿಸುವ ಶಕ್ತಿ ಬರಲಿ.  ಕಲೆಯ ಹಿರಿತನವನ್ನು  ಕಾಣುವ  ಕಣ್ಣು  ಎಂದೂ ನಮ್ಮಲ್ಲಿ ಕುರುಡಾಗದಿರಲಿ.

Tag: R.N. Sudarshan

ಕಾಮೆಂಟ್‌ಗಳಿಲ್ಲ: