ಬುಧವಾರ, ಮಾರ್ಚ್ 14, 2018

ಸ್ಟೀಫನ್ ಹಾಕಿಂಗ್ ಇನ್ನಿಲ್ಲ.


ಸ್ಟೀಫನ್  ಹಾಕಿಂಗ್  ಇನ್ನಿಲ್ಲ.


ವಿಜ್ಞಾನದ ವಿಸ್ಮಯರೆಂದೆನಿಸಿದ್ದ,  ಆಲ್ಬರ್ಟ್ ಐನ್ ಸ್ಟೈನ್ ನಂತರದ ಮಹಾನ್ ಭೌತವಿಜ್ಞಾನಿ ಎನಿಸಿದ್ದ  ಸ್ಟೀಫನ್ ಹಾಕಿಂಗ್ ಇಂದು ತಮ್ಮ 76ನೆಯ ವಯಸ್ಸಿನಲ್ಲಿ ನಿಧನರಾಗಿದ್ದಾರೆ.  ಸ್ಟೀಫನ್  ಹಾಕಿಂಗ್  ಜನಿಸಿದ್ದು ಜನವರಿ 8, 1942ರಂದು. 

1962ನೇ ಇಸ್ವಿಯಲ್ಲಿ  ಸ್ಟೀಫನ್ ಹಾಕಿಂಗ್‌ಗೆ ಇಪ್ಪತ್ತೊಂದು ವರ್ಷ. ಅನಾರೋಗ್ಯವೆಂದು ತಪಾಸಣೆಗೆ ಹೋದಾಗ ಬರಸಿಡಿಲಿನಂಥ ವಿಷಯವನ್ನು ವೈದ್ಯರು ತಿಳಿಸಿದರು. ಅದು ಅವರ ಜೀವನದ ಗತಿಯನ್ನೇ ಬದಲಿಸಿತು. ವೈದ್ಯರ ತೀರ್ಮಾನದಂತೆ ಹಾಕಿಂಗ್‌ಗೆ ಆದದ್ದು ಅಮಿಯೋಟ್ರಾಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್. ಅದರ ಹೆಸರು ಎಷ್ಟು ಕ್ಲಿಷ್ಟವೋ ರೋಗವೂ ಅಷ್ಟೇ ಕ್ಲಿಷ್ಟ. ಅದು ನಿಧಾನವಾಗಿ ದೇಹವನ್ನು ಅಶಕ್ತ ಮಾಡುತ್ತ, ಶಕ್ತಿಯನ್ನು ಹೀರುವ, ಪರಿಹಾರವಿಲ್ಲದ, ಖಚಿತವಾಗಿ ತ್ವರಿತ ಸಾವಿಗೆ ದೂಡುವ ರೋಗ. ವೈದ್ಯರು ಕೇವಲ ಒಂದೆರಡು ವರ್ಷಗಳ ಬದುಕು ಉಳಿದಿದೆ ಎಂದರು. ಆಗ ಸ್ಟೀಫನ್ ಹಾಕಿಂಗ್ ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಸಂಶೋಧನೆ ಮಾಡುತ್ತಿದ್ದರು. ಸಂಶೋಧನೆ ಅಷ್ಟೇನೂ ಚೆನ್ನಾಗಿ ಮುಂದುವರೆದಿರಲಿಲ್ಲ.

ಹಾಕಿಂಗ್‌ಗೂ ಅದರಲ್ಲಿ ಅಷ್ಟು ತೀಕ್ಷ್ಣವಾದ ಆಸಕ್ತಿ ಕಂಡಿರಲಿಲ್ಲ. ವೈದ್ಯರ ವರದಿ ಅವರ ಬದುಕಿನಲ್ಲಿ ಬಂದ ಬಹುದೊಡ್ಡ ತಿರುವು. ಆಗ ಅವರ ಮುಂದೆ ಇದ್ದದ್ದು ಎರಡೇ ಹಾದಿಗಳು. ಒಂದು, ದುಃಖದಿಂದ ಕೆಲಸವೆಲ್ಲವನ್ನು ನಿಲ್ಲಿಸಿ ಕೊರಗುತ್ತ ಸಾವಿಗಾಗಿ ಕಾಯವುದು. ಇನ್ನೊಂದು ಉಳಿದ ಸ್ವಲ್ಪವೇ ಸಮಯವನ್ನು ಸರಿಯಾಗಿ ಬಳಸಿ ಸಾಧನೆ ಮಾಡುವುದು. ಹಾಕಿಂಗ್ ಎರಡನೆಯದನ್ನು ಆಯ್ಕೆ ಮಾಡಿಕೊಂಡರು. ಇವರಿಗೆ ಸ್ಫೂರ್ತಿಯಾಗಿ ನಿಂತವರು, ಇವರ ಜೊತೆಗಾತಿ ಜೇನ್. ಆಕೆಯ ಚೇತೋಹಾರಿಯಾದ ಮಾತುಗಳು, ಪ್ರೋತ್ಸಾಹ ಹಾಕಿಂಗ್‌ ಅವರನ್ನು ಬಡಿದೆಬ್ಬಿಸಿದವು. ನಿಜ, ಅವರಿಗೆ ಸಾವಿನ ಭಯವಿತ್ತು.

ಆದರೆ, ಅದಕ್ಕಿಂತ ಹೆಚ್ಚಾಗಿ ಸಾವು ಬರುವುದಕ್ಕಿಂತ ಮೊದಲು ಯಾವ ಸಾಧನೆಯನ್ನೂ ಮಾಡದಿರುವುದರ ಭಯವಿತ್ತು. ಮುಂಬರುವ ತಿಂಗಳುಗಳಲ್ಲಿ ಅವರ ಆರೋಗ್ಯ ಎಷ್ಟೆಷ್ಟು ಕುಸಿಯುತ್ತಿತ್ತೋ ಅವರ ಸಾಧನೆಯ ಮಟ್ಟ ಅಷ್ಟಷ್ಟು ಏರುತ್ತಿತ್ತು. 1974ರಲ್ಲಿ ರಾಯಲ್ ಸೊಸೈಟಿಯ ಅತ್ಯಂತ ಕಿರಿಯ ವಯಸ್ಸಿನ ಫೆಲೋ ಆಗಿ ಆಯ್ಕೆಯಾದರು. 1982ರಲ್ಲಿ ಬ್ರಿಟಿಷ್ ಸರಕಾರ, ತನ್ನ  ಅತ್ಯುಚ್ಛ ಗೌರವವಾದ ‘ಕಮಾಂಡರ್ ಆಫ್ ದ ಆರ್ಡರ್ ಆಫ್ ದ ಬ್ರಿಟಿಷ್ ಎಂಪಾಯರ್‌’  ಇವರಿಗೆ ನೀಡಿ ಗೌರವಿಸಿತು. ಅವರ ತಲಸ್ಪರ್ಶಿಯಾದ ಅಧ್ಯಯನದಿಂದ ಸೈದ್ಧಾಂತಿಕ ಖಗೋಲಶಾಸ್ತ್ರದಲ್ಲಿ ಅದರಲ್ಲೂ ಕಪ್ಪು ರಂಧ್ರಗಳ ಬಗ್ಗೆ ಅವರು ನೀಡಿದ ಕೊಡುಗೆ ಅನನ್ಯವಾದದ್ದು. ಆಗ ಅವರು ಬರೆದ ಗ್ರಂಥ, ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’ ವಿಜ್ಞಾನದ ಗ್ರಂಥಗಳಲ್ಲಿ ಒಂದು ವಿಶೇಷ ಮೈಲಿಗಲ್ಲು. ಅದು ಪ್ರಪಂಚದ ಅತ್ಯಂತ ಜನಪ್ರಿಯ ವಿಜ್ಞಾನದ ಪುಸ್ತಕವಾಗಿ ದಾಖಲಾಗಿದೆ.

ಈ ಸಾಧನೆಯ ಭರಾಟೆಯಲ್ಲಿ ಇವರೇ ಸಾವನ್ನು ಮರೆತರೋ ಅಥವಾ ಯಮ ಬೆರಗಾಗಿ ಮರೆತು ಹೋದನೋ ತಿಳಿಯದು. ಒಂದೆರಡು ವರ್ಷಗಳೂ ಬದುಕುವುದು ಸಾಧ್ಯವಿಲ್ಲವೆಂದು ನಲವತ್ತಾರು ವರ್ಷಗಳ ಹಿಂದೆ ಹೇಳಿದ್ದ ವಿಜ್ಞಾನಕ್ಕೆ ಸವಾಲೆಂಬಂತೆ ತಮ್ಮ ಕೊನೆಯ ದಿನಗಳವರೆವಿಗೂ ಸಂಶೋಧನೆಯನ್ನು ನಡೆಸಿದ್ದರು.    ಅವರ ದೇಹ ಸಂಪೂರ್ಣ ನಿಶ್ಚೇಷ್ಟಿತವಾಗಿತ್ತು, ಅವರು ಸದಾಕಾಲವೂ ಗಾಲಿಕುರ್ಚಿಯ ಮೇಲೆಯೇ ಇರಬೇಕಾಗಿತ್ತು. ಅವರ ಧ್ವನಿಯನ್ನು ಅರ್ಥೈಸಿಕೊಳ್ಳಲು ಕಂಪ್ಯೂಟರ್‌ ಬಳಸಬೇಕಿತ್ತು.

ಆದರೆ, ಮಿದುಳು ಮಾತ್ರ  ನಿಖರತೆ  ಕಾಪಾಡಿಕೊಂಡಿತ್ತು. ಇಂದಿನವರೆವಿಗೂ  ಹಾಕಿಂಗ್‌ ಅವರು ಪ್ರಪಂಚದ ಇಂದಿನ ವಿಜ್ಞಾನಿಗಳಲ್ಲಿ ಮುಂಚೂಣಿಯಲ್ಲಿದ್ದರು, ಲಕ್ಷಾಂತರ ಯುವ ವಿಜ್ಞಾನಿಗಳಿಗೆ ಪ್ರೇರಕ ಶಕ್ತಿಯಾಗಿದ್ದರು. ಕೆಲವೊಮ್ಮೆ ಜೀವನದಲ್ಲಿ ಬರುವ ಆಘಾತಗಳು ಧನಾತ್ಮಕ ಬದಲಾವಣೆ ತರುತ್ತವೆ. ಹೇಡಿಗಳಿಗೆ, ಸಾಧಕರಿಗೆ ಇರುವ ವ್ಯತ್ಯಾಸ ಒಂದೇ. ಹೇಡಿಗಳು ಎಲ್ಲಿ ಸಾವು ಬಂದೀತೋ ಎಂದು ಹೆದರುತ್ತ ಏನನ್ನೂ ಮಾಡದೇ ಸಾವಿನ ಬಾಗಿಲು ತೆಗೆದು ಕಾಯುತ್ತ ಕುಳಿತಿರುತ್ತಾರೆ. ಸಾಧಕರು ದುಡಿದುಡಿದು ಸಾಧಿಸಿ ಸಾವನ್ನು ಹೆದರಿಸುತ್ತಾರೆ.  ಒಂದು ದಿನ ಸಾವು ಅನಿರ್ವಾರ್ಯವೆನಿಸಿದಾಗ  ತಾವು ಇದುವರೆವಿಗೂ ಬದುಕಿದ್ದಕ್ಕೆ  ಏನೂ  ಕೊರೆ ಮಾಡಲಿಲ್ಲ ಎಂಬ  ಸಂತೃಪ್ತಿಯಿಂದ ಬದುಕಿಗೆ ವಿದಾಯ ಹೇಳುತ್ತಾರೆ.

ಹೀಗೆ ಬಾಳಿದ ಮಹಾನ್ ಚೇತನಕ್ಕೆ  ನಮೋನ್ನಮಃ.

(ಕೆಲವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಮೂಡಿಬಂದ ಡಾ. ಗುರುರಾಜ ಕರಜಗಿ ಅವರ  ‘ಕರುಣಾಳು ಬಾ ಬೆಳಕೆ’  ಅಂಕಣದ ಲೇಖನ ಕೆಲವು ಸಾಂದರ್ಭಿಕ ಬದಲಾವಣೆಗಳೊಂದಿಗೆ )

Tag: Stephen Hawking.
Photo Courtesy: independent.co.uk

ಕಾಮೆಂಟ್‌ಗಳಿಲ್ಲ: