ಬುಧವಾರ, ಏಪ್ರಿಲ್ 18, 2018

ರಂಗಾಯಣ ರಘುರಂಗಾಯಣ ರಘು

'ತಲೆ ಬಾಚ್ಕೊಳಿ, ಪೌಡ್ರ್ ಹಾಕ್ಕೊಳಿ, ದುನಿಯಾ ತುಂಬಾ ಕಾಸ್ಟ್ಲಿ'' ಎಂದು ಹೇಳುತ್ತಾ ಗಮನಸೆಳೆದು ಇಂದು ಚಲನಚಿತ್ರಗಳಲ್ಲಿ ವಿಭಿನ್ನ ರೀತಿಯಲ್ಲಿ  ದೊಡ್ಡ ಹೆಸರಾಗಿರುವವರು ರಂಗಾಯಣ ರಘು.  ರಂಗಭೂಮಿಯ ಪ್ರಸಿದ್ಧಿಯ ನೆಲೆ ಹಾಗೂ  ತಮ್ಮನ್ನು ಕಲಾರಂಗದಲ್ಲಿ ಬೆಳೆಸಿದ  ‘ರಂಗಾಯಣ’ವನ್ನು  ತಮ್ಮ ಹೆಸರಿನ ಮುಂದಿರಿಸಿಕೊಂಡಿರುವ ಪ್ರಸಿದ್ಧ ಪ್ರತಿಭಾವಂತ ನಟರಾದ  ರಂಗಾಯಣ ರಘು ಅವರಿಗೆ ಇಂದು ಹುಟ್ಟುಹಬ್ಬ. 

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಕೊತ್ತೂರು ಗ್ರಾಮದಲ್ಲಿ ಎಪ್ರಿಲ್ 17, 1965 ವರ್ಷದಲ್ಲಿ ಜನಿಸಿದ ಕೊತ್ತೂರು ಚಿಕ್ಕರಂಗಯ್ಯ ರಘುನಾಥ್ ಅವರ ತಂದೆ ಚಿಕ್ಕರಂಗಯ್ಯ ಮತ್ತು ತಾಯಿ ವೀರಮ್ಮ.  ಈ ದಂಪತಿಗಳಿಗೆ ರಘು ಒಂಬತ್ತನೇ ಮಗು.  ರಘು ಇನ್ನೂ ಒಂದು ವರ್ಷದ ಮಗುವಾಗಿದ್ದಾಗ ತಾಯಿಯನ್ನು ಕಳೆದುಕೊಂಡರಾದರೂ,  ತುಂಬಿದ ಸಂಸಾರದಲ್ಲಿದ್ದ ಅವರಿಗೆ ಎಂದೂ  ಒಂಟಿತನ ಕಾಡಲಿಲ್ಲ.  ನಾಲ್ಕನೇ ತರಗತಿಯವರೆಗೆ ಹಳ್ಳಿಯಲ್ಲೇ ವಿದ್ಯಾಭ್ಯಾಸ ಮಾಡಿದ ರಘು ಅವರಿಗೆ ತಮ್ಮ ಹಳ್ಳಿಯ ಕುರಿತು ಅದಮ್ಯ ಪ್ರೀತಿ.   

ಎಂಟನೇ ತರಗತಿಯಲ್ಲಿರುವಾಗಲಿಂದ ನಾಟಕದ ಬಗ್ಗೆ ಆಸಕ್ತಿ ತಳೆದುಕೊಂಡ ರಘು, ಅದರ ದೆಸೆಯಿಂದಾಗಿ  ಹತ್ತನೇ ತರಗತಿಯಲ್ಲಿ  ಡುಮ್ಕಿ ಹೊಡೆಯುವಂತಾಗಿ  ಊರಿಗೆ ಹೋಗಿ ತಮ್ಮ ಕುಟುಂಬಕ್ಕಿದ್ದ ಅಗಾಧ ಜಮೀನಿನಲ್ಲಿ ಕುರಿ  ಮೇಯಿಸಿಕೊಂಡು ಕಾಲ ಕಳೆದರು.  ನಂತರ ನ್ಯಾಷನಲ್ ಕಾಲೇಜಿಗೆ ಸೇರಿಕೊಂಡಾಗ ಪುನಃ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ಭಾಗಿಯಾಗತೊಡಗಿದರು.

ಚಂದ್ರಶೇಖರ ಕಂಬಾರರ ಪುತ್ರ  ರಾಜು ಕಂಬಾರ ಅವರ ಒತ್ತಾಸೆಯಿಂದ  ರಂಗಾಯಣಕ್ಕೆ ಸೇರ್ಪಡೆಗೊಂಡ  ರಘು ಮುಂದೆ ರಂಗಾಯಣ ರಘು ಆಗಿದ್ದು ಒಂದು ಇತಿಹಾಸ.  ರಘು ಅವರ ತಂದೆಯವರಿಗೆ ತಮ್ಮ ಮತ್ತೊಬ್ಬ ಮಗನಂತೆ, ರಘು ಸಹಾ ವಕೀಲನಾಗಬೇಕೆಂಬ ಆಸೆ ಇತ್ತು.  ಆದರೆ ರಘು ಅವರ ಬದುಕು ಅರಳಿದ್ದು ರಂಗಾಯಣ ಮುಖೇನ ಕಲಾರಂಗದಲ್ಲಿ.  ರಂಗಾಯಣದಲ್ಲಿ  ಬಿ. ವಿ. ಕಾರಂತರ ಗರಡಿಯಲ್ಲಿ ಪಳಗಿದ ರಘು ಅವರಿಗೆ ಅಂದಿನ ಅನುಭವಗಳು ರೋಮಾಂಚನ ನೀಡುವಂತದ್ದು.  ಓದು, ಪರೀಕ್ಷೆಗಳ ತರಲೆ ತಾಪತ್ರಯವಿಲ್ಲ ಎಂದು ಭಾವಿಸಿಕೊಂಡು ರಂಗಾಯಣಕ್ಕೆ ಆಕರ್ಷಿತರಾಗಿದ್ದ ರಘು ಅವರಿಗೆ,  ಕೆಲವೇ ದಿನಗಳಲ್ಲಿ  ಜಾಸ್ತಿ ಓದುವುದಕ್ಕೆ ಇರುವುದು ಅಲ್ಲೇ ಎಂದು ಅರ್ಥವಾಯಿತು.  ಓದಬೇಕಿದ್ದ ಕಥೆ, ಕಾದಂಬರಿಗಳ ಜೊತೆಗೆ ಯೋಗ, ಮಾರ್ಷಲ್ ಆರ್ಟ್ಸ್ ಮುಂತಾದ ಅನೇಕ ಕಲೆಗಳನ್ನೂ ತಮ್ಮ ಜ್ಞಾನದ ಬುಟ್ಟಿಗೆ ಪೇರಿಸಿಕೊಂಡು ಬೆಳೆದರು.

ಹಂಸಲೇಖ ಅವರು ನಿರ್ಮಿಸತೊಡಗಿದ 'ಸುಗ್ಗಿ' ಎಂಬ ಚಲನಚಿತ್ರದಲ್ಲಿ ರಘು ಅಭಿನಯಿಸಿದರು. ಆದರೆ, ಅದು ಬಿಡುಗಡೆ ಕಾಣಲಿಲ್ಲ.  ನಂತರ ಎಂ.ಎಸ್. ಉಮೇಶ್ ಅವರ  'ಧಮ್'  ಚಿತ್ರದಲ್ಲಿ  ಅವಕಾಶ ದೊರಕಿತು.  ಅಲ್ಲಿಂದ ಅವರು ಬೇಡಿಯ ಕುರಿತಂತೆ ಹಿಂದೆ ನೋಡಿದ್ದೇ ಇಲ್ಲ.   ‘ಮಣಿ’ ಮತ್ತು ‘ದುನಿಯಾ’ ಚಿತ್ರಗಳಲ್ಲಿನ ಅಭಿನಯಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯೂ ಸೇರಿದಂತೆ, ಫಿಲಂಫೇರ್ ಮತ್ತು ಇನ್ನಿತರ  ಮಾಧ್ಯಮ ಹಾಗೂ ಸಂಘ ಸಂಸ್ಥೆಗಳ ಅನೇಕ ಪ್ರಶಸ್ತಿಗಳೂ ಅವರನ್ನು ಅರಸಿ ಬಂದಿವೆ.    ಅವರ ವಿಭಿನ್ನ ಅಭಿನಯದ ಪಾತ್ರನಿರ್ವಹಣೆ ಜನಮಾನಸವನ್ನು ನಿರಂತರವಾಗಿ ತಟ್ಟುತ್ತಿವೆ.
  
ರಂಗಾಯಣ ರಘು ಅವರು ತಮ್ಮ ಪತ್ನಿ ಮಂಗಳ ಅವರೊಡಗೂಡಿ ‘ಸಂಚಾರಿ ಥಿಯೇಟರ್’ ಎಂಬ ರಂಗಭೂಮಿ ತಂಡವನ್ನೂ ನಿರ್ವಹಿಸುತ್ತಿದ್ದಾರೆ. 

ಪ್ರತಿಭಾವಂತ ರಘು ಅವರ ಕಲಾ ತೇಜಸ್ಸು ಮತ್ತವರ ಬದುಕು ನಿರಂತರ ಬೆಳಗುತ್ತಿರಲಿ ಎಂದು ಹುಟ್ಟುಹಬ್ಬದ ಶುಭಾಶಯ ಹೇಳೋಣ.

Tag: Rangayana Raghu

ಕಾಮೆಂಟ್‌ಗಳಿಲ್ಲ: