ಗುರುವಾರ, ಜೂನ್ 21, 2018

ವಿಶ್ವ ಸಂಗೀತ ದಿನ


ವಿಶ್ವ ಸಂಗೀತ ದಿನ

ಇಂದು ವಿಶ್ವ ಸಂಗೀತ ದಿನವಂತೆ. 

ಈ ವಿಶ್ವದಲ್ಲಿ ಹಲವಾರು ಭಾಷೆಗಳಿವೆ.  ಆದರೆ ಎಲ್ಲ ಭಾಷೆಗಳನ್ನೂ ಮೀರಿದ ಒಂದು ವಿಶಿಷ್ಟ ಭಾಷೆಯಿದೆ.  ಅದು ಸಂಗೀತ. ವಾಲ್ಮೀಕಿ ಮಹರ್ಷಿಗಳು “ಸಂಗೀತದ ರಸಸ್ವಾದದ ಅನುಭೂತಿಯನ್ನು ಶಿಶುಗಳೂ ಪಶುಗಳೂ ಕೂಡಾ ಆನಂದಿಸುತ್ತವೆ” ಎನ್ನುತ್ತಾರೆ.  ಅವರ ನುಡಿ ಕೇವಲ ಅಲಂಕಾರಿಕ ನುಡಿಯಲ್ಲ.   ಇತ್ತೀಚೆಗೆ ಅಂತರ್ಜಾಲದಲ್ಲಿ “ಯಾವುದೋ ಐರೊಪ್ಯ ದೇಶದ ಒಂದು ಪುಟ್ಟ ಹುಡುಗಿ ಅಕಾರ್ಡಿಯನ್ ತೆರನಾದ ವಾದ್ಯವೊಂದರಲ್ಲಿ ಸಂಗೀತ ನುಡಿಸಿದೊಡನೆಯೇ ಹುಲ್ಲುಗಾವಲಿನಲ್ಲಿನಲ್ಲಿರುವ  ಅನೇಕ ಹಸುಗಳು ಆಕೆಯ ಬಳಿ ಓಡಿ ಬರುವ ವಿಡಿಯೋ” ಪ್ರಸರಣಗೊಂಡಿದ್ದನ್ನು ನಾವು ನೋಡಿದ್ದೇವೆ.  ಶ್ರೀಕೃಷ್ಣನ ಕೊಳಲಿಗೆ ಮರುಳಗಾದ ಬಾಲರು, ಹೆಣ್ಣು ಮಕ್ಕಳು, ಮುದುಕರು,  ಪಶು ಪಕ್ಷಿಗಳು, ಗಿಡ ಮರಗಳು ಹೀಗೆ  ಯಾವುವೂ ಇರಲಿಲ್ಲ.  ಅಂತೆಯೇ  ನಮ್ಮ ಮನಸ್ಸು ಮೌನದಿಂದ ಆಲಿಸಲು ಶಕ್ತವಾದರೆ ಮಕ್ಕಳ ಅಳುವಿನಲ್ಲಿ, ಅನ್ಯಭಾಷಿಗರ ಅರ್ಥವಾಗದ ಮಾತಿನಲ್ಲಿ, ಗಿಡ ಮರಗಳ ಹೊಯ್ದಾಡುವಿಕೆಯಲ್ಲಿ, ಪ್ರಾಣಿಗಳ ಕೂಗಲ್ಲಿ,  ಹಕ್ಕಿಗಳ ಚಿಲಿಪಿಲಿಯಲ್ಲಿ ಹೀಗೆ ‘ಎಲ್ಲೆಲ್ಲು ಸಂಗೀತವಿದೆ, ಕೇಳುವ ಕಿವಿ ಮಾತ್ರವಲ್ಲ ಹೃದಯವಿದ್ದಾಗ’.

ವಿಶ್ವದ ಪ್ರತೀ ಜನಾಂಗಕ್ಕೂ ತನ್ನದೇ ಆದ ರೀತಿಯ ಸಂಗೀತವಿದೆ.  ಭಾಷೆಯ ಹುಟ್ಟೇ ನಾದದಿಂದ ಅಂದರೆ ಸಂಗೀತದಿಂದ ಪ್ರಾರಂಭಗೊಂಡದ್ದು.  ಅದನ್ನು ಗದ್ದಲಗೊಳಿಸುತ್ತಿರುವುದು ನಾವೇ ಎಂದು ಬೇರೆ ಹೇಳಬೇಕಿಲ್ಲ.  ಯಾಕೆಂದರೆ ನಮ್ಮ ಮನಸ್ಸಿನ ಆಲೋಚನೆಗಳನ್ನು ಹೊರತು ಬೇರೆಯದಾದ ಚಿಂತನೆಗಳನ್ನೆಲ್ಲವನ್ನೂ ವಿರೋಧಿಸುವ  ಅಸಹನಾತ್ಮಕ ಮನೋಭಾವ ನಮ್ಮದಾಗಿರುವುದು.  ಅದಿರಲಿ ನಮ್ಮ ಭಾರತೀಯ ಬದುಕಿನ ಸಂಗೀತಕ್ಕೆ ಪುನಃ ಬರೋಣ.

ಹಿಂದೆ ಎಲ್ಲವೂ ಗಾನ, ಇಲ್ಲವೇ ಕಾವ್ಯ ರೂಪವೇ ಕಲೆಯಾಗಿತ್ತು.  ಹಾಗಾಗಿ ವೇದ ಪುರಾಣಗಳಿಂದ ಮೊದಲ್ಗೊಂಡು ಎಲ್ಲವೂ ಕಾವ್ಯವೇ.  ಅದು ಲಿಖಿತ ರೂಪದಲ್ಲಿರಲಿಲ್ಲ.  ಲಿಪಿ ಬಂದದ್ದೇ ಬಹು ತಡವಾಗಿ. ಎಲ್ಲವೂ ಜನಪದದಲ್ಲಿ ಪ್ರವಹಿನಿಯಾಗಿ ಹರಿಯುತ್ತಿತ್ತು.  ಮುಂದೆ ಮಾನವ ವ್ಯವಹಾರ ಕಲಿತ ಮೇಲೆ, ಬದುಕೇ ಕಲೆಯಾಗಿದ್ದು ಬದಲಾಗಿ,  ಬದುಕೆಂಬ ವ್ಯವಹಾರದ ಮಧ್ಯದಲ್ಲಿ ಕಲೆ ಎಂಬುದಕ್ಕೆ ಪ್ರತ್ಯೇಕ ಗುರುತಿಸುವಿಕೆ ಹುಟ್ಟಿರಬೇಕು. ಹೀಗಾಗಿ ಇಂದು ಸಂಗೀತವೆಂಬುದು ಒಂದು ಕಲೆಯಾಗಿದೆ.  ಈ ಕಲೆಯೂ ವ್ಯವಹಾರದ ಬದುಕಾಗಿದೆ ಎಂಬುದು ಸುಳ್ಳಲ್ಲವಾದರೂ,  ಈ ಕಲೆಯ ಆಂತರ್ಯದ ಸೊಬಗು, ಮಾನವ ಮನಗಳಿಗೆ ಇಂದೂ ತಂಪು ನೀಡುವ ಅಮೋಘ ಶಕ್ತಿಯನ್ನು ಹೊಂದಿದೆ ಎಂಬುದು ಮಾತ್ರಾ ಅಲ್ಲಗೆಳೆಯಲಾರದ ಸತ್ಯ.

ವಿಶ್ವದೆಲ್ಲೆಡೆಯಂತೆ ಪ್ರಾಚೀನ ಸಂಸ್ಕೃತಿಗಳಲ್ಲೊಂದಾದ ಭಾರತೀಯ ಬದುಕಿನಲ್ಲೂ ವಿವಿಧ ರೀತಿಯ ಸಂಗೀತಗಳು ಮತ್ತು ಅದಕ್ಕೆ ಬೆನ್ನೆಲುಬಾಗಿದ್ದ ಸಾಹಿತ್ಯಗಳು ವಿಫುಲವಾಗಿರುವುದು ನಮಗೆ ತಿಳಿದಿದೆ.  ಹಿಂದೂಸ್ಥಾನಿ, ಕರ್ನಾಟಕ ಶಾಸ್ತ್ರೀಯ, ಪಾಶ್ಚಾತ್ಯ, ಸಿನಿಮಾ ಸಂಗೀತ, ರಂಗ ಸಂಗೀತ,  ಸುಗಮ ಸಂಗೀತ ಮತ್ತು ಹಲವು ಬೆರಕೆಗಳ ಫ್ಯೂಷನ್ ಸಂಗೀತ ಮುಂತಾದ ಸಂಗೀತ ಪದ್ಧತಿಗಳ ಬಗ್ಗೆ ನಾವು ಆಗಾಗ ಕೇಳುತ್ತಾ ಬಂದಿದ್ದೇವೆ.  ಅಷ್ಟೊಂದು ಭಾಷೆಗಳಿರುವ ಭಾರತದಲ್ಲಿ ಭಾರತದ್ದೇ ಮಾತ್ರವಲ್ಲದೆ, ಅನ್ಯದೇಶೀ ಭಾಷೆಗಳನ್ನೂ ಒಳಗೊಂಡ ಹಾಗೆ, ನಮಗೆ ಭಾಷೆ ಗೊತ್ತಿದೆಯೋ ಇಲ್ಲವೋ  ರೇಡಿಯೋ, ಟಿ.ವಿ, ಸಿನಿಮಾ, ವೇದಿಕೆ ಕಾರ್ಯಕ್ರಮಗಳು ಹೀಗೆ ವಿವಿಧ ರೀತಿಗಳ ಮೂಲಕ ನಾವು ಯಾವುದೋ ಒಂದು ಅಂತರಾಳದ ಮಿಡಿತಕ್ಕೆ ಸಿಲುಕಿ ಯಾವುದೋ  ಸಂಗೀತವನ್ನು ಇಲ್ಲವೇ ಹಲವು ಸಂಗೀತಗಳನ್ನು ಪ್ರೀತಿಸತೊಡಗಿ ಬಿಡುತ್ತೇವೆ.  ಇಂದಿನ ಜನಾಂಗ  ತಾವು ನಡೆಯುವಾಗ, ಚಲಿಸುವಾಗ, ಕಾರ್ಯನಿರ್ವಹಿಸುವಾಗ ಹೀಗೆ ಎಲ್ಲ ಕಡೆ ಮತ್ತೊಬ್ಬನಿಗೆ ಕೇಳದಂತೆ ಕಿವಿಗೊಂದು  ಧ್ವನಿವಾಹಕವನ್ನು ಸಿಕ್ಕಿಸಿಕೊಂಡು ಸಂಗೀತ ಕೇಳುವುದನ್ನು ಎಲ್ಲೆಡೆ ಕಾಣುತ್ತಿದ್ದೇವೆ.  ಯಾವುದಕ್ಕೂ ಮಿಡಿಯದ ಮನ ಕಾಲ ಮಾನಗಳನ್ನು ಮೀರಿ ಸಂಗೀತಕ್ಕಂತೂ ಮಿಡಿಯುತ್ತಲೇ  ಇದೆ ಎಂಬುದನ್ನು ಇದು ನಿಚ್ಚಳಗೊಳಿಸುತ್ತಿದೆ. 

ವಿವಿಧ ಭಾಷೆಗಳ ನಮ್ಮ ದೇಶದಲ್ಲಿ ಉತ್ತರದ ಸಂಗೀತ ದಕ್ಷಿಣದಲ್ಲೂ, ದಕ್ಷಿಣದ ಸಂಗೀತ ಉತ್ತರದಲ್ಲೂ ಹರಿದಿದೆ.  ಅದರಲ್ಲೂ ಜನಸಾಮಾನ್ಯನಿಗೆ ಆಕರ್ಷಣೆಯಾದ  ಸಿನಿಮಾ ಸಂಗೀತ  ಭಾಷೆಗಳ ಎಲ್ಲ ಪರಿಧಿಗಳನ್ನೂ ಮೀರಿ ಜನಮನವನ್ನು ಬೆಸೆದು  ದೇಶವೆಂಬ  ಭಾವವನ್ನು  ಒಂದು ಅವ್ಯಕ್ತ ರೀತಿಯಲ್ಲಿ ಬೆಸೆದಿರುವುದನ್ನು ನಾವು ಅಲ್ಲಗೆಳೆಯಲು ಸಾಧ್ಯವಿಲ್ಲ.  ಸಂಗೀತದ ಮೂಲಕವೇ ಎಲ್ಲ ಶ್ರೇಷ್ಠ ಕಾವ್ಯಗಳೂ ಕೂಡಾ  ಜನಸಮೂಹವನ್ನು   ನೇರ ಅಧ್ಯಯನಕ್ಕಿಂತ ಹೆಚ್ಚು ತಲುಪಿದೆ ಎಂಬುದು ಕೂಡಾ ಸಾರ್ವಕಾಲಿಕ ಸತ್ಯ.  ವಿಶ್ವದೆಲ್ಲೆಡೆ ಎಲ್ಲ ರೀತಿಯ ಸಂಗೀತದ ನದಿಗಳೂ ಕೂಡ ತಮ್ಮ ಜಾಗತಿಕ ಮೇರೆಗಳನ್ನು ಮೀರಿ ತಮ್ಮ ಮನಸ್ಸುಗಳನ್ನು ಇನ್ನಿತರ ಸಂಗೀತಗಳಿಗೆ ಕೂಡಾ ತೆರೆದಿಡುತ್ತಿವೆ ಎಂಬುದು ಕೂಡಾ ಅಷ್ಟೇ ಸತ್ಯ. 

ಒಂದಲ್ಲ ಒಂದು ರೀತಿಯಲ್ಲಿ ಯಾವುದೇ ಕಲೆ ಕೂಡಾ ಸಂಗೀತದ ಪ್ರವಹಿನಿಯನ್ನು ತನ್ನಲ್ಲೂ ಕಂಡುಕೊಂಡಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುವಾಗ, ಆ ಸೂಕ್ಷ್ಮತೆಯನ್ನೇ ಹಿಡಿದು ಸಾಗಿದಲ್ಲಿ, ಅದರಲ್ಲೇ ಈ ವಿಶ್ವವೆಲ್ಲವನ್ನೂ ಬೆಸೆದಿರುವ ಕೊಂಡಿಗೆ ಕೂಡಾ  ಸಂಪರ್ಕ ಸಾಧ್ಯ ಎಂಬುದು ಮನದಟ್ಟಾಗುತ್ತದೆ.  ಆ ಸಂಪರ್ಕವನ್ನು ನಮ್ಮದಾಗಿಸಿಕೊಳ್ಳುವುದೇ  ನಿಜ ರೀತಿಯ ವಿಶ್ವ ಸಂಗೀತ ದಿನದ  ಮೂಲ ಆಶಯವಾಗಲಿ ಎಂದು ಆಶಿಸೋಣ.

Tag: World Music Day, Vishva Sangeeta Dina

ಕಾಮೆಂಟ್‌ಗಳಿಲ್ಲ: