ಸೋಮವಾರ, ಮಾರ್ಚ್ 5, 2018

ಚಿತ್ರ ಮಿತ್ರ


ಚಿತ್ರ ಮಿತ್ರ

ಇಂದು ವಿಶಿಷ್ಟ ಕಲಾವಿದರಾದ ‘ಚಿತ್ರ ಮಿತ್ರ’ರ ಜನ್ಮದಿನ.  ಚಿತ್ರ ಮಿತ್ರರು ಅರಳಿಸುವ ಕಲೆಯ ಬೆರಗೇ ಬೆರಗು!  ಫೇಸ್ಬುಕ್ ಆವರಣದಿಂದ ಪರಿಚಿತರಾದ ಚಿತ್ರಮಿತ್ರರು  ಆಗಾಗ ಮೂಡಿಸುವ ಗಂಟೆಗಟ್ಟಲೆ ನೇರ  ಚಿತ್ರರಚನಾ ಕೌಶಲ, ಅವರ ಪುಟಕ್ಕೆ ಹೋದರೆ  ಕಾಣುವ  ಪ್ರತಿ ಚಿತ್ರದ ಬೆಡಗು, ಅವರ ಬ್ಲಾಗಿಗೆ ಇಣುಕಿದರೆ  ತೆರೆದುಕೊಳ್ಳುವ  ಅದಮ್ಯತೆ, ಅವರ ರೇಖೆಗಳಿಗಿರುವ  ಅಪರಿಮಿತ ಸಾಧ್ಯತೆಗಳು ಇವೆಲ್ಲಾ ನಮ್ಮನ್ನು  ಹೊಸದೊಂದು ಲೋಕಕ್ಕೆ ಕರೆದೊಯ್ಯುತ್ತವೆ.

ಕರ್ನಾಟಕದ ಸುರತ್ಕಲ್ ಮೂಲದ ಕುಟುಂಬದ  ಚಿತ್ರ ಮಿತ್ರ  ಮುಂಬೈನಲ್ಲಿ ಬದುಕನ್ನು ಬೆಳೆಸಿಕೊಂಡವರು.  ತಮ್ಮ ಬದುಕನ್ನು ನಡೆಸಿದ  ಹೋಟೆಲ್ ಅನ್ನು, ತಮ್ಮ ಪುತ್ರನೂ ಮುಂದುವರೆಸಲಿ ಎಂಬ  ಆಶಯ ಹೊಂದಿದ್ದ  ತಂದೆಯವರ  ಅಣತಿಯಂತೆ ಹೋಟೆಲ್ ವ್ಯವಹಾರದಲ್ಲಿ ಕುಳಿತರಾದರೂ ಹೋಟೆಲಿನ ಬಿಲ್ ಪುಸ್ತಕದ ಮಧ್ಯದಲ್ಲಿ ಅಡಗಿಕೊಂಡು ಮೂಡುತ್ತಿದ್ದ ಇವರ ರೇಖೆಗಳು ಹೊರಗಿನ ಜಗತ್ತಿಗೆ ವ್ಯಾಪಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.  ಹೋಟೆಲಿಗೆ  ಭೇಟಿಕೊಟ್ಟ  ಪ್ರಸಿದ್ಧ  ಪತ್ರಿಕಾ ವರದಿಗಾರರೊಬ್ಬರ  ಕಣ್ಣಿಗೆ ಬಿದ್ದ ಇವರ ಕಲಾಪ್ರತಿಭೆ  ಮುಂದೆ  ತನ್ನ ರೆಕ್ಕೆಗಳನ್ನು  ಅನಂತಾನಂತವಾಗಿ ಬೆಳೆಸಿಕೊಳ್ಳುತ್ತಾ ಮುಂದೆ ಮುಂದೆ ಸಾಗಿದೆ.  ಅವರ ಕಲಾಕೃತಿಗಳು ಭಾರತ, ಮಧ್ಯಪ್ರಾಚ್ಯ ದೇಶಗಳು, ಜರ್ಮನಿ, ಸ್ಪೇನ್, ಜರ್ಮನಿ, ಆಸ್ಟ್ರೇಲಿಯಾ, ಲಂಡನ್, ಅಮೆರಿಕ ಹೀಗೆ ವಿಶ್ವದ ಅನೇಕ  ಕಲಾಪ್ರೇಮಿಗಳ ಹೆಮ್ಮೆಯ ಸ್ವತ್ತುಗಳಾಗಿವೆ.  ಆದರೆ ಈ ವ್ಯಾಪಕತೆ ಅವರ ನಮ್ರತೆಯನ್ನು ಕುಗ್ಗಿಸಿಲ್ಲ.  ಅವರ  ಪುಟಗಳಿಗೆ ಹೋದಾಗ “ತಿಳಿದಿರುವುದು ಹನಿ ಮಾತ್ರ, ತಿಳಿಯದ್ದು  ಅಗಾಧ ಸಮುದ್ರ” ಎಂಬ ಅವರ ಮಾತು ಪ್ರಧಾನವಾಗಿ ಗಮನ ಸೆಳೆಯುತ್ತದೆ.

ರೇಖಾಚಿತ್ರಗಳು ಚಿತ್ರ ಮಿತ್ರರಿಗೆ  ಬಾಲ್ಯದಿಂದಲೂ ಜೊತೆಗಾತಿ.  ಆರು ವರ್ಷದಲ್ಲಿರುವಾಗಲೇ ತಮ್ಮ ಪ್ರೀತಿಯ  ಶಾಲಾ ಗುರುಗಳಿಗೆ  1800 ಚಿತ್ರಗಳನ್ನು ಉಳ್ಳ ಮೂರು ಪುಸ್ತಕಗಳನ್ನು ಕೊಟ್ಟಂತಹ ಪ್ರೀತಿ ಅವರದ್ದು.  ಅವರ ರೇಖಾಚಿತ್ರಗಳು ಮಿಡ್ – ಡೇ ಸಮೂಹ ಪತ್ರಿಕೆಗಳು, ಟಿಂಕಲ್, ಅಮರ ಚಿತ್ರ ಕಥಾ, ಸಂಡೆ ಅಬ್ಸರ್ವರ್, ನ್ಯೂ ಉಮನ್, ರೀಡರ್ಸ್ ಡೈಜೆಸ್ಟ್, ಫೆಮಿನಾ, ಟೈಮ್ಸ್ ಆಫ್ ಇಂಡಿಯಾ  ಮುಂತಾದ ಅನೇಕ  ಪ್ರಸಿದ್ಧ ನಿಯತಕಾಲಿಕೆಗಳಲ್ಲಿ ಕಳೆದ 25 ವರ್ಷಗಳಲ್ಲಿ ನಿರಂತರವಾಗಿ ಹರಿದಿದೆ. ಪೃಥ್ವಿ ಥಿಯೇಟರಿನ  ಯೋಜನೆಗಳಲ್ಲೂ ಇವರ ಕಲಾತ್ಮಕತೆ ಹರಿದಿದೆ.  ಅನೇಕ ಪ್ರಸಿದ್ಧ  ಜಾಹಿರಾತು ಸಂಸ್ಥೆಗಳಲ್ಲಿ  ತಮ್ಮ ಕಲೆಯನ್ನು ನೀಡಿದ್ದಾರೆ.  ಮೈಕ್ರೋಸಾಫ್ಟ್ ಸಹಯೋಗದೊಂದಿಗೆ  ಶೈಕ್ಷಣಿಕ  ಮಹತ್ವದ  ಅನಿಮೇಶನ್ ಯೋಜನೆಯ ರೂವಾರಿ ಕೂಡ ಆಗಿದ್ದಾರೆ.  ರೇಖೆಗಳಲ್ಲಿ ಬಣ್ಣಗಳಲ್ಲಿ  ಪ್ರೀತಿ ಹೊಂದಿರುವ ಅವರು ಶಿಲ್ಪಕಲೆಯಲ್ಲೂ ಶಾಸ್ತ್ರೀಯವಾದ ಅಧ್ಯಯನದ ಮೂಲಕ  ಪ್ರಾವಿಣ್ಯತೆ ಸಾಧಿಸಿದ್ದಾರೆ. 

ವೈಯಕ್ತಿಕ  ಸೋಲೋ ಚಿತ್ರಪ್ರದರ್ಶನಗಳಿಂದ  ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಿತ್ರಪ್ರದರ್ಶನಗಳಲ್ಲಿ  ಪ್ರಮುಖ  ಪಾತ್ರಧಾರಿಗಳಾದ ಚಿತ್ರ ಮಿತ್ರ ಅವರ ರಾಮಾಯಣದ ಕುರಿತಾದ ಚಿತ್ರರೂಪಕಗಳ  ಸರಣಿ ಅಂತರರಾಷ್ಟ್ರೀಯ ಮಟ್ಟದಲ್ಲಿ  ಪ್ರಸಿದ್ಧಿ ಪಡೆದಿದೆ.  ಅನೇಕ ವಿದ್ಯಾಸಂಸ್ಥೆಗಳಲ್ಲಿ ಚಿತ್ರರೂಪಕವಾದ ಮಕ್ಕಳ ಮನೋನಂದನ ವಾತಾವರಣ ನಿರ್ಮಾಣವನ್ನು ಅವರು ರೂಪಿಸಿದ್ದಾರೆ.  ಸಹಾಯಾರ್ಥ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಬಹುಮೌಲ್ಯಕ್ಕೆ ವಿತರಣೆಗೊಂಡು  ಅಶಕ್ತರಿಗೆ ಸಹಾಯ ಬೆಂಬಲ ಸಹಾ ನೀಡಿವೆ.

ತಮ್ಮ ಜೀವನ ಸಂಗಾತಿ ಕಲಾವಿದೆ ಅನು ಪಾವಂಜೆ ಅವರೊಂದಿಗೆ ನಿರಂತರವಾಗಿ  ಕಲಾತ್ಮಕ ಬೆಡಗಿನಲ್ಲಿ  ಮುಂದೆ ಸಾಗುತ್ತಿರುವ ಪ್ರಶಾಂತ್  ಶೆಟ್ಟಿ ಅವರಾದ ‘ಚಿತ್ರ ಮಿತ್ರ’ರ ಬದುಕು ನಿರಂತರ ಪ್ರಕಾಶಿಸುತ್ತಾ ಪ್ರಶಾಂತವಾಗಿರಲಿ. ಅವರ ‘ಚಿತ್ರ ಮಿತ್ರ’ತ್ವ ಸದಾ ಲಭಿಸುತ್ತಿರಲಿ ಎಂದು ಆಶಿಸುತ್ತಾ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಹೇಳೋಣ.

Tag: Chitra Mithra


ಕಾಮೆಂಟ್‌ಗಳಿಲ್ಲ: