ಬುಧವಾರ, ಜೂನ್ 20, 2018

ಆಂಗ್ ಸಾನ್ ಸೂ ಕಿಆಂಗ್ ಸಾನ್ ಸೂ ಕಿ

ಕೆಲವು ಜನರ ಚರಿತ್ರೆಯನ್ನು ಓದಿದಾಗ ಅವರು ಇಷ್ಟೊಂದು ಗಟ್ಟಿಗರಾಗಿ, ತ್ಯಾಗಿಗಳಾಗಿ, ಕಷ್ಟ ಸಹಿಷ್ಣುಗಳಾಗಿರಲು ಸಾಧ್ಯವೇ ಎಂಬಷ್ಟು ಅಚ್ಚರಿ ಹುಟ್ಟುತ್ತೆ.  ಅದೂ ಅವರು ಹಿಂದೆ ಎಂದೋ ಇದ್ದರು, ಸತ್ಯ ಹರಿಶ್ಚಂದ್ರನಂತೆ ಎಂಬುದಲ್ಲ! ಈ ನಮ್ಮ ಸ್ವಾರ್ಥಪೂರ್ಣ ವಿಶ್ವದಲ್ಲೂ ನಮ್ಮಗಳ ಮಧ್ಯೆಯೂ ಅಂತಹ ಕೆಲವರನ್ನು  ನಮ್ಮ ಲೋಕ ಕಂಡಿದೆ. ಅಂತಹವರಲ್ಲಿ ಒಬ್ಬರಾದ ಆಂಗ್ ಸಾನ್ ಸೂ ಕಿ ಹದಿನೈದಕ್ಕೂ ಹೆಚ್ಚು  ವರ್ಷಗಳನ್ನು ಸೆರೆವಾಸದಲ್ಲೇ ಕಳೆದವರು.

ಜೂನ್ 19, 1945ರಲ್ಲಿ ಹುಟ್ಟಿದ ಆಂಗ್ ಸಾನ್ ಸೂ ಕಿ  ಬರ್ಮಾ ದೇಶದಲ್ಲಿ ಪ್ರಸಕ್ತದಲ್ಲಿ ಪ್ರಥಮ ಕೌನ್ಸೆಲರ್ ಹುದ್ಧೆಯಲ್ಲಿ ಅಲಂಕೃತರು. ಇದು ಪ್ರಧಾನಮಂತ್ರಿಗಳ ಹುದ್ಧೆಗೆ ಸಮಾನವಾದದ್ದು.  ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ಅಧ್ಯಕ್ಷರಾದ ಇವರು ಈ ಹಿಂದೆ ಕೆಲವು ಕಾಲ ಪ್ರಪ್ರಥಮವಾಗಿ ಸಚಿವ ಸ್ಥಾನ ಪಡೆದ ಮಹಿಳೆಯಾಗಿ, ವಿರೋಧಪಕ್ಷದ ನಾಯಕತ್ವವಹಿಸಿದವರಾಗಿ ಸಹಾ ಗೋಚರಿಸಿದವರು. 1990ರ ಸಾರ್ವತ್ರಿಕ ಚುನಾವಣೆಯಲ್ಲಿ ಇವರ ಪಕ್ಷ ಪಾರ್ಲಿಮೆಂಟಿನಲ್ಲಿ 81 ಪ್ರತಿಶತ ಸ್ಥಾನಗಳನ್ನು ಗೆದ್ದಿತಾದರೂ 1989 ರಿಂದಲೇ  ಸೂ ಕಿ ಅವರನ್ನು ಬಂಧನದಲ್ಲಿಟ್ಟಿದ್ದ ಅಲ್ಲಿನ ಮಿಲಿಟರಿ ಆಡಳಿತ, ಅಧಿಕಾರ ಹಸ್ತಾಂತರಕ್ಕೊಪ್ಪದೆ ಚುನಾವಣೆಯ ಫಲಿತಾಂಶವನ್ನು ಶೂನ್ಯಗೊಳಿಸಿತು.

ಬಂಧನದಲ್ಲಿರುವಾಗಲೇ 1991ರ ನೋಬೆಲ್ ಶಾಂತಿ ಪ್ರಶಸ್ತಿಯನ್ನೊಳಗೊಂಡು ಅನೇಕ ಜಾಗತಿಕ ಪ್ರಶಸ್ತಿಗಳು ಸಂದ  ಆಂಗ್ ಸಾನ್ ಸೂ ಕಿ  ವಿಶ್ವಪ್ರಸಿದ್ಧರಾದರು.  ಕೆನಡಾ ದೇಶ  ಸೂ ಕಿ ಅವರಿಗೆ ವಿಶ್ವದ ಕೇವಲ ಆರು ಗಣ್ಯರಿಗೆ ಮಾತ್ರ ನೀಡಲಾಗಿರುವ ಸ್ವಯಂ ಘೋಷಿತ ಪೌರತ್ವವನ್ನು ಕೂಡಾ ಉದ್ಘೋಷಿಸಿತು.  ಭಾರತ ಸರ್ಕಾರ ಸಹಾ ಇವರಿಗೆ ಅಂತಾರಾಷ್ಟ್ರೀಯ ತಿಳುವಳಿಕೆಗಾಗಿನ ಪ್ರಶಸ್ತಿಯನ್ನು ಕೊಟ್ಟಿತು. ತನಗೆ ಬಂದ ಪ್ರಶಸ್ತಿಯ ಹಣವನ್ನೆಲ್ಲಾ ಸೂ ಕಿ ಅವರು  ಬರ್ಮಾ ದೇಶದ ಜನರ ಆರೋಗ್ಯ ಮತ್ತು ಶಿಕ್ಷಣ ಅಭಿವೃದ್ಧಿಗಾಗಿನ ನಿಧಿ ರೂಪವಾಗಿ ಪರಿವರ್ತಿಸಿದರು.

ಸೂ ಕಿ ಅವರ ತಂದೆ ಆಂಗ್ ಸಾನ್ ಆಧುನಿಕ ಬರ್ಮಾದ ತಂದೆ ಎನಿಸಿಕೊಂಡಿದ್ದಾರೆ.   ಆಂಗ್ ಸಾನ್ 1947ರಲ್ಲಿ ಬರ್ಮಾ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟರಾದರೂ ಅದೇ ವರ್ಷ ಅವರ ವಿರೋಧಿಗಳಿಂದ ಹತ್ಯೆಗೊಳಗಾದರು. ಈಕೆಯ ತಮ್ಮ 8 ವರ್ಷದವನಿದ್ದಾಗ ತೀರಿಕೊಂಡ. ಅಣ್ಣ ಕ್ಯಾಲಿಫೋರ್ನಿಯಾಕ್ಕೆ ತೆರಳಿ ಅಮೇರಿಕ ದೇಶದ ನಾಗರಿಕತೆ ಪಡೆದುಕೊಂಡ. ತಾಯಿ ಭಾರತ ಹಾಗೂ ನೇಪಾಳ ದೇಶಗಳಿಗೆ ರಾಯಭಾರಿಯಾಗಿದ್ದರು. ಆಂಗ್ ಸಾನ್ ಸೂ ಕಿ ಭಾರತದಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ 1964ರಲ್ಲಿ ರಾಜಕೀಯ ಶಾಸ್ತ್ರದ  ಪದವಿ ಪಡೆದರು. ಮುಂದೆ ಆಕ್ಸಫರ್ಡ್ ನಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ನ್ಯೂಯಾರ್ಕ್'ಗೆ ತೆರಳಿದರು. ಅಲ್ಲಿ ಅವರ ಮದುವೆಯಾಗಿ ಎರಡು ಮಕ್ಕಳು ಹುಟ್ಟಿದರು. ನಂತರ ಲಂಡನ್ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ  ಮಾಡಿದರು. ಮುಂದೆ ಸಿಮ್ಲಾದಲ್ಲಿ ಎರಡು ವರ್ಷ ಇದ್ದರು. ನಂತರ ಬರ್ಮಾ ಸರಕಾರದ ಸೇವೆಯಲ್ಲಿ ಕೆಲಕಾಲ ಇದ್ದರು.

ಮುಂದೆ 1988ರಲ್ಲಿ ತಾಯಿಯ ಅನಾರೋಗ್ಯದ ಕಾರಣ ಬರ್ಮಾಕ್ಕೆ ಮರಳಿದರು. ನಂತರ ಪ್ರಜಾಸತ್ತೆಯ ಪರವಾದ ಚಳುವಳಿಯ ಮುಂದಾಳತ್ವ ವಹಿಸಿದರು. ಪತಿಗೆ ಅನಾರೋಗ್ಯವುಂಟಾಗಿ ಪರಿಸ್ಥಿತಿ ಗಂಭೀರವಾದಾಗ್ಯೂ ಬರ್ಮಾದ ಆಡಳಿತವು ಅವರಿಗೆ ಬರ್ಮಾದೊಳಕ್ಕೆ ಪ್ರವೇಶಿಸಲು ಬಿಡಲಿಲ್ಲ. ಆಂಗ್ ಸಾನ್ ಸೂಕಿಯವರಿಗೇ ದೇಶದಿಂದ ಹೊರಹೋಗಿ ಗಂಡನನ್ನು ಭೆಟ್ಟಿಯಾಗುವುದಕ್ಕಾಗಿ ಸೂಚಿಸಿತು. ಒಮ್ಮೆ ಬರ್ಮಾ ತೊರೆದರೆ ಮತ್ತೆ ಒಳಬರಲು ಬರ್ಮಾ ಆಡಳಿತವು ಬಿಡಲಿಕ್ಕಿಲ್ಲ ಎಂದು ಆಂಗ್ ಸಾನ್ ಸೂಕಿ ಬರ್ಮಾ ಬಿಡಲು ಒಪ್ಪಲಿಲ್ಲ. ಅವರ ಪತಿಯು 1999ರಲ್ಲಿ ತೀರಿಕೊಂಡರು. 1989ರಲ್ಲಿ ಮೊದಲ ಬಾರಿಗೆ ಗೃಹಬಂಧನದಲ್ಲಿ ಇಟ್ಟಾಗಿನಿಂದ ಅವರಿಗೆ ತಮ್ಮ ಪತಿಯನ್ನು ಕೇವಲ ಐದುಬಾರಿ ಮಾತ್ರ ಭೆಟ್ಟಿಯಾಗಲು ಸಾಧ್ಯವಾಯಿತು. ಮಕ್ಕಳು ಯುನೈಟೆಡ್ ಕಿಂಗಡಂನಲ್ಲಿ ಇದ್ದ ಕಾರಣ ಆಂಗ್ ಸಾನ್ ಸೂ ಕಿ ಮಕ್ಕಳಿಂದಲೂ ದೂರವಾಗಿದ್ದರು.   ಅವರು ಬಂಧನದಲ್ಲಿದ್ದಾಗ ಅವರನ್ನು ಭೇಟಿ ಮಾಡಲು ಕೆಲವೊಂದು ಪ್ರತಿಷ್ಟಿತ ರಾಷ್ಟ್ರಗಳಿಂದ ಬಂದ ಅಂತರರಾಷ್ಟ್ರೀಯ ಗಣ್ಯರಿಗೆ ಮಾತ್ರ ಅವಕಾಶವಿತ್ತು.  ಉಳಿದಂತೆ ಅವರು ಏಕಾಕಿ ಜೀವನ ಕಳೆಯುವ ಸ್ಥಿತಿ ಇತ್ತು.  ಒಬ್ಬ ಪತ್ರಕರ್ತರಿಗೆ  ಅವರನ್ನು ಭೇಟಿಯಾಗಲು ಅವಕಾಶ ನೀಡಲಾಯಿತಾದರೂ ಅವರು ದೇಶದಿಂದ ಹೊರಹೋಗುವಾಗ ಅವರ ಬಳಿ ಇದ್ದ ಫಿಲ್ಮ್ ರೋಲ್ ಅಂಥಹ ಎಲ್ಲಾ ಸಾಮಗ್ರಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

ವಿಶ್ವದೆಲ್ಲೆಡೆಯಿಂದ ಆಂಗ್ ಸಾನ್ ಸೂ ಕಿ ಅವರನ್ನು  ಬಿಡುಗಡೆ ಮಾಡಲು  ಒತ್ತಡ ಹೊಂದಿದ್ದ  ಬರ್ಮಾ ಸರ್ಕಾರ 2010ರ ವರ್ಷದ   ನವೆಂಬರ್ ತಿಂಗಳಲ್ಲಿ ತನಗಿಷ್ಟ ಬಂದ ಹಾಗೆ ಚುನಾವಣೆ ನಡೆಸಿಕೊಂಡು,  ಚುನಾವಣೆ ಮುಗಿದ ಒಂದು ವಾರದ ನಂತರದಲ್ಲಿ   13 ನವಂಬರ್ 2010ರಂದು ಸೂ ಕಿ ಅವರನ್ನು ಗೃಹ ಬಂಧನದಿಂದ ಮುಕ್ತಗೊಳಿಸಿತು.  2012  ವರ್ಷದ ಏಪ್ರಿಲ್ ಮಾಸದಲ್ಲಿ ಆಂಗ್ ಸಾನ್ ಸೂ ಕಿ ಅವರನ್ನೊಳಗೊಂಡಂತೆ ಅವರ ಪಕ್ಷವು ಬರ್ಮಾದಲ್ಲಿನ  ಕೆಲವೊಂದು ತೆರವಾದ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ 45 ಸ್ಥಾನಗಳಲ್ಲಿ 43 ಸ್ಥಾನಗಳನ್ನು ಗಳಿಸಿತು.  ಸೂ ಕಿ ಅವರು ಹೇಳುವಂತೆ ಚುನಾವಣೆಯಲ್ಲಿ ಫಲಿತಾಂಶವನ್ನು  ತನ್ನ ಪರವಾಗಿಸಿಕೊಳ್ಳಲು  ಅಲ್ಲಿನ ಸರ್ಕಾರ ಸಾಕಷ್ಟು ಅಕ್ರಮಗಳನ್ನು ನಡೆಸಿತು.   ಸೂ ಕಿ ಅವರಿಗೆ ಅನಾರೋಗ್ಯ ಉಂಟಾಗಿ ಸರಿಯಾಗಿ ಪ್ರಚಾರವನ್ನೂ ಮಾಡಿಕೊಳ್ಳಲು ಆಗಲಿಲ್ಲ.  ಆದರೂ  ಸೂ ಕಿ ಮತ್ತು ಅವರ ಸಂಗಡಿಗರಿಗೆ ದೊರೆತ ಬಹುಮತ ಅತ್ಯಂತ ಬೃಹತ್ತಾಗಿತ್ತು.  ಅದನ್ನು ಅಲ್ಲಿನ ಸರ್ಕಾರಕ್ಕೆ  ಅಲ್ಲಗೆಳೆಯಲಾಗಲಿಲ್ಲ.  ಅಂತರರಾಷ್ಟ್ರೀಯ ಮಟ್ಟದಲ್ಲಿ ಸೂ ಕಿ ಅವರ ಪರವಾಗಿರುವ ನಿಲುವುಗಳನ್ನು ಒಪ್ಪದೆ ವಿಧಿ ಇಲ್ಲದ ಸ್ಥಿತಿಯಲ್ಲಿದ್ದ  ಬರ್ಮಾದ ಸರ್ಕಾರ ಸೂ ಕಿ ಮತ್ತು ಆಕೆಯ ಸಂಗಡಿಗರ ಗೆಲುವನ್ನು ದೃಢೀಕರಿಸಿತು.  ಆದರೆ ಪ್ರಮಾಣ ಸ್ವೀಕರಿಸುವಾಗ  “ನಮ್ಮ ದೇಶದ ಸಂವಿಧಾನವನ್ನು ಗೌರವಿಸುತ್ತೇನೆ” ಎಂದು ಹೇಳಲು ಸೂ ಕಿ ಅವರಿಗೆ ಮನಸ್ಸಿರಲಿಲ್ಲ.  ಆದರೆ, ಎಲ್ಲೋ ಹೊರಗಿದ್ದು ಹೋರಾಡುವುದಕ್ಕಿಂತ ಆಡಳಿತ ಪಕ್ಷದೊಡನೆ ವಿರೋಧಪಕ್ಷವಾಗಿ ಕುಳಿತು ಹೋರಾಡುವುದೇ ಅರ್ಥಪೂರ್ಣ ಎಂಬ ನಿಲುವಿನಿಂದ ಅವರು ತಮ್ಮ ದೇಶದ ಸಂಸತ್ತನ್ನು ಪ್ರವೇಶಿಸಿದರು.  ಮುಂದೆ 2015 ವರ್ಷದ ಚುನಾವಣೆಗಳಲ್ಲಿ ಶೇಕಡಾ 86 ರಷ್ಟು ಸ್ಥಾನಗಳನ್ನು ಗಳಿಸಿ ಜಯಭೇರಿ ಬಾರಿಸಿತು.  ಇಷ್ಟಾದರೂ ಅವರ ದಿವಂಗತ ಪತಿ ಮತ್ತು ಮಕ್ಕಳು ವಿದೇಶಿ ನಿವಾಸಿಗಳೆಂಬ  ಕ್ಷುಲ್ಲಕ  ಸಂವಿಧಾನದ ನಿಬಂಧನೆಯಡಿ ಅವರಿಗೆ  ದೇಶದ ಅಧ್ಯಕ್ಷೀಯ ಸ್ಥಾನದ ಗೌರವವನ್ನು ನಿರಾಕರಿಸಲಾಯಿತು. 

ಆಂಗ್ ಸಾನ್ ಸೂಕಿ ಅವರು  ಅತ್ಯಂತ ಕಷ್ಟಪಟ್ಟು ಜನಬೆಂಬಲ ಗಳಿಸಿ, ವಿಶ್ವದೆಲ್ಲೆಡೆಯ ಬೆಂಬಲವನ್ನೂ ಗಳಿಸಿದವರು.   ಅಧಿಕಾರದಲ್ಲಿ ಇಲ್ಲದಿದ್ದಾಗ ಬರುವ ಜನಪ್ರಿಯತೆ ಅಧಿಕಾರ ಬಂದಾಗ ಜನ ನಿರೀಕ್ಷೆಗಳಿಗೆ ಸ್ಪಂದಿಸಲಾರದೆ ಮಸಕಾಗಿ ಹೋಗುತ್ತದೆ.  ಇದಕ್ಕೆ ವಿಶ್ವದಲ್ಲಿ ಯಾವ ನಾಯಕರೂ ಹೊರತಾಗಿಲ್ಲ. 

ಅದೇನೇ ಇರಲಿ ಆಂಗ್ ಸಾನ್ ಸೂಕಿ ಅವರ ಎಡಬಿಡದ ಹೋರಾಟ  ಮಿಲಿಟರಿ ಆಡಳಿತವನ್ನು  ಕೊನೆಗಾಣಿಸಿ ಪ್ರಜಾಪ್ರಭುತ್ವ ಸ್ಥಾಪನೆಗೆ ಹಾದಿ ಮಾಡಿಕೊಟ್ಟದ್ದನ್ನು ಮರೆಯುವಂತಿಲ್ಲ.    ವಿಶ್ವದಲ್ಲಿ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಎಂಬ ದಿವ್ಯ ಕೊಡುಗೆ ಆಂಗ್ ಸಾನ್ ಸೂ ಕಿ ಅಂತಹ ಹಿಂದೆ ಇದ್ದ ಬಹಳಷ್ಟು ಮಹನೀಯರ ಕೊಡುಗೆಯಾಗಿದ್ದು, ಈ ಕೊಡುಗೆ  ನಿತ್ಯ ಸ್ಮರಣೀಯವಾದುದಾಗಿದೆ.  ಈ ನಿಟ್ಟಿನಲ್ಲಿ ಇಂತಹ ಎಲ್ಲಾ ಮಹನೀಯರಿಗೆ, ಆಂಗ್ ಸಾನ್ ಸೂ ಕಿ ಅಂತಹ ಶ್ರೇಷ್ಠ ಮಾನವತಾವಾದಿಗಳಿಗೆ ಇಡೀ ವಿಶ್ವ ಎಂದೂ ಕೃತಜ್ಞವಾಗಿರುತ್ತದೆ.

Tag: Aung San Su Kyi

1 ಕಾಮೆಂಟ್‌:

Anantha Krishna ಹೇಳಿದರು...

ಆದರೆ ಬರ್ಮಾದ ಮುಸ್ಲಿಮರ ಕುಱಿತು ಕಠಿನ ನಿಲುವು ತಳೆದರೆಂಬ ಆರೋಪವಿದೆ.