ಬುಧವಾರ, ಡಿಸೆಂಬರ್ 6, 2017

ಶಶಿಕಪೂರ್


ಬಾನದಾರಿಯಲ್ಲಿ ಮರೆಯಾದ 'ಶಶಿ'ಕಪೂರ್

ಶಶಿಕಪೂರ್ ಎಂದರೆ ಸುಂದರ ಸೌಮ್ಯ ಸರಳ ಸಜ್ಜನಿಕೆಯ ಮುಖ ಕಣ್ಮುಂದೆ ಬರುತ್ತದೆ.  ಕಳೆದ ಕೆಲವು ವರ್ಷಗಳಲ್ಲಿ ಕಾಹಿಲೆಯಿಂದ ಬಳಲಿದ ಅವರ ಚಿತ್ರವನ್ನು ಮಾಧ್ಯಮಗಳಲ್ಲಿ ಕಂಡಾಗಲೆಲ್ಲಾ ಓ ಬದುಕೆಂದರೆ ಇದೇನಾ ಎಂಬ ವೈರಾಗ್ಯದ ವೈರುಧ್ಯ ನನ್ನನ್ನು ಕಾಡುತ್ತಿತ್ತು.   ಡಿಸೆಂಬರ್ 4, 2017ರಂದು ಅವರು ಈ ಲೋಕವನ್ನಗಲಿರು ಎಂದು ಕೇಳಿದಾಗ ಪುನಃ ಆ ಸುಂದರ ಮೊಗದ ಹಿಂದೆ ಓಡುವಂತಾಯ್ತು.  ಹೀಗಾಗಿ ಬದುಕೆಂಬುದು ಪುನಃ ಒಂದು ವರ್ತುಲದಲ್ಲಿ ತಿರುಗುತ್ತಿರುವಂತೆ ಅನಿಸುತ್ತಿದೆ.

ಅಪ್ಪ ಪೃಥ್ವೀರಾಜ್ ಕಪೂರ್ ಹಿರಿಮೆ, ಅಣ್ಣ ರಾಜ್ ಕಪೂರ್ ಪ್ರದರ್ಶಿಕೆ, ಮತ್ತೊಬ್ಬ ಅಣ್ಣ ಶಮ್ಮಿ ಕಪೂರರ  ಎದ್ದು ಬಿದ್ದು ಕುಣಿಯುವಿಕೆ ಇವುಗಳ  ನಡುವಿನ ಸಮತ್ವದ ಗರಿಮೆ ಶಶಿಕಪೂರರದ್ದು.  ‘ಸಿದ್ಧಾರ್ಥ’ ಅಂತಹ ಭಾರತದ ಸೆನ್ಸಾರಿನಿಂದ  ಬಹಿಷ್ಕೃತಗೊಂಡ ಮುಕ್ತಕಾಮದ ಹಂದರವುಳ್ಳ   ಚಿತ್ರ ಮತ್ತು ಬಿಡುಗಡೆಯಾಗಿ ಅದೇ ಭಾವಗಳನ್ನು ಒಂದಿಷ್ಟು ಕದ್ದುಮುಚ್ಚಿ ತೋರಿ ವ್ಯಾಪಾರ ಮಾಡಿಕೊಂಡ   ‘ಸತ್ಯಂ ಶಿವಂ ಸುಂದರಂ’ ಅಂತಹ ಚಿತ್ರ ಮುಂತಾದವುಗಳ  ನಾಯಕನಾಗಿದ್ದರೂ  ವೈಯಕ್ತಿಕ ನೆಲೆಯಲ್ಲಿ ಎಂದೂ ಗಾಳಿ ಸುದ್ಧಿಗೆ ಸಹಾ ನಿಲುಕದ ಚಿತ್ರರಂಗದಲ್ಲೇ ಅಪರೂಪದ ವ್ಯಕ್ತಿ ಶಶಿಕಪೂರ್.   ಇವರು ಪ್ರಧಾನವಾಗಿ ನಟಿಸಿದ ಚಿತ್ರಗಳಲ್ಲಿ ಅಮಿತಾಬ್ ಒಳಗೊಂಡಂತೆ ಇತರ ಹೀರೋಗಳು ಹೆಚ್ಚು ಪ್ರಚಾರಪಡೆದು ಶೋಭಿಸಿದ್ದರ ಕುರಿತು ಸಹಾ ಈತ ಎಂದೂ ತಲೆಕೆಡಿಸಿಕೊಳ್ಳಲು ಹೋಗಲಿಲ್ಲ.  ತಮ್ಮ ಪಾಡಿಗೆ ತಾವು ಅಭಿನಯಿಸುತ್ತಾ ಹೋದರು.  ರಂಗಭೂಮಿಯ  ಕಾಳಜಿಯಿಂದ  ಪೃಥ್ವೀ ಥಿಯೇಟರ್ಸ್ಗೆ ಹೊಸ ಚೇತನ ನೀಡಿದರು.  ಕಲಾತ್ಮಕ ಮತ್ತು ಕಲಾತ್ಮಕ-ವ್ಯಾಪಾರೀ ಚಿತ್ರ ಮಾಧ್ಯಮಗಳಿಗೆ ಮಧ್ಯಮರೂಪಿ ಎನ್ನಬಹುದಾದ ಜುನೂನ್‌, ಕಲಿಯುಗ್‌, 36 ಚೌರಂಗೀ ಲೇನ್‌, ವಿಜೇತಾ, ಉತ್ಸವ್‌ ಮುಂತಾದ ಅನೇಕ ಚಿತ್ರಗಳನ್ನು ನಿರ್ಮಿಸಿದರು. ತಮಗಿದ್ದ ಕಮರ್ಷಿಯಲ್ ಚಿತ್ರಗಳ ಪ್ರತಿಷ್ಠೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಅಂತಹ ಚಿತ್ರಗಳಲ್ಲಿ ಪಾತ್ರವನ್ನೂ ವಹಿಸಿದರು. 

ಬಾಲಿವುಡ್‌ನ ಪಿತಾಮಹ ಪ್ರಮುಖರಲ್ಲೊಬ್ಬರಾದ  ಪೃಥ್ವಿರಾಜ್‌ ಕಪೂರ್‌ರ ಕಿರಿಯ ಪುತ್ರರಾಗಿ ಶಶಿ 1938 ಮಾರ್ಚ್‌ 18ರಂದು ಜನಿಸಿದರು. ಬಾಲನಟನಾಗಿ ಬೆಳ್ಳಿ ತೆರೆ ಏರಿದರು. ತಂದೆ ಪೃಥ್ವಿರಾಜ್‌ ಕಪೂರ್‌, ಅಣ್ಣ ರಾಜ್‌ಕಪೂರ್‌, ಮತ್ತೊಬ್ಬ ಅಣ್ಣ ಶಮ್ಮಿ ಕಪೂರ್‌ರ ಅಪಾರ ಜನಪ್ರಿಯತೆಯ ನಡುವೆ ಮಂಕಾಗದೆ ಶಶಿಯಂತೆಯೇ ಶೋಭಿಸಿದರು.   1940ರ ದಶಕದಲ್ಲಿ  ಕೆಲವು ಪೌರಾಣಿಕ ಚಿತ್ರಗಳಲ್ಲಿ  ಕಾಣಿಸಿಕೊಂಡರು. ಅಣ್ಣ ರಾಜ್‌ಕಪೂರರ ಕೆಲವು  ಪಾತ್ರಗಳಿಗೆ  ಬಾಲನಟನಾದರು. 1948ರಲ್ಲಿ ಬಂದ ಆಗ್‌ ಮತ್ತು 1951ರಲ್ಲಿ ಬಂದ ಆವಾರಾ ಸಿನಿಮಾಗಳು ಇವರ ನಟನಾ ಕೌಶಲ್ಯವನ್ನು ಸಾಬೀತುಪಡಿಸಿತು. ಯಶ್‌ ಚೋಪ್ರಾ ನಿರ್ಮಾಣದ ಧರ್ಮಪುತ್ರ ಸಿನಿಮಾದಿಂದ ಖ್ಯಾತಿ  ಸಿಕ್ಕಿತು. ನಂತರದ ಐದು ದಶಕಗಳ ನಟನಾವೃತ್ತಿಯಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು. ಅರವತ್ತು ಎಪ್ಪತ್ತರ  ದಶಕದಲ್ಲಿ ಬಹುಬೇಡಿಕೆ ಹೊಂದಿದ್ದರು. ಇದೇ ಅವಧಿಯಲ್ಲಿ ಅವರ ಜಬ್  ಜಬ್ ಫೂಲ್‌ ಕಿಲೆ, ಹಸೀನಾ ಮಾನ್‌ ಜಾಯೇಗಿ, ಆ ಗಲೆ ಲಗ್‌ ಜಾ, ರೋಟಿ ಕಪಡಾ ಔರ್‌ ಮಕಾನ್‌, ದೀವಾರ್‌, ಕಭೀ ಕಭೀ, ಫಕೀರಾ, ತ್ರಿಶೂಲ್‌, ಸತ್ಯಂ ಶಿವಂ ಸುಂದರಂ, ಕಾಲಾ ಪತ್ಥರ್‌ ಮೊದಲಾದ ಜನಪ್ರಿಯ ಚಿತ್ರಗಳು ಬಂದವು.

ಶಶಿಕಪೂರ್ ಅವರು ಹೌಸ್ ಹೋಲ್ಡ್, ಶೇಕ್ಸ್‌ಪಿಯರ್‌ವಾಲಾ, ಪ್ರೆಟ್ಟಿ ಪಾಲಿ, ಸಿದ್ದಾರ್ಥ, ಸ್ಯಾಮ್ಮಿ ಆ್ಯಂಡ್‌ ರೋಸಿ ಗೆಟ್ ಲೇಯ್ಡ್, ಕಸ್ಟಡಿ  ಮುಂತಾದ ಹಲವಾರು  ಇಂಗ್ಲಿಷ್‌ ಚಿತ್ರಗಳಲ್ಲೂ ನಟಿಸಿದ್ದರು. ತಮ್ಮ  ಪತ್ನಿ ಜೆನ್ನಿಫರ್‌ ಕೆಂಡಾಲ್‌ ಅವರೊಡನೆ  ಬಾಂಬೆ ಟಾಕೀ, ಹೀಟ್ ಅಂಡ್ ಡಸ್ಟ್ ಇಂಗ್ಲಿಷ್‌ ಚಿತ್ರಗಳಲ್ಲಿ ನಟಿಸಿದ್ದರು. ಜೇಮ್ಸ್‌ ಬಾಂಡ್‌ ಪಾತ್ರಗಳಲ್ಲಿ ಹೆಸರುವಾಸಿಯಾದ ನಟ ಪಿಯರ್ಸ್‌ ಬ್ರಾಸ್ನನ್‌ ಜೊತೆಗೆ 'ದಿ ಡಿಸೀವರ್ಸ್‌' ಚಿತ್ರದಲ್ಲಿ ನಟಿಸಿದ್ದರು. 1991ರಲ್ಲಿ ಇವರು ನಿರ್ಮಿಸಿ, ನಿರ್ದೇಶಿಸಿದ 'ಅಜೂಬಾ'ದಲ್ಲಿ ಅಮಿತಾಬ್ ಬಚ್ಚನ್‌ ನಟಿಸಿದ್ದರು. 1998ರಲ್ಲಿ  ನಟಿಸಿದ 'ಜಿನ್ನಾ' ಮತ್ತು ‘‘ಸೈಡ್ ಸ್ಟ್ರೀಟ್ಸ್’ ’ ಅವರ ಕಡೆಯ ಚಿತ್ರಗಳು.  ಕಿರುತೆರೆಗೆ ಅಳವಡಿತಗೊಂಡ ಗಲಿವರ್ಸ್ ಟ್ರಾವಲ್ಸ್ ಪ್ರಸಿದ್ಧ ಸರಣಿಯಲ್ಲೂ ಪಾತ್ರವಹಿಸಿದ್ದರು. 

ಶಶಿಕಪೂರ್ ಸದಾ ಇತರ ಕಲಾವಿದರಿಗೆ ಗೌರವಕೊಟ್ಟು ತಮ್ಮನ್ನು ಚಿಕ್ಕದಾಗಿ ತೋರಿಕೊಂಡ ಸಹೃದಯಿ.  ದಿಲೀಪ್‌ ಕುಮಾರ್‌, ರಾಜ್‌ಕಪೂರ್‌, ಉತ್ತಮ್‌ ಕುಮಾರ್‌, ಬಲರಾಜ್‌ ಸಾಹ್ನಿ ಮುಂತಾದವರ ನಟನೆ ಅವರಿಗೆ ತುಂಬಾ ಮೆಚ್ಚುಗೆ. ನಂದಾ, ಪ್ರಾಣ್, ಧರ್ಮೇಂದ್ರ, ದೇವಾನಂದ್, ರಾಜೇಶ್ ಖನ್ನ, ಸಂಜೀವ್ ಕುಮಾರ್ ಅವರ ಆಪ್ತ ಗೆಳೆಯರಾಗಿದ್ದರು.   ಅಮಿತಾಬ್ ಜೊತೆಗಿನ ಜೊತೆಯಾಟ ಎಂದೂ ಮರೆಯಲು ಸಾಧ್ಯವಿಲ್ಲದಂಥದು ಎನ್ನುತ್ತಿದ್ದರು.  ತಮ್ಮ ಪ್ರಾರಂಭದದಿನಗಳಲ್ಲಿ ತಮ್ಮನ್ನು ಸಲಹಿದ ಇವರ ಬಗ್ಗೆ ಅಮಿತಾಬರಿಗೆ ಶಶಿ ಎಂದರೆ ಅಪಾರ ಗೌರವ.

ಮುಹಫೀಸ್ ಅಭಿನಯಕ್ಕೆ ವಿಶೇಷ ಜ್ಯೂರಿ ಪ್ರಶಸ್ತಿನ್ಯೂ ಡೆಲ್ಲಿ ಟೈಮ್ಸ್ ಚಿತ್ರದ ಅಭಿನಯಕ್ಕೆ ಶ್ರೇಷ್ಠ ರಾಷ್ಟ್ರೀಯ ಪುರಸ್ಕಾರಜುನೂನ್ ಚಿತ್ರಕ್ಕೆ ಶ್ರೇಷ್ಠ  ನಿರ್ಮಾಪಕ ರಾಷ್ಟ್ರೀಯ ಗೌರವ, ಪದ್ಮಭೂಷಣ ಮತ್ತು  ದಾದಾ ಸಾಹೇಬ್ ಫಾಲ್ಕೆ ಗೌರವಗಳು  ಶಶಿಕಪೂರ್ ಅವರಿಗೆ ಸಂದಿತ್ತು.  ಅವರು ಬಿಟ್ಟು ಹೋದ ಕಲಾವಂತಿಕೆ ಮತ್ತು ಅದನ್ನೂ ಮೀರಿದ ಹೃದಯವಂತಿಕೆಯಿಂದ ಅವರು ಗಳಿಸಿದ ಗೌರವ ಮತ್ತು ಉಳಿಸಿಹೋದ ಹಿರಿತನಗಳು  ಇವೆಲ್ಲಕ್ಕೂ ಮಿಗಿಲಾದದ್ದು. 

Tag: Shashi Kapoor

ಕಾಮೆಂಟ್‌ಗಳಿಲ್ಲ: