ಶುಕ್ರವಾರ, ಅಕ್ಟೋಬರ್ 13, 2017

ನುಸ್ರತ್ ಫತೇ ಅಲಿ ಖಾನ್


ನುಸ್ರತ್  ಫತೇ ಅಲಿ ಖಾನ್

ಪ್ರಸಿದ್ಧ ಕವಾಲಿ ಗಾಯಕರಾದ ನುಸ್ರತ್  ಫತೇ ಅಲಿ ಖಾನ್ ಅವರು ಅಕ್ಟೋಬರ್ 13, 1948ರಂದು ಪಾಕಿಸ್ತಾನದ ಫೈಸಲಾಬಾದಿನಲ್ಲಿ  ಜನಿಸಿದರು. ಸ್ವಾತಂತ್ರ್ಯದ ಸಮಯದಲ್ಲಿ ದೇಶ ಇಬ್ಬಾಗುವ ಮೊದಲು ಇವರ ಮನೆಯವರು ಪೂರ್ವ ಪಂಜಾಬಿನ  ಜಲಂದರ್ ಪಟ್ಟಣದಲ್ಲಿ ನೆಲೆಸಿದ್ದರು. ಸೂಫಿ ಭಕ್ತಿ ಸಂಗೀತದ ಮಾದರಿಯಾದ ಕವ್ವಾಲಿ ಗಾಯನದಲ್ಲಿ ಅವರು ಹಾಡುತ್ತಿದ್ದರೆ ಕಾಲ ಸ್ಥಗಿತವಿದ್ದಂತೆನಿಸುತ್ತಿತ್ತು.  ಗಂಟೆಗಟ್ಟಲೆ ಒಂದೊಂದೇ ಹಾಡುಗಳನ್ನು ಹಾಡುವುದು ಅವರ ಜಾಯಮಾನವಾಗಿ ಹೋಗಿತ್ತು.  ಆರು ಶತಮಾನಗಳಷ್ಟು ಚರಿತ್ರೆಯುಳ್ಳ ಭಾರತೀಯ ಕವ್ವಾಲಿ ಸಂಗೀತವನ್ನು ವಿಶ್ವದೆಲ್ಲೆಡೆಯ ಸಂಗೀತಪ್ರಿಯರಿಗೆ ಕೊಂಡೊಯ್ದ ಕೀರ್ತಿ ಫತೇ ಅಲಿ ಖಾನ್ ಅವರದ್ದು.  ಹೀಗಾಗಿ ಅವರು ಷಾಹೆನ್-ಷಾ-ಕವ್ವಾಲಿ ಅಥವಾ ಕವ್ವಾಲಿ ಸಂಗೀತ ಚಕ್ರವರ್ತಿ ಎಂದು ಪ್ರಸಿದ್ಧರು.

ತಮ್ಮ ಹದಿನಾರನೆಯ ವಯಸ್ಸಿನಲ್ಲಿ ಮೊದಲ ಬಾರಿಗೆ  ಸಾರ್ವಜನಿಕ ವೇದಿಕೆಯಲ್ಲ್ಲಿ  ಹಾಡಿದ ನುಸ್ರತ್ ಫತೇ ಅಲಿ ಖಾನ್ ಅವರು 1980ರ ದಶಕದ ಪ್ರಾರಂಭದಲ್ಲೇ  ಇಂಗ್ಲೆಂಡಿನ  ಓರಿಯೆಂಟಲ್ ಸ್ಟಾರ್ ಏಜೆನ್ಸಿ ಅವರಿಂದ  ಹಾಡುಗಾರಿಕೆಗೆ  ಅಹ್ವಾನ ಪಡೆದರು.  ಯೂರೋಪ್, ಭಾರತ, ಜಪಾನ್, ಪಾಕಿಸ್ತಾನ ಮತ್ತು ಅಮೆರಿಕದ ಚಲನಚಿತ್ರಗಳು, ಧ್ವನಿ ಸುರುಳಿಗಳು  ಮತ್ತು ಆಲ್ಬಂಗಳಲ್ಲಿ ಅವರ  ಗಾನ ಮಾಧುರ್ಯ  ಪಸರಿಸುತ್ತಾ ಸಾಗಿತು. ಅವರು ಸುಮಾರು 40 ದೇಶಗಳಲ್ಲಿ ತಮ್ಮ ಸಂಗೀತ ಕಚೇರಿಗಳನ್ನು ನಡೆಸಿದ್ದರು. ಪ್ರಧಾನವಾಗಿ ಉರ್ದು ಮತ್ತು ಪಂಜಾಬಿ ಭಾಷೆಗಳಲ್ಲಿ ಹಾಡುತ್ತಿದ್ದ ಅವರು ಪರ್ಷಿಯನ್, ಬ್ರಾಜ್ ಮತ್ತು ಹಿಂದೀ ಭಾಷೆಗಳಲ್ಲೂ  ಹಾಡುತ್ತಿದ್ದರು.  ಸುದೀರ್ಘ ಅವಧಿಯವರೆಗೆ ನಿರತ ಹಾಡುತ್ತಿದ್ದ ಅವರ ಕಚೇರಿಗಳು ಕೆಲವೊಮ್ಮೆ ಹತ್ತು ಗಂಟೆಗಳ ಕಾಲದವರೆಗೂ ವ್ಯಾಪಿಸಿದ್ದಿತ್ತು.

ಪ್ರಸಿದ್ಧ ಪಾಶ್ಚಾತ್ಯ ಸಂಗೀತಗಾರ ಜೆಫ್ ಬಕ್ಲಿ ಅವರು,  ನುಸ್ರತ್ ಫತೇ ಅಲಿ ಖಾನ್ ತಮ್ಮ ಮೇಲೆ ಪ್ರಭಾವ ಬೀರಿದ ಪ್ರಮುಖ ಸಂಗೀತ ಮಾಂತ್ರಿಕ ಎಂದು ಅಭಿಪ್ರಾಯಿಸುತ್ತಾ ಫತೇ ಅಲಿ ಖಾನ್ ನನ್ನ ‘ಎಲ್ವಿಸ್’ ಎಂದು ಗೌರವ ಸೂಚಿಸುತ್ತಾರೆ.

ಫತೇ ಅಲಿ ಖಾನ್ ಅವರ ಸೂಫಿ ಭಕ್ತಿ ಗೀತೆಗಳು ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿರುವುದರ ಜೊತೆಗೆ ಅವರು ಗಝಲ್, ಜಾಸ್ ಫ್ಯೂಷನ್, ಜಾನಪದ ಮತ್ತು ಸಿನಿಮಾ  ಸಂಗೀತಕ್ಕೂ ತಮ್ಮ ಧ್ವನಿ ಎರೆದಿದ್ದಾರೆ.  ಕಿನ್ನ ಸೋಹನ್ ತೆನು, ಪಿಯಾ ರೇ ಪಿಯಾ ರೇ, ಗಮ್ ಹೈ ಯಾ ಖುಷಿ, ಮೇರಾ ಪಿಯಾ ಘರ್ ಆಯಾ, ದಮಾ ದಂ ಮಸ್ತ್ ಕಲಂದರ್ ಮುಂತಾದ ಅನೇಕ  ಗೀತಗಳು ಅವರ ನೆನಪಿನ ಸುರುಳಿಯಲ್ಲಿ ತಾನೇ ತಾನಾಗಿ ತೆರೆದುಕೊಳ್ಳುತ್ತವೆ. ಹಲವಾರು ಹಿಂದೀ ಚಿತ್ರಗಳಿಗೆ ಸಂಗೀತ ಸಂಯೋಜನೆಯನ್ನೂ ಮಾಡಿದ್ದ ಅವರ ಧ್ವನಿಯಲ್ಲಿ ಕೋಯಿ ಜಾನೆ ಕೋಯಿ ನ ಜಾನೆ, ಇಷ್ಕ್ ದಾ ರುತ್ಬಾ, ಬಹಾ ನಾ ಆನ್ಸೂ, ಇಸ್ ಶಾನ್-ಎ-ಕರಮ್ ಕ್ಯಾ ಕೆಹನಾ, ದುಲ್ಹೆ ಕ ಸೆಹ್ರಾ ಮುಂತಾದ ಅನೇಕ ಗೀತೆಗಳೂ ಸಹಾ ತೇಲಿಬಂದವು.

ಜನಪ್ರಿಯತೆಯ ತುತ್ತ ತುದಿಯಲ್ಲಿರುವಾಗಲೇ ಕೇವಲ ತಮ್ಮ 49ನೆಯ ವಯಸ್ಸಿನಲ್ಲಿ, ಆಗಸ್ಟ್ 16, 1997ರಂದು  ನುಸ್ರತ್ ಫತೇ ಅಲಿ ಖಾನ್  ಲಂಡನ್ನಿನಲ್ಲಿ ನಿಧನರಾದರು.  ಖಾನ್ ಅವರು ಎ. ಆರ್. ರೆಹಮಾನ್ ಅವರು ಸಂಯೋಜಿಸಿದ  ವಂದೇ ಮಾತರಂ ಆಲ್ಬಂನ ಗುರೂಸ್ ಆಫ್ ಪೀಸ್ ಗೀತೆಗೆ  ಕೂಡಾ ಧ್ವನಿ ನೀಡಿದ್ದರು.

 Tag: Nusrat Fateh Ali Khan

ಕಾಮೆಂಟ್‌ಗಳಿಲ್ಲ: