ಬುಧವಾರ, ಅಕ್ಟೋಬರ್ 4, 2017

ಚಿಟ್ಟಾಣಿ ರಾಮಚಂದ್ರ ಹೆಗಡೆ

ಮಹಾನ್ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಇನ್ನಿಲ್ಲ
ಪದ್ಮಶ್ರೀ ಪುರಸ್ಕೃತ ಮಹಾನ್ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಅಕ್ಟೋಬರ್ 3, 2017ರಂದು ಮಣಿಪಾಲದಲ್ಲಿ ನಿಧನರಾಗಿದ್ದಾರೆ. 
ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನಲ್ಲಿ ಜನವರಿ 1, 1933ರಂದು ಜನಿಸಿದ್ದರು. ಹೊಸಾಕುಳಿ ಎಂಬ ಪುಟ್ಟ ಗ್ರಾಮದ ಚಿಟ್ಟಾಣಿ ಎಂಬ ಕೇರಿಯಲ್ಲಿ ಹುಟ್ಟಿದ ರಾಮಚಂದ್ರ ಮುಂದೆ ರಂಗದಲ್ಲಿ ಬೃಹತ್ತಾಗಿ ಮಹತ್ತಾಗಿ ಬೆಳೆದಿದ್ದು ಮತ್ತೂಂದು ಯಶೋಗಾಥೆ.

ಸ್ತ್ರೀ ವೇಷ ಸಹಿತ ಯಕ್ಷಗಾನದ ಎಲ್ಲ ವೇಷವನ್ನೂ ಧರಿಸಿರುವ ಚಿಟ್ಟಾಣಿಯವರದು 84 ಸದಸ್ಯರ ಅವಿಭಕ್ತ ಕುಟುಂಬವಾಗಿತ್ತು. ಎರಡನೇ ಇಯತ್ತೆಯಲ್ಲಿ  ಓದುತ್ತಿದ್ದ ಸಮಯದಲ್ಲೇ  ತಲೆಗೇರಿದ್ದ ಯಕ್ಷಗಾನದ ಹುಚ್ಚು ಇವರನ್ನು ಶಾಲೆ ಬಿಡಿಸಿ ಬಾಳೇಗದ್ದೆ ರಾಮಕೃಷ್ಣ ಭಟ್ಟರ ಮೇಳಕ್ಕೆ ತಂದು ಸೇರಿಸಿತು. ಅಲ್ಲಿ ಚಿಟ್ಟಾಣಿ ಗೆಜ್ಜೆಕಟ್ಟಿದರು. ಯಕ್ಷಕಾಶಿ ಗುಂಡಬಾಳಾದಲ್ಲಿ ಸೂಡಿ ಬೆಳಕಿನಲ್ಲಿ ಆಟ ಕುಣಿದರು. ಏಳನೇ ವರ್ಷಕ್ಕೆ ಮೂಡ್ಕಣಿ ಮೇಳ ಸೇರಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಹದಿನಾಲ್ಕರ ವೇಳೆಗಾಗಲೇ  ಯಕ್ಷಗಾನದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡ ಹಿರಿಮೆಗೆ ಪಾತ್ರರಾಗಿದ್ದರು.   ಕೌರವ, ದುಷ್ಟಬುದ್ದಿ, ಭಸ್ಮಾಸುರ, ರುದ್ರಕೋಪ, ಕೀಚಕ, ಕರ್ಣ, ಕಂಸ, ಕಾರ್ತವೀರ್ಯ, ಭಸ್ಮಾಸುರ, ಮಾಗಧ, ಘಟೋದ್ಗಜ  ಮುಂತಾದ ಪಾತ್ರಗಳಲ್ಲಿ ಅವರ  ಜನಪ್ರಿಯತೆ ಅಪಾರವಾದದ್ದು. ಪ್ರಾರಂಭಿಕ  ವರ್ಷಗಳಲ್ಲಿ  ಸಾಮಾನ್ಯ ಕಲಾವಿದರಂತೆ ಸಣ್ಣ ಪುಟ್ಟ ವೇಷಗಳನ್ನು ಮಾಡಿಕೊಂಡಿದ್ದ ಅವರು  ಬಳಿಕ ತಮ್ಮದೇ ಆದ ವಿಶಿಷ್ಟ ನರ್ತನ, ಲಯಗಾರಿಕೆ ಮತ್ತು  ಅಭಿನಯ ಕೌಶಲಗಳಿಂದ ಏರಿದ್ದ ಎತ್ತರ ಅಸಾಮಾನ್ಯವಾದದ್ದು.
ಪದ್ಮಶ್ರೀ ಪ್ರಶಸ್ತಿಯೇ ಅಲ್ಲದೆ ರಾಜ್ಯೋತ್ಸವ ಪ್ರಶಸ್ತಿ,  ಶಿವರಾಮಕಾರಂತ ಪ್ರಶಸ್ತಿ, ಜನಪದಶ್ರೀ, ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ, ಮುಂತಾದ ಅನೇಕ ಗೌರವಗಳು ಅವರನ್ನರಸಿ ಬಂದಿದ್ದವು.  ‘ಅಭಿಮಾನಿಗಳೇ ದೇವರು, ಅವರೇ ನನಗೆ ಶ್ರೀರಕ್ಷೆ’ ಎನ್ನುತ್ತಿದ್ದ ಅವರನ್ನು ಯಕ್ಷ ಪ್ರೇಮಿಗಳು ಪ್ರೀತಿಯಿಂದ ಕಂಡಿದ್ದರು. ಚಿಟ್ಟಾಣಿ ಅವರ ಪಾತ್ರವಿದೆ ಅಂದರೆ,   ಪ್ರೇಕ್ಷಕ ವರ್ಗ  ಯಕ್ಷಗಾನ ಟೆಂಟುಗಳ ಮುಂದೆ ಟಿಕೆಟ್ ಪಡೆಯಲು ಸಾಲುಗಟ್ಟಿ ನಿಲ್ಲುತ್ತಿದ್ದ ದಿನಗಳಿದ್ದವು. ಹೀಗಾಗಿ ಚಿಟ್ಟಾಣಿ ಅಂದರೆ ’ಕಲೆಕ್ಷನ್ ಕಲಾವಿದ’ ಎಂಬ ಹೆಗ್ಗಳಿಕೆ ಎಂಬ ಪ್ರಸಿದ್ಧಿಯಿತ್ತು. ತಮ್ಮ ಹಿರಿಯ ವಯಸ್ಸಿನಲ್ಲಿಯೂ ಅಳುಕದೆ ಬಣ್ಣ ಹಚ್ಚಿ ಪಾತ್ರ ನಿಭಾಯಿಸುತ್ತಿದ್ದ ಅವರ ಉತ್ಸಾಹ ಮೇರುಮಟ್ಟದ್ದು. 
ಚಿಟ್ಟಾಣಿ ಅವರು  ಹಿರಿಯ ತಲೆಮಾರಿನ ಕಲಾವಿದರ ಪರಂಪರೆ, ಸಾಮರ್ಥ್ಯವನ್ನು ಹೀರಿ ಸ್ವಂತ ಇತಿಹಾಸವನ್ನು ನಿರ್ಮಿಸಿದವರು.  ಕೇವಲ ಎರಡನೇ ಇಯತ್ತೆ ಕಲಿತ ಚಿಟ್ಟಾಣಿ ಯಕ್ಷಗಾನ ಕ್ಷೇತ್ರಕ್ಕೆ ಕೊಟ್ಟ ಕಾಣಿಕೆ ಪಿಎಚ್‌.ಡಿ. ಅಧ್ಯಯನಕ್ಕೆ  ಅರ್ಹವಾಯಿತು. 'ಯಕ್ಷಗಾನ ಕ್ಷೇತ್ರಕ್ಕೆ ಚಿಟ್ಟಾಣಿ ರಾಮಚಂದ್ರ ಹೆಗಡೆ ಕೊಡುಗೆ' ಎಂಬ ಪ್ರಬಂಧಕ್ಕೆ ಧಾರವಾಡ ವಿವಿ ಡಾಕ್ಟರೇಟ್ ನೀಡಿದೆ. ಶುದ್ಧಾಂಗ ಜಾನಪದ ಪ್ರತಿಭೆಯಾಗಿ ರಸಿಕರಲ್ಲಿ ಪುಳಕ ಮೂಡಿಸುತ್ತಿದ್ಧ ಚಿಟ್ಟಾಣಿಯವರಿಗೆ ಜಗತ್ತಿನ ತುಂಬ ಅಭಿಮಾನಿಗಳಿದ್ದಾರೆ. ಅವರ ಆಟದ ಲಕ್ಷಾಂತರ ಸಿ.ಡಿ.ಗಳು ಪ್ರತಿವರ್ಷ ಮಾರಾಟವಾಗುತ್ತಲೇ ಇವೆ.

ಕೆಲವು ವರ್ಷದ ಹಿಂದೆ ಸಂದರ್ಶನವೊಂದರಲ್ಲಿ ಬೀಡಿ ಎಳೆಯುತ್ತ ಪತ್ನಿಯೊಂದಿಗೆ ಧಾರಾವಾಹಿ ನೋಡುತ್ತೇನೆ. ಆಟವನ್ನು ಹೇಗೆ ಬಿಡಲು ಸಾಧ್ಯವಿಲ್ಲವೋ, ಹಾಗೆಯೇ ಬೀಡಿಯನ್ನೂ ಬಿಡಲಾಗುತ್ತಿಲ್ಲ....” ಎಂದು ನುಡಿದಿದ್ದ  ಬಡಗುತಿಟ್ಟಿನ ಯಕ್ಷಗಾನ ಮಾಂತ್ರಿಕ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ನುಡಿ, ಅವರಲ್ಲಿದ್ದ  ಯಕ್ಷಗಾನದ ಬಗೆಗಿನ  ತಾದಾತ್ಮ ಎಂಥದು ಎನ್ನುವುದನ್ನು ಮನದಟ್ಟು ಮಾಡಿಕೊಡುವಂತದ್ದಾಗಿದೆ. 

ದೇಹ ಒಂದು ದಿನ ಬಿದ್ದುಹೋಗುವಂತದ್ದು.  ಚೇತನ ಅಮರ.  ಅದರಲ್ಲೂ ಚಿಟ್ಟಾಣಿ ರಾಮಚಂದ್ರ ಹೆಗಡೆ ಅಂತಹ ಮಹಾನ್ ಕಲಾವಿದರು ತೆರೆದಿಟ್ಟ ಕಲಾವಂತಿಕೆ ಎಂಬ  ದಿವ್ಯತೆ ಎಂದೂ ಅಳಿಯದಂತದ್ದು ಮತ್ತು ಪುನಃ ಪುನಃ ಹುಟ್ಟುವ ಅನೇಕ ಕಲಾಚೇತನಗಳಿಗೆ ಅಮೃತಸ್ಪರ್ಶಿಯಾದಂತದ್ದು.  ಈ ಅಮರಕಲಾ ಜೀವಂತಿಕೆಗೆ ನಮೋ ನಮಃ. 
 Tag: Chittani Ramachandra Hegde, Hegade, Yakshagana


ಕಾಮೆಂಟ್‌ಗಳಿಲ್ಲ: