ಸೋಮವಾರ, ಸೆಪ್ಟೆಂಬರ್ 18, 2017

ಸ್ಯಾಮ್ಯುಯಲ್ ಜಾನ್ಸನ್

ಸ್ಯಾಮ್ಯುಯಲ್ ಜಾನ್ಸನ್ 
ಇಂದು, ಇಂಗ್ಲಿಷ್ ಸಾಹಿತ್ಯಕ್ಕೆ ಮಹಾನ್ ಕೊಡುಗೆ ನೀಡಿದ ಕವಿ, ವಿಮರ್ಶಕ ಪ್ರಬಂಧಕಾರ, ನಿಘಂಟುಕಾರ ಹಾಗೂ ಮೇಧಾವಿ ಮಾತುಗಾರ ಸ್ಯಾಮ್ಯುಯಲ್ ಜಾನ್ಸನ್ ಜನಿಸಿದ ದಿನ.  ಇವರು ಸೆಪ್ಟೆಂಬರ್ 18, 1709 ವರ್ಷದಲ್ಲಿ  ಸ್ಟಾಫರ್ಡ್‍ಷೈರಿನ ಲಿಚ್ ಫೀಲ್ಡಿನಲ್ಲಿ ಜನಿಸಿದರು.   
ಸ್ಯಾಮ್ಯುಯಲ್ ಜಾನ್ಸನ್ 1717ರಲ್ಲಿ ಈತ ಲಿಚ್‍ಫೀಲ್ಡಿನಲ್ಲಿ ವ್ಯಾಕರಣ  ಪಾಠಶಾಲೆಗೆ  ಸೇರಿ, ಅಲ್ಲಿ ಹಮ್‍ಫ್ರೀ ಹಾಕಿನ್ಸ್ ಮಾರ್ಗದರ್ಶನದಲ್ಲಿ  ಲ್ಯಾಟಿನ್ ಭಾಷೆ ಕಲಿತರು. ಮುಂದೆ 1728ರಲ್ಲಿ ಆಕ್ಸ’ಫರ್ಡಿನ ಪೆಂಬ್ರೋಕ್ ಕಾಲೇಜು ಸೇರಿದರಾದರೂ, ಬಡತನದಿಂದಾಗಿ ಓದು ಮುಂದುವರೆಸಲಾಗಲಿಲ್ಲ.  ಅದೇ  ವರ್ಷ ಇವರು ತಂದೆಯನ್ನು ಕಳೆದುಕೊಂಡರು. ಮುಂದಿನ ಮೂವತ್ತು ವರ್ಷಗಳ ಕಾಲ  ಬಡತನದೊಡನೆ ದಿಟ್ಟ ಹೋರಾಟ ನಡೆಸಿದ ಇವರು ತಮ್ಮ  ಕೊಳಕು ಉಡುಪು, ವಿಚಿತ್ರ ವರ್ತನೆಗಳಿಂದಾಗಿ  ಜನರ ಅಪಹಾಸ್ಯ ತಿರಸ್ಕಾರಗಳಿಗೆ ಗುರಿಯಾಗಿ ನೊಂದರು.   
ಲಿಚ್‍ಫೀಲ್ಡಿನಲ್ಲಿ  ಜೀವನೋಪಾಯ ಕಾಣದೆ  ಲೀಸ್ಟರ್‍ಷೈರಿನ  ಶಾಲೆಯೊಂದರಲ್ಲಿ ಸಹಾಯಕ ಉಪಾಧ್ಯಾಯ ಹುದ್ಧೆಗೆ ಸೇರಿದ ಸ್ಯಾಮ್ಯುಯಲ್ ಜಾನ್ಸನ್ ಮುಂದೆ  ಬರ್ಮಿಂಗ್‍ಹ್ಯಾಮಿಗೆ ತೆರಳಿ ಅಲ್ಲಿ ಅಷ್ಟಿಷ್ಟು ಸಾಹಿತ್ಯ ಸಂಬಂಧಿತ  ಲೇಖನಗಳನ್ನು ಬರೆದರಲ್ಲದೆ , ಅಬಿಸೀನಿಯ ಕುರಿತ ಒಂದು ಲ್ಯಾಟಿನ್ ಗ್ರಂಥವನ್ನು ಅನುವಾದಿಸಿದರು.  ಪೊಲೀಟಿಯನ್ ಕವಿಯ ಕವನಗಳನ್ನು ವ್ಯಾಖ್ಯಾನದೊಡನೆ ಪುಸ್ತಕರೂಪದಲ್ಲಿ ಪ್ರಕಟಿಸುವ ಇರಾದೆಯಿತ್ತಾದರೂ ನಿರೀಕ್ಷಿಸಿದ ಚಂದಾಹಣ ಬರಲಿಲ್ಲವಾಗಿ ಸಾಧ್ಯವಾಗಲಿಲ್ಲ. ಅಲೆಮಾರಿತನದ, ಶುದ್ಧ ಕಾರ್ಪಣ್ಯದ ಜೀವನವನ್ನು ನಡೆಸುತ್ತಿದ್ದಾಗಲೇ ತಮಗಿಂತ ವಯಸ್ಸಿನಲ್ಲಿ 20 ವರ್ಷ ಹಿರಿಯಳಾದ ಎಲಿಜೆಬೆತ್ ಪೋರ್ಟರ್ ಎಂಬ ವಿಧವೆಯನ್ನು 1735ರಲ್ಲಿ ವಿವಾಹವಾದರು.  ಪತ್ನಿಯ ಬೆಂಬಲದೊಂದಿಗೆ  ವಸತಿ ಮತ್ತು ಊಟದ ವ್ಯವಸ್ಥೆಯುಳ್ಳ ಹೊಸ ಶಾಲೆಯನ್ನು ಪ್ರಾರಂಭಿಸಿದರು. ಆ ಪ್ರಯೋಗವೂ ಯಶಸ್ವಿಯಾಗದೆ ಶಾಲೆಯನ್ನು ಮುಚ್ಚಬೇಕಾಯಿತು. 
ಹೀಗೆ ಯಾವ ವೃತ್ತಿಯಲ್ಲೂ ಸರಿಯಾಗಿ ನೆಲೆ ಸಿಗದ ಜಾನ್‍ಸನ್ ತಮ್ಮ ಇಪ್ಪತ್ತೆಂಟನೆಯ ವಯಸ್ಸಿನಲ್ಲಿ ಲಂಡನ್ನಿಗೆ ತೆರಳಿದರು. ಒಂದು ವರ್ಷವಾದ  ಮೇಲೆ ಪತ್ರಿಕಾ ವರದಿಗಾರನಾಗಿ ಕೆಲಸವೊಂದು ದೊರಕಿತು. ‘ಜಂಟಲ್‍ಮನ್ಸ್ ಮ್ಯಾಗಜೈನ್’ ಪತ್ರಿಕೆಯ  ಸೆನೇಟ್ ಆಫ್ ಲಿಲ್ಲಿಪುಟ್ ಎಂಬ ವಿಭಾಗದಲ್ಲಿ ಜಾನ್‍ಸನ್ ಕೊಡುತ್ತಿದ್ದ ವರದಿಗಳು ತಮ್ಮ ವಿಶಿಷ್ಟ ಶೈಲಿಯಿಂದಾಗಿ ಬಹು ಜನಪ್ರಿಯವಾಗಿ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಿದವು. ತನ್ನ ಉತ್ಪ್ರೇಕ್ಷಿತ ವರದಿಗಳನ್ನು ಜನ ಸತ್ಯವೆಂದೇ ನಂಬುತ್ತಿರುವರೆಂಬ ವಿಷಯ ತಿಳಿದಾಗ ಜಾನ್‍ಸನ್ ಪತ್ರಿಕಾ ಬರೆಹವನ್ನು ನಿಲ್ಲಿಸಿಬಿಟ್ಟರು. 
ಸ್ಯಾಮ್ಯುಯಲ್ ಜಾನ್ಸನ್ ಅವರ   ಲಂಡನ್, ದಿ ವ್ಯಾನಿಟಿ ಆಫ್ ಹ್ಯೂಮನ್ ವಿಷಸ್  ಎಂಬೆರಡು ಕವನಗಳು ಲ್ಯಾಟಿನ್ ಕವನಗಳ ಅನುಕರಣಗಳು. ಇವರ  ಲೈಫ್ ಆಫ್ ಸ್ಯಾವೇಜ್ (1744)  ಒಂದು ಅಪೂರ್ವ ಕೃತಿ. ಲಂಡನ್ನಿನ ಗ್ರಬ್ ರಸ್ತೆಯಲ್ಲಿ ವಾಸಮಾಡುತ್ತ ಬಡತನದಲ್ಲಿ ತನ್ನ ಬಾಳನ್ನು ನೂಕುತ್ತಿದ್ದ ದಿನಗಳಲ್ಲಿ ಜಾನ್ಸನ್ನರಿಗೆ ದೊರೆತ ಸ್ನೇಹಿತ ರಿಚರ್ಡ್ ಸ್ಯಾವೇಜನ ಜೀವನಚರಿತ್ರೆ ಇಲ್ಲಿದೆ.  ‘ಡಿಕ್ಷನರಿ ಆಫ್ ದಿ ಇಂಗ್ಲಿಷ್ ಲ್ಯಾಂಗ್ವೇಜ್’ ಎಂಬ ಹೆಸರಿನಿಂದ 1755ರಲ್ಲಿ ಪ್ರಕಟವಾದ ಇಂಗ್ಲಿಷ್ ಜಾನ್‍ಸನ್ನರ ಮತ್ತೊಂದು ಅಮೋಘಕೃತಿ. ನ್ಯಾತನಿಯಲ್ ಬೇಯ್ ಲಿ ರಚಿಸಿದ ಯೂನಿವರ್ಸಲ್ ಎಟಿಮೋಲಾಜಿಕಲ್ ಇಂಗ್ಲಿಷ್ ಡಿಕ್ಷನರಿ 1721ರಲ್ಲಿ ಪ್ರಕಟವಾಗಿತ್ತು.  ಆದರೆ ಜಾನ್‍ಸನ್ ತಮ್ಮ ಕೃತಿಯಲ್ಲಿ ಇಂಗ್ಲಿಷ್ ಭಾಷೆಯನ್ನು ಒಂದು ನೆಲೆಗೆ ತರಲು, ಇಂಗ್ಲಿಷ್ ನುಡಿಗಟ್ಟಿನ ಅರ್ಥವನ್ನು ನಿಷ್ಕೃಷ್ಟವಾಗಿ ಗೊತ್ತುಮಾಡಲು, ಅದರ ಶುದ್ಧತೆಯನ್ನು ರಕ್ಷಿಸಲು ಮೊದಲ ಬಾರಿಗೆ ಕೈಗೊಂಡ ಸಾಹಸವನ್ನು ಕಾಣಬಹುದು. ಫ್ರೆಂಚ್ ಪರಿಷತ್ತಿನ ನಲವತ್ತು ವಿದ್ವಾಂಸರು ನಲವತ್ತು ವರ್ಷಗಳಲ್ಲಿ ಸಾಧಿಸಿದ ಕಾರ್ಯವನ್ನು ಜಾನ್‍ಸನ್ ಒಬ್ಬರೇ ಸಾಧಿಸಿದರು.  2,300 ಪುಟಗಳಲ್ಲಿ 40,000 ಪದಗಳನ್ನು ಒಳಗೊಂಡ ಈ ನಿಘಂಟು ಇಂಗ್ಲಿಷ್ ಸಾಹಿತ್ಯ ಚರಿತ್ರೆಯಲ್ಲಿ ಒಂದು ಮೈಲಿಗಲ್ಲಾಯಿತು; ಮುಂದಿನ ಅನೇಕ ಪರಿಷ್ಕರಣೆಗಳಿಗೆ ಬುನಾದಿಯಾಯಿತು. 
ಸ್ಯಾಮ್ಯುಯಲ್ ಜಾನ್ಸನ್ ಈ ಕಾರ್ಯ ಯಶಸ್ವಿಯಾಗಿ ಪೂರೈಸಿದ್ದನ್ನು ನೋಡಿ ಸಂತೋಷಪಡುವ ಭಾಗ್ಯ ಅವರ ಬಾಳಿನ ಸ್ಫೂರ್ತಿಯ ಸೆಲೆಯಾಗಿದ್ದ ಹೆಂಡತಿ ಟೆಟ್ಟಿಗೆ ಇರಲಿಲ್ಲ.  1752ರ ವರ್ಷದ ವೇಳೆಗೆ ಆಕೆ ವಿಧಿವಶರಾಗಿದ್ದರು. ಇದು ಜಾನ್ಸನ್ನರ ಸಂತೋಷವನ್ನು ಕುಗ್ಗಿಸಿತ್ತು.  ಈ ನಿಘಂಟು ಜಾನ್ಸನ್ನರಿಗೆ ಸಾರ್ವತ್ರಿಕ ಮನ್ನಣೆ, ಕೀರ್ತಿ, ಪ್ರತಿಷ್ಠೆಗಳನ್ನು ತಂದಿತು;  ತನ್ನಲ್ಲಿ ಮುಂಚೆ ಬಡತನದ ದೆಸೆಯಿಂದ ಪದವಿ ಪಡೆಯಲಾಗದೆ ಹಿಂದಿರುಗಿದ್ದ ಈ ವಿದ್ಯಾರ್ಥಿಯನ್ನು   ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿ  ಗೌರವಿಸಿತು. ಈ ದೆಸೆಯಿಂದ ಇವರಿಗೆ  ವರ್ಷಕ್ಕೆ 300 ಪೌಂಡು ವಿಶ್ರಾಂತಿ ವೇತನವೂ ಬಂದಿದ್ದರಿಂದ ಆರ್ಥಿಕಸ್ಥಿತಿ ಸುಧಾರಿಸಿತು. 
ನಿಘಂಟುವಿನ ಕೆಲಸ ಮಾಡುತ್ತಿದ್ದ ಕಾಲದಲ್ಲಿಯೇ ಜಾನ್‍ಸನ್ ರ್ಯಾಂಬ್ಲರ್ ಎಂಬ ಪತ್ರಿಕೆಯೊಂದನ್ನು ಹೊರಡಿಸಿ ಅದರಲ್ಲಿ ಪ್ರಬಂಧಗಳನ್ನು ಬರೆಯತೊಡಗಿದರು. ವಾರಕ್ಕೆ ಎರಡು ಸಂಚಿಕೆಗಳಂತೆ ಪ್ರಕಟವಾಗುತ್ತಿದ್ದ ಈ ಪತ್ರಿಕೆ ಎರಡು ವರ್ಷಗಳು ನಡೆದು 1752ರಲ್ಲಿ ನಿಂತುಹೋಯಿತು. ಅನಂತರ ಜಾನ್‍ಸನ್ 1758-60ರ ಅವಧಿಯಲ್ಲಿ ಐಡ್ಲರ್ ಎಂಬ ಪತ್ರಿಕೆಯನ್ನು ಹೊರತಂದು ನಡೆಸಿದರು. 90ವರ್ಷ ವಯಸ್ಸಾಗಿದ್ದ ತನ್ನ ತಾಯಿ ಲಿಚ್‍ಫೀಲ್ಡಿನಲ್ಲಿ ಮೃತಿಹೊಂದಿದಾಗ, ಜಾನ್ ಸನ್ ರ್ಯಾಸಿಲಸ್ ಎಂಬ ಕಾದಂಬರಿಯನ್ನು ಅವಳ ಅಂತ್ಯಸಂಸ್ಕಾರದ ಖರ್ಚಿಗಾಗಿ ಬರೆದರು. ಇದರಿಂದ ಬಂದ ಅಳಿದುಳಿದ  ಹಣದಿಂದ ತಾಯಿ ಮಾಡಿದ್ದ ಚಿಲ್ಲರೆ ಸಾಲಗಳನ್ನೂ ತೀರಿಸಿದರು. 
1745ರಲ್ಲೇ  ಜಾನ್ಸನ್ ಷೇಕ್ ಸ್ಪಿಯರ್ ಕೃತಿಗಳನ್ನು ಸಂಪಾದಿಸುವ ಆಶಯವನ್ನು ವ್ಯಕ್ತಪಡಿಸಿದ್ದರಾದರೂ ಈ ಯೋಜನೆ ಕೈಗೊಂಡಿದ್ದು 1756ರಲ್ಲಿ.  ಆ ಸಂಪಾದಿತ ಗ್ರಂಥ ಪ್ರಕಟಗೊಳ್ಳಲು ಇನ್ನೊಂದು ದಶಕ ಮುಗಿದು 1765ರಲ್ಲಿ ಬೆಳಕು ಕಂಡಿತು. ಇದು ಬೃಹತ್ ಪ್ರಮಾಣ ಗ್ರಂಥವೆಂದು ಹೆಸರು ಗಳಿಸಿ,  ಮುಂದಿನ ಅಸಂಖ್ಯ ಪರಿಷ್ಕರಣಗಳಿಗೆ ಅಡಿಪಾಯ ಒದಗಿಸಿತು. 
ಲಂಡನ್ನಿನ ಮೂರು ಪ್ರಖ್ಯಾತ ಪ್ರಕಾಶಕರು ಜಾನ್ಸನ್ನರನ್ನು ಐವತ್ತೆರಡು ಕವಿಗಳ ಜೀವನ ಮತ್ತು ಕಾವ್ಯಪರಿಚಯವನ್ನು ಮಾಡಿಕೊಡುವ ಗ್ರಂಥವನ್ನು ಬರೆಯುವಂತೆ ಮನವೊಪ್ಪಿಸಿದರು. ಆ ಪಟ್ಟಿಯಲ್ಲಿ ರಿಚರ್ಡ್ ಸ್ಯಾವೇಜನನ್ನು ಬಿಟ್ಟು ಉಳಿದವರ ಪೈಕಿ ಖ್ಯಾತ ಕವಿಗಳಾದ ಮಿಲ್ಟನ್, ಡ್ರೈಡನ್, ಅಡಿಸನ್, ಪೋಪ್, ಸ್ವಿಫ್ಟ್, ತಾಮಸ್ ಗ್ರೇ, ಕೌಲಿ ಮೊದಲಾದವರು ಇದ್ದರು. ಕವಿಚರಿತ್ರೆ ಇವರ ಕೃತಿಗಳಲ್ಲೆಲ್ಲ ಅತ್ಯಂತ ಜನಾದರಣೀಯವಾಯಿತು. ಇದು ಇಂಗ್ಲಿಷ್ ಸಾಹಿತ್ಯಚರಿತ್ರೆಯಲ್ಲಿ ವಿಶೇಷ ಪ್ರಾಶಸ್ತ್ಯ ಪಡೆದಿದೆ. 
ಬಾಸ್ವೆಲ್‍ನ ಪ್ರೀತಿಯ ಒತ್ತಾಯಕ್ಕೆ ಮಣಿದು ಜಾನ್ಸನ್ ತಮ್ಮ ಅರವತ್ತ ನಾಲ್ಕನೆಯ ವಯಸ್ಸಿನಲ್ಲಿ ಸ್ಕಾಟ್ಲೆಂಡ್ ಪ್ರವಾಸಕ್ಕೆ ತೆರಳಿದರು . ಆ ಪ್ರವಾಸದ ಅನುಭವಗಳನ್ನು ಕುರಿತು ಬಾಸ್ವೆಲ್ ಬರೆದ “ಜರ್ನಿ ಟು ದಿ ಹೈಬ್ರೈಡಿಸ್” ಎಂಬ ಸ್ವಾರಸ್ಯವಾದ ಪ್ರವಾಸ ಕಥನದಲ್ಲಿ ಜಾನ್‍ಸನ್ನರ  ಅಪೂರ್ವ ವ್ಯಕ್ತಿತ್ವಗಳ ಪರಿಚಯವಿದೆ. 
1763 ರಿಂದ 1783ರವರೆಗೆ ಜಾನ್ಸನ್ನರನ್ನು ತಮ್ಮ ಮನೆಯಲ್ಲಿ ಆದರದಿಂದ ಸತ್ಕರಿಸಿ ಅಭಿಮಾನದಿಂದ ನೋಡಿಕೊಂಡವರು ಶ್ರೀಮಂತ ತ್ರೇಲ್ ದಂಪತಿಗಳು.  ಜಾನ್ಸನ್ ಕೂಡ ಒಬ್ಬ ಕುರುಡಿ, ಒಬ್ಬ ನೀಗ್ರೋ ಸೇವಕ, ಒಬ್ಬ ವೈದ್ಯ, ಅಂಗವಿಕಲರು, ನಿಶ್ಯಕ್ತರು, ಬಡವರು ಮುಂತಾದ ವಿಚಿತ್ರ ಜನಗಳಿಂದ ಕೂಡಿದ ತನ್ನದೇ ಬಳಗವೊಂದಕ್ಕೆ ಆಶ್ರಯ ಕೊಟ್ಟಿದ್ದರು. 
ಜಾನ್ಸನ್ನರು ತಮ್ಮ  ಕೊನೆಯ ದಿವಸಗಳಲ್ಲಿ ಲಿಚ್‍ಫೀಲ್ಡ್, ಆಕ್ಸ್ ಫರ್ಡ್, ಬರ್ಮಿಂಗ್‍ಹ್ಯಾಮ್, ಆಷ್‍ಬರ್ನ್ ಮುಂತಾದ ಸ್ಥಳಗಳಿಗೆ ಭೇಟಿಕೊಟ್ಟು ತಮ್ಮ ಹಳೆಯ ಗೆಳೆಯರನ್ನು ನೋಡಿಕೊಂಡು ಲಂಡನ್ನಿಗೆ ಹಿಂದಿರುಗಿದರು. ಹಾಸಿಗೆ ಹಿಡಿದು ಮಲಗಿದಾಗ ಸಹ ವೈದ್ಯರೊಡನೆ ಮಾತನಾಡುವಾಗ ಷೇಕ್ ಸ್ಪಿಯರ್ ಸಾಲುಗಳನ್ನು  ಉದ್ಧರಿಸಿದರಂತೆ. ಕಡೆಯ ಗಳಿಗೆಯಲ್ಲಿ “ತಂದೆಯೇ, ನನ್ನ ತಪ್ಪುಗಳನ್ನು ಮನ್ನಿಸು; ನನಗೆ ಶಾಶ್ವತವಾದ ಸುಖವನ್ನು ಕರುಣಿಸು” ಎಂಬ ಸಾರಾಂಶದ ಇವರ  ದೇವತಾ ಪ್ರಾರ್ಥನೆ ಹೃದಯಸ್ಪರ್ಶಿಯಾಗಿದೆ .  ಡಿಸೆಂಬರ್ 13, 1784ರಲ್ಲಿ ತೀರಿಕೊಂಡ ಜಾನ್ಸನ್ನರ ಅಂತ್ಯಸಂಸ್ಕಾರ ವೆಸ್ಟ್‍ಮಿನ್‍ಸ್ಟರ್ ಅಬೆಯಲ್ಲಿ ನಡೆದು, ಇಡೀ ರಾಷ್ಟ್ರವೇ ಶ್ರದ್ಧಾಂಜಲಿಯನ್ನರ್ಪಿಸಿತು.
Tag: Samuel Jhonson


1 ಕಾಮೆಂಟ್‌:

manjunath ಹೇಳಿದರು...

ಸ್ಯಾಮ್ಯುಯಲ್ ಜಾನ್ಸನ್ ಬಗ್ಗೆ ಹೆಚ್ಚಿನ ವಿವರಗಳು ತಿಳಿದಿದ್ದು ಸಂತಸವಾಯ್ತು.