ಶನಿವಾರ, ಜೂನ್ 9, 2018

ಜಯಲಕ್ಷ್ಮೀ ಪಾಟೀಲ್ಜಯಲಕ್ಷ್ಮೀ ಪಾಟೀಲ್


ಇಂದು ಬಹುಮುಖಿ ಸೃಜನಶೀಲರಾದ ಜಯಲಕ್ಷ್ಮೀ ಪಾಟೀಲ್ ಅವರ ಜನ್ಮದಿನ.  ಗುಲ್ಬರ್ಗಾ ಜಿಲ್ಲೆಯ ನಿಂಬಾಳದವರಾದ  ಜಯಲಕ್ಷ್ಮೀ ಪಾಟೀಲರು, ಜೂನ್ 8, 1968 ವರ್ಷದಲ್ಲಿ ಗುಲ್ಬರ್ಗಾ ಜಿಲ್ಲೆಯ ಯಾದಗಿರಿಯಲ್ಲಿ ಜನಿಸಿದರು.  ವಿಜ್ಞಾನ ಪಧವೀದರರಾದ ಅವರಿಗೆ ಓದಿನ ಜೊತೆಗೆ  ಅಭಿನಯ, ಬರವಣಿಗೆ, ಸಂಗೀತ, ನೃತ್ಯ ಮುಂತಾದ ಸಾಂಸ್ಕೃತಿಕ ಆಸಕ್ತಿಗಳೂ ಜೊತೆಗೂಡಿದ್ದವು.

ಕಲಾವಿದೆ, ಕವಯತ್ರಿ, ಜನಪರ ಧ್ವನಿ, ಸಂಘಟನಾಗಾರ್ತಿ, ಪ್ರತಿಭೆಗಳ ಪೋಷಕಿ ಹೀಗೆ ವಿವಿಧ ನೆಲೆಗಳಲ್ಲಿ ಕಾಣುವ ಜಯಲಕ್ಷ್ಮೀ ಪಾಟೀಲರು ಅಚ್ಚರಿ ಹುಟ್ಟಿಸುವಷ್ಟು ವಿವಿಧ ಕಾಳಜಿಗಳ ಪ್ರತಿನಿಧಿಗಳಾಗಿದ್ದಾರೆ.  ರಂಗಭೂಮಿಯಲ್ಲಿ ಹಲವು ವಿಶಿಷ್ಟ  ಪಾತ್ರಗಳಿಗೆ ಜೀವ ತುಂಬಿ, ಹಲವಾರು ನಾಟಕಗಳನ್ನೂ  ನಿರ್ದೇಶಿಸಿ,  ‘ಹೆಜ್ಜೆ’ ಎಂಬ ತಂಡವನ್ನು ಬೆಳೆಸಿದ್ದಾರೆ.  ಅವರು ಅಭಿನಯಿಸಿದ ಚಲನ ಚಿತ್ರಗಳಲ್ಲಿ ರಾಷ್ಟ್ರೀಯ ಸ್ವರ್ಣ ಕಮಲ ಪ್ರಶಸ್ತಿ ಪಡೆದ ‘ಪುಟಾಣಿ ಪಾರ್ಟಿ’, ರಾಜ್ಯಪ್ರಶಸ್ತಿ ಪಡೆದ ‘ಬನದ ನೆರಳು’ ಮುಂತಾದವು ಸೇರಿವೆ.  ‘ಮುಕ್ತ ಮುಕ್ತ’, ‘ಮಹಾ ಪರ್ವ’, ‘ಮೌನ ರಾಗ’ ಮುಂತಾದ ಪ್ರಸಿದ್ಧ ಧಾರವಾಹಿಗಳನ್ನೊಳಗೊಂಡಂತೆ ಅನೇಕ ಕಿರುತೆರೆಯ ಧಾರಾವಾಹಿಗಳಲ್ಲಿ ಅವರು ನಟಿಸುತ್ತಾ ಹೆಸರಾಗಿದ್ದಾರೆ.  ಹಲವು  ಕಿರು ಚಿತ್ರಗಳನ್ನೂ  ನಿರ್ಮಿಸಿದ್ದಾರೆ.

ಕವಯತ್ರಿಯಾಗಿ ‘ನೀಲ ಕಡಲ ಭಾನು’ ಕಾವ್ಯ ಸಂಕಲನವೇ ಅಲ್ಲದೆ ಜಯಲಕ್ಷ್ಮೀ ಪಾಟೀಲರು ಮಹಿಳಾಪರ ಹಾಗೂ ವಿವಿಧ ಚಿಂತನೆಗಳ ವೈವಿಧ್ಯಮುಖಿ ಬರವಣಿಗೆಗಳಲ್ಲೂ  ಕಾಣಬರುತ್ತಾರೆ.  ಅವರು ಸಾರಥ್ಯದಲ್ಲಿರುವ   ‘ಈ ಹೊತ್ತಿಗೆ’  ಸಂಘಟನೆ ಪ್ರತೀ ತಿಂಗಳು ವಿಶಿಷ್ಟ ಸಾಹಿತ್ಯಕ ಚರ್ಚೆಯ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದರ ಜೊತೆಗೆ,  ಹಿರಿಯ ಸಾಹಿತ್ಯ ಸಾಧಕರ ಪಾಲ್ಗೊಳ್ಳುವಿಕೆಗಳ ಮೂಲಕ ದೊಡ್ಡ ಪ್ರಮಾಣದ ಸಾಹಿತ್ಯಾಸಕ್ತಿಯ  ಸಂಚಲನವನ್ನು ನಿರ್ಮಿಸುತ್ತಿದೆ.  ಜೊತೆಗೆ ಪ್ರತಿಭಾನ್ವಿತ ಬರಹಗಾರರನ್ನು ಸೃಷ್ಟಿಸುವ ಮಹತ್ಕಾರ್ಯವನ್ನೂ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.  ಹಲವು ರೀತಿಯ ಕಮ್ಮಟಗಳು ಈ ವೈವಿಧ್ಯತೆಗಳಿಗೆ ವಿಶಿಷ್ಟ ಸೇರ್ಪಡೆಯಾಗಿವೆ.   

ಜಯಲಕ್ಷ್ಮೀ ಪಾಟೀಲ್ ಅವರ ಮತ್ತೊಂದು ಮಹತ್ವದ ಕಾರ್ಯವೆಂದರೆ ಅವರು ಮಹಿಳೆಯರು ಮತ್ತು ಶೋಷಣೆಗೆ ಒಳಗಾದವರ ಬೆಂಬಲಕ್ಕೆ ಸ್ಥಾಪಿಸಿರುವ ‘ಜನ ದನಿ’.  ಈ ಮೂಲಕ ನೊಂದವರಿಗೆ ಬೆಂಬಲ ಮತ್ತು  ಮಾರ್ಗದರ್ಶನ ಹಾಗೂ ಸಮಾಜದಲ್ಲಿ ಶೋಷಣೆಗೆ ಒಳಗಾಗದಂತೆ  ಜಾಗೃತಿ ಮೂಡಿಸುವ ಕೈಂಕರ್ಯವನ್ನು ವಿಶಿಷ್ಟ ಜನಪರ ಕಾಳಜಿಗಳೊಂದಿಗೆ ಅವರು ನಡೆಸಿಕೊಂಡು ಬರುತ್ತಿದ್ದಾರೆ. 

ಹಲವಾರು ವ್ಯಕ್ತಿಗಳು ಹಲವು ರೀತಿಯ ಕಲೆ, ಸಾಹಿತ್ಯ, ಸಾಂಸ್ಕೃತಿಕ ಮಾತು ಸಾಮಾಜಿಕ ಆಸಕ್ತಿಯ ಒಂದೊಂದು ಅಂಗಗಳಲ್ಲಿ ಗಮನ ಹರಿಸುವುದುಂಟು.  ಆದರೆ ಹೀಗೆ ವೈವಿಧ್ಯರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಜನರ ಮಧ್ಯದಲ್ಲಿದ್ದುಕೊಂಡು ಅವರಲ್ಲೊಂದಾಗಿ ಜನಪರ ದನಿಯಾದ ವೈಶಿಷ್ಟ್ಯವುಳ್ಳವರು ಅಪರೂಪ.  ಹೀಗೆ ಅಪರೂಪದವರಾಗಿದ್ದರೂ ನಿಜರೂಪದಲ್ಲಿ ಎಲ್ಲರಲ್ಲೊಂದಾಗಿ ವಿಶಿಷ್ಟರಾಗಿರುವ ಜಯಲಕ್ಷ್ಮೀ ಪಾಟೀಲರಿಗೆ ಜನ್ಮದಿನದ ಶುಭ ಹಾರೈಸುತ್ತಾ ಅವರ ಕಾರ್ಯಚಟುವಟಿಕೆಗಳಿಗೆ ನಿರಂತರ ಯಶಸ್ಸು ಮತ್ತು ಬೆಂಬಲವನ್ನು ಹಾರೈಸೋಣ.

Tag: Jayalaxmi Patil

ಕಾಮೆಂಟ್‌ಗಳಿಲ್ಲ: