ಸೋಮವಾರ, ಏಪ್ರಿಲ್ 23, 2018

ಅತಿಥಿಗಳು"ಅತಿಥಿಗಳು"ಅದೃಶ್ಯಲೋಕದ ಅನೂಹ್ಯ ರೂಪದ
ಅನಂತಕಾಲದ ಯಾತ್ರಿಕರೇ,
ಮಣ್ಣಿನ ಮನದಲಿ ಹೊನ್ನನೆ ಬೆಳೆಯುವ
ಅಪೂರ್ವ ತೇಜದ ಮಾಂತ್ರಿಕರೇ!
ಅತಿಥಿಗಳಹ ನೀವೆಲ್ಲರು ಇಲ್ಲಿಗೆ
ನೆಲಸಲು ಬಂದವರಲ್ಲ;
ಒಂದೇ ಗಳಿಗೆ ಆಮೋದಕೆ ಬರುವಿರಿ,
ಬಂದರಗಳಿಗೆಯೊಳೇ ಮೈಗರೆವಿರಿ;
ವಿಜನ ವಿಜನ ಮನವು,
ಶೂನ್ಯ ಶೂನ್ಯ ದಿನವು

ಇದಿಗೋ ಬಂದೆವು ಬಂದೆವೆನ್ನುವಿರಿ,
ಎದೆಗೋ ನೆನಪಿನ ಬೆಂಕಿಯನೆರೆವಿರಿ;
ಎಂದೂ ಇಲ್ಲದ ಆಶೆತವಕಗಳ
ಒಂದೊಂದೇ ಹೊಸ ಬಯಕೆ ಬವಣೆಗಳ
ತಂದು ಕೂಡಿ, ಗರಿಮೂಡಿ ಹಾರುವಿರಿ- 
ವಿಜನ ವಿಜನ ಮನವು,
ಶೂನ್ಯ ಶೂನ್ಯ ದಿನವು!

ದಟ್ಟ ನೆಳಲ ಕೆಳಗಳಲುವ ಕೊಳದೊಳು
ಥಟ್ಟನೆಲರು ಸುಳಿಯಲು ಎಲೆಎಲೆಗಳು
ಕದಲಿ ಕದಲಿ ಕಂಗೊಳಿಪ ಜರಡೆಯೊಳು
ಬೆಳಕಿನ ಕುಡಿಗಳು, ಮಿಡಿನಾಗರಗಳು
ತೂರಿ ಜಾರಿ ಬಂದೆರಗಿ ಹೋಗುವೋಲು
ಬರುವಿರಣ್ಣ ಈ ಮನಕೆ ಥಟ್ಟನೆ

ಹೇಳುವಂತೆ ಹೊಸತೊಂದು ಗುಟ್ಟನೆ
ನಟಿಸಿ ಅಟಮಟಿಸಿ ಪುಟಿದು ಹೋಗುವಿರಿ;
ಅಂತೆ ಪುಟಿಯ ಬೇಡಿ,
ಎದೆಯನು ಸೇರಿ ಮನೆಯ ಮಾಡಿ!

ಬೆಳಗಾಗಲು ಎವೆ ತೆರೆಯುವ ಮೂಡಲ
ಮಡಿಲಲಿ ಮಲಗಿದ ಹಕ್ಕಿ ಹಕ್ಕಿಗಳ
ಕೊರಳ ಗೀತದಲಿ ಕೆರಳುವ ಹೊರಳುವ
ಸುಂದರ ಸುಮಧುರ ನಾದರೂಪರೇ,
ತಳಿರು ತಳಿರಿನಿಬ್ಬನಿಯ ಗೋಳದಲಿ
ಮೇಳಗೊಂಡು ಮೆರೆಮೆರೆವ ಭೂಪರೇ,
ಅರಳು ಮೊಗ್ಗೆಗಳ ಕಂಪುದಾರಿಯಲಿ
ಅಲೆವ ಅನಂತದ ಯಾತ್ರಿಕರೇ!
ಬನ್ನಿ, ಬನ್ನಿ, ಬನ್ನಿ,
ಇಲ್ಲೇ ಇತಲು ಮುಂದೆ ಬನ್ನಿ!

ಕುಳಿತು ನೀವು ಬೆಳ್ಮುಗಿಲಿನ ರಥದಲಿ
ನೊರೆಮೊರೆದೇರುವ ತಾರಾಪಥದಲಿ
ನಲಿದು ಕೆಲೆದು ಕಿಲಕಿಲನೆ ನಕ್ಕು ಆ 
ನಂದದ ಆಟದಲಿ
ಮೈಮರೆತಲೆವೆಲೆ ಮುದ್ದು ಮಕ್ಕಳೇ,
ಬಾನಿನೂರಿನಲಿ ನೆಲೆಸಿದೊಕ್ಕಲೇ,
ಬನ್ನಿ, ಬನ್ನಿ, ಬನ್ನಿ,
ಇಲ್ಲೇ ಇರಲು ಬನ್ನಿ, ಬನ್ನಿ!

ಮಳೆಬಿಲ್ಲಿನ ತೂಗುಯ್ಯಲನೇರಿ
ತೂಗಿ ತೂಗಿ ಭೂತೀರವ ಸೇರಿ
ತುರುಗಿ ತುರುಗಿ ಬಂದೆರಗುವಿರಹಹಾ!
ವಿಜನ ವನದ ಕಾಸಾರತೀರಕೆ
ಬರುವ ಜಿಂಕೆಯಂತೆ,
ಬಣಗುನೆಲದ ಒಣ ಬಾಯ್ದೆರೆಗಿಳಿಯುವ
ಜೇನ ಹನಿಗಳಂತೆ 
ನಲವಿನಲ್ಲಿ ಮೈಗರೆದ ಮನವು ಮೈ
ಅರಿತು 'ಬಂದಿರಾ?' ಎನ್ನುವ ಮುನ್ನವೆ
ಒಲವಿನೊಂದು ಹನಿ ಜಿನುಗುವ ಮುನ್ನವೆ
ಹಾರಿ ನೆಗೆಯ ಬೇಡಿ,
ಎದೆಯನು ಸೇರಿ ಮನೆಯ ಮಾಡಿ.

ನೀವಿಲ್ಲದೆ ಈ ಮನದೊಳಗೇನಿದೆ?
ನೀವಿದ್ದರೆ ಹೂವಿದೆ ಹೊಸ ಜೇನಿದೆ;
ಬಾನಿನ ಕೆಳೆಯಿದೆ, ಗಾನದ ಬೆಳೆಯಿದೆ
ಮುಗಿಲ ಮಲ್ಲಿಗೆಯ ಎಳೆತ ಸೆಳೆತವಿದೆ,
ವೃಂದಾವನವಿದೆ, ಕಲ್ಪವೃಕ್ಷವಿದೆ.
ಅದು ಇದೆ, ಇದು ಇದೆ, ಎಲ್ಲ ಎಲ್ಲ ಇದೆ.
ನಿಮಗಾಗಿಯೆ ಈ ಮನದರಮನೆ ಇದೆ
ತೆರವು, ತೆರವು, ತೆರವು;
ನಿಮಗಾಗಿಯೆ ಎದೆಗದ್ದುಗೆ ಕಾದಿದೆ,
ಬರಿದು, ಬರಿದು, ಬರಿದು;
ಕನಸಿನ ಲೋಕದ ಬಣ್ಣ ಬಣ್ಣ ತಳೆದಣ್ಣರೆ, ಐತನ್ನಿ!
ನನ್ನಿಯ ನಾಡಿನ ಚಿಣ್ಣರೆ,
ನನ್ನೊಳಗಣ್ಣಿನ ಸಣ್ಣಸಣ್ಣರೇ,
ಬನ್ನಿ, ಬನ್ನಿ, ಬನ್ನಿ;
ಇಲ್ಲೇ ನೆಲಸಿ; ಬನ್ನಿ, ಬನ್ನಿ!
ಅತಿಥಿಗಳಹ! ನೀವೆಲ್ಲರು ಇಲ್ಲಿಗೆ
ನೆಲಸಲು ಬಂದವರಲ್ಲ;
ಒಂದೇ ಗಳಿಗೆ ಆಮೋದಕೆ ಬರುವಿರಿ,
ಬಂದರಗಳಿಗೆಯೊಳೇ ಮೈಗರೆವಿರಿ;
ವಿಜನ ವಿಜನ ಮನವು,
ಶೂನ್ಯ ಶೂನ್ಯ ದಿನವು!


ಸಾಹಿತ್ಯ: ಎಂ. ಗೋಪಾಲಕೃಷ್ಣ ಅಡಿಗ

ಕಾಮೆಂಟ್‌ಗಳಿಲ್ಲ: