ಶನಿವಾರ, ನವೆಂಬರ್ 11, 2017

ಬಿ. ಎಸ್. ರಂಗ


ಮಹಾನ್ ಚಿತ್ರೋದ್ಯಮಿ ಬಿ.ಎಸ್. ರಂಗ ಜನ್ಮಶತಮಾನೋತ್ಸವ 
ಇಂದು ಭಾರತೀಯ  ಚಿತ್ರರಂಗದ ಮಹಾನ್ ನಿರ್ಮಾಪಕ, ಛಾಯಾಗ್ರಾಹಕ ಹಾಗೂ ಬಹುಮುಖಿ ಪ್ರತಿಭಾನ್ವಿತರೆನಿಸಿದ್ದ  ಕನ್ನಡಿಗ ಬಿ. ಎಸ್. ರಂಗ ಅವರ ಜನ್ಮ ಶತಮಾನೋತ್ಸವ ದಿನವಾಗಿದೆ. ಕನ್ನಡವೂ ಸೇರಿದಂತೆ  ಆರು ಭಾಷೆಗಳಲ್ಲಿ ಒಟ್ಟು 87 ಚಿತ್ರಗಳನ್ನು ನಿರ್ಮಿಸಿದ ಮಹಾನ್ ಸಾಹಸಪೂರ್ಣ ವ್ಯಕ್ತಿತ್ವ ಅವರದ್ದು.  ಬಿ. ಎಸ್. ರಂಗ ಅವರು ನವೆಂಬರ್ 11, 1917ರಂದು ಮಾಗಡಿಯಲ್ಲಿ ಜನಿಸಿದರು.
ಬಿ.ಎಸ್. ರಂಗ ಎಂದು ಖ್ಯಾತರಾದ ಬಿಂಡಿಗನವಿಲೆ ಶ್ರೀನಿವಾಸ್ ಅಯ್ಯಂಗಾರ್ ರಂಗಾಚಾರ್ ಅವರ ಪೂರ್ವಿಕರು ಮೈಸೂರಿನ ಅರಸರಾದ ಕಂಠೀರವ ನರಸಿಂಹರಾಜ ಒಡೆಯರ್ ಅವರಿಂದ ‘ದಾನಶೂರ’ ಎಂಬ ಬಿರುದನ್ನು ಪಡೆದವರು. ಅವರ ತಂದೆ ಶ್ರೀನಿವಾಸ ಅಯ್ಯಂಗಾರ್ ಮುದ್ರಣಾಲಯದ ಮಾಲೀಕರಾಗಿದ್ದರೂ ದಾನ ಧರ್ಮಗಳಿಗೆ ಹೆಸರಾಗಿದ್ದರಲ್ಲದೆ,  ಸಾಹಿತ್ಯ, ರಂಗಭೂಮಿಗಳಿಗೆ ಆಶ್ರಯದಾತರಾಗಿದ್ದರು. ಶಾಲೆಯಲ್ಲಿ ಪಾಠಗಳು ರುಚಿಸದ ರಂಗ ಅವರು ಛಾಯಾಗ್ರಹಣದ ಬಗ್ಗೆ  ಒಲವು ತೋರಿಸಿದಾಗ, ಅವರ ತಂದೆ  ಅಗತ್ಯ ಜಾಗತಿಕ ಮಟ್ಟದ ಪುಸ್ತಕಗಳನ್ನು ತರಿಸಿಕೊಟ್ಟು ಅಧ್ಯಯನಕ್ಕೆ ನೆರವಾದರು. ಜಗತ್ತಿನಲ್ಲೇ ಛಾಯಾಗ್ರಹಣಕ್ಕೆ ಪ್ರಸಿದ್ಧವಾದ ಲಂಡನ್ನಿನ ‘ರಾಯಲ್ ಫೋಟೋಗ್ರಫಿಕ್ ಸೊಸೈಟಿ’ಯಲ್ಲಿ ರಂಗ ಅವರು ತೆಗೆದ ಛಾಯಾಚಿತ್ರಗಳ ಪ್ರದರ್ಶನ ನಡೆದು ಅವರಿಗೆ ಫೆಲೋಶಿಪ್ ಕೂಡ ದೊರಕಿದಾಗ  ಅವರ ವಯಸ್ಸು ಕೇವಲ ಹದಿನೇಳು. ಈ ಮನ್ನಣೆ ಅವರಿಗೆ ಜಾಗತಿಕ ಸಂಪರ್ಕಗಳನ್ನು ಒದಗಿಸಿತು. ಭಾರತದ ಮೊದಲ ಅಟೋಮ್ಯಾಟಿಕ್ ಪ್ರೊಸೆಸಿಂಗ್ ಲ್ಯಾಬೋರೇಟರಿ ಸ್ಥಾಪಿಸಿದ ಕೃಷ್ಣಗೋಪಾಲ್, ರಂಗ ಅವರನ್ನು ಮುಂಬೈಗೆ ಆಹ್ವಾನಿಸಿದರು. ಅಲ್ಲಿಯೇ ಚಿತ್ರರಂಗದ ಸಂಪರ್ಕವೂ ಬಂದಿತು. ಹಾಲಿವುಡ್ ಸಂಸ್ಥೆ ‘ಕಿಂಡಲ್ ಐ’ಗಾಗಿ ರಂಗ ನಿರ್ದೇಶಿಸಿದ ‘ಹಿಮಾಲಯನ್ ವಂಡರ್’ ಎನ್ನುವ ಸಾಕ್ಷ ಚಿತ್ರ ಸಾಕಷ್ಟು ಪ್ರಸಿದ್ಧಿ ಪಡೆಯಿತು. ಇದನ್ನು ನೋಡಿ ‘ಜೆಮಿನಿ ಸ್ಟುಡಿಯೋ’ದ ಎಸ್.ಎಸ್.ವಾಸನ್ ಮದ್ರಾಸಿಗೆ ಆಹ್ವಾನಿಸಿದರು. ಇಲ್ಲಿ ಅವರು ಭಕ್ತನಾರದರ್, ಪ್ರಕಾಶಂ, ಚಂದ್ರಹಾಸ, ದೇವದಾಸ್, ಕಣವನೆ ಕಣ್ ಕಂಡದೈವನ್ ಮೊದಲಾದ ಚಾರಿತ್ರಿಕ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಹೆಸರು ಮಾಡಿದರು.
ಬೇಡಿಕೆಯ ಛಾಯಾಗ್ರಾಹಕರಾಗಿದ್ದರೂ ರಂಗ ಅವರಿಗೆ ಇನ್ನಷ್ಟು ಸಾಧಿಸುವ ಹಂಬಲವಿತ್ತು. ಬೇರೆ ಎಲ್ಲಾ ಭಾಷೆಗಳಲ್ಲೂ ಸುಸಜ್ಜಿತ ಸ್ಟುಡಿಯೋಗಳು ಇರುವುದನ್ನು ಕಂಡು ಕನ್ನಡನಾಡಿಗೂ ಅದನ್ನು ತರುವ ಉದ್ದೇಶದಿಂದ 1944ರಲ್ಲಿ ಬೆಂಗಳೂರಿನ ನಾಯಂಡನಹಳ್ಳಿಯಲ್ಲಿ ‘ವಿಕ್ರಂ ಲ್ಯಾಬೋರೇಟರಿ’ ಸ್ಥಾಪಿಸಿದರು. ಅದನ್ನು ಉಳಿಸಿಕೊಂಡಿದ್ದರೆ ಕನ್ನಡ ಚಿತ್ರರಂಗದ ಸ್ವರೂಪವೇ ಬದಲಾಗಬಹುದಾಗಿತ್ತು. ಆದರೆ ಪ್ರೋತ್ಸಾಹದ ಕೊರತೆಯಿಂದ ಅದು ಮದ್ರಾಸಿಗೆ ಸ್ಥಳಾಂತರಗೊಂಡಿತು. ಬಹಳ ಕಾಲ ಅದು ದಕ್ಷಿಣ ಭಾರತದ ಏಕೈಕ ಲ್ಯಾಬೋರೇಟರಿ ಆಗಿತ್ತು. 1951 ರಲ್ಲಿ ‘ಛೋಟಾಬಾಯ್’ ಹಿಂದಿ ಚಿತ್ರವನ್ನು ನಿರ್ದೇಶಿಸುವದರೊಂದಿಗೆ ರಂಗಾ ನಿರ್ದೇಶನಕ್ಕೆ ಬಂದರು. ತೆಲುಗಿನಲ್ಲಿ ಮಾಗೋಪಿ, ತಮಿಳು ಮತ್ತು ತೆಲುಗಿನಲ್ಲಿ ತೆನಾಲಿ ರಾಮಕೃಷ್ಣ ಚಿತ್ರಗಳನ್ನು ನಿರ್ಮಿಸಿ ಯಶಸ್ಸನ್ನು ಕಂಡರು. 1957ರಲ್ಲಿ ಅವರು ಕನ್ನಡದಲ್ಲಿ ‘ಭಕ್ತಮಾರ್ಕಾಂಡೇಯ’ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದರು. ‘ಮಹಿಷಾಸುರಮರ್ಧಿನಿ’ ಅವರ ವಿಕ್ರಂ ಪ್ರೊಡಕ್ಷನ್ ಸ್ಟುಡಿಯೋದಲ್ಲಿಯೇ ಸಂಪೂರ್ಣ ನಿರ್ಮಾಣಗೊಂಡಿತು. ಈ ಚಿತ್ರಶತದಿನೋತ್ಸವ ಕಂಡಾಗ ಎಲ್ಲಾ ಕಲಾವಿದರಿಗೂ ಮೊದಲು ನೀಡಿದ್ದಷ್ಟೇ ಸಂಭಾವನೆಯನ್ನು ಇನ್ನೂಮ್ಮೆ ನೀಡಿದರು. ಇದು ಭಾರತೀಯ ಚಿತ್ರರಂಗದಲ್ಲೇ ಅಪರೂಪ ಎನ್ನಿಸುವಂತಹ ಪ್ರಸಂಗ. ಡಬ್ಬಿಂಗ್ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರರಂಗ ತತ್ತರಿಸಿದಾಗ ಕಲಾವಿದರೆಲ್ಲರೂ ಸೇರಿ ‘ರಣಧೀರಕಂಠೀರವ’ ಚಿತ್ರವನ್ನೇನೋ ನಿರ್ಮಿಸಿದರು. ಆದರೆ ಅದನ್ನು ಬಿಡುಗಡೆ ಮಾಡಲು ಯಾವ ವಿತರಕರೂ ಮುಂದೆ ಬರಲಿಲ್ಲ. ಆಗ ರಂಗ ಅವರೇ ‘ವಿಕ್ರಂ ಡಿಸ್ಟ್ರಿಬ್ಯೂಟರ್ಸ್’ ಅಂತ ಸಂಸ್ಥೆಯನ್ನು ಆರಂಭಿಸಿ ಚಿತ್ರವನ್ನು ಬಿಡುಗಡೆ ಮಾಡಿ ಕನ್ನಡಚಿತ್ರರಂಗದ ಹಿರಿಮೆಯನ್ನು ಉಳಿಸಿದರು. ಅಷ್ಟೇ ಅಲ್ಲ ಪರಭಾಷೆಗಳಿಗೆ ತಾವು ಏನೂ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತು ಮಾಡಲು ವಸ್ತುವಿನ ದೃಷ್ಟಿಯಿಂದ ಮಾತ್ರವಲ್ಲ ತಾಂತ್ರಿಕವಾಗಿ ಮಹತ್ವವಾದ  ‘ದಶಾವತಾರ’ ಚಿತ್ರವನ್ನು ನಿರ್ಮಿಸಿದರು. 
ಭಾರತದ ಎಲ್ಲಾಭಾಷೆಗಳಲ್ಲಿಯೂ ಆಗಲೇ ವರ್ಣಚಿತ್ರಗಳು ಬರಲು ಆರಂಭಿಸಿದ್ದವು. ಆದರೆ ಕನ್ನಡ ಮಾತ್ರ ಇನ್ನೂ ಕಪ್ಪುಬಿಳಿಪಿನ ಕಾಲದಲ್ಲೇ ಇತ್ತು. ಇದನ್ನೂ ಸವಾಲಾಗಿ ಸ್ವೀಕರಿಸಿ ಕನ್ನಡದ ಮೊದಲ ವರ್ಣಚಿತ್ರ ‘ಅಮರ ಶಿಲ್ಪಿ ಜಕಣಾಚಾರಿ’ಯನ್ನು ರಂಗಾ ನಿರ್ಮಿಸಿದರು. ಸ್ವತಃ ಛಾಯಾಗ್ರಾಹಕರಾಗಿದ್ದ ಅವರು ನಮ್ಮ ಸುತ್ತಮುತ್ತಲೂ ಕಾಣುವಂತಹ ಬಣ್ಣದ ಮೋಡಿಯನ್ನು ತೆರೆಯ ಮೇಲೆ ತಂದು ನಿಜವಾದ ಅರ್ಥದ ಬಣ್ಣದ ಚಿತ್ರ ಸೃಷ್ಟಿಸಿದ್ದರು. ಅದರಲ್ಲೂ ಬೇಲೂರು ಹಳೇ ಬೀಡು ದೇವಸ್ಥಾನಗಳು ನಿರ್ಮಾಣದ ಹಂತದಲ್ಲಿರುವ ಸೆಟ್ ಮತ್ತು ದೇವಸ್ಥಾನ ಸಿದ್ಧವಾದ ವಾಸ್ತವ ಎರಡರ ನಡುವಿನ ಕಲರ್ ಮ್ಯಾಚ್ ಆಗಿರುವುದು ಅಭೂತ ಪೂರ್ವ ತಾಂತ್ರಿಕ ಸಾಧನೆಯಾಗಿದೆ. ಕನ್ನಡದ ಮೊದಲ ಸಾಮಾಜಿಕ ವರ್ಣಚಿತ್ರ ‘ಭಲೇಬಸವ’ ಚಿತ್ರವನ್ನು ನಿರ್ಮಿಸಿದವರೂ ರಂಗಾ ಅವರೇ. ಪ್ರತಿಜ್ಞೆ, ಚಂದ್ರಹಾಸ, ಮಹಾಸತಿ ಅನುಸೂಯ, ಸತಿಸಾವಿತ್ರಿ, ಬಾಲನಾಗಮ್ಮ ಹೀಗೆ ಮಹತ್ವದ ಚಿತ್ರಗಳನ್ನು ನಿರ್ಮಿಸಿದ ರಂಗಾ ಅವರ ‘ಮಣ್ಣಿನಮಗಳು’ ವಸ್ತು ಮತ್ತು ವಿನ್ಯಾಸಗಳೆರಡರ ದೃಷ್ಟಿಯಿಂದಲು ಪ್ರಯೋಗಶೀಲ ಚಿತ್ರ. ತಮ್ಮ ಬಹುಯಶಸ್ವಿ ತೆನಾಲಿ ರಾಮಕೃಷ್ಣ ಚಿತ್ರವನ್ನು ಕನ್ನಡದಲ್ಲಿಯೂ ತಂದ ರಂಗ ಅವರು  ‘ಮಾಗೋಪಿ’ಯನ್ನು ಬಾಲ ನಟರಾಗಿದ್ದ ಪುನೀತ್ ಅಭಿನಯದಲ್ಲಿ ‘ಭಾಗ್ಯವಂತ’ ಎಂದು ನಿರ್ಮಿಸಿದರು. 1978ರಲ್ಲಿ ಬೆಂಗಳೂರಿನಲ್ಲಿ ಅವರು ಸ್ಥಾಪಿಸಿದ್ದ ‘ವಸಂತ್ ಕಲರ್ ಲ್ಯಾಬ್’ ಮುಂದೆ ‘ವಿಷನ್ ಸಿನಿಮಾ ಟೆಕ್ನೋಲಜೀಸ್’ ಆಗಿ ಕನ್ನಡ ಚಿತ್ರರಂಗಕ್ಕೆ ಮತ್ತು ಜಾಹೀರಾತು ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿತ್ತು.
ಕನ್ನಡ ಚಿತ್ರರಂಗ ಸ್ವಂತಿಕೆಯನ್ನು ಪಡೆಯಲು ಕಾರಣಕರ್ತರಾದವರಲ್ಲಿ ಪ್ರಮಖರಾದ ಬಿ.ಎಸ್.ರಂಗಾ ಅವರು 2010 ರ ಡಿಸಂಬರ್ 12 ರಂದು ಚೆನ್ನೈನಲ್ಲಿ ನಿಧನರಾದರು. ಕನ್ನಡ ಚಿತ್ರರಂಗದ ಬೆಳವಣಿಗೆಗೆ ರಂಗ ಅವರು  ನೀಡಿದ ಕೊಡುಗೆ ಅಪಾರ.  ಈ ಮಹಾನ್ ಸಾಧಕರ ಶತಮಾನೋತ್ಸವ ಜನಮದಿನದಂದು ಅವರಿಗೆ ಸಾಷ್ಟಾಂಗ ನಮನ.
ಮಾಹಿತಿ ಕೃಪೆ:  ಎನ್. ಎಸ್. ಶ್ರೀಧರಮೂರ್ತಿ ಅವರ ಲೇಖನ.
Tag: B. S. Ranga, 


ಕಾಮೆಂಟ್‌ಗಳಿಲ್ಲ: